(ಮುಂದುವರೆದುದು…)
ಅಂತೂ ಇಂತು ಊರು ಬಿಟ್ಟು ಬಂದ, ಇಲ್ಲಿ ನೆಲೆಯೂರಿದ ಮೇಲೆ, ಆಮೇಲೆ ನಮ್ಮ ಯಜಮಾನಜ್ಜ ಮತ್ತು ಆತನ ಅಣ್ಣನ ಮಕ್ಕಳಾಗಿದ್ದ ನಮ್ಮ ಬೀರಯ್ಯನ ಕುಟುಂಬದವರು ಈ ಊರಿಗೆ ಬಂದ್ರು. ಜನ ಎಲ್ಲಾ ಬಂದ್ರು, ಆದ್ರೆ ದೇವರು ದಿಂಡ್ರು ಬರಲಿಲ್ಲ. ಜನಗಳ ಜೊತೆ ಬದುಕುವ ದೈವಗಳು, ದೈವಗಳ ಜೊತೆ ಬದುಕುವ ಜನಗಳು ಪರಸ್ಪರರು ದೂರವಾದರು. ಯಾವಾಗ ದೈವಗಳು ಬರಲಿಲ್ಲವೋ ಇಲ್ಲಿ ಇರೋರಿಗೆ ತೊಂದ್ರೆ ಕೊಡಾಕೆ ಸುರುವಾತು. ದೇವರುಗಳನ್ನು ಬಿಟ್ಟು ಬಂದ ಜನಕ್ಕೆ ನೆಮ್ಮದಿ ಇಲ್ಲದಾಂಗೆ ಆತು. ಅದನ್ನೆಲ್ಲ ಅಪ್ಪ ಹೇಳ್ತಿರೋದು ಕೇಳಿ ನಮಗೆ ರೋಚಕ ಅನ್ನಿಸ್ತಿತ್ತು. ಅವತ್ತು ಅಪ್ಪ ಸಂಜೆಯವರಿಗೆ ಬಿದರ ಮಟ್ಟಿ ಕಡ್ದು, ಗದ್ದೆ ಗೋರಿ, ಉಂಡುಗೋಡಿಗೆ ಹೋಗಿ ಬತ್ತೀನಿ ಅಂತ ಹೊರಟವಂಗೆ, ಗೇರುಸರಿ ಕಾಲು ಹಾದಿಯಲ್ಲಿ ಕಾಲಿಗೆ ಯಾವುದೋ ಚೈನ್ ಹಾಕದಂಗೆ ಆತು. ಆಗ ಅಪ್ಪ “ನಂಗೆ ಗೊತ್ತು ಗೊತ್ತು, ನೀನಾರು ಅಂತ. ಕಾಲಿಗೆ ಹಾಕಿದ್ದು ತಗಿ ತಗಿ” ಅಂದಮೇಲೆ ತಗಿತಂತೆ. ಅದೇ ತರ ಕಂಬತ್ತಮನೆಗೆ ಹೋಂಟ ಜಟ್ಟಜ್ಜನಿಗೆ ಸುಗುಣೆ ಮರದ ಹತ್ರ ಏನೋ ದಬ ದಬ ಓಡಿದ ಅನುಭವ ಆತಂತೆ. ಆವಾಗೀವಾಗ ಅಂತ ನಮ್ಮನೆಗೆ ಬತ್ತಿದ್ದ ಕಂಬತ್ತಮನೆ ಭದ್ರಜ್ಜನಿಗೆ ನೆಲ್ಲಿಮರದ ಹತ್ರ ದೀಪ ಹಚ್ಚಿಗಂಡು ಹೋಗಾದು ಕಾಣಿಸ್ತಂತೆ. ಹಿಂಗೆ ಒಬ್ಬೊಬ್ಬರಿಗೆ ಒಂದೊಂದು ಅನುಭವ ಸುರುವಾತು. ಇದನೆಲ್ಲ ಕೇಳಿದ ಯಜಮಾನಪ್ಪ ಹೆದ್ದಾರಿಪುರದ ಗಾಡಿಗನ ಮನೆಗೆ ‘ನೋಟ’ ಕೇಳಿಸಾಕೆ ಹೋದ. ಹೋದವನಿಗೆ ನೀವೆಲ್ಲಾ ನಿಮ್ಮ ದೇವರನ್ನು ಬಿಟ್ ಬಂದಿದ್ದೇ ಕಾರಣ. ಅವನೆಲ್ಲ ಇಲ್ಲಿಗೆ ತಂದು ನೆಲೆ ಹಾಕಿ. ಇಲ್ಲಾಂದ್ರೆ ಅವು ನಿಮ್ಮನ್ನು ಸುಮ್ಮನೇ ಬಿಡಲ್ಲ ಅನ್ನೋ ಕಾರಣ ಬಂತು. ಮುಂದೆ ಮನೆ ಮಂದಿಯೆಲ್ಲ ಜಾಲಕ್ಕೆ ಹೋಗಿ ಬಿಟ್ಟು ಬಂದ ದೇವರನ್ನು ತಂದು, ಮನೆಯಿಂದ ಮುಟ್ಟುಚಟ್ಟು ಆಗದ ಏಳ್ ಎಕ್ರೆ ಕಾಡಿನಲ್ಲಿ ದುರ್ಗಮ್ಮಳಿಗೆ ನೆಲೆ ಹಾಕಲಾಯಿತು. ಹಳೆ ಊರಲ್ಲೂ ಗೇರುಸರಿ, ಮಳೇಮಠದರು ಸೇರಿ, ಪೂಜೆ ಪುನಸ್ಕಾರ ಅಂತ ಮಾಡ್ಕಂಡ ಬರೋ ಹಂಗೆ, ಇಲ್ಲಿ ಅದೇ ರೂಢಿ ಇಟ್ಕಂಡು ಬಂದರು.
ಒಂದು ದಿನ ಆಚೆ ಗೇಸರಿ ಜೆಟ್ಟಜ್ಜಿಗೆ ಇದ್ದಕ್ಕಿದ್ದ ಹಾಗೆ, ತಲೆ ಸುತ್ತಿ ಬೀಳೋದು, ತನಗೆ ತಾನೆ ಮಾತಾಡೋದು, ಉಸ್ಸೋ ಉಸ್ಸೋ, ನನಗೆ ಸರಿಯದ ನೆಲೆಯಿಲ್ಲ, ನೆಲೆಯಿಲ್ಲ ಇತ್ಯಾದಿ ಮಾತುಗಳು ಸುರುವಾದವು. ಹೆದರಿದ ಗೇರುಸರಿ ಮುಂಜ್ ಸಣಪ್ಪ ನಮ್ಮನೇ ಯಜಮಾನ ಅಜ್ಜನ ಹತ್ರ ಬಂದು ನಡೆದಿದ್ದ ವಿಚಾರ ಹೇಳಿದ. ಇದಕ್ಕೆ ಹೆದ್ದಾರಿಪುರದ ಗಾಡಿಗರ ಹತ್ರ ಯಜಮಾನಪ್ಪ, ಜಟ್ಟಜ್ಜ, ಗೇರುಸರಿ ಮುಂಜಸಣಪ್ಪ ಮತ್ತು ಅಪ್ಪ ಇವರೆಲ್ಲ ಮತ್ತೆ ಹೋಗಿ ನೋಟ ನೋಡಿಸೋದು ಅಂತ ತೀರ್ಮಾನ ಮಾಡಿದರು. ಹೋಗ್ತಾ ಅವಳನ್ನು ಕರ‍್ಕಂಡು ಹೋಗಿ ಕೇಳಿದರು. ಗಾಡಿಗರು ಜೆಟ್ಟಜ್ಜಿಯನ್ನು ತಮ್ಮೆದುರು ಕೂರಿಸಿಕೊಂಡು, ಮಣೆಯ ಮೇಲೆ ನಿಂಬೆ ಹಣ್ಣು, ಕುಂಕುಮ, ಅಕ್ಕಿಕಾಳನ್ನು ಇಟ್ಟರು. ಮೊದಲು