ಸರಕಾರಿ ಸಾಂಸ್ಕೃತಿಕ ಸಂಸ್ಥೆಗಳಿಗೆ ನೇಮಕಾತಿ : ತಪ್ಪು ನಿರ್ಧಾರಗಳು ಜಾಸ್ತಿ

Most read

ಆಯ್ಕೆ ಸಮಿತಿಯಲ್ಲಿರುವ ಸಂಘಿ ಮನಸ್ಥಿತಿಯವರ ತಂತ್ರವೋ, ಹಿಡನ್ ಹಿಂದುತ್ವವಾದಿ ಅಜೆಂಡಾ ಹೊಂದಿರುವ ಅಧಿಕಾರಿಗಳ ಒತ್ತಾಯವೋ, ಇಲ್ಲಾ ಬಿಜೆಪಿ ಪಕ್ಷದ ನಾಯಕರಿಂದ ಬಂದ ಶಿಫಾರಸ್ಸೋ, ಇಲ್ಲಾ ಆಯ್ಕೆಯಾದವರ ಕುರಿತು ಮಾಹಿತಿಯ ಕೊರತೆಯೋ, ಗೊತ್ತಿಲ್ಲ, ಆದರೆ ಕೆಲವಾರು ಸಂಘಿ ಕಾರ್ಯಕರ್ತರುಗಳೂ ಸಹ ಅಕಾಡೆಮಿ, ಪ್ರಾಧಿಕಾರದೊಳಗೆ ನುಸುಳಿದ್ದಾರೆ- ಶಶಿಕಾಂತ ಯಡಹಳ್ಳಿ ರಂಗಕರ್ಮಿ

ಅಂತೂ ಇಂತೂ ಸರಕಾರಿ ಕೃಪಾಪೋಷಿತ ಸಾಂಸ್ಕೃತಿಕ ಸಂಸ್ಥೆಗಳಿಗೆ ಪದಾಧಿಕಾರಿಗಳ ನೇಮಕಾತಿ ಅಧಿಕೃತವಾಗಿ ಘೋಷಣೆಯಾಗಿದೆ. 14 ಅಕಾಡೆಮಿಗಳು, 4 ಪ್ರಾಧಿಕಾರಗಳನ್ನು ಪುನಾರಚಿಸಲಾಗಿದೆ. ಕಳೆದ ಒಂದೂವರೆ ವರ್ಷದಿಂದ ಅಂದರೆ 2022 ಅಕ್ಟೋಬರ್ 14 ರಿಂದ ಈ ಎಲ್ಲಾ ಸರಕಾರಿ ಸಾಂಸ್ಕೃತಿಕ ಸಂಸ್ಥೆಗಳಿಗೆ ನೇಮಕಾತಿ ಇಲ್ಲದೆ ಸಾಂಸ್ಕೃತಿಕ ಕಾರ್ಯಚಟುವಟಿಕೆಗಳು ನೆನಗುದಿಗೆ ಬಿದ್ದಿದ್ದವು. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲಾದರೂ ನೇಮಕಾತಿಗಳನ್ನು ಮಾಡಲಾಗುತ್ತದೆ ಎಂಬ ಭಾರೀ ನಿರೀಕ್ಷೆ ಅಪಾರ ನಿರಾಸೆಯನ್ನೇ ತರಿಸಿತ್ತು. ಸರಕಾರ ಅಸ್ತಿತ್ವಕ್ಕೆ ಬಂದು ಹತ್ತು ತಿಂಗಳಾದರೂ ನೇಮಕಾತಿ ನಡೆಯಲೇ ಇಲ್ಲ. ಸರಕಾರದ ಮೇಲೆ ಸಾಂಸ್ಕೃತಿಕ ಲೋಕದವರ  ಆಗ್ರಹ ಹಾಗೂ ಮಾಧ್ಯಮಗಳ ಆಗ್ರಹ ಅತಿಯಾಗಿತ್ತು. ಇನ್ನೇನು ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದು ಮತ್ತೆ ಮುಂದಿನ ಮೂರು ತಿಂಗಳು ಯಾವ ನೇಮಕಾತಿಗಳನ್ನೂ ಮಾಡಲು ಸರಕಾರಕ್ಕೆ ಅವಕಾಶ ಇಲ್ಲವೆಂಬುದು ಖಾತ್ರಿಯಾಗಿತ್ತು. ಅತ್ತ ದೆಹಲಿಯಲ್ಲಿ ಚುನಾವಣಾ ಆಯುಕ್ತರು ಸಾರ್ವತ್ರಿಕ ಚುನಾವಣೆಗೆ ದಿನಾಂಕಗಳನ್ನು ಘೋಷಣೆ ಮಾಡುತ್ತಿರುವಾಗ ಇತ್ತ ರಾಜ್ಯ ಸರಕಾರ ಅಕಾಡೆಮಿ ಪ್ರಾಧಿಕಾರಗಳಿಗೆ ನೇಮಕಾತಿಗಳ ಆದೇಶ ಹೊರಡಿಸಿ ಚುನಾವಣಾ ನೀತಿ ಸಂಹಿತೆ ಪ್ರಹಾರದಿಂದ ಸಾಂಸ್ಕೃತಿಕ ಸಂಸ್ಥೆಗಳನ್ನು ಪಾರು ಮಾಡಿತು. ಅಂತೂ ಇಂತೂ ಸರಕಾರದ ಗಜಗರ್ಭದಿಂದ ಹತ್ತು ತಿಂಗಳ ನಂತರ ಅಕಾಡೆಮಿ ಪ್ರಾಧಿಕಾರಗಳ ನೇಮಕಾತಿಯ ಹೆರಿಗೆಯಾಯಿತು. ಸಾಂಸ್ಕೃತಿಕ ಕ್ಷೇತ್ರ ನೆಮ್ಮದಿಯಿಂದ ನಿಟ್ಟುಸಿರು ಬಿಟ್ಟಿತು.

ಆಯ್ಕೆ ಸಮಿತಿಯು ನೇಮಕಗೊಂಡು, ಅನೇಕ ಸಭೆಗಳಾಗಿ, ಸಂಭಾವ್ಯ ಹೆಸರುಗಳು ಸೂಚನೆಗೊಂಡು, ಸಂಸ್ಕೃತಿ ಇಲಾಖೆ ಸಚಿವರಿಂದ ಪರಿಶೀಲನೆಗೊಳಗಾಗಿ ಅಂತಿಮವಾಗಿ ಮುಖ್ಯಮಂತ್ರಿಗಳ ಅನುಮತಿಗಾಗಿ ಪಟ್ಟಿ ಕಾಯುತ್ತಲೇ ಇತ್ತು. ಇಲಾಖೆ ಸಚಿವರಾದ ಮಾನ್ಯ ಶಿವರಾಜ ತಂಗಡಗಿಯವರು ಮುಂದಿನವಾರ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಹೇಳುತ್ತಲೇ ಇದ್ದರೂ ಆ ಮುಂದಿನ ವಾರ ಬಂದಿರಲಿಲ್ಲ. ಆಯ್ಕೆ ಪಟ್ಟಿ ಸಿದ್ಧಗೊಂಡು ಸಿಎಂ ಕಚೇರಿಯ ಕಡತದಲ್ಲಿ ಪವಡಿಸಿತ್ತು. ಇತ್ತ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಸಹನೆ ಹೆಚ್ಚಾಗುತ್ತಲೇ ಇತ್ತು. ಚುನಾವಣೆ ಬೇರೆ ಮುಂದಿತ್ತು. ಇನ್ನೇನು ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಮಾರ್ಚ್ 15 ರಂದು ಜಾರಿ ಆಗುತ್ತದೆ ಎನ್ನುವ ಒಂದೆರಡು ಗಂಟೆಯ ಮೊದಲು ಅಂತಿಮಗೊಂಡ ಪಟ್ಟಿಯನ್ನು ತರಾತುರಿಯಲ್ಲಿ ಸರಕಾರ ಘೋಷಣೆ ಮಾಡಿತು.

ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಡಾ.ಪುರುಷೋತ್ತಮ ಬಿಳಿಮಲೆಯವರು, ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ಡಾ.ಚನ್ನಪ್ಪ ಕಟ್ಟಿಯವರು, ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಮೈಸೂರಿನ ಮಾನಸಾರವರು ಅಧ್ಯಕ್ಷರಾಗಿ ನೇಮಕಾತಿ ಹೊಂದಿದ್ದಾರೆ. ಆದರೆ ಅದ್ಯಾಕೋ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸದಸ್ಯರನ್ನು ಆಯ್ಕೆ ಮಾಡಿದ ಸರಕಾರ ಅಧ್ಯಕ್ಷರನ್ನೇ ನೇಮಕ ಮಾಡಲಿಲ್ಲ. ನೀತಿ ಸಂಹಿತೆಯಿಂದಾಗಿ ಇನ್ನು ಮೂರು ತಿಂಗಳು ಅಧ್ಯಕ್ಷರ ನೇಮಕಾತಿ ಮಾಡಲೂ ಸಾಧ್ಯವಿಲ್ಲ. ಅಧ್ಯಕ್ಷರೇ ಇಲ್ಲದೇ ಕೇವಲ ಸದಸ್ಯರುಗಳು ಮಾತ್ರ ಪ್ರಾಧಿಕಾರ ಮುನ್ನಡೆಸಲು ಸಾಧ್ಯವಿಲ್ಲ. ಯಾಕಿಂತಾ ನಿರ್ಧಾರವೆಂದು ಕೇಳಿದರೆ ಸರಕಾರದಿಂದ ಉತ್ತರವಿಲ್ಲ.

ಸಾಹಿತ್ಯ ಅಕಾಡೆಮಿಗೆ ಡಾ.ಎಲ್.ಎನ್.ಮುಕುಂದರಾಜುರವರು, ನಾಟಕ ಅಕಾಡೆಮಿಗೆ ಕೆ.ವಿ.ನಾಗರಾಜಮೂರ್ತಿಯವರು, ಸಂಗೀತ ಹಾಗೂ ನೃತ್ಯ ಅಕಾಡೆಮಿಗೆ ಡಾ.ಕೃಪಾ ಫಡಕಿಯವರು, ಶಿಲ್ಪ ಕಲಾ ಅಕಾಡೆಮಿಗೆ ಎಂ.ಸಿ.ರಮೇಶರವರು, ಲಲಿತಕಲಾ ಅಕಾಡೆಮಿಗೆ ಡಾ.ಪ.ಸ.ಕುಮಾರ್ ರವರು, ಯಕ್ಷಗಾನ ಅಕಾಡೆಮಿಗೆ ತಲ್ಲೂರ್ ಶಿವರಾಮಶೆಟ್ಟಿಯವರು, ಜಾನಪದ ಅಕಾಡೆಮಿಗೆ ಶಿವಪ್ರಸಾದ್ ಗೊಲ್ಲಹಳ್ಳಿಯವರು, ತುಳು ಸಾಹಿತ್ಯ ಅಕಾಡೆಮಿಗೆ ತಾರನಾಥ ಗಟ್ಟಿ ಕಾಪಿಕಾಡ್ ರವರು, ಕೊಂಕಣಿ ಸಾಹಿತ್ಯ ಅಕಾಡೆಮಿಗೆ ಜೋಕಿಮ್ ಸ್ಟ್ಯಾನಿ ಆಲ್ವಾರೆಸ್ ರವರು, ಬ್ಯಾರಿ ಸಾಹಿತ್ಯ ಅಕಾಡೆಮಿಗೆ ಉಮರ್.ಯು.ಹೆಚ್ ರವರು, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಗೆ ಸದಾನಂದ ಮಾವಜಿರವರು, ಬಯಲಾಟ ಅಕಾಡೆಮಿಗೆ ಪ್ರೊ.ದುರ್ಗಾದಾಸ್ ರವರು, ಬಂಜಾರ ಅಕಾಡೆಮಿಗೆ ಡಾ.ಎ.ಆರ್.ಗೋವಿಂದಸ್ವಾಮಿಯವರು ಅಧ್ಯಕ್ಷರುಗಳಾಗಿ ಆಯ್ಕೆಯಾಗಿದ್ದಾರೆ. ಹಾಗೂ ಈ ಎಲ್ಲಾ 15 ಅಕಾಡೆಮಿ ಹಾಗೂ 4 ಪ್ರಾಧಿಕಾರಗಳಿಗೂ ಸದಸ್ಯರುಗಳನ್ನು ಆಯ್ಕೆ ಮಾಡಲಾಗಿದೆ. ಆದರೆ.. ಕೊಡವ ಸಾಹಿತ್ಯ ಅಕಾಡೆಮಿಗೆ ಕೇವಲ ಅಜ್ಜಿನಕೊಂಡ ಮಹೇಶ ನಾಚಯ್ಯನವರನ್ನು ಅಧ್ಯಕ್ಷರನ್ನಾಗಿ ನೇಮಕಾತಿ ಮಾಡಲಾಗಿದೆ.

