ಹಾಸನ: ಅತ್ಯಾಚಾರ ದೂರು ಬಂದಿರುವ ಹಿನ್ನೆಲೆಯಲ್ಲಿ ಎಚ್.ಡಿ. ರೇವಣ್ಣ, ಪ್ರಜ್ವಲ್ ರೇವಣ್ಣ ಮತ್ತು ಪೆನ್‌ಡ್ರೈವ್ ಹಂಚಿದವರನ್ನು ಕೂಡಲೇ ಬಂಧಿಸಿ ಹಾಗೂ ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ಥ ಮಹಿಳೆಯರ ಗೌಪ್ಯತೆ ಕಾಪಾಡಬೇಕು ಎಂದು ಹಾಸನ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟ ಮಾಧ್ಯಮಗಳ ಮೂಲಕ ಒತ್ತಾಯಿಸಿದೆ.
ಜಿಲ್ಲೆಯ ದಲಿತ, ರೈತ, ಕಾರ್ಮಿಕ, ಮಹಿಳಾ, ಅಲ್ಪಸಂಖ್ಯಾತ, ವಿದ್ಯಾರ್ಥಿ ಮತ್ತು ಯುವಜ ಸಂಘಟನೆಗಳ ಹಾಗೂ ಸಮಾನ ಮನಸ್ಕರ ಐಕ್ಯ ವೇದಿಕೆಗಳೆಲ್ಲ ಸೇರಿ ಪತ್ರಿಕಾ ಹೇಳಿಕೆ ನೀಡುವ ಮೂಲಕ ಅಸಂಖ್ಯಾತ ಮಹಿಳೆಯರ ಮೇಲೆ ಆದ ಲೈಂಗಿಕ ದೌರ್ಜನ್ಯವನ್ನು ಖಂಡಿಸಿವೆ.
ಪ್ರಜ್ವಲ್ ರೇವಣ್ಣನಿಂದ ಆತ್ಯಾಚಾರಕ್ಕೆ ಒಳಗಾಗಿರುವ ಸಂತ್ರಸ್ಥ ಮಹಿಳೆಯನ್ನು ಅಪಹರಿಸಿರುವ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಎಚ್.ಡಿ. ರೇವಣ್ಣ ಅವರನ್ನು ಕೂಡಲೇ ಬಂಧಿಸಿ ವಿಚಾರಣೆಗೆ ಒಳಪಡಿಸದೆ ಅವರಿಗೆ ಕಾಲಾವಕಾಶ ನೀಡಲಾಗಿದೆ. ಇದನ್ನು ನೋಡಿದರೆ ಎಲ್ಲರೂ ಮಾತನಾಡುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಎಚ್.ಡಿ. ರೇವಣ್ಣ ಪರ ಮೃದು ಧೋರಣೆ ಹೊಂದಿದ್ದಾರೆ ಎನ್ನುವ ಚರ್ಚೆಗೆ ಪುಷ್ಟಿ ನೀಡುವಂತಿದೆ. ರಾಜ್ಯ ಸರ್ಕಾರದ ಈ ನಡೆ ಖಂಡನೀಯ
ಮಾಜಿ ಸಚಿವರು ಹಾಗೂ ಹಾಲೀ ಶಾಸಕರೂ ಆಗಿರುವ ಎಚ್.ಡಿ. ರೇವಣ್ಣ ಅವರನ್ನು ಬಂಧಿಸದೆ ಇರುವುದು ನೋಡಿದರೆ ಪ್ರಜ್ವಲ್ ರೇವಣ್ಣ ನೂರಾರು ಮಹಿಳೆಯರ ಮೇಲೆ ನಡೆಸಿರುವ ಲೈಂಗಿಕ ದೌರ್ಜನ್ಯದ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳ ನಾಶ ಹಾಗೂ ಸಂತ್ರಸ್ಥೆಯರ ಮೇಲೆ ಒತ್ತಡ ಮತ್ತು ಪ್ರಭಾವ ಬೀರಲು ಸರ್ಕಾರವೇ ಅವಕಾಶ ನೀಡಿದ ಅನುಮಾನ ಬರುತ್ತಿದೆ. ತಕ್ಷಣವೇ ಶಾಸಕ ಎಚ್.ಡಿ. ರೇವಣ್ಣನನ್ನು ಬಂಧಿಸಬೇಕು. ಯಾವುದೇ ಸಂದರ್ಭದಲ್ಲೂ ಸಂತ್ರಸ್ಥೆಯರ ಗುರುತುಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸದಂತೆ ಹಾಗೂ ಸಂತ್ರಸ್ಥೆಯರ ಗುರುತುಗಳ ಗೌಪ್ಯತೆ ಕಾಪಾಡಿಕೊಳ್ಳುವಂತೆ ಸರ್ಕಾರ ಮತ್ತು ಎಸ್‌ಐಟಿ ತೀವ್ರ ನಿಗಾವಹಿಸಬೇಕೆಂದು ಆಗ್ರಹಿಸುತ್ತಿದ್ದೇವೆ.