ಅಕ್ಕಿಕಾಳನ್ನು ಎರಡೆರಡು, ನಾಲ್ಕ್‌ನಾಲ್ಕು ಅಂತ ಜೋಡಿಸಿ, ಬಾಯಲ್ಲಿ ಏನೇನೋ ಮಟಮಟ ಎಂದರು. ಗಾಡಿಗರು ತಮ್ಮ ಎರಡು ಕೈಬೆರಳುಗಳನ್ನು ಸೇರಿಸಿ, ಅದನ್ನು ಉಲ್ಟಾ ತಿರುಗಿಸಿ ಕೈಗಳನ್ನು ತಲೆಗೆ ಸುತ್ತಿಕೊಂಡು, ಅಂಯ್ಯೋ ಅಂಯ್ಯೋ, ಅಂಯ್ಯೋ, ಆಂ, ಹೂಂ, ಹೂಂ ಎಂದು, ಜೆಟ್ಟಮ್ಮನ ಮೇಲೆ ನೀರನ್ನು ಹಾಕಿ, ಕುಂಕುಮ ಹಚ್ಚಿ “ಈ ಹೆಣ್ಣು ಮಗಳ ಮೇಲೆ ಬರೋ ನೀನಾರು. ಈಗ ಬಾ ಎಂದು ಕರೆದರು”. ಅಷ್ಟೊತ್ತಿಗೆ ಜೆಟ್ಟಮ್ಮನ ಮೇಲೆ ದೈವ ಬಂತು. ಉಸ್ಸೋ ಉಸ್ಸೋ ಎಂದು ನಾ… ನಾ… ನಾನು ದುರ್ಗಮ್ಮ. ನನಗೆ ಸರಿಯಾದ ನೆಲೆ ಇಲ್ಲಿ ನೀವು ಕೊಟ್ಟಿಲ್ಲ. ನನಗೆ ಆಹಾರ ಬೇಕು. ಮೂರು ವರ್ಷಕ್ಕೊಂದು ಸಾರಿ ನಾಲ್ಕಾಲಿಂದು, ವರ್ಷಕ್ಕೆರೆಡು ಬಾರಿ ಪೂಜೆ ಮತ್ತೆ ಎರಡ್ಕಾಲಿಂದು ಬೇಕು. ಉಸ್ಸೋ….. ಉಸ್ಸೋ…. ನಾನು… ದುರ್ಗಿ, ದುರ್ಗಿ, ದುರ್ಗಮ್ಮ. ಇಲ್ಲಿ ನೀವು ಏನು ನಂಗೆ ತಾನ… ತಾನ… ಕೊಟ್ಟೀರೋ ಅದು ಸರಿಯಿಲ್ಲ. ನೀವು ಯಾರು ನಂಗೆ ಸರಿಯಾಗಿ ನೋಡ್ಕಂಡಿಲ್ಲ. ನೀವು ನಂಗೆ ಸರಿಯಾಗಿ ನೋಡ್ಕಂಡಿಲ್ಲ…….. ಉಸ್ಸೋ ಉಸ್ಸೋ ಹಿಂಗೆ ಎರಡೆರಡು ಬಾರಿ ಹೇಳ್ತು. ಮೊದಲೇ ಬಿಜಿಳಿಯಾಗಿದ್ದ ಜಟ್ಟಮ್ಮ, ಅವಳಿಂದ ಹೊರಬರುವ ಶಬ್ದಗಳೆಲ್ಲ ಅಸ್ಪಷ್ಟವಾಗಿ, ಅಸ್ತವ್ಯಸ್ತವಾಗಿ ಕೇಳುತಿದ್ದವು. ಮುಂದೆ “ಹಿಂಗೆ ಆದ್ರೆ ನಾನು ಅದೇ ಜಾಗಕ್ಕೆ ಹೋತೀನಿ. ಮುಂದೆ ನೀವು ಕಷ್ಟ ಅನುಭವಿಸ್ತೀರ. ನಾನು ಸುಮ್ಮನೇ ಬಿಡಲ್ಲ” ಅಂತ ಏನೇನೋ ಹೇಳೋದನ್ನು