ಆದರೆ.. ಮಾಡಬೇಕಾದಾಗ ನೇಮಕಾತಿ ಮಾಡದೇ ಸುದೀರ್ಘ ಸಮಯ ವ್ಯರ್ಥ ಮಾಡಿ  ಹತ್ತು ತಿಂಗಳ ನಂತರ ತರಾತುರಿಯಲ್ಲಿ ನೇಮಕಾತಿ ಪಟ್ಟಿಯನ್ನು ಈ ಸರಕಾರ ಬಿಡುಗಡೆ ಮಾಡಿದ್ದಾದರೂ ಯಾಕೆ.? ಅಕಾಡೆಮಿ, ಪ್ರಾಧಿಕಾರಗಳ ಕಾರ್ಯಕ್ರಮಗಳಿಗೆ  22-23 ನೇ ಸಾಲಿನಲ್ಲಿ ಸರಕಾರದ ಅನುದಾನವೇ ಇಲ್ಲದೇ ಇರುವಾಗ, ಹಾಗೂ ನೀತಿ ಸಂಹಿತೆಯಿಂದಾಗಿ 23-24 ನೇ ಸಾಲಿನ ಅನುದಾನವನ್ನು ಬಿಡುಗಡೆ ಮಾಡಲು ಅವಕಾಶವೇ ಇಲ್ಲದಿರುವಾಗ ಈಗ ಮಾಡಲಾದ ನೇಮಕಾತಿಗಳಿಂದ ಏನು ಪ್ರಯೋಜನ? ಹೋಗಲಿ ಹೊಸದಾಗಿ ಆಯ್ಕೆಯಾದವರು ಕೆಲಸ ಕಾರ್ಯಗಳನ್ನು ಮಾಡಬೇಕೆಂದರೂ ನೀತಿ ಸಂಹಿತೆ ಅಡ್ಡಿಯಾಗಿರುವಾಗ ಕಾರ್ಯಯೋಜನೆಗಳನ್ನು ರೂಪಿಸಲು ಹೇಗೆ ಸಾಧ್ಯ? ಮುಂದಿನ ಮೂರು ತಿಂಗಳುಗಳ ಕಾಲ ಅಂದರೆ ಲೋಕಸಭೆಯ ಚುನಾವಣೆ ಮುಗಿದು ಫಲಿತಾಂಶ ಘೋಷಣೆ ಆಗುವವರೆಗೂ ಎಲ್ಲಾ ಅಕಾಡೆಮಿ, ಪ್ರಾಧಿಕಾರಗಳು ಇದ್ದರೂ ಇಲ್ಲದಿದ್ದರೂ ಒಂದೇ. ಇಂತಹ ಸಂದಿಗ್ಧ ಕಾಲಘಟ್ಟದಲ್ಲಿ ಸರಕಾರಿ ಸಾಂಸ್ಕೃತಿಕ ಸಂಸ್ಥೆಗಳಿಗೆ ನೇಮಕಾತಿ ಬೇಕಿತ್ತಾ? ನಾಲ್ಕಾರು ತಿಂಗಳ ಹಿಂದೆ ಈ ಕೆಲಸವನ್ನು ಸರಕಾರ ಮಾಡಬಾರದಿತ್ತಾ?

ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸರಕಾರ ಕೊಡಮಾಡುವ ಅನುದಾನದಲ್ಲಿ ಭಾರೀ ಕಡಿತವಾಗಿದೆ. ಆಗ 430 ಕೋಟಿ ಇದ್ದ ವಾರ್ಷಿಕ ಅನುದಾನ ಈಗ 290 ಕೋಟಿಯಾಗಿದೆ.  ಮೊದಲು ಪ್ರತಿ ಅಕಾಡೆಮಿಗೂ ತಲಾ ಒಂದೊಂದು ಕೋಟಿ ಅನುದಾನ ದೊರಕುತ್ತಿತ್ತು. ಆದರೆ ಬಿಜೆಪಿ ಸರಕಾರದಲ್ಲಿ ಅದು ಇನ್ನೂ ಕಡಿಮೆಯಾಯ್ತು. ಈಗ ಇರುವ ಅನುದಾನವನ್ನು ಬಳಸಿ ಸಾಂಸ್ಕೃತಿಕ ಉತ್ಸವಗಳನ್ನು ಮಾತ್ರ ಮಾಡಲು ಸಂಸ್ಕೃತಿ ಸಚಿವರು ಭಾರೀ ಆಸಕ್ತಿಯನ್ನು ಹೊಂದಿದ್ದಾರೆ. ಆದರೆ ಸಾಂಸ್ಕೃತಿಕ ಸಂಘಟನೆಗಳಿಗೆ ಕೊಡಲು ಹಣವಿಲ್ಲ ಎನ್ನುತ್ತಿದ್ದಾರೆ. ಕಲಾತಂಡಗಳಿಗೆ ಕೊಡಮಾಡುವ ಅನುದಾನದಲ್ಲೂ ಭಾರೀ ಕಡಿತ ಮಾಡಲಾಗಿದೆ. ಅದನ್ನೂ ಕಂತುಗಳಲ್ಲಿ ಕೊಡಲಾಗುತ್ತಿದೆ. ವಾಸ್ತವ ಸಂಗತಿ ಹೀಗಿರುವಾಗ ಇನ್ನು ಎಲ್ಲಾ ಅಕಾಡೆಮಿ ಪ್ರಾಧಿಕಾರ ಹಾಗೂ ರಂಗಾಯಣಗಳಿಗೆ ಬೇಕಾದ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಸರಕಾರ ಕೊಡುತ್ತದೆ ಎನ್ನುವ ನಂಬಿಕೆ ಯಾರಿಗೂ ಇಲ್ಲವಾಗಿದೆ. ಕೊಡುವ ಅಲ್ಪ ಅನುದಾನದಲ್ಲಿ ಅರ್ಧದಷ್ಟು ಕಚೇರಿ ನಿರ್ವಹಣೆ, ಸಂಬಳ, ಸಾರಿಗೆಗೆ ಖರ್ಚಾಗುತ್ತಿರುವಾಗ, ಬಾಕಿ ಉಳಿಕೆ ಹಣದಲ್ಲಿ ಒಂದು ವರ್ಷಗಳ ಕಾಲ ಹೇಗೆ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳುವುದು ಎನ್ನುವುದೇ ಈ ಎಲ್ಲಾ ಸರಕಾರಿ ಸಾಂಸ್ಕೃತಿಕ ಸಂಸ್ಥೆಗೆ ಆಯ್ಕೆಯಾದ ಅಧ್ಯಕ್ಷರು ಹಾಗೂ ನಿರ್ದೇಶಕರ ಮುಂದಿರುವ ಸವಾಲಾಗಿದೆ.

