ಬೆಂಗಳೂರು: ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಕೇವಲ ಟಿಕೆಟ್ ಗಿಟ್ಟಿಸುವುದಕ್ಕಾಗಿ ಸಂವಿಧಾನ ಬದಲಿಸುತ್ತೇವೆ ಎಂದು ಹೇಳಿಲ್ಲ. ಬದಲಿಗೆ ಅಂಬೇಡ್ಕರ್ ಮತ್ತು ಗಾಂಧಿ ಬಗೆಗಿನ ದ್ವೇಷ ಆರ್‌ಎಸ್‌ಎಸ್ ವ್ಯಕ್ತಿಗಳ ರಕ್ತದಲ್ಲಿಯೇ ಅಂತರ್ಗತವಾಗಿದೆ ಎಂದು ಚಿಂತಕ ಸುಧೀರ್ ಕುಮಾರ್ ಮುರೋಳಿ ಹೇಳಿದರು.
ನಗರದ ಫ್ರೀಡಂ ಪಾರ್ಕ್‌ನಲ್ಲಿ ಜಾಗೃತ ಕರ್ನಾಟಕ ಸಂಘಟನೆ ಹಮ್ಮಿಕೊಂಡಿದ್ದ ಕರ್ನಾಟಕ ಪಣ – ನಾಡ ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆರಂಭದಲ್ಲಿ ನಾವೆಲ್ಲರೂ ಆರ್‌ಎಸ್‌ಎಸ್‌ನ ಕಾಲಾಳುಗಳಾಗಿದ್ದೆವು. ಮೆದುಳಿನ ಭಾಗವಾಗಿ ಎಂ.ಜಿ ಹೆಗ್ಡೆಯವರು, ಲಕ್ಷ್ಮೀಶ ಗಬ್ಬಲಡ್ಕ ಕೆಲಸ ಮಾಡಿದರು. ಆದರೆ ಆರ್‌ಎಸ್‌ಎಸ್ ನಮ್ಮ ನೆಲದ ಸಂಸ್ಕೃತಿಯನ್ನು ಬಿಂಬಿಸುವುದಿಲ್ಲ. ನಮ್ಮ ಧರ್ಮದ ವಕ್ತಾರರು, ಧರ್ಮ ರಕ್ಷಕರು ಅವರಲ್ಲ ಎಂಬುದು ತಿಳಿದು ಅದರಿಂದ ಹೊರಬಂದೆವು ಎಂದರು.
ನಾವು ಭಾರತೀಯರು ಪ್ರಪಂಚದ ಎಲ್ಲರನ್ನೂ ಸ್ವೀಕರಿಸಿದ್ದೇವೆ. ಇಲ್ಲಿನ ಶ್ರಮಿಕರು, ಮಹಿಳೆಯರು, ರೈತರು ನಮ್ಮ ಪಾಲಿನ ಭಾರತಾಂಭೆ ಆಗಿದ್ದಾರೆ. ಇವರು ಯಾರೂ ಆರ್‌ಎಸ್‌ಎಸ್‌ನವರಿಗೆ ಬೇಕಿಲ್ಲ. ಕೇವಲ ಭಾರತಾಂಬೆಯ ಫೋಟೊ ತೋರಿಸುವುದು ಮಾತ್ರ ಆರ್‌ಎಸ್‌ಎಸ್‌ನ ದೇಶಭಕ್ತಿ ಎಂದು ಟೀಕಿಸಿದರು.
ಏನಾದರೂ ಅನ್ಯಾಯ ನಡೆದರೆ ನಾವು ಅಯ್ಯೋ ರಾಮನೇ, ಅಯ್ಯೋ ಶಿವನೆ ಎಂದು ಹೇಳುತ್ತೇವೆ. ಇದು ನಮ್ಮ ಧರ್ಮ. ಆದರೆ ಇನ್ನೊಬ್ಬರ ವಿರುದ್ಧ ದ್ವೇಷ ಸಾಧಿಸಲು ಘೋಷಣೆ ಕೂಗಿಸಲು ಮಾತ್ರ ಆರ್‌ಎಸ್‌ಎಸ್ ರಾಮನ ಹೆಸರು ಬಳಸಿಕೊಳ್ಳುತ್ತಿದೆ ಎಂದು ಕಿಡಿಕಾರಿದರು.
