ಬೆಂಗಳೂರು: ರಾಜ್ಯದ ಮತ್ತು ನೆರೆ ರಾಜ್ಯದ ನಕ್ಸಲರು ಶರಣಾಗತಿಯಾಗಿ ಸಮಾಜದ ಮುಖ್ಯವಾಹಿನಿಗೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ ಹಿರಿಯ ಐಪಿಎಸ್ ಆಧಿಕಾರಗಳಾದ ಹೇಮಂತ್ ನಿಂಬಾಳ್ಕರ್ ಮತ್ತು ಹರಿರಾಮ್ ಶಂಕರ್ ಅವರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ನೀಡಿ ಗೌರವಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು, ಬೆಂಗಳೂರಿನ ಕೋರಮಂಗಲದ ಕೆ.ಎಸ್.ಆರ್.ಪಿ. ಪೆರೇಡ್ ಮೈದಾನದಲ್ಲಿ ನಡೆದ ಧ್ವಜ ದಿನಾಚರಣೆ ಸಮಾರಂಭದಲ್ಲಿ ಮುಖ್ಯಮಂತ್ರಿಗಳ ಪದಕ ವಿಜೇತ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಮುಖ್ಯಮಂತ್ರಿಗಳ ಪದಕ ಪ್ರದಾನ ಮಾಡಿದರು. ಕರ್ನಾಟಕ ಮತ್ತು ನೆರೆ ರಾಜ್ಯದ ನಕ್ಸಲರು ಶರಣಾಗತಿಯಾಗಿ ಸಮಾಜದ ಮುಖ್ಯವಾಹಿನಿಗೆ ಬರುವಲ್ಲಿ ರಾಜ್ಯ ಗುಪ್ತವಾರ್ತೆ ಘಟಕ ಹಾಗೂ ನಕ್ಸಲ್ ನಿಗ್ರಹ ಪಡೆಯ ಅಧಿಕಾರಿ ಮತ್ತು ಸಿಬ್ಬಂದಿಗಳ ಪಾತ್ರ ಗಮನಾರ್ಹವಾಗಿದ್ದು, ಈ ವಿಶೇಷ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು, ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರೈಸಿರುವ ಹಿನ್ನೆಲೆಯಲ್ಲಿ ಅವರಿಗೆ ಈ ಗೌರವ ಸಲ್ಲಿಸಲಾಗಿದೆ.
ರಾಜ್ಯಗುಪ್ತವಾರ್ತೆ ನಿರ್ದೇಶಕ ಹೇಮಂತ್ ಎಂ ನಿಂಬಾಳ್ಕರ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪದಕ ಪ್ರಧಾನ ಮಾಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಐಪಿಎಸ್ ಅಧಿಕಾರಿಗಳಾದ ಡಾ.ವೈ.ಎಸ್ ರವಿಕುಮಾರ್, ಅಮಿತ್ ಸಿಂಗ್, ಸುಧೀರ್ ಕುಮಾರ್ ರೆಡ್ಡಿ, ಹರಿರಾಮ್ ಶಂಕರ್, ಜಿತೇಂದ್ರ ದ್ಯಾಮ್ ಅವರಿಗೂ ಮುಖ್ಯಮಂತ್ರಿಗಳ ಪದಕ ಪ್ರಧಾನ ಮಾಡಲಾಯಿತು. ಎಡಿಜಿಪಿ (ಗುಪ್ತಚರ) ಹೇಮಂತ್ ನಿಂಬಾಳ್ಕರ್ ಮತ್ತು ನಕ್ಸಲ್ ನಿಗ್ರಹ ಪಡೆ ಗುಪ್ತಚರ ಅಧಿಕಾರಿ ಹರಿರಾಮಶಂಕರ್ ಅವರು ನಕ್ಸಲರ ಶರಣಾಗತಿಗೆ ಪ್ರಮುಖ ಪಾತ್ರ ವಹಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.