ನೇಮಕಾತಿ ವಿಚಾರಕ್ಕೆ ಬಂದರೆ ಹಲವಾರು ಅರ್ಹರನ್ನು ಆಯ್ಕೆ ಮಾಡಲಾಗಿದೆ. ಆದರೆ ಕೆಲವಾರು ಯಡವಟ್ಟುಗಳೂ ಆಯ್ಕೆ ಪಟ್ಟಿಯಲ್ಲಿವೆ. ಅವುಗಳಲ್ಲಿ ಕೆಲವು ಅಪಸವ್ಯಗಳು ಹೀಗಿವೆ.

ಸಂಘಿಗಳಿಗೂ ಆದ್ಯತೆ

ಸನ್ಮಾನ್ಯ ಸಿದ್ದರಾಮಯ್ಯನವರು ಸಂಘಪರಿವಾರದ ಹಿಂದುತ್ವವನ್ನು ವಿರೋಧಿಸಿಕೊಂಡೇ ಬಂದವರು. ರಾಜ್ಯದಲ್ಲಿ ಅಳುವ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷವು ಬಿಜೆಪಿಯ ಬಲಪಂಥೀಯ ಸಿದ್ಧಾಂತವನ್ನು ಒಪ್ಪದೇ ಇರುವಂತಹುದು. ಆದರೆ ಸಾಂಸ್ಕೃತಿಕ ಸಂಸ್ಥೆಗಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡುವಾಗ ಸಂಘಿಗಳಿಗೂ ಅವಕಾಶ ಕೊಟ್ಟಿದ್ದು ಈ ಕಾಂಗ್ರೆಸ್ ಸರಕಾರದ ಮೇಲಿರುವ ಸಾಫ್ಟ್ ಹಿಂದುತ್ವದ ಆರೋಪಕ್ಕೆ ಪುರಾವೆಯಾಗಿದೆ. ಆಯ್ಕೆ ಸಮಿತಿಯಲ್ಲಿರುವ ಸಂಘಿ ಮನಸ್ಥಿತಿಯವರ ತಂತ್ರವೋ, ಹಿಡನ್ ಹಿಂದುತ್ವವಾದಿ ಅಜೆಂಡಾ ಹೊಂದಿರುವ ಅಧಿಕಾರಿಗಳ ಒತ್ತಾಯವೋ, ಇಲ್ಲಾ ಬಿಜೆಪಿ ಪಕ್ಷದ ನಾಯಕರಿಂದ ಬಂದ ಶಿಫಾರಸ್ಸೋ, ಇಲ್ಲಾ ಆಯ್ಕೆಯಾದವರ ಕುರಿತು ಮಾಹಿತಿಯ ಕೊರತೆಯೋ, ಗೊತ್ತಿಲ್ಲ, ಆದರೆ ಕೆಲವಾರು ಸಂಘಿ ಕಾರ್ಯಕರ್ತರುಗಳೂ ಸಹ ಅಕಾಡೆಮಿ, ಪ್ರಾಧಿಕಾರದೊಳಗೆ ನುಸುಳಿದ್ದಾರೆ.

ಬೀದರ್ ಜಿಲ್ಲೆಯ ವಿಜಯಲಕ್ಷ್ಮೀ ಕೌಟಗಿ ಎನ್ನುವವರನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ಸದಸ್ಯೆಯನ್ನಾಗಿ ಆಯ್ಕೆ ಮಾಡಲಾಗಿದೆ. ಆದರೆ ಈ ವಿಜಯಲಕ್ಷ್ಮೀಯವರು ಪಕ್ಕಾ ಬಿಜೆಪಿ ಪಕ್ಷದ ಕಟ್ಟರ್ ಕಾರ್ಯಕರ್ತೆಯಾಗಿದ್ದು ಬೀದರ್ ನಗರದ ಎಲ್ಲರಿಗೂ ಗೊತ್ತಿರುವ ಸಂಗತಿ. ಅವರ ಫೇಸ್ಬುಕ್ ಖಾತೆಯಲ್ಲಿಯೇ ಅವರ ಬಿಜೆಪಿ ಒಲವು ಗೊತ್ತಾಗುತ್ತದೆ.  ಮೈಸೂರು ರಂಗಾಯಣವನ್ನು ಕೇಸರೀಕರಣಗೊಳಿಸಿ ಉರಿಗೌಡ ನಂಜೇಗೌಡರನ್ನು ಹುಟ್ಟುಹಾಕಿದ ಪಕ್ಕಾ ಸಂಘಿ  ಅಡ್ಡಂಡ ಕಾರ್ಯಪ್ಪನವರ ಬೆಂಬಲಿಗರಾದ ಸುರೇಶ್ ಬಾಬು ಎನ್ನುವವರನ್ನು ರಂಗಸಮಾಜದ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದು ತಪ್ಪು ನಿರ್ಧಾರವಾಗಿದೆ. ಮೈಸೂರಿನ ಸಮಸ್ತ ರಂಗಕರ್ಮಿಗಳೂ ಅಡ್ಡಂಡ ಕಾರ್ಯಪ್ಪನವರ ಹಿಂದುತ್ವವಾದಿತನವನ್ನು ವಿರೋಧಿಸಿ ಬೀದಿಯಲ್ಲಿ ಪ್ರತಿಭಟನೆಗೆ ಇಳಿದಾಗ ಅಡ್ಡಂಡರವರನ್ನು ಬೆಂಬಲಿಸಿ ವೇದಿಕೆಯಲ್ಲಿದ್ದ ವ್ಯಕ್ತಿ ಈ ಸುರೇಶ್ ಬಾಬು!