ಆರ್‌ಎಸ್‌ಎಸ್ ಹುಟ್ಟಿ ಕೇವಲ 99 ವರ್ಷ ಆಗಿದೆ. ಆದರೆ ನಮ್ಮ ಕರ್ನಾಟಕಕ್ಕೆ ಹಲವು ಶತಮಾನಗಳ ಇತಿಹಾಸವಿದೆ.ಈ ಆರ್‌ಎಸ್‌ಎಸ್‌ನ ಇಡೀ ವಿಚಾರಧಾರೆಗೆ ನಮ್ಮ ಕರ್ನಾಟಕ ಹಿಂದಿನಿಂದಲೂ ಮುಖಾಮುಖಿಯಾಗಿದೆ.ಸಾವಿರಾರು ವರ್ಷಗಳಿಂದ ಮನುಷ್ಯತ್ವವೇ ಮುಖ್ಯ ಎಂದು ಕನ್ನಡ ಪರಂಪರೆ ಹೇಳಿದೆ. ಕನ್ನಡದ ಪಂಪ ಮನುಷ್ಯ ಜಾತಿ ತಾನೋಂದೆ ವಲಂ ಎಂದರು. ಕಲಬೇಡ, ಕೊಲಬೇಡ ಎಂದು ಬಸವಣ್ಣ ಹೇಳಿದರು. ಅಂಬೇಡ್ಕರ್ ಸಂವಿಧಾನ, ಕನಕದಾಸರ ತತ್ವಗಳು ಈ ಆರ್‌ಎಸ್‌ಎಸ್ ಸಿದ್ದಾಂತಕ್ಕೆ ಸಂಪೂರ್ಣ ತದ್ವಿರುದ್ದವಾಗಿರುವುದನ್ನು ಗಮನಿಸಬೇಕು ಎಂದರು.
ಭಾರತದ ಮಣ್ಣಿನ ಮಗ ಅಂಬೇಡ್ಕರ್ ಕೊಟ್ಟ ಸಂವಿಧಾನ ನಮಗೆ ದಾರಿದೀಪವಾಗಿದೆ. ಕನ್ನಡದ ನೆಲ ಅಂಬೇಡ್ಕರ್ ಮತ್ತು ಗಾಂಧಿಯನ್ನು ಸ್ವೀಕಾರ ಮಾಡಿಕೊಂಡಿದೆ. ಆದರೆ ಆರ್‌ಎಸ್‌ಎಸ್‌ನವರಿಗೆ ಅಂಬೆಡ್ಕರ್, ಗಾಂಧಿ ಮೇಲೆ ದ್ವೇಷ ಇದೆ. ಅವರು ಪಠ್ಯದಲ್ಲಿ ಕುವೆಂಪು ಅವರನ್ನು ತಿರುಚಿ ಅಪಮಾನ ಮಾಡಿದವರು. ಏಕೆಂದರೆ ಕನ್ನಡದ ಮಣ್ನಿನ ಮಗ ಕುವೆಂಪು ಅವರಿಗೆ ಬೇಡ ಎಂದರು.
ಏಕ ಅನ್ನುವುದೇ ಅವಿವೇಕ, ಅದು ವಿದೇಶಿ ಸಂಸ್ಕೃತಿಯಾಗಿದೆ. ಭಾರತ ಅನೇಕವಾದುದು.. ಅನೇಕವಾದುದ್ದನ್ನು ವಿರೋಧ ಮಾಡುವುದೇ ಆರ್‌ಎಸ್‌ಎಸ್ ತಂತ್ರ. ಆದರೆ ವಿವಿಧತೆಯಲ್ಲಿ ಏಕತೆ – ಭಾರತದ ರಾಷ್ಟ್ರಧ್ವಜ- ಕನ್ನಡ ಧ್ವಜ ನಮ್ಮ ಅಸ್ಮಿತೆ ಎಂದರು.
