ಒಟ್ಟು 18 ಅಧ್ಯಕ್ಷ ಹುದ್ದೆಗಳ ಪೈಕಿ ಕೇವಲ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಗೆ ಮಾತ್ರ ಮಹಿಳಾ ಅಧ್ಯಕ್ಷರನ್ನು ನೇಮಿಸಲಾಗಿದೆ. ಉಳಿದ 17 ಸಂಸ್ಥೆಗಳಿಗೆ ಸಮರ್ಥರಾದ ಮಹಿಳಾ ಅಭ್ಯರ್ಥಿಗಳೇ ಸರ್ಕಾರದ ಕಣ್ಣಿಗೆ ಬೀಳಲಿಲ್ಲವೇ ? ಮತ್ತೆಮತ್ತೆ ಸರ್ಕಾರಗಳಿಗೆ ಮನದಟ್ಟು ಮಾಡಬೇಕಾದ ವಾಸ್ತವ ಎಂದರೆ, ಮಹಿಳಾ ಪ್ರಾತಿನಿಧ್ಯ ಎಂದರೆ ಯಾರೂ ಕೊಡುವುದಲ್ಲ, ಅದು ಸ್ತ್ರೀ ಸಮುದಾಯದ ಹಕ್ಕು.– ನಾ ದಿವಾಕರ, ಚಿಂತಕರು.
ಕೊನೆಗೂ ರಾಜ್ಯ ಸರ್ಕಾರ, ಅಳೆದೂ ಸುರಿದೂ ಸಾಂಸ್ಕೃತಿಕ ಲೋಕದತ್ತ ಗಮನ ಹರಿಸಿ, ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಪೂರೈಸಿದೆ. ಸಚಿವ ಸಂಪುಟ ರಚನೆ, ನಿಗಮ ಮಂಡಲಿಗಳ ನೇಮಕಾತಿ ಹಾಗೂ ಸಾಂಸ್ಕೃತಿಕ ವಲಯದ ಭರ್ತಿ ಈ ಮೂರೂ ಪ್ರಕ್ರಿಯೆಗಳು ಸಮಾನವಾಗಿ ಆಡಳಿತಾರೂಢ ಪಕ್ಷಗಳಿಗೆ ಸವಾಲುಗಳನ್ನೊಡ್ಡುತ್ತವೆ. ಪಕ್ಷ ಅನುಸರಿಸುವ ತಾತ್ವಿಕ ನೆಲೆಗಳು ಮತ್ತು ಸಿದ್ಧಾಂತಗಳಿಗಿಂತಲೂ ಹೆಚ್ಚಾಗಿ, ಅಧಿಕಾರ ವಲಯದಲ್ಲಿ ಎಲ್ಲ ದಿಕ್ಕುಗಳಿಂದಲೂ ಉದ್ಭವಿಸುವ ಒತ್ತಡಗಳು ಈ ಪ್ರಕ್ರಿಯೆಗಳನ್ನು ನಿರ್ದೇಶಿಸುತ್ತವೆ. ಜಾತಿ, ಸಮುದಾಯ, ಪ್ರದೇಶ ಹಾಗೂ ಪ್ರಮುಖ ನಾಯಕರ ಆಪ್ತ ವಲಯದಿಂದ ಉದ್ಭವಿಸುವ ಒತ್ತಡಗಳು ಆಳ್ವಿಕೆಯಲ್ಲಿ ಇರಬೇಕಾದ ನೈತಿಕತೆ ಮತ್ತು ಜವಾಬ್ದಾರಿಯನ್ನೂ ಹಿಂದಕ್ಕೆ ತಳ್ಳಿಬಿಡುತ್ತವೆ. ಹಾಗಾಗಿ ಸಮತೋಲವನ್ನು ಕಾಪಾಡುವುದೇ ಸರ್ಕಾರಕ್ಕೆ ಪ್ರಮುಖ ಸವಾಲಾಗಿ ಪರಿಣಮಿಸುತ್ತದೆ.