ಕಳೆದ ಸಲ ಬಿಜೆಪಿ ಪಕ್ಷ ಇದ್ದಾಗ ಕೇಶವಕೃಪಾದ ಕೃಪೆಯಿಂದಾಗಿ ಕೊನೆ ಕೊನೆಗೆ ನಾಟಕ ಅಕಾಡೆಮಿಗೆ ಸದಸ್ಯರಾಗಿ ಆಯ್ಕೆಯಾಗಿದ್ದ ಮಾಲೂರ್ ವಿಜಿ ಸಹ ಪಕ್ಕಾ ಬಿಜೆಪಿ ಪಕ್ಷದ ಕಾರ್ಯಕರ್ತ ಮತ್ತು ಮೋದಿ ಅಭಿಮಾನಿ. ಹುಡುಕಿದರೆ ಇನ್ನೂ ಹಲವಾರು ಸಂಘಿಗಳ ಹೆಸರುಗಳು ಹೊರಬರುತ್ತವೆ. ಇದು ಸಂಘದವರ ಹಳೆಯ ಕುತಂತ್ರವಾಗಿದೆ. ಹೇಗೋ ಮಾಡಿ ತಮ್ಮ ಬಲಪಂಥೀಯ ಸಿದ್ಧಾಂತಿಗಳನ್ನು ಸರಕಾರಿ ಸಂಸ್ಥೆಗಳಲ್ಲಿ ಸೇರಿಸಿ ಅಲ್ಲಿ ತಮ್ಮ ಪರವಾದ ನಿರ್ಣಯಗಳನ್ನು ತೆಗೆದುಕೊಳ್ಳುವಂತೆ ರಾಜಕೀಯ ಮಾಡಲು, ಇಲ್ಲವೇ ಗಲಾಟೆ ಎಬ್ಬಿಸಿ ದಿಕ್ಕುತಪ್ಪಿಸಲು ಹಾಗೂ ಸಂಘಿ ಪರವಾದವರಿಗೆ ಪ್ರಶಸ್ತಿ, ಅನುದಾನ, ಯೋಜನೆಗಳನ್ನು ಕೊಡಿಸಲು ಈ ರೀತಿಯ ನುಸುಳುವಿಕೆ ಮಾಡಿಸಲಾಗುತ್ತದೆ. ಅಂತಿಮ ಆಯ್ಕೆಯ ಪಟ್ಟಿ ಬಿಡುಗಡೆಗೆ ಮೊದಲು ಸಾಂಸ್ಕೃತಿಕ ಸಂಸ್ಥೆಗಳಿಗೆ ಶಿಫಾರಸ್ಸಾದ ಪ್ರತಿಯೊಬ್ಬರ ಹಿನ್ನೆಲೆ ಹಾಗೂ ಅವರ ಒಲವು ನಿಲುವುಗಳ ಬಗ್ಗೆ ಮಾಹಿತಿಯನ್ನು ಸಂಸ್ಕೃತಿ ಇಲಾಖೆಯ ಸಚಿವಾಲಯ ಹಾಗೂ ಮಾನ್ಯ ಮುಖ್ಯಮಂತ್ರಿಗಳು ತಿಳಿದುಕೊಂಡ ನಂತರವೇ ಅಂತಿಮ ನಿರ್ಣಯ ತೆಗೆದುಕೊಳ್ಳುವುದು ಸರಿಯಾದ ಕ್ರಮ. ಈ ಹಿಂದೆ ಬಿಜೆಪಿ ಸರಕಾರದಲ್ಲಿ ಮಂತ್ರಿಯಾಗಿದ್ದ ತಂಗಡಗಿಯವರು ತಮ್ಮ ಪೂರ್ವಾಶ್ರಮದ ಮೋಹಕ್ಕೊಳಗಾಗಿ ಬಿಜೆಪಿ ಸಮರ್ಥಕರಿಗೂ ಅವಕಾಶ ಮಾಡಿಕೊಟ್ಟರಾ ಎನ್ನುವ ಅನುಮಾನವೂ ಕಾಡದಿರದು.

ಅನುಮತಿ ಪಡೆಯದೇ ಆಯ್ಕೆ

ಯಾವುದೇ ಸಂಸ್ಥೆಗಳಿಗೆ ಯಾರನ್ನೇ ಆಯ್ಕೆ ಮಾಡಲಿ ಅವರ ಹೆಸರನ್ನು ಘೋಷಿಸುವ ಮುನ್ನ ಅವರ ಅನುಮತಿಯನ್ನು ಕೇಳಬೇಕು ಎನ್ನುವ ಕನಿಷ್ಟ ಸೌಜನ್ಯವೂ ಈ ಸರಕಾರಗಳಿಗೆ ಇಲ್ಲವಾಗಿದೆ. ಪ್ರತಿ ಸರಕಾರದಲ್ಲೂ ಸರಕಾರಿ ಸಂಸ್ಥೆಗಳಿಗೆ ನೇಮಕಾತಿ ಮಾಡುವಾಗ ಯಾರೋ ಒಬ್ಬಿಬ್ಬರು ಯಾವುದೋ ಕಾರಣಕ್ಕೆ ನಿರಾಕರಿಸುವ ಮೂಲಕ ಆಯ್ಕೆ ಸಮಿತಿಗೆ, ಸಂಸ್ಕೃತಿ ಇಲಾಖೆಗೆ ಮುಜುಗರವನ್ನುಂಟು ಮಾಡುತ್ತಾರೆ. ಈ ಸಲ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರನ್ನಾಗಿ ಲೈಂಗಿಕ ಅಲ್ಪಸಂಖ್ಯಾತರ ಪರ ಹೋರಾಟಗಾರ್ತಿಯಾದ ಅಕೈ ಪದ್ಮಶಾಲಿಯವರನ್ನು ಅವರ ಅನುಮತಿ ಪಡೆಯದೇ ಆಯ್ಕೆ ಮಾಡಲಾಗಿದೆ. ಮೊದಲನೆಯದಾಗಿ ಲೈಂಗಿಕ ಅಲ್ಪಸಂಖ್ಯಾತರ ಹಿತರಕ್ಷಣೆಗೆ ಅಕೈರವರ ಕೊಡುಗೆ ದೊಡ್ಡದಾಗಿದೆ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆ ಕನಿಷ್ಟವಾಗಿದೆ. ಅವರ ಜೀವನಗಾಥೆಯನ್ನು ಬಿಟ್ಟು ಬೇರೆ ಯಾವುದೇ ಸಾಹಿತ್ಯ ಕೃಷಿಯನ್ನೂ ಮಾಡದೆ ಇದ್ದ ಅಕೈರವರನ್ನು ಸಾಹಿತ್ಯ ಅಕಾಡೆಮಿಗೆ ಸೂಚಿಸಿದವರ, ಆಯ್ಕೆಮಾಡಿದವರ ಅಜ್ಞಾನಕ್ಕೆ ಏನು ಹೇಳುವುದು.? ಈಗ ತಮ್ಮ ನೇಮಕಾತಿಯನ್ನು ನಿರಾಕರಿಸಿ ಅಕೈ ರವರು ಸಿಎಂ ಹಾಗೂ ಡಿಸಿಎಂ ಗೆ ಪತ್ರ ಬರೆದಿದ್ದಾರೆ.