ವಿಶಾಲ ಹಿಂದೂ ಧರ್ಮವನ್ನು ಕಟ್ಟುತ್ತೇವೆ. ವಿಶ್ವವ್ಯಾಪಕವಾದುದ್ದನ್ನು ಕಟ್ಟುತ್ತೇವೆ ಎನ್ನುವ ನೀವು ಹೆಡಗೇವಾರ್, ಗೋಳ್ವಾಕರ್, ಸಾವರ್ಕರ್‌ರನ್ನು ಆರಾಧಿಸುತ್ತೀರಿ. ನಿಜವಾದ ಆಧ್ಯಾತ್ಮ ನಾಯಕರಾದ ರಾಮಕೃಷ್ಣ ಪರಮಹಂಸ, ವಿವೇಕಾನಂದ, ಕುವೆಂಪು ರವರನ್ನು ವಿರೋಧಿಸುತ್ತೀರಿ ಎಂದು ಕಿಡಿಕಾರಿದರು.
ಆಧ್ಯಾತ್ಮಿಕ ಅರಿವು ಇದ್ದವರು ಮಾತ್ರ ಆರ್‌ಎಸ್‌ಎಸ್‌ನಿಂದ ಹೊರಬರಲು ಸಾಧ್ಯ – ನಿಕೇತ್ ರಾಜ್ ಮೌರ್ಯ
ಆಧ್ಯಾತ್ಮಿಕ ಅರಿವು ಇದ್ದವರು ಮಾತ್ರ ಆರ್‌ಎಸ್‌ಎಸ್‌ನಿಂದ ಹೊರಬರಲು ಸಾಧ್ಯ. ನಾವು ಉಪನಿಷತ್ತುಗಳ ವಿರೋಧಿಗಳಲ್ಲ, ದಾಸರು, ಶರಣರು ಸೂಫಿಗಳು ಧರ್ಮವನ್ನು ಅರಿತಿದ್ದರು. ನಾನು ನೀನು ಬೇರೆಯಲ್ಲ, ಒಂದೇ ಎಂಬ ಅರಿವು ಆಳವಾಗಿ ಯಾರಿಗೂ ಮೂಡುತ್ತೋ ಅವರು ಮಾತ್ರ ಧರ್ಮ ಅರ್ಥವಾಗುತ್ತದೆ. ಇದು ಆರ್‌ಎಸ್‌ಎಸ್‌ನವರಿಗೆ ಸಾಧ್ಯವಿಲ್ಲ ಎಂದು ಯುವ ವಾಗ್ಮಿ ನಿಕೇತ್ ರಾಜ್ ಮೌರ್ಯ ಹೇಳಿದರು.
ಈ ಸಭೆಯಲ್ಲಿ ಭಾರಿಸಿದ ಗಂಟೆ ನನ್ನದೇ ಸರಿ, ಬೇರೆಯದೆಲ್ಲವೂ ತಪ್ಪು ಎನ್ನುವ ಅಲ್ಪಮತಿಗಳಿಗೆ ಸಾವಿನ ಕರೆಗಂಟೆಯಾಗಬೇಕು ಎಂದು ಚಿಕಾಗೋ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಸಾರಿದರು. ಭಾರತ ದೇಶದ ಆಧ್ಯಾತ್ಮ ಪ್ರತಿನಿಧಿಯಾಗಿದ್ದ ಅವರು ಅಲ್ಲಿ ನೆರೆದಿದ್ದ ವಿಭಿನ್ನ ಸಂಸ್ಕೃತಿಯ ಜನರನ್ನು ಅವರನ್ನು ಸಹೋದರ, ಸಹೋದರಿಯರೆ ಎಂದು ಸಂಭೋದಿಸಿದರು. ಅಂತಹ ವಿವೇಕಾನಂದರ ವಿಚಾರಗಳನ್ನು ಈ ಆರ್‌ಎಸ್‌ಎಸ್ ಮಾತನಾಡುವುದಿಲ್ಲ ಎಂದರು.
