ಬೆಂಗಳೂರು: ಏಪ್ರಿಲ್ 22 ರಂದು ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ತಲೆದೋರಿರುತ್ತದೆ. ಆಪರೇಷನ್ ಸಿಂಧೂರದ ಮೂಲಕ ಭಾರತ ಪಾಕಿಸ್ತಾನಕ್ಕೆ ತಕ್ಕ ಎದಿರೇಟನ್ನೂ ನೀಡಿದೆ. ಸಧ್ಯಕ್ಕೆ ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆಯಾದಗಿದ್ದರೂ ಪಾಕ್ ನಂಬಲರ್ಹ ದೇಶವಲ್ಲ. ಹಾಗಾಗಿ ಭಾರತ ಸಶಸ್ತ್ರ ಪಡೆಗಳನ್ನು ಸದಾ ಸನ್ನದ್ದವಾಗಿಟ್ಟಿರಲು ಭಾರತ ಬಯಸಿದೆ.
ಪ್ರಾದೇಶಿಕ ಸೇನೆ ಎಂದರೇನು?
ಭಾರತೀಯ ಪ್ರಾದೇಶಿಕ ಸೇನೆ (ಟಿಎ ) ಭಾರತೀಯ ಸೇನೆಯ ನಂತರ ಎರಡನೇ ಸಾಲಿನ ರಕ್ಷಣಾ ಪಡೆ ಎಂದು ಸರಳವಾಗಿ ಹೇಳಬಹುದು. ಇದು ವೃತ್ತಿ, ಉದ್ಯೋಗ ಅಥವಾ ಉದ್ಯೋಗದ ಮೂಲವಲ್ಲ. ಈಗಾಗಲೇ ಯಾವುದೇ ನಾಗರಿಕ ವೃತ್ತಿಗಳಲ್ಲಿರುವವರಿಗೆ ಮಾತ್ರ ಅನ್ವಯವಾಗುತ್ತದೆ. ಪ್ರಾದೇಶಿಕ ಸೇನೆಯ ಸ್ವಯಂಸೇವಕರು ಪ್ರತಿ ವರ್ಷವೂ ಕೆಲವು ದಿನಗಳ ಅವಧಿಗೆ ಸಮವಸ್ತ್ರದಲ್ಲಿ ಸೇವೆ ಸಲ್ಲಿಸುತ್ತಾರೆ. ಆಂತರಿಕ ಭದ್ರತಾ ಕರ್ತವ್ಯ ಅಥವಾ ರಾಷ್ಟ್ರೀಯ ತುರ್ತು ಸಂದರ್ಭಗಳಲ್ಲಿ ಇವರನ್ನು ಬಳಸಿಕೊಳ್ಳಲಾಗುತ್ತದೆ. ರಾಷ್ಟ್ರೀಯ ರಕ್ಷಣೆಗಾಗಿ ಶಸ್ತ್ರಾಸ್ತ್ರಗಳನ್ನು ಹೊಂದುವ ಅವಕಾಶವೂ ಇವರಿಗೆ ಇರುತ್ತದೆ.
ಪ್ರಾದೇಶಿಕ ಸೇನೆಗೆ ದೇಶಾದ್ಯಂತ ನೇಮಕಾತಿಗೆ ಅರ್ಜಿ ಆಹ್ವಾನ:
ಟೆರಿಟೋರಿಯಲ್ ಆರ್ಮಿ ಅಥವಾ ಪ್ರಾದೇಶಿಕ ಸೇನೆ ಸೇರ್ಪಡೆಯಾಗಲು ದೇಶಾದ್ಯಂತ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಇಡೀ ದೇಶದಲ್ಲಿ ಈ ನೇಮಕಾತಿ ನಡೆಯಲಿದೆ.
ವಿದ್ಯಾರ್ಹತೆ: ಅಭ್ಯರ್ಥಿಗಳು ಯಾವುದೇ ಪದವಿಯನ್ನು ಪೂರ್ಣಗೊಳಿಸಿರಬೇಕು.
ವಯೋಮಿತಿ: ಅಭ್ಯರ್ಥಿಗಳ ಕನಿಷ್ಠ 18 ವರ್ಷ ಗರಿಷ್ಠ 42 ವರ್ಷ ಮೀರಿರಬಾರದು.
ಅರ್ಜಿ ಸಲ್ಲಿಕೆ: ಮಾನಸಿಕ ಮತ್ತು ದೈಹಿಕವಾಗಿ ದೃಢವಾಗಿರುವ ಅಭ್ಯರ್ಥಿಗಳು 500 ರೂ ಅರ್ಜಿ ಶುಲ್ಕದೊಂದಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಲಿಖಿತ ಪರೀಕ್ಷೆ, ಸಂದರ್ಶನ, ದಾಖಲಾತಿ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಈ ಹುದ್ದೆಗೆ ಅಭ್ಯರ್ಥಿಗಳು ಮೇ 12ರಂದು ಅರ್ಜಿ ಸಲ್ಲಿಕೆಗೆ ಆರಂಭವಾಗಲಿದ್ದು, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಜೂನ್ 10 ಕೊನೆಯ ದಿನವಾಗಿರುತ್ತದೆ.
