ಬೆಂಗಳೂರು: ಎಎನ್ ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನವೊಂದರಲ್ಲಿ ಕರ್ನಾಟಕವನ್ನು ಪಾಕಿಸ್ತಾನಕ್ಕೆ ಹೋಲಿಸಿದ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಅಣ್ಣಾಮಲೈ ಅವರೇ, ಕರ್ನಾಟಕದ ಉಪ್ಪಿನ ಋಣ ನಿಮ್ಮ ಮೇಲಿದೆ. ತಿಂದ ಮನೆಗೆ ಎರಡು ಬಗೆಯಬಾರದು. ಕರ್ನಾಟಕವನ್ನು ಪಾಕಿಸ್ತಾನಕ್ಕೆ ಹೋಲಿಸಲು ನಿಮಗೆ ಎಷ್ಟು ಧೈರ್ಯ ಎಂದು ಕನ್ನಡಿಗರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಆಗುತ್ತಿರುವ ತೆರಿಗೆ ವಂಚನೆ, ಬರಪರಿಹಾರದಲ್ಲಿನ ವಂಚನೆ ಮತ್ತು ವಿಶೇಷ ಅನುದಾನಗಳಲ್ಲಿ ಆಗುತ್ತಿರುವ ಅನ್ಯಾಯಗಳ ವಿರುದ್ಧ ಕಾಂಗ್ರೆಸ್ ಪಕ್ಷ ಹೋರಾಟ ನಡೆಸುತ್ತಿದೆ. ಈ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅಣ್ಣಾಮಲೈ ಪಾಕಿಸ್ತಾನದವರೂ ಹೀಗೇ, ನಮಗೆ ಹಣ ಕೊಡದೇ ಇದ್ದರೆ ಹಣೆಗೆ ಶೂಟ್ ಮಾಡಿಕೊಂಡು ಸಾಯುತ್ತೇವೆ ಎಂದು ಹೇಳುತ್ತಾರೆ. ಕರ್ನಾಟಕವೂ ಅದೇ ರೀತಿ ಕೇಂದ್ರ ಸರ್ಕಾರವನ್ನು ಪೀಡಿಸುತ್ತಿದೆ. ಕರ್ನಾಟಕ ಸರ್ಕಾರ ಹಣೆಯ ಮೇಲೆ ರಿವಾಲ್ವರ್ ಇಟ್ಟುಕೊಂಡು ಅನುದಾನ ಕೊಡಿ, ಇಲ್ಲದೇ ಇದ್ದರೆ ಶೂಟ್ ಮಾಡಿಕೊಂಡು ಸಾಯುತ್ತೇವೆ ಎನ್ನುತ್ತಿದೆ ಎಂದು ಅಣ್ಣಾಮಲೈ ನಾಲಿಗೆ ಹರಿಬಿಟ್ಟು ಮಾತನಾಡಿದ್ದರು.
ಕರ್ನಾಟಕ ಎಷ್ಟೇ ತೆರಿಗೆ ಕಟ್ಟಿದರೂ ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ತಾನೇ ಹಣ ಹೊಂದಿಸಿಕೊಳ್ಳಬೇಕು, ಕೇಂದ್ರ ಸರ್ಕಾರವನ್ನು ದೂರಬಾರದು. ನೀವು ಉಚಿತ ಯೋಜನೆಗಳನ್ನು ಜಾರಿಗೊಳಿಸಿದರೆ ಅದಕ್ಕೆ ಹಣ ಹೊಂದಿಸಬೇಕಾದ ಜವಾಬ್ದಾರಿ ನಿಮ್ಮದೇ ಎಂದು ಅಣ್ಣಾಮಲೈ ಹೇಳಿದ್ದರು. ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಕಟ್ಟುವ ನೂರು ರುಪಾಯಿ ತೆರಿಗೆಯಲ್ಲಿ ಕರ್ನಾಟಕಕ್ಕೆ ವಾಪಾಸ್ ಬರುವುದು ಕೇವಲ 13 ರುಪಾಯಿ ಎಂಬ ವಿಷಯದ ಕುರಿತು ಅಣ್ಣಾಮಲೈ ಮಾತನಾಡದೇ ಕರ್ನಾಟಕವನ್ನು ಪಾಕಿಸ್ತಾನಕ್ಕೆ ಹೋಲಿಸಿರುವುದು ಕನ್ನಡಿಗರನ್ನು ಕೆರಳಿಸಿದೆ.
ಅಣ್ಣಾಮಲೈ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ರಾಜ್ಯ ಕಾಂಗ್ರೆಸ್ ಘಟಕ, ಕರ್ನಾಟಕವನ್ನು ಪಾಕಿಸ್ತಾನಕ್ಕೆ ಹೋಲಿಸಿದ ಬಿಜೆಪಿಯ ಅಣ್ಣಾಮಲೈ ಅವರು ಕನ್ನಡಿಗರ ಮೇಲೆ ಬಿಜೆಪಿಗಿರುವ ಅಸಹನೆ, ದ್ವೇಷ, ತಾತ್ಸಾರವನ್ನು ಅನಾವರಣಗೊಳಿಸಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಕನ್ನಡಿಗರನ್ನು ಅವಮಾನಿಸಲು ಟೊಂಕ ಕಟ್ಟಿ ನಿಂತಿರುವಂತಿದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.
ಅಣ್ಣಾಮಲೈ. ಕರ್ನಾಟಕದ ಅನ್ನ ತಿಂದು ಬದುಕಿದ್ದನ್ನು ಮರೆತು ಈಗ ಕರ್ನಾಟಕವನ್ನೇ ಪಾಕಿಸ್ತಾನ ಎನ್ನುವಷ್ಟರ ಮಟ್ಟಿಗೆ ದುರಹಂಕಾರ ಬೆಳೆಸಿಕೊಂಡಿದ್ದಾರೆ, ಅಣ್ಣಾಮಲೈ ಆಡಿದ ಈ ಮಾತುಗಳನ್ನು ಪ್ರಾಯೋಜಿಸಿದವರು ನಾಗಪುರದವರೋ ಅಥವಾ ಬಿಜೆಪಿ ಹೈಕಮಾಂಡೋ? ಕೇಂದ್ರ ಸರ್ಕಾರದ ಮುಂದೆ ಕನ್ನಡಿಗರು ಭಿಕ್ಷೆ ಕೇಳುತ್ತಿಲ್ಲ, ತಮ್ಮ ಬೆವರಿನ ದುಡಿಮೆಯ ಹಕ್ಕನ್ನು ಮರಳಿ ಕೇಳುತ್ತಿದ್ದಾರೆ, ಕರ್ನಾಟಕ ದೇಶದಲ್ಲೇ ಅತಿ ಹೆಚ್ಚು ತೆರಿಗೆ ಪಾವತಿಸುವ 2ನೇ ರಾಜ್ಯ ಎನ್ನುವ ಸಾಮಾನ್ಯ ಜ್ಞಾನ ಬಿಜೆಪಿಗಿರಲಿ. ಕನ್ನಡಿಗರನ್ನು ಅವಮಾನಿಸುವ ಬಿಜೆಪಿಯ ಧೋರಣೆಗೆ ತಕ್ಕ ಪಾಠ ಕಲಿಸಲು ಕನ್ನಡಿಗರು ಸಜ್ಜಾಗಿದ್ದಾರೆ ಎಂದು ಕಾಂಗ್ರೆಸ್ ತಿಳಿಸಿದೆ.