ಆಯಕಟ್ಟಿನ ಸ್ಥಳಗಳಿಗಾಗಿ ಸಹಜವಾಗಿಯೇ ನಡೆಯುವ ವಶೀಲಿಬಾಜಿ, ರಾಜಕೀಯ ಒತ್ತಡ ಹಾಗೂ ವೈಯಕ್ತಿಕ ಶಿಫಾರಸುಗಳ ಅಡೆತಡೆಗಳನ್ನು ದಾಟಿಕೊಂಡು, ವಿವಿಧ ಅಕಾಡೆಮಿ-ಪ್ರಾಧಿಕಾರಗಳಿಗೆ ನೇಮಕ ಮಾಡುವುದು ಒಂದು ದುಸ್ಸಾಹಸ ಎನ್ನುವುದು ಪಕ್ಷಗಳ ಒಳ ರಾಜಕೀಯ ಬಲ್ಲವರಿಗೆ ತಿಳಿದೇ ಇರುತ್ತದೆ. ಆದರೂ ಕಳೆದ ಮೇ ತಿಂಗಳಲ್ಲಿ ಅಧಿಕಾರ ವಹಿಸಿಕೊಂಡ ಕಾಂಗ್ರೆಸ್ ಸರ್ಕಾರಕ್ಕೆ ಈ ಪ್ರಕ್ರಿಯೆ ಪೂರೈಸಲು ಹತ್ತು ತಿಂಗಳ ಕಾಲಾವಧಿ ಅಗತ್ಯವಿರಲಿಲ್ಲ. ಹಿಂದಿನ ಸರ್ಕಾರದ ಸಾಂಸ್ಕೃತಿಕ ರಾಜಕಾರಣದ ಹಿನ್ನೆಲೆಯಲ್ಲಿ ನೋಡಿದಾಗ, ರಂಗಾಯಣದಂತಹ ಸ್ವಾಯತ್ತ ಸಂಸ್ಥೆಯನ್ನೇ ಬಿಜೆಪಿ ಸರ್ಕಾರ ತನ್ನ ಕಾರ್ಯಸೂಚಿಗೆ ಬಳಸಿಕೊಂಡ ನಿದರ್ಶನ ನಮ್ಮ ಮುಂದಿದೆ. ಆಡಳಿತಾರೂಢ ಪಕ್ಷವು ತನ್ನ ಸಾಂವಿಧಾನಿಕ ಬದ್ಧತೆಯನ್ನು ತಳಮಟ್ಟದ ಸಮಾಜದವರೆಗೂ ಪರಿಣಾಮಕಾರಿಯಾಗಿ ಕೊಂಡೊಯ್ಯುವ ಸೇತುವೆಗಳಾಗಿ ಈ ಸಂಸ್ಥೆಗಳು ಕಾರ್ಯನಿರ್ವಹಿಸುತ್ತವೆ. ಈ ದೃಷ್ಟಿಯಿಂದಾದರೂ ಕಾಂಗ್ರೆಸ್ ಸರ್ಕಾರ ಕ್ಷಿಪ್ರಗತಿಯಲ್ಲಿ ಸಾಂಸ್ಕೃತಿಕ ವಲಯದ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳಬೇಕಿತ್ತು. ಈಗಲಾದರೂ ಪ್ರಕ್ರಿಯೆ ಪೂರ್ಣಗೊಂಡಿರುವುದು ಸ್ವಾಗತಾರ್ಹ.
