ತಲೆಮರೆಸಿಕೊಂಡಿದ್ದ ಶಾಸಕ ಮುನಿರತ್ನನ ಬಂಧನ

Most read

ಕೋಲಾರ: ದಲಿತರ ವಿರುದ್ಧ ಹೀನಾಯವಾಗಿ ಜಾತಿ ನಿಂದನೆ ಮಾಡಿದ, ಒಕ್ಕಲಿಗ ಸಮುದಾಯದ ಕುರಿತು ಅಸಹ್ಯಕರವಾಗಿ ಮಾತನಾಡಿದ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ನಾಯ್ಡುವನ್ನು ಕೋಲಾರ ಪೊಲೀಸರು ಬಂಧಿಸಿದ್ದಾರೆ.

ಮುನಿರತ್ನ ವಿರುದ್ಧ ಎರಡು ಪ್ರತ್ಯೇಕ ಕ್ರಿಮಿನಲ್ ಪ್ರಕರಣಗಳು ದಾಖಲಾದ ಹಿನ್ನೆಲೆಯಲ್ಲಿ ಆತ ಮುಳಬಾಗಿಲಿನಲ್ಲಿ ತಲೆಮರೆಸಿಕೊಂಡಿದ್ದ. ಅಲ್ಲಿಂದ ಆಂಧ್ರಪ್ರದೇಶಕ್ಕೆ ತೆರಳಿ ಅಡಗಿಕೊಳ್ಳಲು ಸಂಚು ನಡೆಸಿದ್ದ.

ಮುನಿರತ್ನನ ಚಲನ ವಲನದ ಮೇಲೆ ನಿಗಾ ಇಟ್ಟಿದ್ದ ಪೊಲೀಸರು ಮುಳಬಾಗಿಲಿನಲ್ಲಿ ಆತನನ್ನು ಬಂಧಿಸಿ ಬೆಂಗಳೂರಿಗೆ ಕರೆ ತರುತ್ತಿದ್ದಾರೆ.

ಪ್ರಕರಣದ ಹಿನ್ನೆಲೆ:

ಚೆಲುವರಾಜು ಎಂಬ ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಆರ್​.ಆರ್. ನಗರ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎರಡು ಎಫ್​ಐಆರ್​ ದಾಖಲಾಗಿದ್ದವು. ಜೀವ ಬೆದರಿಕೆ, ಜಾತಿ ನಿಂದನೆ ಮಾಡಿದ ಆರೋಪದಡಿಯಲ್ಲಿ ಪ್ರತ್ಯೇಕ ಎರಡು ಪ್ರಕರಣ ದಾಖಲಾಗಿದ್ದವು.

ಜೀವ ಬೆದರಿಕೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿದ್ದು, ಎ1 ಶಾಸಕ ಮುನಿರತ್ನ ಆಗಿದ್ದಾರೆ. ಎ1 ಶಾಸಕ ಮುನಿರತ್ನ, ಎ2 ಆಪ್ತ ಸಹಾಯಕ ವಿಜಯ್ ಕುಮಾರ್, ಎ3 ಸೆಕ್ಯೂರಿಟಿ ಅಭಿಷೇಕ್ ಮತ್ತು ಎ4 ವಸಂತ್ ಕುಮಾರ್ ಆಗಿದ್ದಾರೆ.

ಶಾಸಕ ಮುನಿರತ್ನ ನನಗೆ ಕೊಲೆ ಬೆದರಿಕೆ, ಜಾತಿ ನಿಂದನೆ ಮಾಡಿದ್ದಾರೆ ಎಂದು ಗುತ್ತಿಗೆದಾರ ಚಲುವರಾಜು ನಿನ್ನೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದಗೆ ದೂರು ನೀಡಿದ್ದರು. ಜೊತೆಗೆ ತನಗೆ ರಕ್ಷಣೆ ನೀಡುವಂತೆಯೂ ಮನವಿ ಮಾಡಿದ್ದರು.

ಈ ನಡುವೆ ಚೆಲುವರಾಜು ಜೊತೆ ಮುನಿರತ್ನ ಮಾತಾಡಿರುವ ಆಡಿಯೋ ವೈರಲ್ ಆಗಿದ್ದು, ಅತ್ಯಂತ ಕೊಳಕು ಭಾಷೆಯಲ್ಲಿ ಜಾತಿ ನಿಂದನೆ ಮಾಡಿರುವುದು ಬೆಳಕಿಗೆ ಬಂದಿತ್ತು. ದಲಿತ ಮತ್ತು ಒಕ್ಕಲಿಗ ಸಮುದಾಯಗಳ ಕುರಿತು ಅತ್ಯಂತ ಹೀನಾಯವಾಗಿ ಮಾತನಾಡಿದ್ದ ಮುನಿರತ್ನ, ರೇಣುಕಾಸ್ವಾಮಿಯನ್ನು (ದರ್ಶನ್ ಪ್ರಕರಣ) ಕೊಂದ ಹಾಗೆ ನಿನ್ನನ್ನೂ ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕಿದ್ದ.

More articles

Latest article