ಬೆಂಗಳೂರು: ನಗರ ಸಂಚಾರಿ ಪೊಲೀಸರ ಹೆಸರಿನಲ್ಲಿ ನಕಲಿ ಕರೆಗಳು ಮತ್ತು ದುರದ್ದೇಶಪೂರಿತ ಲಿಂಕ್ ಗಳ ಬಗ್ಗೆ ಸಾರ್ವಜನಿಕರು ಜಾಗರೂಕರಾಗಿರಬೇಕು ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ಅವರು ಸಲಹೆ ನೀಡಿದ್ದಾರೆ.
ಹಣವನ್ನು ದೋಚಲೆಂದೇ ಇಂತಹ ಕರೆಗಳು ಮತ್ತು ಸಂದೇಶಗಳನ್ನು ಕಳುಹಿಸಿ ಸಾರ್ವಜನಿಕರನ್ನು ವಂಚಿಸಲು ಪ್ರಯತ್ನಗಳು ನಡೆಯುತ್ತಿವೆ. ಹಳೆಯ ದಂಡವನ್ನು ಪಾವತಿಸುವಂತೆ ಕೋರಿ ಸಂಚಾರ ಪೊಲೀಸ್ ಇಲಾಖೆಯಿಂದ ಕರೆ ಮಾಡುತ್ತಿರುವುದಾಗಿ ಹೇಳಿಕೊಳ್ಳುವ ಕರೆಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು. ಸಂಚಾರಿ ನಿಯಮ ಉಲ್ಲಂಘನೆಗಳ ಸಿಸಿಟಿವಿ ತುಣುಕು ಇದೆ ಎಂದು ಹೇಳಿಕೊಳ್ಳುವ ಮತ್ತು ಹಣ ಪಾವತಿಗೆ ಒತ್ತಾಯಿಸುವ ಸಂದೇಶಗಳ ಬಗ್ಗೆ ಜಾಗರೂಕರಾಗಿರಿ ಎಂದು ಅವರು ತಿಳಿಸಿದ್ದಾರೆ.
ನಕಲಿ ವಿಮೆ ಅಥವಾ ನೋಂದಣಿ ಸೇವೆಗಳನ್ನು ನೀಡುವುದಾಗಿ ಹೇಳಿಕೊಳ್ಳುವ ಕರೆಗಳು, ದುರದ್ದೇಶಪೂರಿತ ಲಿಂಕ್ ಗಳ ಮೇಲೆ ಕ್ಲಿಕ್ ಮಾಡಲು ಅಥವಾ ಡೌನ್ ಲೋಡ್ ಮಾಡಲು ಪ್ರಯತ್ನಿಸಬೇಡಿ ಎಂದು ಸಲಹೆ ನೀಡಿದ್ದಾರೆ. ಒಂದು ವೇಳೆ ಅಂತಹ ಕರೆಗಳು ಅಥವಾ ಸಂದೇಶಗಳು ಬಂದರೆ ಪ್ರತಿಕ್ರಿಯಿಸಬೇಡಿ, ಅನುಮಾನಸ್ಪದ ಲಿಂಕ್ ಗಳ ಮೇಲೆ ಕ್ಲಿಕ್ ಮಾಡಬೇಡಿ, ವೈಯಕ್ತಿಕ ಮಾಹಿತಿ ಒದಗಿಸಬೇಡಿ, ಹಣ ಪಾವತಿ ಮಾಡಬೇಡಿ. ಅನುಮಾನವಿದ್ದಲ್ಲಿ ಸಂಚಾರ ಪೊಲೀಸ್ ಇಲಾಖೆಯನ್ನು ನೇರವಾಗಿ ಸಂಪರ್ಕಿಸುವಂತೆ ಅವರು ಕೋರಿದ್ದಾರೆ.