ಆದರೆ ಈ ಮಹತ್ತರ ನಿರ್ಧಾರದಲ್ಲಿ ರಾಜ್ಯ ಸರ್ಕಾರ ಮತ್ತೊಮ್ಮೆ ತನ್ನ ಅಸೂಕ್ಷ್ಮತೆಯನ್ನು ಹೊರಗೆಡಹಿದೆ. ಪ್ರಸ್ತುತ ರಾಜಕೀಯ-ಸಾಂಸ್ಕೃತಿಕ ಪರಿಸರದಲ್ಲಿ ಅತಿ ಹೆಚ್ಚು ಪ್ರಭಾವಶಾಲಿಯಾಗಿ ಕಾಣುವ ಮಾಧ್ಯಮ ವಲಯವನ್ನು ಪ್ರತಿನಿಧಿಸುವ “ಮಾಧ್ಯಮ ಅಕಾಡೆಮಿ”ಯ ಬಗ್ಗೆ ಸರ್ಕಾರ ಗಮನ ನೀಡದಿರುವುದು ಅಚ್ಚರಿ ಮೂಡಿಸುತ್ತದೆ. ಸಾಂಸ್ಕೃತಿಕ ವಲಯದಲ್ಲಿ ಸದಾ ಕಾಲವೂ ನಿರ್ಲಕ್ಷಿತವಾಗಿಯೇ ಬಂದಿರುವ ಮಹಿಳಾ ಸಂಕುಲ, ಬಿಜೆಪಿ ಆಳ್ವಿಕೆಯಲ್ಲಿ ಅಂಚಿಗೆ ತಳ್ಳಲ್ಪಟ್ಟ ಅಲ್ಪಸಂಖ್ಯಾತ-ಮುಸ್ಲಿಂ ಸಮುದಾಯ ಈ ಬಾರಿಯೂ ಅದೇ ನಿರಾಶಾದಾಯಕ ಸನ್ನಿವೇಶವನ್ನು ಎದುರಿಸಬೇಕಾಗಿದೆ. ಜಾತಿ ಮತ್ತು ಪ್ರಾದೇಶಿಕ ಅಸ್ಮಿತೆಗಳಿಗೆ-ಪ್ರಾತಿನಿಧ್ಯಕ್ಕೆ ಅತಿ ಹೆಚ್ಚು ಪ್ರಾಮುಖ್ಯತೆ ನೀಡುವ ಸರ್ಕಾರಗಳಿಗೆ ಮಹಿಳಾ ಸಮುದಾಯಕ್ಕೂ ಒಂದು ಸ್ವಾಯತ್ತ ಅಸ್ಮಿತೆ ಮತ್ತು ಪ್ರಾತಿನಿಧಿತ್ವದ ಹಕ್ಕು ಇದೆ ಎನ್ನುವ ವಾಸ್ತವ ಏಕೆ ಅರ್ಥವಾಗುವುದಿಲ್ಲ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಆಳ್ವಿಕೆಯ ಕೇಂದ್ರಗಳನ್ನು ನಿರ್ದೇಶಿಸುವ ಪಿತೃಪ್ರಧಾನ ಧೋರಣೆ ಇಲ್ಲಿ ಢಾಳಾಗಿ ಕಾಣುತ್ತದೆ.
ಈ ಬಾರಿಯ ನೇಮಕಾತಿಯಲ್ಲಿ 14 ಅಕಾಡೆಮಿ, 4 ಪ್ರಾಧಿಕಾರಗಳು ಹಾಗೂ ರಂಗ ಸಮಾಜ ಪ್ರಮುಖವಾಗಿ ಕಾಣುತ್ತದೆ. ರಂಗ ಸಮಾಜದ ಏಳು ಸದಸ್ಯರ ಪೈಕಿ ಏಕೈಕ ಮಹಿಳೆ ಇರುವುದು ರಂಗಾಸಕ್ತರನ್ನು ಅಚ್ಚರಿಗೆ ದೂಡುತ್ತದೆ. ರಂಗಭೂಮಿಯನ್ನು ಸಮುದಾಯದ ನಡುವೆ ಕೊಂಡೊಯ್ಯುವ ಸಾಂಸ್ಕೃತಿಕ ಜವಾಬ್ದಾರಿ ಹೊತ್ತಿರುವ ರಂಗ ಸಮಾಜ ಕೇವಲ ಸಲಹಾ ಸಮಿತಿ ಅಲ್ಲ. ಅದು ತನ್ನದೇ ಆದ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ. ರಂಗಾಯಣಗಳ ನಿರ್ದೇಶಕರ ನೇಮಕವನ್ನೂ ಒಳಗೊಂಡಂತೆ, ರಂಗಭೂಮಿಯ ತಾತ್ವಿಕ ನೆಲೆಗಳನ್ನು ವಿಸ್ತರಿಸುವುದೂ ರಂಗಸಮಾಜದ ಕಾರ್ಯಸೂಚಿಗಳಲ್ಲಿ ಒಂದಾಗಿರುತ್ತದೆ. ಎಡ-ಬಲ ಜಂಜಾಟಗಳಿಂದ ಹೊರತಾದುದಾದರೂ ಇಂತಹ ಸಂಸ್ಥೆಗಳ ನೇಮಕಾತಿಯಲ್ಲಿ ಸರ್ಕಾರ ಅಪೇಕ್ಷಿಸುವ ಸೈದ್ಧಾಂತಿಕ ಭೂಮಿಕೆಯನ್ನು ಮತ್ತಷ್ಟು ಬಲಪಡಿಸುವ ರೀತಿಯಲ್ಲಿ ವ್ಯಕ್ತಿಗಳನ್ನು ಆಯ್ಕೆ ಮಾಡುವುದು ಅತ್ಯವಶ್ಯ. ಹಾಗೆಯೇ ಪ್ರಾತಿನಿಧ್ಯದ ನೆಲೆಯಲ್ಲಿ ಮಹಿಳೆಯರಿಗೂ ಸೂಕ್ತ ಪ್ರಾತಿನಿಧ್ಯ ಇರಬೇಕಾದುದು ನೈತಿಕತೆಯ ಪ್ರಶ್ನೆ.
ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಮೂರನೆ ಒಂದರಷ್ಟು ಅವಕಾಶ ನೀಡುವುದರ ಬಗ್ಗೆ ಅತಿಯಾಗಿ ಬದ್ಧತೆ ತೋರುವ ಸರ್ಕಾರಗಳಿಗೆ, ಸಾಂಸ್ಕೃತಿಕ ವಲಯದಲ್ಲೂ ಸಹ ಇದೇ ಪ್ರಾತಿನಿಧ್ಯವನ್ನು ಒದಗಿಸಬೇಕು ಎಂಬ ಅರಿವು ಇರಬೇಕಲ್ಲವೇ ? ಒಟ್ಟು 18 ಅಧ್ಯಕ್ಷ ಹುದ್ದೆಗಳ ಪೈಕಿ ಕೇವಲ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಗೆ ಮಾತ್ರ ಮಹಿಳಾ ಅಧ್ಯಕ್ಷರನ್ನು ನೇಮಿಸಲಾಗಿದೆ . ಉಳಿದ 17 ಸಂಸ್ಥೆಗಳಿಗೆ ಸಮರ್ಥರಾದ ಮಹಿಳಾ ಅಭ್ಯರ್ಥಿಗಳೇ ಸರ್ಕಾರದ ಕಣ್ಣಿಗೆ ಬೀಳಲಿಲ್ಲವೇ ? ಸಾಹಿತ್ಯ, ಶಿಲ್ಪಕಲೆ, ಪುಸ್ತಕ ಪ್ರಾಧಿಕಾರ, ಜಾನಪದ ಈ ಕ್ಷೇತ್ರಗಳಲ್ಲಿ ಗುರುತಿಸಬಹುದಾದ ಹೆಣ್ಣು ಮುಖಗಳು ಕಾಣದೆ ಹೋದವೇ ?