ವಿವೇಕಾನಂದರು ಸನ್ಯಾಸ್ತತ್ವ ಸ್ವೀಕರಿಸಿದ್ದು ಕ್ರಿಸ್ತ ಹುಟ್ಟಿದ ದಿನ. ಶ್ರೀರಾಮಕೃಷ್ಣ ಪರಮಹಂಸರು ಜಗತ್ತಿನ ಎಲ್ಲಾ ಧರ್ಮಗಳ ಮೂಲಕವೂ ಮೋಕ್ಷ ಸಾಧಿಸಬಹುದು ಎಂದು ಸಾರಿದರು. ಜಿತೊ ಮತ್ ತತೋ ಪಂತ್ ಎಲ್ಲಾ ಮಾರ್ಗಗಳು ಒಂದೇ ಗುರಿಗೆ ಕರೆದುಕೊಂಡು ಹೋಗುತ್ತಿವೆ. ಒಟ್ಟಾಗಿ ಬಾಳುವುದನ್ನು ಕಲಿಸಿ ಎಂದರು. ಆದರೆ ಅದನ್ನು ಆರ್‌ಎಸ್‌ಎಸ್ ಹೇಳುವುದಿಲ್ಲ ಎಂದರು.
ಹೊಟ್ಟೆ ಕಿಚ್ಚಿಗೆ ತಣ್ಣಿರ್ ಸುರಿಸು, ಒಟ್ಟಿಗೆ ಬಾಳುವ ತೆರದಲ್ಲಿ ಹರಸು ಎಂದು ಕುವೆಂಪು ಹೇಳಿದರು. ನಮ್ಮನ್ನು ಹೊಡಯುವ ಪ್ರಯತ್ನವೇ ಅಧರ್ಮ. ನಮ್ಮನ್ನು ಜೋಡಿಸುವುದೆ ಧರ್ಮ. ನಮ್ಮೊಳಗೆ ಇರುವ ಕೆಡಕನ್ನು ಕಳೆದುಕೊಳ್ಳಲು ಇರುವ ಆದರ್ಶವೇ ರಾಮ. ಗಾಂಧಿಗಿಂತ ದೊಡ್ಡ ಹಿಂದೂ ಇರಲು ಸಾಧ್ಯವೇ? ಅವರನ್ನೇ ಹಿಂದೂ ವಿರೋಧಿ ಎಂದು ಈ ಆರ್‌ಎಸ್‌ಎಸ್‌ನವರು ಕರೆದರಲ್ಲ ಎಂದು ಪ್ರಶ್ನಿಸಿದರು.
ಪ್ರಶ್ನೆ ಮಾಡದೇ ಹೋದರೆ ಧಮಕ್ಕೆ ಅರ್ಥ ವಿದೆಯೇ? ದ್ವೇಷ ಮಾಡುವುದು ಧರ್ಮವಲ್ಲ, ದ್ವೇಷ ಕಲಿಸುವುದು ಧಾರ್ಮಿಕ ಸಂಘಟನೆಯಲ್ಲ. ಹಾಗಾಗಿ ಗಾಂಧಿ, ಕುವೆಂಪು, ಕನಕದಾಸ, ದಾರ್ಶನಿಕರು, ಸೂಫಿಗಳು, ನಾರಾಯಣ ಗುರುಗಳು ಮಾತಾಡಿದ್ದು ನಮ್ಮ ಧರ್ಮ, ಆರ್‌ಎಸ್‌ಎಸ್‌ನದು ಅಧರ್ಮ ಎಂದರು.
ಆರ್‌ಎಸ್‌ಎಸ್ ವೇದ ಮತ್ತು ಉಪನಿಷತ್ತನ್ನು ಹೇಳುವುದಿಲ್ಲ: ಎಂ.ಜಿ ಹೆಗಡೆ
ಆರ್‌ಎಸ್‌ಎಸ್ ವೇದ ಮತ್ತು ಉಪನಿಷತ್ತನ್ನು ಹೇಳುವುದಿಲ್ಲ. ಏಕೆಂದರೆ ಅದರಲ್ಲಿ ಬರೆದಿರುವುದು ಆರ್‌ಎಸ್‌ಎಸ್ ಸಿದ್ದಾಂತಕ್ಕೆ ವಿರುದ್ಧವಾಗಿದೆ ಎಂದು ಎಂ.ಜಿ ಹೆಗಡೆ ಹೇಳಿದರು.
