ಬೆಂಗಳೂರು: ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಅಂತಿಮ ಆಯ್ಕೆಪಟ್ಟಿಯಲ್ಲಿ ಆಯ್ಕೆಯಾಗಿದ್ದ ಅಭ್ಯರ್ಥಿಗಳು ಕಡೆಗೂ ನಿಟ್ಟುಸಿರು ಬಿಡುವಂತಾಗಿದೆ. ಇಂದು ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯು ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಆಯ್ಕೆಯಾಗಿದ್ದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಹೊರಡಿಸಿ ಗೆಜೆಟ್ ಪ್ರಕಟಣೆ ಹೊರಡಿಸಿದೆ. ಆದೇಶ ಪಡೆದ ಅಭ್ಯರ್ಥಿಗಳಿಗೆ 15 ದಿನಗಳ ಒಳಗಾಗಿ ವರದಿ ಮಾಡಿಕೊಳ್ಳಲು ಆದೇಶಿಸಿದೆ.
ಕಾಲೇಜು ಶಿಕ್ಷಣ ಇಲಾಖೆಯ ಆಡಳಿತ ವ್ಯಾಪ್ತಿಗೆ ಒಳಪಡುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇದ್ದ ಹುದ್ದೆಗಳಿಗೆ ವಿವಿಧ ವಿಷಯಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇರ ನೇಮಕಾತಿಗೆ ಸಂಬಂದಿಸಿ ಸರ್ಕಾರವು ಅಧಿಸೂಚನೆ ಹೊರಡಿಸಿತ್ತು. ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ದಿನಾಂಕ 03.11.2023 ರಂದು ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ನಂತರದಲ್ಲಿ ನೇಮಕಾತಿ ಸಂಬಂಧ ಕೆಲವು ಅಭ್ಯರ್ಥಿಗಳು ಕೋರ್ಟ್ ಮೆಟ್ಟಿಲೇರಿದ್ದರಿಂದ ನೇಮಕಾತಿ ಪ್ರಕ್ರಿಯೆ ನೆನೆಗುದಿಗೆ ಬಿದ್ದಿತ್ತು. ನ್ಯಾಯವಿಚಾರಣೆ ಪ್ರಕ್ರಿಯೆ ತ್ವರಿತಗೊಳಿಸುವಂತೆ ಅಭ್ಯರ್ಥಿಗಳು ತೀವ್ರ ಹೋರಾಟಗಳನ್ನೂ ನಡೆಸಿದ್ದರು. ಈ ಕುರಿತು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಅಧಿಕಾರಿಗಳಿಗೆ ಪ್ರಕ್ರಿಯೆ ಚುರುಕುಗೊಳಿಸಲು ತಿಳಿಸಿದ್ದರು. ಇದೀಗ ಅಂತಿಮವಾಗಿ ನೇಮಕಾತಿ ಆದೇಶ ಹೊರಬಂದಿರುವುದು ಆಯ್ಕೆಯಾಗಿದ್ದವರಲ್ಲಿ ಸಂತಸ ತಂದಿದೆ.
ಗೆಜೆಟ್ ಪ್ರಕಣೆಯ ಮೂಲಕ ನೇಮಕಗೊಂಡಿರುವ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಆದೇಶ ಪ್ರತಿ ತಲುಪಿದ 15 ದಿನಗಳ ಒಳಗಾಗಿ ಆಯುಕ್ತರು ಕಾಲೇಜು ಶಿಕ್ಷಣ ಇಲಾಖೆ, ತಾಂತ್ರಿಕ ಭವನ, 2ನೇ ಮಹಡಿ, ಅರಮನೆ ರಸ್ತೆ, ಬೆಂಗಳೂರು ಇಲ್ಲಿ ವರದಿ ಮಾಡಿಕೊಳ್ಳಲು ಆದೇಶಿಸಿದೆ. ತದನಂತರದಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರು ನಿಯಮಾನುಸಾರ ಜೇಷ್ಠತೆಯ ಆಧಾರದ ಮೇಲೆ ಕೌನ್ಸೆಲಿಂಗ್ ಪ್ರಕ್ರಿಯೆ ನಡೆಸಿ ಅಭ್ಯರ್ಥಿಗಳಿಗೆ ಸ್ಥಳನಿಯುಕ್ತಿ ಆದೇಶವನ್ನು ನೀಡಲಿದ್ದಾರೆ. ಅಭ್ಯರ್ಥಿಗಳು ಸ್ಥಳನಿಯುಕ್ತಿಗೊಳಿಸಿದ ಕಾಲೇಜಿನಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡ ದಿನಾಂಕದಿಂದ ವೇತನ ಹಾಗೂ ಇತರ ಭತ್ಯೆಗಳನ್ನು ಪಡೆಯಲು ಅರ್ಹರಿರುತ್ತಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಹಾಗೆಯೇ ಸರ್ಕಾರದ ಪೂರ್ವಾನುಮತಿ ಪಡೆಯದೆ ನಿಗದಿತ ಅವಧಿಯೊಳಗೆ ವರದಿ ಮಾಡಿಕೊಳ್ಳಲು ವಿಫಲವಾಗುವ ಅಭ್ಯರ್ಥಿಯ ನೇಮಕಾತಿ ಆದೇಶ ತಾನಾಗಿಯೇ ಅನೂರ್ಜಿತವಾಗುತ್ತದೆ ಎಂದೂ ಆದೇಶದಲ್ಲಿ ತಿಳಿಸಲಾಗಿದೆ.