ಬೆಂಗಳೂರು: ಮಲ್ಟಿಪ್ಲೆಕ್ಸ್ ಸಂಸ್ಖೃತಿ, ಓಟಿಟಿಗಳ ಅಬ್ಬರದ ನಡುವೆ ದೊಡ್ಡ ಏಟು ತಿಂದಿದ್ದು ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳು. ಬೆಂಗಳೂರಿನ ಅದೆಷ್ಟೋ ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳು ನಷ್ಟ ಅನುಭವಿಸಲಾಗದೆ ಮುಚ್ಚಿ ಹೋದವು. ಈ ಸಾಲಿಗೆ ಹೊಸ ಸೇರ್ಪಡೆ ಸ್ಯಾಂಕಿ ಕೆರೆ ರಸ್ತೆಯಲ್ಲಿರುವ ಕಾವೇರಿ ಚಿತ್ರಮಂದಿರ. ಐವತ್ತು ವರ್ಷಗಳ ಇತಿಹಾಸ ಹೊಂದಿರುವ ಕಾವೇರಿ ಚಿತ್ರಮಂದಿರ ಈಗ ಕಣ್ಮುಚ್ಚಿದೆ.
ಗಾಂಧಿನಗರಕ್ಕೆ ಹೊಸದಾಗಿ ಬರುವ ನಿರ್ಮಾಪಕರು, ನಿರ್ದೇಶಕರ ಸಂಖ್ಯೆಗೇನು ಕಡಿಮೆ ಇಲ್ಲ, ವಾರಕ್ಕೆ ರಿಲೀಸ್ ಆಗುವ ಸಿನಿಮಾಗಳೇನು ಕಡಿಮೆ ಅಲ್ಲ. ಪರಭಾಷಾ ಸಿನಿಮಾಗಳೂ ದಂಡಿಯಾಗಿಯೇ ಬರುತ್ತವೆ. ಆದರೆ ಥಿಯೇಟರ್ ಗಳು ಮಾತ್ರ ಒಂದೊಂದೆ ಇತಿಹಾಸದ ಪುಟಕ್ಕೆ ಸೇರ್ಪಡೆಯಾಗುತ್ತಿವೆ. ಸಾವಿರಗಟ್ಟಲೇ ಇದ್ದ ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳು ಈಗ ನೂರರ ಸಂಖ್ಯೆಯ ಹತ್ತಿರ ಬಂದು ನಿಂತಿವೆ. ಇದೀಗ ಐವತ್ತು ವರ್ಷಗಳ ಇತಿಹಾಸವಿರುವ ಥಿಯೇಟರ್ ಒಂದು ಶಾಶ್ವತವಾಗಿ ಬಾಗಿಲು ಎಳೆದುಕೊಂಡು, ಮನರಂಜನೆಗೆ ಗುಡ್ ಬೈ ಹೇಳಿದೆ.
ಸ್ಯಾಂಕಿ ಕೆರೆಯ ರಸ್ತೆಯಲ್ಲಿರುವ ‘ಕಾವೇರಿ’ ಚಿತ್ರಮಂದಿರ ಬೆಂಗಳೂರಿನಲ್ಲಿ ಅತಿದೊಡ್ಡ ಚಿತ್ರಮಂದಿರಗಳಲ್ಲಿ ಅದು ಕೂಡ ಒಂದಾಗಿತ್ತು. 1947ರ ಜನವರಿ 11ರಂದು ಡಾ.ರಾಜ್‍ಕುಮಾರ್ ಅವರ ‘ಬಂಗಾರದ ಪಂಜರ’ ಸಿನಿಮಾ ರಿಲೀಸ್ ಮಾಡುವ ಮೂಲಕ ಥಿಯೇಟರ್ ಆರಂಭಗೊಂಡಿತ್ತು. ಕನ್ನಡ ಸೇರಿದಂತೆ ಪರಭಾಷೆಯ ಸಿನಿಮಾಗಳು ಕೂಡ ಇಲ್ಲಿ ಪ್ರದರ್ಶನ ಕಂಡಿವೆ. ಸಿಂಗಲ್ ಸ್ಕ್ರೀನ್ ಆದರೂ ವಿಶಾಲವಾದ ಜಾಗ ಈ ಥಿಯೇಟರ್ ನಲ್ಲಿ ಇತ್ತು. ಪಾರ್ಕಿಂಗ್ ವ್ಯವಸ್ಥೆ ಕೂಡ ಚೆನ್ನಾಗಿತ್ತು. ಪರಮಾತ್ಮ ಸಿನಿಮಾದ ಆರಂಭದ ಸೀನ್ ಕೂಡ ಈ ಥಿಯೇಟರ್ ನಲ್ಲಿ ಶೂಟ್ ಮಾಡಲಾಗಿದೆ. ಅಷ್ಟು ದೊಡ್ಡ ಥಿಯೇಟರ್ ಆಗಿತ್ತು.
ಡಾ.ರಾಜಕುಮಾರ್ ಅವರ ಪ್ರೇಮದ ಕಾಣಿಕೆ (1976) ಇದೇ ಚಿತ್ರಮಂದಿರಲ್ಲಿ ಭರ್ಜರಿ ಪ್ರದರ್ಶನ ಕಂಡಿತ್ತು. ತೆಲುಗು ಸಂಗೀತಮಯ ಚಿತ್ರ ಶಂಕರಾಭರಣಂ (1980), ಶಾರೂಕ್ ಖಾನ್ ಅವರ ದಿಲ್ ವಾಲೇ ದುಲ್ಹನಿಯಾ ಲೇ ಜಾಯೇಂಗೆ ಸಿನಿಮಾಗಳು 25 ವಾರಗಳ ಪ್ರದರ್ಶನ ಕಂಡಿತ್ತು.
ಆದರೆ ಇತ್ತಿಚಿನ ದಿನಗಳಲ್ಲಿ ಒಟಿಟಿ, ಮಲ್ಟಿಪ್ಲೆಕ್ಸ್ ಗಳ ಹಾವಳಿಯಿಂದ ಸಿಂಗಲ್ ಸ್ಕ್ರೀನ್ ನಲುಗಿ ಹೋಗಿವೆ. ನಷ್ಟದ ಹೊಡೆತಕ್ಕೆ ಸಿಲುಕಿ ಅದೆಷ್ಟೋ ಥಿಯೇಟರ್ ಗಳುಮುಚ್ಚಿ, ಆ ಜಾಗದಲ್ಲಿ ವ್ಯಾವಹಾರಿಕ ಕಟ್ಟಡಗಳು ತಲೆ ಎತ್ತಿ ನಿಂತಿವೆ. ಬೆಂಗಳೂರಿನ ಸಿನಿಮಾ ಸಂಸ್ಖೃತಿಯ ಹೆಗ್ಗುರುತುಗಳಾಗಿದ್ದ ಕಪಾಲಿ, ಸಾಗರ್, ಪಲ್ಲವಿ, ತ್ರಿಭುವನ್, ಎವರೆಸ್ಟ್ ಚಿತ್ರಗಳು ಇತ್ತೀಚಿನ ವರ್ಷಗಳಲ್ಲಿ ಕಣ್ಮುಚ್ಚಿದ್ದವು. ಇದೀಗ ಅದೇ ಸಾಲಿಗೆ ಕಾವೇರಿ ಕೂಡ ಸೇರಿದೆ. ಕಾವೇರಿ ಥಿಯೇಟರ್ ಇದ್ದಂತ ಜಾಗದಲ್ಲೂ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಲಿದ್ದಾರೆ ಎನ್ನಲಾಗಿದೆ.