ಬೆಂಗಳೂರು: ಹಗಲಿನಲ್ಲಿ ಬಾಗಿಲು ಹಾಕಿದ್ದ ಮನೆಗಳನ್ನು ಗುರುತಿಸಿಕೊಂಡು ರಾತ್ರಿ ಹೊತ್ತು ಮನೆಯ ಬಾಗಿಲು ಮುರಿದು ಚಿನ್ನಾಭರಣ ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ. ಕೆ.ಜಿ.ಎಫ್ ನಿವಾಸಿಗಳಾದ ಸಂಜಯ್, ಸಂದೀಪ್ ಮತ್ತು ಸೂರ್ಯ ಬಂಧಿತ ಆರೋಪಿಗಳು. ಇವರಿಂದ 180 ಗ್ರಾಂ ಚಿನ್ನ, 4.ಕೆ.ಜಿ. 800 ಗ್ರಾಂ ಬೆಳ್ಳಿ ಮತ್ತು ದ್ವಿಚಕ್ರ ವಾಹನ ಸೇರಿ ಒಟ್ಟು 18 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಠಾಣಾ ವ್ಯಾಪ್ತಿಯ ಕಮ್ಮನಹಳ್ಳಿಯ ನಿವಾಸಿಯೊಬ್ಬರು ವೆಲ್ಲೂರಿಗೆ ಪ್ರವಾಸ ಹೋಗಿದ್ದ ಸಂದರ್ಭವನ್ನು ಬಳಸಿಕೊಂಡು ಬೆಳಗಿನ ಜಾವ ಮನೆಯ ಬೀಗ ಮುರಿದು, ಲಾಕರ್‌ನಲ್ಲಿಟ್ಟಿದ್ದ ಚಿನ್ನ, ಬೆಳ್ಳಿ ಹಾಗೂ 15 ಸಾವಿರ ನಗದು ಹಣವನ್ನು ಕಳವು ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ನಂಬರ್ ಪ್ಲೇಟ್ ಇಲ್ಲದ ವಾಹನದಲ್ಲಿ ಸಂಚರಿಸುತ್ತಿದ್ದ ಮೂವರನ್ನು ವಿಚಾರಣೆ ನಡೆಸಿದಾಗ, ಮನೆ ಹಾಗೂ ವಾಹನ ಕಳವು ಮಾಡಿರುವುದನ್ನು ಬಾಯಿ ಬಿಟ್ಟರು ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ಸುದೀರ್ಘ ವಿಚಾರಣೆ ನಡೆಸಿದಾಗ ಇವರು ನಡೆಸಿದ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿವೆ. ನಂತರ ಕಳವು ಮಾಡಿದ್ದ ಆಭರಣಗಳನ್ನು ಮಾರಾಟ ಮಾಡಿದ್ದ ಅಂಗಡಿಗಳಿಂದ ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ರೌಡಿ ಶೀಟರ್‌ಗಳಾಗಿದ್ದು, ಇವರ ವಿರುದ್ಧ ಕೆ.ಜಿ.ಎಫ್ ಮತ್ತು ಬಂಗಾರಪೇಟೆ ಠಾಣೆಯಲ್ಲಿ ಕೊಲೆ, ಕೊಲೆ ಯತ್ನ ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ತಿಳಿಸಿದ್ದಾರೆ. ಯುವತಿಯರ ಜತೆ ಮೋಜಿನ ಜೀವನ ನಡೆಸುವ ಸಲುವಾಗಿ ಆರೋಪಿಗಳು ಕಳ್ಳತನ ಮಾಡುತ್ತಿದ್ದರು. ಕದ್ದ ವಸ್ತುಗಳನ್ನು ಮಾರಾಟ ಮಾಡಿ ಬಂದ ಹಣದಲ್ಲಿ ಯುವತಿಯರ ಜತೆ ಬೈಕ್‌ನಲ್ಲಿ ಸುತ್ತಾಡುತ್ತಾ ಹಣವನ್ನು ಖರ್ಚು ಮಾಡುತ್ತಿದ್ದರು. ಯುವತಿಯರೊಂದಿಗೆ ಪ್ರವಾಸಿ ತಾಣಗಳಿಗೆ ತೆರಳಿ ಮಜಾ ಮಾಡುತ್ತಿದ್ದರು. ಆರೋಪಿಗಳ ಬಂಧನದಿಂದ ಬಾಣಸವಾಡಿ ಪೊಲೀಸ್ ಠಾಣೆಯ 9, ರಾಮಮೂರ್ತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಒಂದು ಮನೆ ಕಳವು ಹಾಗೂ ಒಂದು ದ್ವಿಚಕ್ರ ವಾಹನ ಕಳವು ಪ್ರಕರಣ ಸೇರಿ ಒಟ್ಟು 11 ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.