ಪ್ರಾದೇಶಿಕ ಅಸಮಾನತೆ..

ಪ್ರತಿ ಸಲ ಅಕಾಡೆಮಿ ಹಾಗೂ ಪ್ರಾಧಿಕಾರಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ಆಯ್ಕೆ ಮಾಡಿದ ಸಂದರ್ಭದಲ್ಲಿ ಪ್ರಾದೇಶಿಕ ಪ್ರಾತಿನಿಧ್ಯತೆಯಲ್ಲಿ  ಕೊರತೆಯಾಗಿರುವ ಅರೋಪ ಇದ್ದೇ ಇರುತ್ತದೆ. ಯಕ್ಷಗಾನ ಕಲೆಗೆ ಹೆಚ್ಚು ಕೊಡುಗೆ ಕೊಟ್ಟ ಉತ್ತರ ಕನ್ನಡ ಜಿಲ್ಲೆಯ ಯಾರೊಬ್ಬರ ಹೆಸರೂ ಯಕ್ಷಗಾನ ಅಕಾಡೆಮಿಯಲ್ಲಿ  ಇಲ್ಲದೇ ಇರುವುದು ಅನ್ಯಾಯ. ರಂಗಾಯಣ ಆರಂಭವಾಗಿದ್ದೇ ಮೈಸೂರಿನಲ್ಲಿ, ಈಗಲೂ ಬೆಂಗಳೂರನ್ನು ಹೊರತು ಪಡಿಸಿದರೆ ಅತೀ ಹೆಚ್ಚು ರಂಗಚಟುವಟಿಕೆಗಳು ನಿರಂತರವಾಗಿರುವುದೂ ಸಹ ಮೈಸೂರಲ್ಲಿ. ಆದರೆ ಕರ್ನಾಟಕ ನಾಟಕ ಅಕಾಡೆಮಿಯಲ್ಲಿ ಮೈಸೂರಿನ ಯಾರೊಬ್ಬ ರಂಗಕರ್ಮಿಯ ಹೆಸರೂ ಇಲ್ಲದಿರುವುದು ಮತ್ತೊಂದು ಪ್ರಮಾದ. ಪ್ರತಿ ಸಲದಂತೆ ಈ ಬಾರಿಯೂ ಸಹ ಅನೇಕ ವರ್ಷಗಳಿಂದ  ಬೆಂಗಳೂರಿನಲ್ಲಿ ವಾಸಿಸುವವರೇ (ಬೇರೆ ಜಿಲ್ಲೆಗಳಲ್ಲಿ ಬೇರುಗಳಿರಬಹುದಾದರೂ) ಸರಕಾರಿ ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಅತೀ ಹೆಚ್ಚು ಫಲಾನುಭವಿಗಳಾಗಿದ್ದಾರೆ. ಇದೂ ಸಹ ಆಯಾ ಜಿಲ್ಲೆಗಳ  ಸಾಂಸ್ಕೃತಿಕ ಲೋಕದಲ್ಲಿ ಸಕ್ರಿಯರಾಗಿರುವವರ ಅಸಮಾಧಾನಕ್ಕೆ ಕಾರಣವಾಗಿದೆ. ರಂಗಸಮಾಜಕ್ಕೆ ಆಯ್ಕೆಯಾದ ಏಳು ಜನರಲ್ಲಿ ನಾಲ್ವರು ಬೆಂಗಳೂರಿನ ನಿವಾಸಿಗಳೇ ಎನ್ನುವುದನ್ನು ಗಮನಿಸಬಹುದಾಗಿದೆ. ಕರ್ನಾಟಕದಲ್ಲಿ ಆರು ಪ್ರದೇಶಗಳಲ್ಲಿ ರಂಗಾಯಣಗಳಿವೆ. ಎಲ್ಲೆಲ್ಲಿ ರಂಗಾಯಣಗಳಿವೆಯೋ ಆಯಾ ಪ್ರದೇಶದಲ್ಲಿ ಕ್ರಿಯಾಶೀಲವಾಗಿರುವ ಒಬ್ಬೊಬ್ಬ ರಂಗಕರ್ಮಿಯನ್ನು ರಂಗಸಮಾಜಕ್ಕೆ ಆಯ್ಕೆ ಮಾಡಿ ಇನ್ನೊಬ್ಬರು ಬೆಂಗಳೂರಿನವರಾಗಿದ್ದರೆ ಸಮಸ್ಯೆಯೇ ಇರಲಿಲ್ಲ. ರಂಗಸಮಾಜದಲ್ಲಿ ರಂಗಾಯಣ ಇರುವ ನಗರದ ಯಾರೊಬ್ಬರೂ ಸದಸ್ಯರಾಗದೇ ಇರುವುದು ಅಕ್ಷಮ್ಯ.

ಪುನರಪಿ ಸದಸ್ಯ ಪ್ರಾಪ್ತಿ ಪ್ರಸಂಗ :