ಯಾರೂ ಕೂಡ ಶ್ರೇಷ್ಟರಲ್ಲ, ಯಾರೂ ಕನಿಷ್ಟರಲ್ಲಿ ಎಂದು ಉಪನಿಷತ್ತು ಹೇಳುತ್ತದೆ. ಇವೆಲ್ಲವನ್ನೂ ಮೂಲೆಗೆ ಸರಿಸಿ, ಬದಿಗೆ ಇಟ್ಟರು. ಉಪನಿಷತ್ತು ಇರುವುದು ಪ್ರಶ್ನೆಗಳ ಆಧಾರದ ಮೇಲೆ. ಯಮನ ಹತ್ತಿರ ಹೋಗಿ ನಚಿಕೇತ ಪ್ರಶ್ನೆ ಕೇಳುತ್ತಾನೆ. ಪ್ರಶ್ನೆ ಕೇಳುವುದರಿಂದಲೇ ಚಿಂತನೆ ಹುಟ್ಟಿದ್ದು. ವೇದಗಳು ಹೇಳುವುದು ಪ್ರಕೃತಿಯ ಆರಾಧನೆ. ಇವು ಯಾವುವು ಆರ್‌ಎಸ್‌ಎಸ್‌ಗೆ ಬೇಕಿಲ್ಲ ಎಂದರು.
ಆರ್‌ಎಸ್‌ಎಸ್‌ನ ಯಾರೂ ಹಿಂದೂ ಧರ್ಮದ ಅಧ್ಯಯನ ಮಾಡುವುದಿಲ್ಲ. ನಮಸ್ತೆ ಸದಾ ವಸ್ತಲೇ ಎಂಬ ಪ್ರಾರ್ಥನೆ ಕೂಡ ಕೇಸರು ಶಾಲು ಹಾಕಿ ಓಡಾಡುವ ಕಾರ್ಯಕರ್ತರಿಗೆ ಬರುವುದಿಲ್ಲ. ರಾಜಕೀಯ ಚಳವಳಿಯಾಗಿ ಅದು ಬಂದಿದೆ ಎಂದರು.
ಹಿಂದೂ ಅಂದರೆ ನಮ್ಮದು ಆರಾಧನಾ ಪದ್ದತಿ. ಹಿಂದುತ್ವ ಎಂದರೆ ವ್ಯಾಪಾರ, ವ್ಯವಹಾರ ಮತ್ತು ಅಧಿಕಾರ ಅಷ್ಟೆ. ಹಿಂದೂ ನಾಯಕರು ಎನ್ನುವವರು ಈಗ ೨೦೦ ಕೋಟಿ ಆಸ್ತಿಯನ್ನು ಹೇಗೆ ಮಾಡಿಕೊಂಡರು ಎಂದು ನನ್ನ ಜೊತೆಗೆ ಚರ್ಚೆಗೆ ಬರುವರೆ? ಎಂದು ಸವಾಲು ಹಾಕಿದರು.
ಸಮಾನವಾಗಿ ಎಲ್ಲರನ್ನು ಒಟ್ಟಿಗೆ ಕೊಂಡ್ಯೆಯುವವರು ಹಿಂದು ಆಗಿರುತ್ತಾರೆ. ಆದರೆ ಬಡ, ಹಿಂದುಳಿದ, ದಲಿತ ಯುವಕರನ್ನು ಮುಂದೆ ತಳ್ಳಿ ಜೈಲು ಪಾಲು ಮಾಡುವವರು ಹಿಂದುತ್ವವಾದಿಗಳು. ಧರ್ಮದ ಸಮಸ್ಯೆ ಇಡೀ ಜಗತ್ತಿಗೆ ಇರಬೇಕು. ಬಡವರಿಗೆ ಮಾತ್ರ ಏಕೆ? ಇವರ ಕುರಿತು ಯುವಕರು ಎಚ್ಚರದಿಂದರಬೇಕು ಎಂದರು.
