ಕ್ವಿಯರ್ ಮತ್ತು ಟ್ರಾನ್ಸ್ ವಿಷಯ ಒಂದು ರಾಜಕೀಯ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ವಿಷಯ ಎಂದು ಎಷ್ಟೋ ಜನ ಪರಿಗಣಿಸುವುದೇ ಇಲ್ಲ. ನಾನು ಲೈಂಗಿಕತೆಯ ವಿಷಯಕ್ಕೆ 1999ರಲ್ಲಿ ಕೆಲಸ ಮಾಡಲು ಶುರು ಮಾಡಿದಾಗ ಒಬ್ಬ ಪ್ರಗತಿಪರ ಕಾರ್ಯಕರ್ತರು ಕೇಳಿದ್ದರು. “ಇದೂ ಒಂದು ಹೋರಾಟದ ವಿಷಯವೇ? “ ಅಂತ. ಹಸಿವು, ಬಡತನ, ದೌರ್ಜನ್ಯ, ಹಿಂಸೆ, ತುಳಿತಕ್ಕೊಳಗಾಗುವುದು, ಅವಕಾಶ ವಂಚಿತರಾಗುವುದು, ಸಮಾಜದಲ್ಲಿ ಯಾವ ಸ್ಥಾನ ಮಾನಗಳಿಲ್ಲದೇ ಮೇಲಿನ ವ್ಯವಸ್ಥೆಯಿಂದ ಶೋಷಣೆಗೆ ಒಳಗಾಗುವ ಈ ಎಲ್ಲಾ ವಿಷಯಗಳನ್ನು ಅನುಭವಿಸದೇ ನಮ್ಮ ಕ್ವಿಯರ್ ಮತ್ತು ಟ್ರಾನ್ಸ್ ಜನ ಸುಲಭವಾಗಿ ಬದುಕುತ್ತಿಲ್ಲ. ಇದೆಲ್ಲಾ ಅನುಭವಿಸುವುದು ಯಾಕೆ? ಕೇವಲ ಲಿಂಗತ್ವ ಮತ್ತು ಲೈಂಗಿಕತೆಯ ಒಲವಿನಿಂದ. ಹಾಗಾದರೆ ಈ ವಿಷಯಗಳು ಮುಕ್ತವಾಗಿ ಚರ್ಚೆ ಮಾಡಲು ಯಾಕೆ ಆಗುತ್ತಿಲ್ಲ?. ಕಾರಣ ಇಷ್ಟೆ ಇದರ ಸುತ್ತ ಇರುವುದು ಲಿಂಗ, ಲಿಂಗತ್ವ, ಲೈಂಗಿಕತೆ.
ನಾವು ಕ್ವಿಯರ್ ಮತ್ತು ಟ್ರಾನ್ಸ್ ಮತ್ತು ಲೈಂಗಿಕ ಕಾರ್ಮಿಕ ಸಮುದಾಯಗಳು ಯಾವಾಗಲೂ ಸೆಕ್ಸ್ ಸುತ್ತಲೇ ಮಾತನಾಡುತ್ತೇವೆ ಎಂಬ ಆರೋಪ. ನಮ್ಮ ಹುಟ್ಟು, ನಮ್ಮ ಒಲವು ಮತ್ತು ನಮ್ಮ ಕೆಲಸ ಲೈಂಗಿಕತೆಯ ಸುತ್ತ ಇರುವಾಗ ಯಾಕೆ ಮುಚ್ಚುಮರೆ?. ಲೈಂಗಿಕತೆಯ ವಿಷಯಗಳನ್ನು ಮರೆಯಲ್ಲಿಟ್ಟೇ ಇಷ್ಟು ದೌರ್ಜನ್ಯ ನಡೆಯುತ್ತಿರುವುದು. ನಾವು ಕ್ವಿಯರ್, ಟ್ರಾನ್ಸ್ ಮತ್ತು ಲೈಂಗಿಕ ಕಾರ್ಮಿಕ ಸಮುದಾಯಗಳು ಮಾತ್ರ ಅಲ್ಲ ಇಡೀ ಜಗತ್ತೇ ಇದರ ಸುತ್ತ ನಡೆದರೂ ಸಾಮಾನ್ಯವಾಗಿ ಒಪ್ಪಿರುವ ಪರಲಿಂಗ ಕಾಮ ಚಟುವಟಿಕೆಗಳ ವ್ಯವಸ್ಥೆಗೆ ಮಾತ್ರ ಎಲ್ಲೆಲ್ಲೂ ಸ್ಪೇಸ್ ಇದೆ.
ದಿನಬೆಳಗಾದರೇ ಕಾಮ ಚಟುವಟಿಕೆಗಳೇ ಮುಖಕ್ಕೆ ರಾಚುತ್ತಿರುವಾಗ ಈ ಸಮಾಜಕ್ಕೆ ನಾವು ಮುಕ್ತವಾಗಿ ಲೈಂಗಿಕತೆಯ ಬಗ್ಗೆ ಮಾತನಾಡುವುದು ದೊಡ್ಡದೊಂದು ಅಪರಾಧ. ಎಲ್ಲಾ ಜಾಹೀರಾತಿನಲ್ಲಿ ತೋರಿಸುವುದು ಪರಲಿಂಗಕಾಮಿ ಸುಖೀ ಪರಿವಾರ ಮತ್ತು ಪರಲಿಂಗ ಕಾಮಿ ಜೋಡಿಗಳನ್ನ. ಅದೇ ರೀತಿಯಲ್ಲಿ ಫೇಸ್ ಬುಕ್ಕಿನ ತುಂಬ ಮಕ್ಕಳ ಹುಟ್ಟಿದ ಹಬ್ಬ, ಮದುವೆ ಆದ ದಿನ, ಕುಟುಂಬ ಪರಿವಾರಗಳು ಮತ್ತು ಜೋಡಿ ಜೋಡಿಗಳನ್ನೇ ಮನೆಗೆ ಕರೆದು ಪಾರ್ಟಿ ಮಾಡುವುದು. ಇದೆಲ್ಲಾ ಮತ್ತೇನು? ಒಮ್ಮೆಯಾದರೂ ಬಾಯಿತಪ್ಪಿ ನಮ್ಮ ಸಮುದಾಯದವರನ್ನು ಅಂದ್ರೆ ಲೈಂಗಿಕ ಅಲ್ಪಸಂಖ್ಯಾತರನ್ನೋ, ಲೈಂಗಿಕ ಕಾರ್ಮಿಕರನ್ನೋ ಮನೆಗೆ ಕರೆಯುವುದು ಕನಸಲ್ಲಿ ಕೂಡ ಇಲ್ಲ. ಮೊದಲೆಲ್ಲಾ ನಾವು ಮನೆಗೆ ಕರೆದರೂ ಬರುತ್ತಿರಲಿಲ್ಲ. ಈಗ ಎಲ್ಲೋ ಆ ಒಂದು ತಡೆ ತೆಗೆದು ಹಾಕಿದ್ದಾರೆ ನಮ್ಮ ಪ್ರಗತಿಪರರು.
ಗಂಡಸರು ಗಂಡಸರು ಸೇರಿದಾಗ ಒಂದು ಹಂತದವರೆಗೆ ಸಮಾಜ ಬದಲಾವಣೆಯ ಬಗ್ಗೆ ಮಾತನಾಡಿದ ಮೇಲೆ ನಡೆವ ಮಾತುಗಳಾದರೂ ಏನಿರಬಹುದು ಎಂದು ಊಹಿಸಲು ಕಷ್ಟ ಏನೂ ಇಲ್ಲ. ಉದ್ದ ಅಗಲ ಗಾತ್ರ …
ಒಂದು ರೀತಿಯ ಶಿಷ್ಟ ಭಾಷೆಯನ್ನು ಸೃಷ್ಟಿ ಮಾಡಿ ಈ ಪರಲಿಂಗ ಕಾಮದ ವ್ಯವಸ್ಥೆಯು ತನ್ನೆಲ್ಲಾ ಬೈಗುಳಗಳಲ್ಲಿ ಮಹಿಳೆಯರ ಚಾರಿತ್ರ್ಯದ ಪ್ರಶ್ನೆ ಎತ್ತುವುದು ಒಂದು ದೊಡ್ಡ ಹವ್ಯಾಸವಾಗಿದೆ. ಈ ವ್ಯವಸ್ಥೆಯ ಬೈಗುಳಗಳೂ ಲೈಂಗಿಕತೆಯ ವಿಷಯಕ್ಕೆ ಸೇರಿರೋದು ಅನ್ನುವುದರ ಬಗ್ಗೆ ಯಾರೂ ಯೋಚನೆ ಮಾಡುವುದಿಲ್ಲ. ಕುಟುಂಬ ಮುಂದುವರೆಸುವ, ಪುರುಷ ಪ್ರಧಾನತೆಯ ಬ್ರಾಮಣ ವ್ಯವಸ್ಥೆಯನನ್ನು ಸ್ಥಿರವಾಗಿಡಲು ಬೈಗುಳಗಳನ್ನೂ ಪೂರಕವಾಗೇ ಕಟ್ಟುತ್ತಾರೆ.