ಕಳೆದ ಬಾರಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಮಾನ್ಯ ಉಮಾಶ್ರೀಯವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದರು. ಆಗ ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ಈಗಾಗಲೇ ಹಿಂದಿನ ಅವಧಿಯಲ್ಲಿ ಆಯ್ಕೆಯಾಗಿ ಸೇವೆ ಸಲ್ಲಿಸಿದವರಿಗೆ ಮತ್ತೊಮ್ಮೆ ಅವಕಾಶ ಕೊಡದೆ ಬೇರೆಯವರಿಗೆ ಅವಕಾಶಗಳ ಹಂಚಿಕೆಯಾಗಲಿ ಎನ್ನುವ ಸೂಕ್ತ ನಿರ್ಣಯವನ್ನು ತೆಗೆದುಕೊಂಡಿದ್ದರು. ಈ ಹಿಂದೆ ಪುಸ್ತಕ ಪ್ರಾಧಿಕಾರಕ್ಕೆ ಆಯ್ಕೆಯಾಗಿದ್ದ  ಪ್ರಕಾಶಕರಾದ ಪ್ರಕಾಶ್ ಕಂಬತ್ತಳ್ಳಿಯವರ ಹೆಸರು ಮತ್ತೊಮ್ಮೆ ಮರುಕಳಿಸಿದ್ದರಿಂದ ಘೋಷಣೆಯ ನಂತರವೂ ಅವರ ಆಯ್ಕೆಯನ್ನು ರದ್ದುಗೊಳಿಸಿದ್ದರು. ‘ಒಂದು ಸಲ ಒಂದು ಅಕಾಡೆಮಿಗೆ ಸದಸ್ಯರಾಗಿ ಕಾರ್ಯನಿರ್ವಹಿಸಿದವರ ಹೆಸರನ್ನು ಅದರ ಮುಂದಿನ ಅವಧಿಯಲ್ಲಿ ಅಕಾಡೆಮಿ ಪ್ರಾಧಿಕಾರಗಳಿಗೆ ಪರಿಗಣಿಸಬಾರದು’ ಎಂದು ಕಾಂಗ್ರೆಸ್ ಸರಕಾರದಿಂದಲೇ ಬಂದ ಆದೇಶ ಸಾಂಸ್ಕೃತಿಕ ನೀತಿಯಲ್ಲೂ ನಮೂದಾಗಿದೆ. ಆದರೂ ಈ ಸಲ ಅದೇ ಕಾಂಗ್ರೆಸ್ ಸರಕಾರ ತನ್ನದೇ ನಿರ್ಣಯಗಳನ್ನು ಗಾಳಿಗೆ ತೂರಿದೆ. ಕಳೆದ ಸಲ ಬಿಜೆಪಿ ಸರಕಾರದಿಂದ ನಾಟಕ ಅಕಾಡೆಮಿಗೆ ಸದಸ್ಯರಾಗಿ ಆಯ್ಕೆಯಾಗಿದ್ದ ಮಾಲೂರು ವಿಜಿಯವರ ಹೆಸರನ್ನು ಮತ್ತೆ ಈ ಸಲವೂ ಸೇರಿಸಲಾಗಿದೆ. ಜೆ.ಲೊಕೇಶರವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನಾಟಕ ಅಕಾಡೆಮಿ ಸದಸ್ಯರಾಗಿದ್ದ ಜೇವರಗಿ ರಾಜಣ್ಣನವರಿಗೂ ಮತ್ತೆ ಈ ಸಲ ಇನ್ನೊಂದು ಅವಕಾಶ ಕೊಡಲಾಗಿದೆ. ಇವರು ಅರ್ಹರೇ ಆಗಿದ್ದರೂ ಈಗಾಗಲೇ ಫಲಾನುಭವಿಗಳಾಗಿದ್ದು ಬೇರೆ ಅರ್ಹರಿಗೂ ಅವಕಾಶ ಕೊಡಬಹುದಾಗಿತ್ತು. ಕೊಡಲಿಲ್ಲ ಎನ್ನುವುದೇ ಕೆಲವು ಆಕಾಂಕ್ಷಿಗಳ ಅಸಹನೆಗೆ ಕಾರಣವಾಗಿದೆ.  

ಪ್ರತಿಭೆ ಯಾವುದೋ, ಪ್ರಾತಿನಿಧ್ಯ ಇನ್ನೆಲ್ಲಿಗೋ!

ಈ ಆಯ್ಕೆ ಸಮಿತಿಯವರಿಗೆ ಏನಾಗಿದೆ? ಯಾವುದೋ ಕ್ಷೇತ್ರದಲ್ಲಿರುವ ಸಾಧಕರನ್ನು ಇನ್ಯಾವುದೋ ಕ್ಷೇತ್ರದ ಅಕಾಡೆಮಿ ಪ್ರಾಧಿಕಾರಗಳಿಗೆ ಸೇರಿಸಿದ್ದಾರಲ್ಲಾ. ಉದ್ಯಾವರ ನಾಗೇಶ್ ಕುಮಾರರವರು ಉಡುಪಿಯ ರಂಗಭೂಮಿಯಲ್ಲಿ ಕ್ರಿಯಾಶೀಲವಾಗಿ ತೊಡಗಿಕೊಂಡಿದ್ದಾರೆ. ನಿಯಮಿತವಾಗಿ ನಾಟಕಗಳನ್ನು ನಿರ್ಮಿಸುತ್ತಾ ರಂಗೋತ್ಸವಗಳನ್ನು ಆಯೋಜಿಸುತ್ತಲೇ ಬಂದಿದ್ದಾರೆ. ಅಂತವರು ನಾಟಕ ಅಕಾಡೆಮಿಗೆ ಸೂಕ್ತವಾಗಿದ್ದರೂ ಅವರನ್ನು ತುಳು ಸಾಹಿತ್ಯ ಅಕಾಡೆಮಿಗೆ ಸದಸ್ಯರನ್ನಾಗಿಸಲಾಗಿದೆ. ನಾಗೇಶರವರ ಕೊಡುಗೆ ತುಳು ಸಾಹಿತ್ಯಕ್ಕಿಂತಲೂ ತುಳು ಹಾಗೂ ಕನ್ನಡ ರಂಗಭೂಮಿಗೆ ದೊಡ್ಡದಾಗಿದೆ ಎನ್ನುವ ಪರಿಕಲ್ಪನೆಯೂ ಆಯ್ಕೆ ಸಮಿತಿಯವರಿಗೆ ಇಲ್ಲದೇ ಇರುವುದು ಬೇಸರದ ಸಂಗತಿ. ಪ್ರಕಾಶರಾಜ್ ಮೇಹು ಸಿನೆಮಾ ಕ್ಷೇತ್ರದಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ. ತಿಮ್ಮಜ್ಜಿ ಮ್ಯಾಗ್ಲುಂಡೆ ಎನ್ನುವ ಕಾದಂಬರಿ ಬಿಟ್ಟರೆ ಹೆಚ್ಚಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡವರೂ ಅಲ್ಲ ಹಾಗೂ ಸಾಹಿತಿಗಳೆಂದು ಗುರುತಿಸಿಕೊಂಡವರೂ ಅಲ್ಲಾ. ಚಲನಚಿತ್ರ ಅಕಾಡೆಮಿಗೆ ಸದಸ್ಯರಾಗಲು ಸೂಕ್ತ ವ್ಯಕ್ತಿಯಾಗಿದ್ದರೂ ಅವರನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ಸದಸ್ಯರನ್ನಾಗಿ ಮಾಡಿದವರ ಉದ್ದೇಶ ಏನಿದೆಯೋ ಗೊತ್ತಿಲ್ಲ. ಸಾಹಿತ್ಯ ಕ್ಷೇತ್ರದಲ್ಲಿ ಕವಿಗಳೂ ಹಾಗೂ ವಿಮರ್ಶಕರಾಗಿ ಹೆಸರುವಾಸಿಯಾಗಿರುವ ಡಾ.ಎಲ್.ಎನ್.ಮುಕುಂದರಾಜ್ ರವರನ್ನು ಸಾಹಿತ್ಯ ಅಕಾಡೆಮಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ಸೂಕ್ತವಾದ ನಿಲುವು. ಆದರೆ ಈ ಅಕಾಡೆಮಿಗೆ ಸದಸ್ಯರಾದವರಲ್ಲಿ ಮೂರ್ನಾಲ್ಕು ಜನರ ಹೆಸರನ್ನು ಬಿಟ್ಟು ಬೇರೆ ಯಾರೂ ಅವರಿಗೂ ಪರಿಚಯವಿಲ್ಲವಾಗಿದೆ. ಯಾವುದೇ ಅಕಾಡೆಮಿ ಪ್ರಾಧಿಕಾರಕ್ಕೆ ಅಧ್ಯಕ್ಷರಾಗಿ ಆಯ್ಕೆಯಾದವರ ಸಲಹೆ ಸೂಚನೆಗಳನ್ನೂ ಪರಿಗಣಿಸಿ ಸದಸ್ಯರುಗಳನ್ನು ಆಯ್ಕೆ ಮಾಡುವುದು ಅಪೇಕ್ಷಣೀಯ. ಯಾಕೆಂದರೆ  ಪ್ರಶಸ್ತಿ ಹಾಗೂ ಯೋಜನೆಗಳ ನಿರ್ಣಾಯಕ ಸಭೆಯಲ್ಲಿ  ಜಗಳ ಭಿನ್ನಾಭಿಪ್ರಾಯಗಳೇ ಹೆಚ್ಚಾಗಿ ಅಧ್ಯಕ್ಷರ ಆದ್ಯತೆ ಹಾಗೂ ಕನಸುಗಳು ಹಿನ್ನೆಲೆಗೆ ಸರಿಯುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ. ಅಧ್ಯಕ್ಷರು ನೀರಿಗೆ ಎಳೆದರೆ, ಕೆಲವು ಸದಸ್ಯರು ಏರಿಗೆ ಎಳೆದು ಅಕಾಡೆಮಿಯ ಬಂಡಿ ದಡ ಸೇರದೇ ಇರುವುದಕ್ಕೆ ಈ ಹಿಂದಿನ ಅನೇಕ ಸಂಘರ್ಷಗಳು ಸಾಕ್ಷಿಯಾಗಿವೆ.