ಹಿಂದೂ ಅನ್ನುವುದು ಮತ ಅಲ್ಲ. ಜೀವನ ಪ್ರವಾಹವಿದು – ಲಕ್ಷ್ಮೀಶ ಗಬ್ಬಲಡ್ಕ
ನಮ್ಮೊಳಗಿನ ಬೆಂಕಿ ಕಡಿಮೆಯಾಗಿ ತಂಪು ಬಂದ ಕಾರಣ ನಾವು ಆರ್‌ಎಸ್‌ಎಸ್‌ನಿಂದ ಹೊರಗೆ ಬಂದಿದ್ದೇವೆ. ಆರ್‌ಎಸ್‌ಎಸ್‌ನಲ್ಲಿ ಆಟದ ಹೆಸರಿನಲ್ಲಿ, ಹಾಡಿನ, ಚಾರಣ, ಬೆಳದಿಂಗಳ ಊಟ, ಕಥೆ ಹೆಸರಿನಲ್ಲಿ ಒಟ್ಟು ಸೇರಿಸಿ ಒಂದು ಸಿದ್ದಾಂತ ತುಂಬಿಸುವ ಕೆಲಸ ಶುರು ಆಗುತ್ತದೆ. ಯೋಜಿತ ಕಾರ್ಯಪದ್ದತಿ ಇದೆ ಅಲ್ಲಿ. ಪೊಲೀಸ್, ನ್ಯಾಯಾಂಗದವರೆಗೂ ಇದು ಹಬ್ಬಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ವ್ಯವಸ್ಥಿತವಾದ ಕಾರ್ಯಯೋಜನೆ ನಮಗೆ ಬೇಕು. ನಾವು ಭಯ, ಅಸಹನೆ ಹುಟ್ಟಿಸದೇ ಭಾವ ಜಾಗೃತಿಯನ್ನು ಉಂಟು ಮಾಡಬೇಕು ಎಂದು ಅರಿತಿದ್ದೇನೆ. ೧೫ ವರ್ಷದ ಹಿಂದೆ ಶಿರಾದಲ್ಲಿ ನನ್ನ ಭಾಷಣ ಕೇಳಿ ಜನ ಮುಸ್ಲಿಮರ ಅಂಗಡಿಗೆ ಬೆಂಕಿ ಹಾಕಿದರು. ಬೆಂಕಿ ಹಾಕಿದವರಿಗೆ ಚೂರಿ ಹಾಕಿದರು. ಆ ಪಾಪ ನನ್ನ ಮೇಲಿದೆ. ಅದಕ್ಕೆ ಪ್ರಾಯಶ್ಚಿತ ಪಟ್ಟಿಕೊಳ್ಳಲು ನಾನು ಇವತ್ತು ಇಲ್ಲಿಗೆ ಬಂದಿದ್ದೇನೆ ಎಂದರು.
ಭಾರತದ ಭವ್ಯ ಪರಂಪರೆಯನ್ನು ಕೇವಲ ಒಂದು ಮತಕ್ಕೆ ಸೀಮಿತಗೊಳಿಸಿ ಭವಿಷ್ಯದಲ್ಲಿ ಆತಂಕದಿಂದ ಬದುಕುವ ದುಸ್ಥಿತಿಯನ್ನು ಆರ್‌ಎಸ್‌ಎಸ್ ಸೃಷ್ಟಿಸಿದೆ. ಆರ್‌ಎಸ್‌ಎಸ್ ಹಿಂದ್ ಧರ್ಮದ ಪ್ರಾತಿನಿಧಿಕ ಸಂಸ್ಥೆ ಅಲ್ಲ. ಅದನ್ನು ತ್ಯಜಿಸಿ ಜಗತ್ತಿನ ಎಲ್ಲದರಿಂದ ಒಳ್ಳೇಯದನ್ನು ನಾವು ತೆಗೆದುಕೊಳ್ಳೋಣ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಪಣ ಪ್ರತಿಜ್ಞೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ತೊರೆದು ಬಂದ ಎಲ್.ಎನ್ ಮುಕುಂದರಾಜ್, ಹನುಮೇಗೌಡರು ಮಾತನಾಡಿದರು. ಜಾಗೃತ ಕರ್ನಾಟಕ ರಾಜಶೇಖರ್ ಅಕ್ಕಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ.ವಾಸು ಎಚ್.ವಿ, ಹೇಮಾ ವೆಂಕಟ್, ಡಾ.ರಮೇಶ್ ಬೆಲ್ಲಂಕೊಂಡ, ಬಿ.ಸಿ ಬಸವರಾಜುರವರು ಉಪಸ್ಥಿತರಿದ್ದರು.