ದುರ್ಗಮ್ಮ ಸುರು ಮಾಡ್ತು. ಕೇಳಿಸಿಕೊಂಡವರು ತಮ್ಮ ಅನುಕೂಲಕ್ಕೆ ತಕ್ಕಹಾಗೆ ಮಾರ್ಪಡಿಸಿದ್ದೂ ಆತು. ಹಂಗೂ ಹಿಂಗೂ ಸರಿಯಾಗಿ ಕೇಳಿಸಿ ಕೊಳ್ಳುವ ಪ್ರಯತ್ನದ ಜೊತೆಗೆ ತನಗೆ ಅನ್ನಿಸಿದ್ದನ್ನು ಅಂತ್ರದ ತಗಡಿನಲ್ಲಿ ಬರೆದು, ಇದನ್ನು ನಿಮ್ಮ ಮನೆಗೆ ಕಟ್ಟಿ ಎಂದು ಜೊತೆಗೆ ರಾತ್ರಿ ಮಲಗುವಾಗ ಈ ನಿಂಬೆ ಹಣ್ಣು ನಿನ್ನ ತಲೆದಿಂಬಿನ ಕೆಳಗೆ ಇಟ್ಟುಕೊಳ್ಳು ಎಂದು ಹೆದ್ದಾರಿಪುರದ ಗಾಡಿಗ ಕೊಟ್ಟು ಕಳಿಸಿದ. ಅಂತೂ ತೊಂದ್ರೆ ತಾಪತ್ರಗಳಿಗೆಲ್ಲ ದುರುಗಮ್ಮನೇ ಕಾರಣವೆಂದು ಬಗೆದ ಯಜಮಾನಪ್ಪ, ಊರಿಗೆ ಹೆದ್ದಾರಿಪುರದ ಗಾಡಿಗರನ್ನು ಕರೆಸಿ, ಬನ ಸರಿಮಾಡಿ, ನೆಲೆ ಹಾಕಿಸಿದರು. ಇದನ್ನು ಸರಿಯಾಗಿ ಇಟ್ಕಳ್ಳಿ, ಪೂಜೆ ಪುನಸ್ಕಾರ ಸರಿಯಾಗಿ ಮಾಡಿ, ಬರೀ ಬಾಡು ತಿನ್ನೋದರಲ್ಲಿ ಸಾಯಬೇಡಿ, ಭಯಭಕ್ತಿ ಇರಲಿ ಅಂತ ಹೇಳಿ ನೆಲೆ ಹಾಕಿ ಹೋದರು. ಆಮೇಲೆ ಗೇಸರಿ ಜೆಟ್ಟಮ್ಮಗೆ ಯಾವಾಗ್ಲು ದುರ್ಗಮ್ಮ ಬರಾಕೆ ಸುರುವಾತು. ಅಂದಿನಿಂದ ಎರಡು ಮನೆತನದವರ ಮನೆಕಾಯೋ ದೇವರು ಈ ದುರ್ಗಮ್ಮಳೇ ಅನ್ನೋ ನಂಬುಗೆ ಇಂದಿಗೂ ಇದೆ.
ಅಪ್ಪನ ದರ್ಪ ಬಲ್ಲವನೇ ಬಲ್ಲ. ನಮ್ಮ ಮನೆತನದಲ್ಲಿ ಹೆಂಗಸರಿಗೆ ಬೈಯೋದು, ಹೊಡೆಯೋದು ಅಂದ್ರೆ ದೊಡ್ಡ ಪೌರುಷ ಅಂದ್ಕಂಡಿದ್ದಂಗೆ ಇದ್ದರು. ಮಹಾಭಾರತದ ದುರ್ಯೋಧನನ ದುರಹಂಕಾರಕ್ಕಿಂತಲೂ ಮಿಗಿಲಾಗಿತ್ತು. ದ್ರೌಪದಿಯನ್ನು ಎಳೆತಂದ ದುಶ್ಯಾಸನನಿಗೂ ಇಷ್ಟೊಂದು ಕ್ರೂರತೆ ಇರಲಿಲ್ಲವೇನೋ ಅನ್ನಿಸುವಷ್ಟರ ಮಟ್ಟಿಗೆ ದರ್ಪವನ್ನು ಹೆಂಗಸರ ಮೇಲೆ ತೋರಿಸುತ್ತಿದ್ದರು. ತಿಪ್ಪಯ್ಯ ಅವತ್ತು ಒಂದು ದಿನ ಚಿಕ್ಕಿ, ತೌರ ಮನೆಗೆ ಹೋಗಿ ಬತ್ತೀನಿ, ಬಹಳ ದಿನ ಆತು. ಅಣ್ಣನಿಗೇನೋ ಹುಷಾರಿಲ್ಲ ಅಂತ ಸುದ್ದಿ ಬಂತು ಅಂತ ಕೇಳಿದಕ್ಕೆ, ತಿಪ್ಪಯ್ಯ ‘ನಿನ್ನ ಅಣ್ಣ ಸತ್ರೆ ಸಾಯ್ತಾನೆ, ನೀನ್ಯಾಕೆ ಹೋಗೋದು’ ಅಂತ ಯಜಮಾನ ಅಜ್ಜಂಗೆ ಕೇಳಿಸೋ ಹಂಗೆ ಗದರಿಸಿದ. ಅದಕ್ಕೆ ತಿರುಗಿ ಚಿಕ್ಕಿ “ನಿಮ್ಮ ಬಳಗೋದರಿಗೆ ಏನಾದರೂ ಆದ್ರೆ ಕುಣಿಸ್ಯಗೆಂತ ಓಡಿ ಹೋತಿರಿ. ನಾವ್ಯಾರೂ ಹೋಗಬಾರದ”? ಅಂದದಕ್ಕೆ ಎಲ್ಲಿ ಇತ್ತೇನು ಸಿಟ್ಟು, ಬಂದವನೇ ತನ್ನ ಉದ್ದ ದೇಹ, ಕೈಯಿಂದ ಕುಳ್ಳಿಯಾಗಿದ್ದ ಚಿಕ್ಕಿಗೆ ಬಾರಿಸಿಯೇ ಬಿಟ್ಟ. ಸಾಲದಕ್ಕೆ ಅವಳನ್ನು ತಳ್ಳಿದಕ್ಕೆ, ಅವಳು ಕಡಿಮಾಡು ಮೂಲೆಯಲ್ಲಿ, ಚಾಪೆ ಹೊರೆ ಇಡೋ ಕಾಲರಿಗೆ ಕೆಳಗೆ ಬಿದ್ದಳು. ಬಿದ್ದ ರಭಸಕ್ಕೆ ಅವಳ ಕೈಯಲ್ಲಿದ್ದ ಬಳೆಗಳೆಲ್ಲ ಒಡೆದು ಚೆಲ್ಲಾಪಿಲ್ಲಿಯಾದವು. ನಾನು ಸತ್ತೆ, ಸತ್ತೆ ಅಯ್ಯೋ…ಎಂದು ಜೋರಾಗಿ ಅಳುತ್ತಿದ್ದರೂ, ಜಗಲಿ ಮೇಲಿದ್ದ ಯಜಮಾನ ಅಜ್ಜ ತಟಕ್ಕೆ ಪಿಟಕ್ಕೆ ಎನ್ನದೆ, ಏನೂ ಅಂತ ವಿಚಾರ ಕೇಳಲಿಲ್ಲ. ಹಿರೇತಂದಮ್ಮ ಬಂದವಳೇ, “ಯಂಥಕ್ಕೆ ಹಂಗೆ ಹೊಡಿತೀಯ, ಬಿಡೂ ಮರಾಯ” ಅಂತ ಹೇಳುತ್ತಲೇ ಅವಳನ್ನು ಸಮಾಧಾನ ಮಾಡಿದಳು. ಬಿದ್ದ ಬಳೆ ಓಡುಗಳನ್ನು ನಾವೆಲ್ಲ ಸೆಗಣಿ ತಂದು, ಅದನ್ನು ದೊಡ್ಡ ಉಂಡೆ ಮಾಡಿ, ಅದಕ್ಕೆ ಅಂಟಿಸಿ ಅಂಟಿಸಿ ತೆಗೆದೆವು.