ಹಾಗೆ ಬಯ್ಯುವಾಗ ಒಮ್ಮೊಮ್ಮೆ ಟೆಕ್ನಿಕಲಿ ತಪ್ಪು ಮಾಡುತ್ತಾರೆ. ಗಂಡಸರ ಅಹಂಗೆ ಏಟು ಬೀಳುವುದು ಎರಡು ವಿಷಯಗಳಿಗೆ ಮಾತ್ರ. ಅಂದ್ರೆ ಗಂಡಸರೇ ಗಂಡಸರಿಗೆ ಹಳಿಯಲು ಸೃಷ್ಟಿ ಮಾಡಿರುವ ಮಾತು – ಎಷ್ಟು ತಂದೆಯಂದಿರಿಗೆ ಹುಟ್ಟಿದ್ದೀಯ? ಮಕ್ಕಳನ್ನು ಹೆರುವ ಶಕ್ತಿ ಮಹಿಳೆಯರಿಗೆ ಮಾತ್ರ. ಎರಡನೆಯದಾಗಿ ಹೇಗೇ ನೋಡಿದರೂ ಜೀವಶಾಸ್ತ್ರದ ಪ್ರಕಾರ ಒಂದು ಗಂಡಸಿಗೆ ಮಾತ್ರ ಮಹಿಳೆಯನ್ನು ಗರ್ಭಿಣಿ ಮಾಡಲು ಸಾಧ್ಯ. ಆ ಬೈಗುಳಾನೇ ಟೆಕ್ನಿಕಲಿ ತಪ್ಪು. ಬೇವರ್ಸಿ ಅರ್ಥವಾದರೂ ಏನು ಎಂಬುದನ್ನು ಯಾರಾದರೂ ಯೋಚನೆ ಮಾಡಿದ್ದಾರಾ? ವಾರಿಸ್ ಅಂದರೆ ಕುಟುಂಬ ಮುಂದುವರೆಸುವವರು ಇಲ್ಲದವರು. ಇದು ನಿಜದಲ್ಲಿ ಬೈಗುಳ ಹೇಗಾಯಿತು? ಹಾಗೆಯೇ ಮುಂಡೆ – ಅಂದರೆ ಗಂಡ ಸತ್ತ ಮಹಿಳೆ ಅದೂ ಬೈಗುಳ ಹೇಗಾಗುತ್ತದೆ? ಬಡ್ಡಿಮಗ – ಇದರ ಅರ್ಥ? ನನಗೆ ಹೇಗೆ ಯೋಚನೆ ಮಾಡಿದರೂ ಬರಲ್ಲ. ಬಡ್ಡಿ ಅಂದ್ರೆ ಇಂಟ್ರೆಸ್ಟ್ ಗೆ ಹುಟ್ಟಿರೋದಾ? ಸೂಳೆ ಮಗ … ಸೂಳೆ ಎಂದರೆ ಅದು ಒಂದು ಕೆಲಸ. ಇದನ್ನು ಹೇಳಲು ನನಗೆ ಅಧಿಕಾರವಿಲ್ಲ. ಆದರೆ 20 ವರ್ಷಗಳು ಲೈಂಗಿಕ ಕಾರ್ಮಿಕರ ಜೊತೆ ಕೆಲಸ ಮಾಡಿ ಅವರು ನನ್ನ ಜೊತೆ ಹಂಚಿಕೊಂಡಿರುವುದನ್ನು ಹೇಳುತ್ತಿದ್ದೇನೆ. ಎನ್ ಜಿ ಒ ದವರು ಒಂದು ರೀತಿಯಲ್ಲಿ ಇವರ ಬಗೆಗಿನ ತೀರ್ಮಾನಗಳನ್ನು ತೆಗೆದುಕೊಂಡರೆ, ಸಾಮಾಜಿಕ ನ್ಯಾಯ ಹೋರಾಟಗಳು ಲೈಂಗಿಕ ಕಾರ್ಮಿಕರು ಅನುಭವಿಸುವ ಶೋಷಣೆಯಿಂದಾಗ ಆ ಕೆಲಸವನ್ನೇ ನಗಣ್ಯ ಮಾಡಿದ್ದಾರೆ. ಆದರೆ ಒಂದೇ ಒಂದು ದಿನ ಒಬ್ಬರಾದರೂ ಅವರ ಜೊತೆ ಚರ್ಚೆ ಮಾಡಿ ಏನಾದರೂ ಅರ್ಥ ಮಾಡಿಕೊಂಡಿದ್ದಲ್ಲಿ ಆ ಸಮುದಾಯದ ಕೆಲಸವನ್ನು ಬೈಗುಳಗಳಂತೆ ಉಪಯೋಗಿಸುತ್ತಿರಲಿಲ್ಲ.
