ಹಾಲಕ್ಕಿ ಗಾನಕೋಗಿಲೆ ಸುಕ್ರಜ್ಜಿಯನ್ನು ಭೇಟಿ ಮಾಡಿದ ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್

Most read

ಅಂಕೋಲ: ಪದ್ಮಶ್ರೀ, ಜಾನಪದಶ್ರೀ, ನಾಡೋಜ ಸುಕ್ರಿ ಬೊಮ್ಮಗೌಡ ಅವರನ್ನು ಇಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ.ಅಂಜಲಿ ಹೇಮಂತ್ ನಿಂಬಾಳ್ಕರ್ ಭೇಟಿ ಮಾಡಿ ಆಶೀರ್ವಾದ ಪಡೆದರು.

ಹಾಲಕ್ಕಿ ಗಾನಕೋಗಿಲೆ ಎಂದೇ ಹೆಸರಾದ ಅದ್ಭುತ ಕಂಠದ ಜಾನಪದ ಗಾಯಕಿ ಸುಕ್ರಿ ಬೊಮ್ಮಗೌಡ ಅವರು ನೆಲೆಸಿರುವ ಅಂಕೋಲದ ಬಡಿಗೇರ ಗ್ರಾಮದಲ್ಲಿರುವ ನಿವಾಸಕ್ಕೆ ಭೇಟಿ ನೀಡಿದ ಡಾ.ಅಂಜಲಿ ಹೇಮಂತ್ ನಿಂಬಾಳ್ಕರ್ ಹಿರಿಯ ಜೀವದ ಕಾಲಿಗೆರಗಿ ಆಶೀರ್ವಾದ ಬೇಡಿದರು.

ಡಾ.ಅಂಜಲಿಯವರನ್ನು ಸುಕ್ರಜ್ಜಿ ಪ್ರೀತಿಯಿಂದ ಮೈದಡವಿ ಮಾತಾಡಿದ ದೃಶ್ಯಗಳು ಹೃದಯಸ್ಪರ್ಶಿಯಾಗಿತ್ತು. ಈ ಭೇಟಿಯ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್, ಈ ವಯಸ್ಸಿನಲ್ಲೂ ಸುಕ್ರಿ ಬೊಮ್ಮಗೌಡ ಅವರಿಗೆ ಮತದಾನದ ಬಗ್ಗೆ ಇರುವ ಪ್ರಬುದ್ಧ ತಿಳಿವಳಿಕೆ ನಿಜಕ್ಕೂ ಮೆಚ್ಚುಗೆಗೆ ಅರ್ಹ ಎಂದು ಹೇಳಿದ್ದಾರೆ.

ಸುಕ್ರಿಬೊಮ್ಮಗೌಡ ಅವರು ಉಳಿಸಿಕೊಂಡು ಬಂದಿರುವ ಜಾನಪದ ಹಾಡುಗಳ ಪರಂಪರೆಯನ್ನು ಮುಂದಿನ ಪೀಳಿಗೆ ಉಳಿಸಿ ಬೆಳೆಸಬೇಕಾಗಿದೆ ಎಂದು ಅವರು ನುಡಿದಿದ್ದಾರೆ‌.

ಹಾಲಕ್ಕಿ  ಬುಡಕಟ್ಟು ಜನಾಂಗಕ್ಕೆ ಸೇರಿದ ಜಾನಪದ ಗಾಯಕಿ  ಸುಕ್ರಿ ಬೊಮ್ಮಗೌಡ ಅವರು ಜಾನಪದ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳು ಮತ್ತು ಸಾಂಪ್ರದಾಯಿಕ ಬುಡಕಟ್ಟು ಸಂಗೀತವನ್ನು ಸಂರಕ್ಷಿಸುವ ಕೆಲಸಕ್ಕಾಗಿ ಮಾಡಿದ ಕಾರ್ಯಗಳಿಗಾಗಿ ಭಾರತದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ಪದ್ಮಶ್ರೀ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.

More articles

Latest article