ಆಳ್ವಿಕೆಯಲ್ಲಿ ಪಿತೃಪ್ರಧಾನತೆಯ ಬಹುಮುಖ್ಯ ಲಕ್ಷಣ ಎಂದರೆ ಯಾವುದೇ ರೀತಿಯ ಪ್ರಾತಿನಿಧ್ಯವು ಕೇವಲ ʼಕೊಡುವುದುʼ ಅಥವಾ ʼಕಲ್ಪಿಸುವುದುʼ ಅಥವಾ ʼಒದಗಿಸುವುದುʼ ಎಂದಾಗುತ್ತದೆ. ಜಾತಿ ಹಾಗೂ ಪ್ರಾದೇಶಿಕ ಪ್ರಾತಿನಿಧ್ಯದ ಹಿಂದೆ ಇರುವಂತಹ ಸಾಮುದಾಯಿಕ ಒತ್ತಡ, ಒತ್ತಾಸೆಗಳನ್ನು ಮಹಿಳಾ ಸಂಕುಲದ ನಡುವೆ ಗುರುತಿಸಲಾಗುವುದಿಲ್ಲ. ಏಕೆಂದರೆ ಆಳ್ವಿಕೆಯ ದೃಷ್ಟಿಯಲ್ಲಿ ಮಹಿಳಾ ಸಂಕುಲ ರಾಜಕೀಯವಾಗಿ ಉಪಯೋಗಕ್ಕೆ ಬರುವ ಒಂದು ʼ ಬ್ಲಾಕ್ ʼ ರೂಪದಲ್ಲಿ ಕಾಣುವುದಿಲ್ಲ. ಹಾಗಾಗಿಯೇ ಇಂತಹ ಸಾಂಸ್ಥಿಕ ನೇಮಕಾತಿಗಳ ಪ್ರಶ್ನೆ ಎದುರಾದಾಗ ಅಧ್ಯಕ್ಷ ಹುದ್ದೆಯನ್ನು ಹೊರತುಪಡಿಸಿ, ಸದಸ್ಯರ ನಡುವೆ ಅಲ್ಲಲ್ಲಿ ಕಾಣುವ ಮಹಿಳೆಯರನ್ನೇ ಎತ್ತಿ ತೋರಿಸಲಾಗುತ್ತದೆ. “ನೋಡಿ, ಇಲ್ಲಿ ಪ್ರಾತಿನಿಧ್ಯ ನೀಡಿದ್ದೇವಲ್ಲವೇ ?” ಎಂಬ ಪ್ರಶ್ನೆಯೊಡನೆ ಮತ್ತೊಮ್ಮೆ ಪ್ರಾತಿನಿಧಿತ್ವವನ್ನು ʼನೀಡುವʼ ಅಥವಾ ʼನೀಡಲೇಬೇಕಾದʼ ಪ್ರಕ್ರಿಯೆಯಾಗಿ ಬಿಂಬಿಸಲಾಗುತ್ತದೆ.
ಈ ದೃಷ್ಟಿಯಿಂದ ನೋಡಿದರೂ ಪ್ರಸ್ತುತ 19 ಸಂಸ್ಥೆಗಳ ನೇಮಕಾತಿಯಲ್ಲಿ 30+ ಮಹಿಳೆಯರಿಗೆ ಸ್ಥಾನ ನೀಡಲಾಗಿದೆ. ಶೇಕಡಾವಾರು ಪ್ರಾತಿನಿಧ್ಯದ ಗೊಡವೆಗೆ ಹೋಗದೆ ನೋಡಿದರೂ, ಕೆಲವು ಸಂಸ್ಥೆಗಳಲ್ಲಿ ಮಹಿಳಾ ಪ್ರಾತಿನಿಧ್ಯ ನಗಣ್ಯ ಎನ್ನುವಂತಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಪುಸ್ತಕ ಪ್ರಾಧಿಕಾರ ಹಾಗೂ ಜಾನಪದ ಅಕಾಡೆಮಿಗಳಲ್ಲಿ, ರಂಗ ಸಮಾಜದಲ್ಲಿ ಒಬ್ಬೊಬ್ಬ ಮಹಿಳೆ ಮಾತ್ರ ಕಂಡುಬರುತ್ತಾರೆ. ಏಕೆ , ಈ ವಲಯಗಳಲ್ಲಿ ಕ್ಷಮತೆ, ಬದ್ಧತೆ, ಸೈದ್ಧಾಂತಿಕ ಸ್ಪಷ್ಟತೆ ಇರುವ ಮಹಿಳೆಯರ ಕೊರತೆ ಇದೆಯೇ ? ಖಂಡಿತವಾಗಿಯೂ ಇರಲಾರದು. ಕೊರತೆ ಇರುವುದು ಆಯ್ಕೆ ಸಮಿತಿಗಳ, ಅಂದರೆ ಸರ್ಕಾರದ ಲಿಂಗ ಸೂಕ್ಷ್ಮತೆಯಲ್ಲಿ. ಯಕ್ಷಗಾನ ಅಕಾಡೆಮಿಯಲ್ಲಿ ಉತ್ತರ ಕನ್ನಡದ ಪ್ರಾತಿನಿಧ್ಯವೇ ಇಲ್ಲದಿರುವುದು, ಗಡಿ ಅಭಿವೃದ್ಧಿ ಪ್ರಾಧಿಕಾರದಲ್ಲಿ ದಕ್ಷಿಣದ ಗಡಿಜಿಲ್ಲೆಗಳಾದ ಕೋಲಾರ-ಚಿಕ್ಕಬಳ್ಳಾಪುರಕ್ಕೆ ಅವಕಾಶ ಇಲ್ಲದಿರುವುದು ಸರ್ಕಾರದ ನಿರ್ಲಕ್ಷ್ಯದ ಸಂಕೇತವಾಗಿಯೇ ಕಾಣುತ್ತದೆ.
ಸಾಂಸ್ಕೃತಿಕ ವಲಯದ ಸಾಂಸ್ಥಿಕ ಹುದ್ದೆಗಳು ಅಧಿಕಾರ ಕೇಂದ್ರಗಳಾಗಬಾರದು ಬದಲಾಗಿ ಸಮಾಜದ ತಳಮಟ್ಟದ ವ್ಯಕ್ತಿಯನ್ನೂ ತಲುಪುವಂತಹ ಸೂಕ್ಷ್ಮ ಸಂವೇದನೆಯ ಸೇತುವೆಗಳಾಗಬೇಕು. ಹಾಗಾಗಿಯೇ ಇಲ್ಲಿ ಯಾವುದೇ ರೀತಿಯ ಲಾಬಿ ರಾಜಕಾರಣ ಇಲ್ಲದಂತೆ ನಿರ್ವಹಿಸಬೇಕಾಗುತ್ತದೆ. ಹಾಗಾಗಬೇಕೆಂದರೆ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳಾ ಸಂಕುಲಕ್ಕೂ ಅಲ್ಲಿ ಮುಕ್ತ ಅವಕಾಶಗಳಿರಬೇಕಲ್ಲವೇ? ಮತ್ತೆಮತ್ತೆ ಸರ್ಕಾರಗಳಿಗೆ ಮನದಟ್ಟು ಮಾಡಬೇಕಾದ ವಾಸ್ತವ ಎಂದರೆ, ಮಹಿಳಾ ಪ್ರಾತಿನಿಧ್ಯ ಎಂದರೆ ಯಾರೂ ಕೊಡುವುದಲ್ಲ, ಅದು ಸ್ತ್ರೀ ಸಮುದಾಯದ ಹಕ್ಕು. ಈ ಸೂಕ್ಷ್ಮತೆ ಆಳ್ವಿಕೆಯಲ್ಲಿ ಕಾಣಲು ಸಾಧ್ಯವೇ ?
ನಾ.ದಿವಾಕರ
ಇದನ್ನೂ ಓದಿ- ಸರಕಾರಿ ಸಾಂಸ್ಕೃತಿಕ ಸಂಸ್ಥೆಗಳಿಗೆ ನೇಮಕಾತಿ : ತಪ್ಪು ನಿರ್ಧಾರಗಳು ಜಾಸ್ತಿ