ಇನ್ನು ಬರುವ ಬೈಗುಳಗಳೆಂದರೆ ಲೈಂಗಿಕ ಸಂಭೋಗಕ್ಕೆ ಸಂಬಂಧಿಸಿದ್ದು. ವಿಶೇಷವಾಗಿ ಜನನಾಂಗಗಳಿಗೆ ಮಕ್ಕಳನ್ನು ಹುಟ್ಟಿಸಲು ಇರುವ ಮಹತ್ವವನ್ನು ಮೀರಿ ಅದು ಬರೀ ಬೈಗುಳ ಪದವಾಗಿ ಬಿಡುವುದು ಪರಲಿಂಗ ಕಾಮದ ಮಹತ್ತರ ಕೊಡುಗೆ. ಇದರ ಜೊತೆಗೆ ಪರಲಿಂಗ ಕಾಮದ ಮತ್ತೊಂದು ಮಹತ್ತರ ಕೊಡುಗೆ ಅಂದರೆ ಜಾತಿ ಆಧಾರಿತ ಬೈಗುಳಗಳು. ಅದು ಮನಸ್ಸಿನ ವಿಕಾರಗಳನ್ನ ತೋರಿಸುತ್ತದೆ.
ಇದನ್ನೂ ಓದಿ- ಪ್ರಿವಿಲೇಜ್ – ಸಮಾನ ಹಕ್ಕುಗಳನ್ನು ಅಸಮಾನಗೊಳಿಸುವ ಸೂತ್ರ
ಸಾಮಾನ್ಯವಾಗಿ ಈ ಬೈಗುಳ ಎಲ್ಲಾ ಮನೆಯಲ್ಲಿರುವ ಮಹಿಳೆಯರ ಮೇಲೆ ತಿರುಗುತ್ತದೆ. ಜಗಳವಾಡುವುದು ಪುರುಷರಾದರೂ ಧಾಳಿ ಹೆಂಗಸರ ಮೇಲೆ. ಈ ಬೈಗುಳಗಳೆಲ್ಲಾ ಬರುವುದು ಪರಲಿಂಗ ಕಾಮದ ಪುರುಷಾಧಿಕಾರದಿಂದ. ಈ ಪ್ರೆಮೈಸಿಸ್ ನಲ್ಲೇ ಪುರುಷಾಧಿಕಾರದ ಪವರನ್ನು ಲೈಂಗಿಕತೆಯ ಮೂಲಕ ನೋಡಬಹುದು. ಯಾವುದೇ ಬೈಗುಳ ಶೋಷಣೆ ಮಾಡುವ ಜಾತಿ ಧರ್ಮ ಮತ್ತು ವರ್ಗದ ಪುರುಷರ ಮೇಲೆ ಕಟ್ಟಿರುವುದಿಲ್ಲ. ಒಟ್ಟೂ ಬೈಗುಳ ಅಂಚಿಗೆ ತಳ್ಳಲ್ಪಟ್ಟವರ ಮೇಲೇ ಕಟ್ಟಲಾಗಿದೆ.
ಇದರ ಜೊತೆಗೆ ಸಿದ್ದ ಮಾದರಿಗಳನ್ನು ಕಟ್ಟಿ ಪ್ರತಿಯೊಂದು ಅಂಚಿಗೆ ತಳ್ಳಲ್ಪಟ್ಟ ಸಮುದಾಯವನ್ನು ಬ್ರಾಂಡ್ ಮಾಡಿ ಇವರು ಹೀಗೆ ಅವರು ಹಾಗೆ ಎಂದು ಜನರ ಮನಸ್ಸಿನಲ್ಲಿ ದ್ವೇಷ ಬಿತ್ತುತ್ತಾರೆ. ಈ ಇಡೀ ಪ್ರಕ್ರಿಯೆ ನಡೆಯುವುದೇ ಲೈಂಗಿಕತೆಯನ್ನು ಕೇಂದ್ರವಾಗಿಟ್ಟುಕೊಂಡು. ಇಷ್ಟಾದರೂ ಲೈಂಗಿಕತೆ ಎಂಬ ವಿಷಯ ಬಂದಾಗ ನಾವು ಕೆಲವರು ಮಾತ್ರ ನೆನಪಾಗುತ್ತೇವೆ.
ರೂಮಿ ಹರೀಶ್
ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ, ಲಿಂಗ ಪರಿವರ್ತಿತ ಪುರುಷ ಮತ್ತು ಲೇಖಕರೂ ಆಗಿರುವ ಇವರು ಕಳೆದ ಸುಮಾರು 25 ವರ್ಷಗಳಿಂದ ಲಿಂಗತ್ವ ಅಲ್ಪಸಂಖ್ಯಾತರ ಪರವಾದ ಹೋರಾಟ ಮತ್ತು ಲೈಂಗಿಕ ರಾಜಕಾರಣಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿ ಕೊಂಡಿದ್ದಾರೆ.