ಈ ಹುದ್ದೆಗೆ ಆನ್ ಲೈನ್ ಪರೀಕ್ಷೆ ಜುಲೈ 20 ರಂದು ನಡೆಯುವ ಸಾಧ್ಯತೆ ಇದೆ. ದೇಶಾದ್ಯಂತ ಹಲವು ಕೇಂದ್ರಗಳಲ್ಲಿ ಈ ಪರೀಕ್ಷೆ ನಡೆಯಲಿದ್ದು, ಕರ್ನಾಟಕದಲ್ಲಿ ಬೆಂಗಳೂರು, ಹುಬ್ಬಳ್ಳಿ, ಮಂಗಳೂರು, ಮೈಸೂರಿನಲ್ಲಿ ಪರೀಕ್ಷೆ ನಡೆಯಲಿದೆ. ಈ ಹುದ್ದೆಗಳ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ https://www.indianarmy.nic.in ಭೇಟಿ ನೀಡಬಹುದಾಗಿದೆ.
ಟೆರಿಟೋರಿಯಲ್ ಆರ್ಮಿ ಕುರಿತು: ಟೆರಿಟೋರಿಯಲ್ ಆರ್ಮಿ ಎಂಬುದು ಒಂದು ಸ್ವಯಂಸೇವಕರ ಪಡೆಯಾಗಿದೆ. ದೇಶದ ಸಾಮಾನ್ಯ ನಾಗರಿಕರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ದೇಶದ ಸೇವೆ ಇಚ್ಚೆ ಹೊಂದಿರುವ ಅಭ್ಯರ್ಥಿಗಳು ತಮ್ಮ ಪ್ರಾಥಮಿಕ ವೃತ್ತಿಯನ್ನು ತ್ಯಾಗ ಮಾಡದೇ ಸೇನಾ ಸೇವೆಗೆ ಅವಕಾಶ ನೀಡುತ್ತದೆ. ಟೆರಿಟೋರಿಯಲ್ ಆರ್ಮಿ ಅಧಿಕಾರಿಗಳು ಯೋಧರಂತೆ ಸಮವಸ್ತ್ರ ಧರಿಸಿ, ತುರ್ತು ಪರಿಸ್ಥಿತಿಯಲ್ಲಿ ದೇಶ ಸೇವೆ ಮಾಡುವ ಅವಕಾಶಕ್ಕಾಗಿ ಈ ನೇಮಕಾತಿಗಳನ್ನು ನಡೆಸಲಾಗುವುದು.
ನಿಯಮಿತ ಸೇನೆ/ನೌಕಾಪಡೆ/ವಾಯುಪಡೆ/ಪೊಲೀಸ್/GREF/ಪ್ಯಾರಾ ಮಿಲಿಟರಿ ಮತ್ತು ಅಂತಹುದೇ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸದಸ್ಯರು ಅರ್ಹರಾಗಿರುವುದಿಲ್ಲ.
ಪ್ರಾದೇಶಿಕ ಸೇನೆಯ ಭಾಗವಾಗಿರುವ ಸೆಲೆಬ್ರಿಟಿಗಳು:
ಕ್ರಿಕೆಟ್ ಆಟಗಾರರಾದ ಕಪಿಲ್ ದೇವ್, ಸಚಿನ್ ತೆಂಡೂಲ್ಕರ್ ಮತ್ತು ಎಂಎಸ್ ಧೋನಿ, ಮಲಯಾಳಂ ನಟ ಮೋಹನ್ ಲಾಲ್, ಬಾಲಿವುಡ್ ನಟ ನಾನಾ ಪಾಟೇಕರ್, ಶೂಟರ್ ಅಭಿನವ್ ಬಿಂದ್ರಾ ಮತ್ತು ರಾಜಕಾರಣಿಗಳಾದ ಅನುರಾಗ್ ಠಾಕೂರ್ ಮತ್ತು ಸಚಿನ್ ಪೈಲಟ್, ಕರ್ನಾಟಕದ ಕಾಂಗ್ರೆಸ್ ಯುವ ನಾಯಕಿ ಭವ್ಯಾ ನರಸಿಂಹಮೂರ್ತಿ ಮೊದಲಾದವರು ಗೌರವ ಅಥವಾ ಸಕ್ರಿಯ ಹುದ್ದೆಗಳನ್ನು ಹೊಂದಿದ್ದಾರೆ.