ಪ್ರಜ್ವಲ್ ರೇವಣ್ಣ ನಡೆಸಿರುವ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೇಸ್ ಪಕ್ಷಗಳು ತನ್ನ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿ ಪ್ರಕರಣದ ತೀವ್ರತೆಯನ್ನು ದಿಕ್ಕುತಪ್ಪಿಸುವ ಬದಲು ಲೈಂಗಿಕ ದೌರ್ಜನ್ಯಕ್ಕೊಳಗಾಗಿರುವ ಸಂತ್ರಸ್ತ ಮಹಿಳೆಯರ ಪರವಾಗಿ ನಿಲ್ಲಬೇಕೆಂದು ಆಹ್ರಹಿಸುತ್ತೇವೆ. ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯದ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಜ್ಯ ಸರ್ಕಾರ ವಿಶೇಷ ತನಿಖಾ ದಳ ಎಸ್ಐಟಿ ಯನ್ನು ನೇಮಕ ಮಾಡಿದೆ. ಆದರೂ ಮತ್ತೆ ಮತ್ತೆ ಹೆಣ್ಣು ಮಕ್ಕಳ ಅಶ್ಲೀಲ ಚಿತ್ರಗಳು ಮತ್ತು ವಿಡಿಯೋಗಳು ಹೊರಬರುತ್ತಿರುವುದು ಪೊಲೀಸ್ ಇಲಾಖೆಯ ವೈಫಲ್ಯವಾಗಿದೆ.
ಪೆನ್‌ಡ್ರೈವ್‌ನ ಮೂಲಗಳು ಜಗಜ್ಜಾಹಹೀರಾಗಿದ್ದರೂ, ಬಿಜೆಪಿ ಮುಖಂಡ ಜಿ. ದೇವರಾಜೇಗೌಡ ಮತ್ತು ಪ್ರಜ್ವಲ್ ರೇವಣ್ಣನ ಮಾಜಿ ಕಾರು ಚಾಲಕ ಕಾರ್ತಿಕ್ ಇವರುಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿ ಅವರು ವೀಡಿಯೋಗಳನ್ನು ಯಾರ್ಯಾರಿಗೆ ತಲುಪಿಸಿದ್ದಾರೆ ಅವರಲ್ಲಿ ಯಾರು ವೀಡಿಯೋಗಳನ್ನು ಹಂಚುತ್ತಿದ್ದಾರೆ ಎನ್ನುವುದನ್ನು ಬೇಧಿಸಿ ಮುಟ್ಟುಗೋಲು ಹಾಕಿಕೊಂಡಿಲ್ಲ.
ಈ ಸಮಗ್ರ ಪ್ರಕರಣಕ್ಕೆ ಸಂಬಂಧಪಟ್ಟವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸದಿರುವುದು ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆಯ ನಿರ್ಲಕ್ಷ್ಯತನವಾಗಿದೆ. ಇದನ್ನು ನಾವು ತೀರ್ವವಾಗಿ ಖಂಡಿಸುತ್ತಿದ್ದೇವೆ ಮತ್ತು ಅಶ್ಲೀಲ ಚಿತ್ರ ಮತ್ತು ವಿಡಿಯೋಗಳನ್ನು ಸಾರ್ವಜನಿಕವಾಗಿ ಹಂಚುವುದನ್ನು ತಡೆಯಬೇಕೆಂದು ಒತ್ತಾಯಿಸುತ್ತೇವೆ. ಎಸ್ಐಟಿ ಕೂಡಲೇ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಕ್ರಮ ವಹಿಸಬೇಕಿದೆ. ಇಲ್ಲವಾದಲ್ಲಿ ಸಂತ್ರಸ್ತ ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭ ಎದುರಾಗಬಹುದು ಅಂತಹ ಅನಾಹುತಗಳು ನಡೆದರೆ ಅದಕ್ಕೆ ನೇರವಾಗಿ ಸರ್ಕಾರವೇ ಹೊಣೆಯಾಗುತ್ತದೆ.
ಸಂತ್ರಸ್ತ ಮಹಿಳೆಯರು ಎಸ್ಐಟಿ ಮುಂದೆ ಹಾಜರಾಗಲು ಹಿಂಜರಿಯುತ್ತಿರುವುದರಿಂದ ಸಂತ್ರಸ್ತರಿದ್ದಲ್ಲಿಗೆ ಹೋಗಿ ಹೇಳಿಕೆ ಪಡೆಯಲು ಎಸ್ಐಟಿ ತಂಡ ಮುಂದಾಗಬೇಕು. ಮಾಧ್ಯಮಗಳು ಹೆಣ್ಣುಮಕ್ಕಳ ಹೇಳಿಕೆಗಳ ವರದಿ ಮಾಡುವಾಗ ಅವರುಗಳಿಗೆ ಮುಜುಗರವಾಗದಂತೆ ಹಾಗು ಎಸ್ಐಟಿ ಮುಂದೆ ಹಾಜರಾಗಲು ಹಿಂಜರಿಯದಂತೆ ಸೂಕ್ಷ್ಮತೆಯೊಂದಿಗೆ ವರದಿ ಮಾಡಬೇಕೆಂದು ಮನವಿ ಮಾಡುತ್ತಿದ್ದೇವೆ.
ಎಸ್ಐಟಿ ಮುಂದೆ ಹಾಜರಾದ ಸಂತ್ರಸ್ತೆಯರ ಹೇಳಿಗಳನ್ನು ಗೌಪ್ಯವಾಗಿ ಇರಿಸಬೇಕು. ಈ ವಿಡಿಯೋಗಳು ಮಾಧ್ಯಮಗಳಲ್ಲಿ ಬಿತ್ತರವಾಗುವುದನ್ನು ತಪ್ಪಿಸಬೇಕು. ಈ ಕುರಿತು ಮಾಧ್ಯಮಗಳೂ ಸೂಕ್ಷ್ಮವಾಗಿ ನಡೆದುಕೊಳ್ಳಬೇಕು. ಮತ್ತು ಎಸ್‌ಐಟಿ ಸಿಬ್ಬಂಧಿಗಳು ಸಂತ್ರಸ್ತೆಯರ ಜೊತೆಗೆ ತಾಳ್ಮೆ ಮತ್ತು ಪ್ರೀತಿಯಿಂದ ವರ್ತಿಸುವಂತಾಗಬೇಕು. ಇಲ್ಲವಾದಲ್ಲಿ ಉಳಿದ ಸಂತ್ರಸ್ತೆಯರು ಎಸ್ಐಟಿ ಮುಂದೆ ಹಾಜರಾಗಿ ಹೇಳಿಕೆ ನೀಡಲು ಹೆದರುತ್ತಾರೆ. ಆದ್ದರಿಂದ ಈ ಬಗ್ಗೆ ಸರ್ಕಾರ ಮತ್ತು ಎಸ್‌ಐಟಿ ಗಂಭಿರವಾದ ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಒತ್ತಾಯಿಸುತ್ತಿದ್ದೇವೆ ಎಂದಿದ್ದಾರೆ.
ವಿವಿಧ ಸಂಘಟನೆಯ ಪದಾಧಿಕಾರಿಗಳಾದ ಹಿರಿಯ ಪತ್ರಕರ್ತ ಆರ್.ಪಿ. ವೆಂಕಟೇಶ್‌ಮೂರ್ತಿ, ಹಿರಿಯ ದಲಿತ ಮುಖಂಡರಾದ ಎಚ್. ಕೆ. ಸಂದೇಶ್, ಸಿಪಿಐ(ಎಂ) ಹಾಸನ ಜಿಲ್ಲಾ ಕಾರ್ಯದರ್ಶಿ ಧರ್ಮೇಶ್, ಎದ್ದೇಳು ಕರ್ನಾಟಕದ ಇರ್ಷಾದ ಅಹಮದ್ ದೇಸಾಯಿ, ಮಾದಿಗ ದಂಡೋರದ ಜಿಲ್ಲಾಧ್ಯಕ್ಷರಾದ ಟಿ.ಆರ್. ವಿಜಯಕುಮಾರ್, ಡಿವೈಎಫ಼್‌ಐ ಜಿಲ್ಲಾ ಕಾರ್ಯದರ್ಶಿ ಎಂ.ಜಿ. ಪೃಥ್ವಿ, ಕೆಪಿಆರ್‌ಎಸ್ ಜಿಲ್ಲಾಧ್ಯಕ್ಷ ಎಚ್.ಆರ್. ನವೀನ್‌ಕುಮಾರ್, ಆಜಾ಼ದ್ ಟಿಪ್ಪು ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷರಾದ ಮುಬಶಿರ್ ಅಹಮದ್, ಎಸ್‌ಎಫ಼್‌ಐ ಜಿಲ್ಲಾ ಕಾರ್ಯದರ್ಶಿ ರಮೇಶ್ ಇನ್ನಿತರರು ಆರೋಪಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿದ್ದಾರೆ.