ಒಂದು ದಿನ ಅಪ್ಪ ಬೆಳಿಗ್ಗೆ ಎದ್ದವನೇ ‘ಯಜಮಾನಪ್ಪ ಅಡಿಕೆ ಮಂಡಿಗೆ ಹೋಗಿಬರಾನ ಅಂತ ಕರೆದಾನೆ’, ಹೋಗಬೇಕು ಅಂತ ತರಾತುರಿಯಲ್ಲಿ ರೆಡಿ ಆಗ್ತಿದ್ದ. ತನ್ನ ಮುಖ ಚೌರ ಮಾಡಿಕೊಳ್ಳುವ ಕತ್ರಿಯನ್ನು, ಚೌರ್ ಕತ್ತಿಯನ್ನು ಹರಿತ ಮಾಡೋ ಚಿಕ್ಕದಾದ ಮಸೆಕಲ್ಲಿನಿಂದ ಮಸೆದು, ಕಬ್ಬಿಣ ತಂತಿ ರೂಪ ಪಡೆದ ಗಡ್ಡವನ್ನು ಬೋಳಿಸುತ್ತಿದ್ದ. ಅದರಿಂದ ಬರೋ ಕರ ಕರ ಶಬ್ದ, ಬಚ್ಚಲು ಮನೆ ದಾಟಿ ಬರುವಂತಿತ್ತು. ಗಡಬಡ ಬಂದವನೇ ಹಿರೇತಂದಮ್ಮ ಹಾಕಿಟ್ಟ, ಕಡುಬು, ಅನ್ನದ ಚೆಟ್ನಿ, ನಿನ್ನೆ ಇದ್ದ ಹುಳಿ ಕಟ್ಟಿನ ಸಾರು ಸೇರಿಸಿ, ತಿಂದು ಬಂದವನೇ ಅವ್ವನ ಹತ್ರ, “ಏ ಬಟ್ಟೆ ಕೊಡಿಲ್ಲಿ. ಸಾಗರಕೆ ಹೋಗಬೇಕು ಅಂದ. ಕೊಟ್ಟಿಗೆಯಲ್ಲಿ ಸೆಗಣಿ ತೆಗೆದು ಬಂದ ಅವ್ವನ ಕಾಲು, ಮೈಯೆಲ್ಲ ಸೆಗಣಿ ಕಂಪು ಆವರಿಸಿತ್ತು. ಗಡಿಬಿಡಿಯಲ್ಲಿ ಕಾಲು, ಕೈ ಗಸಬಸ ತೊಳೆದುಕೊಂಡು, ಅಪ್ಪನ ಬಟ್ಟೆ ಹುಡ್ಕಾಕೆ ಸುರುಮಾಡಿದಳು. ಬಟ್ಟೆ ಇಡೋ ಅರಿಗಡಿಗೆಯಲ್ಲಿ, ಪಿಟಾರಿಯಲ್ಲಿ ಅಪ್ಪನ ಬಟ್ಟೆ ಒಂದೊಂದೆ ತೆಗೆದು ಕೊಟ್ಟಳು. ಆದರೆ ಅಪ್ಪನ ಪಟಾಪಟೆ ಚೆಡ್ಡಿ ಸಿಗಲಿಲ್ಲ. ಮನೆಯೊಳಗಿನ ನಾಲೆ, ಹುಡ್ರು ಬಟ್ಟೆ ಇಡೋ ಅರಿಗಡಿಗೆ, ಟ್ರಂಕು, ಹಿತ್ಲಕಡೆ ನಾಲೆ, ಬಚ್ಚಲುಮನೆ ನಾಲೆ ಎಲ್ಲಿ ಹುಡುಕಿದ್ರೂ ಅದು ಪತ್ತೆಯಾಗಲಿಲ್ಲ. ಯಜಮಾನ ಅಜ್ಜ ಕಾಯ್ತಾ ಇರೋದನ್ನು ನೋಡಿದ ಅಪ್ಪ, ಚಡ್ಡಿ ಸಿಗದೆ ಇರೋದನ್ನು ಗಮನಿಸಿ, ಅವ್ವನ ಮೇಲೆ ರೇಗಿ ಹೋದನು. “ನಿಮ್ಮ ಚೆಡ್ಡಿ ಎಲ್ಲಿ ಹೋಗೈತೋ ಏನೋ. ಅವತ್ತು ಆಯ್ನೂರಿಗೆ ಹೋಗಿ ಬಂದ ಮೇಲೆ ನಾನಂತು ಕಾಣ್ಲಿಲ್ಲ. ನೆಟ್ಟಗೆ ಬಿಚ್ಚಿ ಒಂದ್ ಕಡೆ ನೀವು