“ಚುನಾವಣೆ ಎನ್ನುವ ಪರೀಕ್ಷೆ ಘೋಷಣೆಯಾಗಿದೆ. ನುಡಿದಂತೆ ನಡೆದ ರಾಜ್ಯ ಕಾಂಗ್ರೆಸ್ ಸರಕಾರದ ಯಶಸ್ವಿ ಯೋಜನೆಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೇನೆ. ಎದುರಾಳಿ ಯಾರೇ ಆಗಲಿ ನನ್ನ ಗೆಲುವು ಶತಸಿದ್ಧ” ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿತಾಯಿ ನಿಂಬಾಳ್ಕರ್ ಅವರ ಒಂದಿಂಚು ಅಳುಕಿಲ್ಲದ ಭರವಸೆಯ ನುಡಿಗಳಿವು.
ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ತ್ರೀರೋಗ ತಜ್ಞೆಯಾಗಿರುವ ನಾನು ಶಾಸಕಿಯಾಗಿದ್ದಾಗ ಖಾನಾಪುರದಲ್ಲಿ ಮಹಿಳೆಯರಿಗಾಗಿ ವಿಶೇಷ ಆಸ್ಪತ್ರೆ ತಂದಿದ್ದೇನೆ. ಉತ್ತರ ಕನ್ನಡ ಭಾಗದಲ್ಲೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆ ಹೆಚ್ಚಾಗಿದೆ. ಈ ಬೇಡಿಕೆಯನ್ನೂ ಈಡೇರಿಸಲು ಪ್ರತಿಶತ ಪ್ರಯತ್ನ ಮಾಡುತ್ತೇನೆ.
ನಾನು ಹಿಂದುತ್ವ, ಪಾಕಿಸ್ತಾನ, ಪುಲ್ವಾಮಾ ದಾಳಿ ಮೇಲೆ ಭಾವನಾತ್ಮಕ ಮತ ಕೇಳುತ್ತಿಲ್ಲ. ನಮ್ಮ ಸರಕಾರ ನೀಡಿದ ಐದು ಗ್ಯಾರಂಟಿ ಯೋಜನೆಗಳಲ್ಲಿ ಶೇ.60ರಷ್ಟು ಜನ ಶಕ್ತಿ ಯೋಜನೆಯಿಂದ, ಶೇ.95ರಷ್ಟು ಜನ ಗೃಹಜ್ಯೋತಿಯಿಂದ, ಪ್ರತಿ ಮನೆಯ ಯನಮಾನಿ ಗೃಹಲಕ್ಷ್ಮೀ ಯೋಜನೆಯಿಂದ, ಯುವಕರು, ಯುವನಿಧಿಯಿಂದ, ರಾಜ್ಯದ ಎಲ್ಲ ಜನತೆ ಅನ್ನಭಾಗ್ಯ ಯೋಜನೆಯಿಂದ ಫಲಾನುಭವಿಗಳಾಗಿದ್ದಾರೆ. ನನ್ನಂತಹ ಕೆಲಸಗಾರ ಅಭ್ಯರ್ಥಿಯನ್ನು ಹೊರತುಪಡಿಸಿ ಅಭಿವೃದ್ಧಿ ಬಯಸುವ ಇಲ್ಲಿನ ಜನ ಮತ್ತಿನ್ಯಾರನ್ನು ಆಯ್ಕೆ ಮಾಡಲು ಸಾಧ್ಯ. ಜನ ನನ್ನನ್ನೇ ಈ ಬಾರಿ ಚುನಾಯಿಸಿ ಕಳುಹಿಸುತ್ತಾರೆ ಎಂದು ವಿಶ್ವಾಸದ ಮಾತುಗಳನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.