ಬಿಜೆಪಿ ಎರಡನೇ ಪಟ್ಟಿಯಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಟಿಕೆಟ್ ಸಿಕಿದ್ದು, ಹಾಲಿ ಸಂಸದ ಅನಂತ್ ಕುಮಾರ್ ಹೆಗಡೆಗೆ ಈ ಬಾರಿ ಟಿಕೆಟ್ ಕೈ ತಪ್ಪಿದೆ.
ಉತ್ತರ ಕನ್ನಡ ಕ್ಷೇತ್ರ ಕೂಡ ಭಾರಿ ಕುತೂಹಲ ಕೆರಳಿಸಿತ್ತು. ಹಾಲಿ ಸಂಸದರಾಗಿರುವ ಅನಂತ್ ಕುಮಾರ್ ಹೆಗಡೆ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಅಲರ್ಟ್ ಆಗಿದ್ದರು. ಕ್ಷೇತ್ರದಲ್ಲಿ ಓಡಾಟ, ಹಿಂದುತ್ವದ ಪರ ಭಾಷಣಗಳನ್ನು ಮಾಡಿ ಸಂಚಲನ ಸೃಷ್ಟಿಸಿದ್ದರು. ಇದರ ನಡುವೆ ಸಂವಿಧಾನ ಬದಲಿಸುವ ಹೇಳಿಕೆ ನೀಡಿ ಪಕ್ಷದಿಂದ ನೋಟಿಸ್ ಕೂಡ ಪಡೆದುಕೊಂಡಿದ್ದರು. ಮತ್ತೆ ಸ್ಪರ್ಧೆಗೆ ಪ್ರಯತ್ನಿಸಿದ ಅನಂತ್ ಕುಮಾರ್ ಹೆಗೆಡೆಗೆ ಟಿಕೆಟ್ ನಿರಾಕರಿಸಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಉತ್ತರ ಕನ್ನಡ ಟಿಕೆಟ್ ನೀಡಲಾಗಿದೆ.
ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಫೈಕಿ 20 ಕ್ಷೇತ್ರಗಳ ಅಭ್ಯರ್ಥಿಗಳನ್ನ ಘೋಷಿಸಿತ್ತು. ಇದೀಗ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಯನ್ನ ಘೋಷಿಸಿದ್ದು,ಚಿತ್ರದುರ್ಗ ಲೋಕಸಭಾ ಕ್ಷೇತ್ರವನ್ನ ಹೈಕಮಾಂಡ್ ಬಾಕಿ ಉಳಿಸಿಕೊಂಡಿದೆ.
ಬೆಳಗಾವಿಯ ಹಾಲಿ ಸಂಸದೆಯಾದ ಮಂಗಳ ಅಂಗಡಿ ಅವರಿಗೆ ಟಿಕೆಟ್ ಕೈ ತಪ್ಪಿದ್ದು, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಬೆಳಗಾವಿ ಟಿಕೆಟ್ ನೀಡಲಾಗಿದೆ.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಹಾಲಿ ಸಂಸದರಾದ ಅನಂತ್ ಕುಮಾರ್ ಹೆಗಡೆಗೆ ಟಿಕೆಟ್ ಕೈ ತಪ್ಪಿದ್ದು, ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಟಿಕೆಟ್ ನೀಡಲಾಗಿದೆ.
ರಾಯಚೂರಿನಿಂದ ರಾಜಾ ಅಮರೇಶ್ವರ ನಾಯಕ ಅವರಿಗೆ ಹೈಕಮಾಂಡ್ ಟಿಕೆಟ್ ನೀಡಿದೆ. ಚಿಕ್ಕಬಳ್ಳಾಪುರದಿಂದ ಮಾಜಿ ಸಚಿವರಾದ ಡಾ.ಕೆ ಸುಧಾಕರ್ ಗೆ ಟಿಕೆಟ್ ನೀಡಿದೆ.
ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಸಿಗದಿರುವ ಬಗ್ಗೆ ಹಲವು ಬಿಜೆಪಿ ನಾಯಕರು ನೇರವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ನಾಯಕರ ತಂಡವು ಕೂಡ ಅತೃಪ್ತ ಆಕಾಂಕ್ಷಿಗಳನ್ನು ಭೇಟಿ ಮಾಡಿ ಸಮಾಧಾನಪಡಿಸುವ ಕೆಲಸ ಮಾಡುತ್ತಿದ್ದಾರೆ.