ಬೆಂಗಳೂರು: ಸೈಬರ್ ವಂಚನೆಗೆ ಒಳಗಾಗಬೇಡಿ ಎಂದು ಪೊಲೀಸ್, ಆರ್ ಬಿ ಐ, ಮಾಧ್ಯಮಗಳ ಆದಿಯಾಗಿ ಎಲ್ಲರೂ ಎಚ್ಚರಿಕೆ ನೀಡುತ್ತಲೇ ಬರಲಾಗುತ್ತಿದೆ. ಆದರೂ ವಂಚನೆಗೊಳಗಾಗುವ ಪ್ರಕರಣಗಳು ದಾಖಲಾಗುತ್ತಲೇ ಇವೆ. ಅದರಲ್ಲೂ ಸುಶಿಕ್ಷಿತರೇ ಈ ವಂಚನೆಗೆ ಬಲಿಯಾಗುತ್ತಿರುವುದು ದುರಂತವೇ ಸರಿ.
ಸೈಬರ್ ವಂಚಕರು ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಖಾಸಗಿ ಕಂಪನಿಯ ಮಹಿಳಾ ಸಾಫ್ಟ್‌ವೇರ್ ಎಂಜಿನಿಯರ್ ವೊಬ್ಬರಿಗೆ ರೂ. 84 ಲಕ್ಷ ರೂ. ವಂಚಿಸಿದ್ದಾರೆ. ಈ ಸಂಬಂಧ ವೈಟ್ ಫೀಲ್ಡ್ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಹಿಳಾ ಟೆಕ್ಕಿಗೆ ವಾಟ್ಸಾಪ್ ಕರೆ ಮಾಡಿದ ವ್ಯಕ್ತಿಯೊಬ್ಬ, ತನ್ನನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ. ನಂತರ ನಿಮ್ಮ ವಿವಿಧ ಬ್ಯಾಂಕ್ ಖಾತೆಗಳಿಂದ ಹಣವನ್ನು ಅಕ್ರಮವಾಗಿ ವರ್ಗಾಯಿಸಲಾಗಿದೆ. ಆದ್ದರಿಂದ ನಿಮ್ಮ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಮಹಾನಗರ ಪೊಲೀಸರು ಕರೆ ಮಾಡಲಿದ್ದು, ಅವರೊಂದಿಗೆ ಚರ್ಚಿಸಿ ಎಂದು ಬೆದರಿಸಿದ್ದ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ನಂತರ ಮುಂಬೈ ಪೊಲೀಸರ ಹೆಸರಿನಲ್ಲಿ ಮತ್ತೊಬ್ಬ ವ್ಯಕ್ತಿ ವಾಟ್ಸಾಪ್ ವಿಡಿಯೊ ಕರೆ ಮಾಡಿ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಜೆಟ್ ಏರ್ ವೇಸ್‌ನ ಮಾಜಿ ಮುಖ್ಯಸ್ಥ ನರೇಶ್ ಗೋಯಲ್, ಹಣ ವರ್ಗಾವಣೆಗೆ 300 ಬ್ಯಾಂಕ್ ಖಾತೆಗಳನ್ನು ಬಳಸಿದ್ದಾರೆ. ಇದರಲ್ಲಿ ನಿಮ್ಮ ಹೆಸರಿನಲ್ಲಿರುವ ಖಾತೆಗಳೂ ಇವೆ. ನಿಮ್ಮ ಖಾತೆಗಳಿಂದ ಕೋಟ್ಯಂತರ ರೂಪಾಯಿ ಹಣವನ್ನು ವರ್ಗಾವಣೆ ಮಾಡಲಾಗಿದೆ. ಈ ಪ್ರಕರಣದಲ್ಲಿ ನಿಮ್ಮನ್ನು ಬಂಧಿಸಲಾಗುತ್ತದೆ ಎಂದು ಹೇಳಿ ಹೆದರಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.
ನಿಮ್ಮನ್ನು ಬಂಧಿಸಬಾರದು ಎಂದಾದರೆ ತಾವು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡುವಂತೆ ಮತ್ತೆ ಬೆದರಿಸಿದ್ದಾನೆ. ಪೊಲೀಸರು ಬಂಧಿಸಬಹುದು ಎಂಬ ಭೀತಿಯಿಂದ ಆಕೆ ವಂಚಕ ಹೇಳಿದ ಐದು ಬೇರೆ ಬೇರೆ ಖಾತೆಗಳಿಗೆ ಹಂತ ಹಂತವಾಗಿ ಸುಮಾರು ರೂ. 84 ಲಕ್ಷ ವರ್ಗಾವಣೆ ಮಾಡಿದ್ದದಾರೆ. ಮತ್ತಷ್ಟು ಹಣವನ್ನು ನೀಡಲೇಬೇಕು ಎಂದು ಆಗ್ರಹಪಡಿಸಿದಾಗ ಅನುಮಾನಗೊಂಡ ಆಕೆ ಪೊಲೀಸರಿಗೆ ದೂರು ನೀಡಿದ್ದಾರೆ.