ಇಡೋಲ್ಲ. ನನ್ನ ಹೆಣ ತಿಂತೀರ” ಅಂದಿದ್ದೆ ತಡ, ಕೋಪವೇ ತಾನು ಎಂಬಂತೆ ಬಂದು, ಹದ್ದು ಕೋಳಿ ಮರಿಯ ಮೇಲೆ ಬಿದ್ದಂಗೆ ಅಪ್ಪ ಅವ್ವನಿಗೆ “ಬೇವರ್ಸಿ ಮುಂಡೇ ತಂದು. ಒಂದ ವಸ್ತು ನೆಟ್ಗೆ ಇಡಲ್ಲ. ನಿಮ್ಮ ಅಪ್ಪ ಬಂದು ತಗೊಂಡು ಹೋದ್ನ ಹಂಗಾರೆ” ಎಂದು, ಹೊಡೆದು ತಳ್ಳಿದ. ಅದರ ರಭಸಕ್ಕೆ ಕೋಣೆಯ ಒಲೆಮುಂದೆ ಇಟ್ಟ ಸೀಮೆ ಎಣ್ಣೆ ಚಂಬು ದಡಾರನೇ ಬಿತ್ತು. ಕೋಣೆಯ ತುಂಬೆಲ್ಲ ಸೀಮೆ ಎಣ್ಣೆಯ ಕೆರೆಯೇ ನಿಂತಂತಾಯಿತು. ಅಯ್ಯವ್ವ ಅಯ್ಯವ್ವ ಅಂತ ಒಂದೇ ಸಾರಿ ಕುಸಿದು ಬಿದ್ದಳು. ಓಡಿ ಬಂದ ಮುದಕವ್ವ “ನಿಂಗೆ ಏನಾರ ಮಾನ ಮರ‍್ವಾದೆ ಐತನ ಮರಾಯ, ಆ ಹೆಂಗಸಿನ ಮೇಲೆ ಕೈ ಮಾಡ್ತೀಯಲ್ಲ. ಏನ್ಕೆ ಹಂಗೆ ಉಗ್ಗುರುಸ್ತೀಯ. ನೀನೆ ಸೈಯ್ಯಾ. ಆಚೇರೀಚೇರ್ ಏನ್ ಅಂತಾರೆ, ಹಂಗಾರೆ. ಸಣ್ಣಪುಟ್ಟದಕ್ಕೆಲ್ಲ ಹಿಂಗೆ ಮಾಡ್ಕಂಡ್ರೆ ಎಲ್ರೂ ಮುಕ್ಳಾಗೆ ಬಾಯಾಗೆ ನಗಾಕೆ ಸೈ” ಎಂದು ಬೈದಳು. ಅಲ್ಲೇ ಮೂಕನಂತೆ ನಿಂತಿದ್ದ, ನನ್ನತ್ರ ಏನಕೆ ನಿನ್ ಅಪ್ಪ ಈ ತರ ದೆವ್ವ ಬಂದಂಗೆ ಕುಣಿಯೋದು ಅಂತ ಕೇಳಿದ್ಲು. ಅದಕ್ಕೆ ಅಪ್ಪನ ಚಡ್ಡಿ ಇಲ್ಲಾಂತೆ ಎಂದೆ. ಆಗ ಮುದಕವ್ವ “ಅದಕ್ಕೆ ಇಷ್ಟು ರಂಪಾಟನ, ಅವತ್ತು ಆಯ್ನೋರಿಗೆ ಹೋದಾಂವ, ಮರಿಗೆ ಮೇಲೆ ಇಟ್ಟಿದ್ದ, ಅದನ್ನು ತೆಗೆದು, ನನ್ನ ನಾಲೆ ಮೇಲಿಟ್ಟೀನಿ. ತಗೋ, ಕೊಡು, ಅಂತ ಕೊಟ್ಲು”. ಅದನ್ನು ತಗೊಂಡು ಹೋಗಿ ನಾನು ಕೊಟ್ಟೆ. ಅಪ್ಪ ಸಾಗರದ ಬಸ್ಸು ಹತ್ತಾಕೆ, ಅರಸಾಳು ಕಡೆ ಯಜಮಾನಜ್ಜನ ಜೊತೆ ಹೆಜ್ಜೆಹಾಕಿದ.
ಡಾ. ಅಣ್ಣಪ್ಪ ಎನ್ ಮಳೀಮಠ್
ಸಹಾಯಕ ಪ್ರಾಧ್ಯಾಪಕರು
ಭಾಗ ಒಂದು ಓದಿದ್ದೀರಾ ? ಅಪ್ಪನ ಜಾಲ | ಭಾಗ 1