ತಡೆಯಬಹುದಾಗಿದ್ದ ಈ ಎಲ್ಲಾ ತಪ್ಪುಗಳಿಗೆ ಕಾರಣರಾದವರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಆಯ್ಕೆ ಸಮಿತಿಯಲ್ಲಿ ಡಾ.ಕೆ.ಎಂ.ಮರುಳಸಿದ್ದಪ್ಪನವರು, ಪ್ರೊ. ಎಸ್.ಜಿ. ಸಿದ್ದರಾಮಯ್ಯನಂತವರು ಇದ್ದೂ ಸಹ ಈ ರೀತಿಯ ತಪ್ಪುಗಳು ಹೇಗೆ ನಡೆದವು ಎನ್ನುವುದಕ್ಕೆ ಅವರೇ ಉತ್ತರ ಕಂಡುಕೊಳ್ಳಬೇಕಾಗಿದೆ. ಆಯ್ಕೆ ಸಮಿತಿಯನ್ನು ದಾರಿ ತಪ್ಪಿಸಿದವರು ಯಾರು ಎನ್ನುವುದು ಗೊತ್ತಾಗಬೇಕಾಗಿದೆ. ಸಂಸ್ಕೃತಿ ಸಚಿವಾಲಯ ಆಯ್ಕೆ ಸಮಿತಿ ಶಿಫಾರಸ್ಸು ಮಾಡಿದ ಹೆಸರುಗಳನ್ನು ಪುನರ್ ಪರಿಶೀಲನೆ ಮಾಡಬೇಕಿತ್ತು. ಮಾಡಿಲ್ಲ. ಸಂಸ್ಕೃತಿ ಇಲಾಖೆಯ ಸಚಿವರು ಅವರ ಬಗ್ಗೆ ಸಮಗ್ರ ಮಾಹಿತಿಯನ್ನು ತರಿಸಿಕೊಳ್ಳಬೇಕಿತ್ತು, ಅವರಿಗೆ ಪುರುಸೊತ್ತು ಇರಲಿಲ್ಲ. ಮಾನ್ಯ ಮುಖ್ಯಮಂತ್ರಿಗಳಾದರೂ ಈ ಕುರಿತು ಗಮನ ಹರಿಸಬಹುದಾಗಿತ್ತು, ಅವರಿಗೆ ಇದು ಮುಖ್ಯ ಎನ್ನಿಸಲೇ ಇಲ್ಲ. ಹೀಗಾಗಿ ಉತ್ತಮ ಅರ್ಹ ಸಾಧಕರನ್ನು ಆಯ್ಕೆ ಮಾಡಿದ್ದಕ್ಕೆ ಸರಕಾರಕ್ಕೆ, ಸಂಸ್ಕೃತಿ ಇಲಾಖೆಗೆ ಅಭಿನಂದನೆಗಳು. ಜೊತೆಗೆ ತಪ್ಪು ನಿರ್ಧಾರಗಳಿಂದಾಗಿ ಒಪ್ಪಲಾಗದವರನ್ನೂ ನೇಮಕಾತಿ ಗೊಳಿಸಿದ್ದಕ್ಕೆ ಖಂಡನೆಗಳು.

ಶಶಿಕಾಂತ ಯಡಹಳ್ಳಿ

ರಂಗಕರ್ಮಿ

ಇದನ್ನೂ ಓದಿ- ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಪುರುಷೋತ್ತಮ ಬಿಳಿಮಲೆ ನೇಮಕ

More articles

Latest article