ಬೆಂಗಳೂರು: ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಎರಡು ಮನೆಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಪೀಣ್ಯ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇವರಿಂದ 21 ಲಕ್ಷ ರೂ ಮೌಲ್ಯದ 325 ಗ್ರಾಂ ಚಿನ್ನಾಭರಣ, 2 ಕೆಜಿ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಕ್ಟೋಬರ್ 29 ರಂದು ಇದೇ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯೊಬ್ಬರು ಮನೆಯ ಬಾಗಿಲನ್ನು ಒಡೆದು ಕಳ್ಳತನ ಮಾಡಲಾಗಿದೆ ಎಂದು ದೂರು ಸಲ್ಲಿಸಿದ್ದರು. ಪರಿಶೀಲನೆ ಮಾಡಿದಾಗ ಒಂದೇ ಕಟ್ಡದ ನೆಲಮಹಡಿ ಮತ್ತು ಮೊಲದ ಅಂತಸ್ತಿನಲ್ಲಿರುವ ಮನೆಗಳಲ್ಲಿ ಕಳ್ಳತನ ನಡೆದಿರುವುದು ಪತ್ತೆಯಾಗಿತ್ತು.
ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡ ಪೊಲೀಸರು ಮಾಗಡಿ ಮುಖ್ಯ ರಸ್ತೆಯ ಸೀಗೇಹಳ್ಳಿ ಗೇಟ್ ಬಳಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಇವರ ವಿಚಾರಣೆ ನಡೆಸಿದಾಗ ಎರಡು ಮನೆಗಳಲ್ಲಿ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿರುತ್ತಾರೆ. ಒಂದು ಪ್ರಕರಣದಲ್ಲಿ 240ಗ್ರಾಂ ಚಿನ್ನಾಭರಣ, 1 ಕೆಜಿ 700 ಗ್ರಾಂ ಬೆಳ್ಳಿ ವಸ್ತುಗಳು ಒಂದು ಲ್ಯಾಪ್ ಟಾಪ್ ಮತ್ತೊಂದು ಪ್ರಕರಣದಲ್ಲಿ ೮೫ ಗ್ರಾಂ ಚಿನ್ನಾಭರಣ ಮತ್ತು100 ಗ್ರಾಂ ಬೆಳ್ಳಿಯ ವಸ್ತುಗಳು ಪತ್ತೆಯಾಗಿವೆ. ಇದರಲ್ಲಿ 7 ಗ್ರಾಂ ಚಿನ್ನದ ಸರವನ್ನು ಚನ್ನಪಟ್ಟಣದ ಮಣಪ್ಪುರಂ ಗೋಲ್ಡ್, ಕಮಲಾನಗರದ ಗೌತಮ್ ಬ್ಯಾಂಕರ್ಸ್ ನಲ್ಲಿ ಅಡವಿಟ್ಟಿದ್ದ 64 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಕೊಳ್ಳಲಾಗಿದೆ. ಉಳಿದ ವಸ್ತುಗಳನ್ನು ಓರ್ವ ಆರೋಪಿಯ ಮನೆಯಲ್ಲಿ ಬಚ್ಚಿಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.