ಕಾಂಗ್ರೆಸ್ ಪಕ್ಷದಲ್ಲೊಬ್ಬ ಆರ್.ಎಸ್‌.ಎಸ್‌ ಶಾಸಕ

Most read

ಬೆಂಕಿ ಉಗುಳುವ ಸೂರ್ಯನ ಕೆಳಗೆ ಕಾದು ಕರಕಲಾಗಿರುವ, ಹಾಗೂ ಎಲ್ಲಾ ರೀತಿಯ ಅವಕಾಶಗಳಿಂದ ವಂಚಿತರಾದ ಕಲ್ಯಾಣ ಕರ್ನಾಟಕ ಭಾಗದಲ್ಲಿನ ಸಾಮಾಜಿಕ ಕಾರ್ಯಕರ್ತರು ಮತ್ತು ಶಿಕ್ಷಣ ತಜ್ಞರಿಗಲ್ಲದೆ,  ಇಲ್ಲಿನ ಶೈಕ್ಷಣಿಕ ಸಮಸ್ಯೆಗಳು ಮಲೆನಾಡಿನ ಮಳೆಯಲ್ಲಿ ನೆಂದು, ತಂಪು ತಂಗಾಳಿಯಲ್ಲಿ ಮಿಂದ, ಕಟ್ಟು ಕಟ್ಟು ಹಣ ಪಡೆದು ಶಿಕ್ಷಣದ ಕುರಿತು ಸದಾ ವಟವಟ ಅಂತ ಗೊಣಗುವ ಡಾ. ಗುರುರಾಜ ಕರ್ಜಗಿ ಅವರಿಗೆ ಅರ್ಥವಾದೀತೆ?-ವಿಕ್ರಮ್‌ ತೇಜಸ್‌, ಪತ್ರಕರ್ತರು.

ಕಾಂಗ್ರೆಸ್ ಪಕ್ಷವನ್ನು  ದೇಶದಲ್ಲಿಯೇ ಇನ್ನಿಲ್ಲವಾಗಿಸಲು ಹಲವು ತಂತ್ರ ಕುತಂತ್ರಗಳನ್ನು ಹೆಣೆದು ಬಹುತೇಕ ಉತ್ತರ ಭಾರತ ಮತ್ತು ಈಶಾನ್ಯ ರಾಜ್ಯಗಳಲ್ಲಿ ಆ ಪಕ್ಷದ ಅಸ್ತಿತ್ವವನ್ನು ಇಲ್ಲವಾಗಿಸಿದ್ದು, ದೇಶ ಭಕ್ತಿಯ ಸ್ವಯಂ ಸರ್ಟಿಫಿಕೇಟ್ ಹಣೆಗೆ ಅಂಟಿಸಿಕೊಂಡು ತಿರುಗುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಅದರ ರಾಜಕೀಯ ಅಧಿಕಾರದ ಅಂಗ ಸಂಸ್ಥೆ ಭಾರತೀಯ ಜನತಾ ಪಕ್ಷ ಹಾಗೂ ಇತರೆ ಕೇಸರಿ ತುಕಡಿಗಳು (ಸಂಘಟನೆಗಳು) ಎನ್ನುವುದು ಕಣ್ಣೆದುರಿನ ಸತ್ಯ. 

ಆದರೆ, ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದುಕೊಂಡು ಅಧಿಕಾರ ಪಡೆದು ಆರ್.ಎಸ್.ಎಸ್‌ಗಾಗಿ ಕೆಲಸ ಮಾಡುತ್ತಿರುವ ಅದೇ ಮನಸ್ಥಿತಿಯ ಶಾಸಕರಿರುವುದು ಆ ಪಕ್ಷದ ದುರಂತವೇ ಸರಿ. ಒಂದು ಕಡೆ ರಾಜ್ಯ‌ ಸಭೆಯ ವಿರೋಧ ಪಕ್ಷದ ನಾಯಕರು ಹಾಗೂ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಡಾ ಮಲ್ಲಿಕಾರ್ಜುನ ಖರ್ಗೆ ಅವರು ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಆರ್.ಎಸ್.ಎಸ್. ಅನ್ನು ತುಂಬಾ ಕಟುವಾಗಿ ಟೀಕಿಸುವುದರ ಜೊತೆಗೆ ಆ ಸಂಘದ ವಿರುದ್ಧ ಸೈದ್ದಾಂತಿಕ ಸಮರವನ್ನೇ ಸಾರಿದ್ದಾರೆ. ಆದರೆ, ಇನ್ನೊಂದು ಕಡೆ ಅದೇ ಪಕ್ಷದ ಶಾಸಕರು ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಡಾ. ಅಜಯ ಸಿಂಗ್ ಅವರು ಆರ್.ಎಸ್.ಎಸ್. ಹಿನ್ನಲೆ ಇರುವ ಉದ್ಯಮಿ (ಶಿಕ್ಷಣವನ್ನು ಉದ್ಯಮ ಮಾಡಿಕೊಂಡ) ಡಾ. ಗುರುರಾಜ ಕರ್ಜಗಿ ಅವರನ್ನು ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಪ್ರಗತಿಗಾಗಿ ಕಟ್ಟಿದ “ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಗೆ” ಅಧ್ಯಕ್ಷರನ್ನಾಗಿ ನೇಮಿಸಿರುವುದು ಹಲವು ಸಂಶಯಗಳಿಗೆ ಹಾಗೂ ಹಲವರ ವಿರೋಧಕ್ಕೆ ಕಾರಣವಾಗಿದೆ.

ರಾಹುಲ್‌ ಮತ್ತು ಖರ್ಗೆ

ಗುರುರಾಜ ಕರ್ಜಗಿ ಅವರು, ಅತ್ಯುತ್ತಮ ನೀತಿ ಕಥೆಗಳನ್ನು ಬಳಸಿಕೊಂಡು ರಂಗು ರಂಗಾಗಿ  ಮಾತನಾಡುವ ಮೂಲಕ ಪ್ರೇಕ್ಷಕರನ್ನು ಭಾವನಾತ್ಮಕವಾಗಿ ಹಿಡಿದಿಟ್ಟುಕೊಳ್ಳುವ ಚಾಣಾಕ್ಷ ವ್ಯಕ್ತಿ. ಆರ್.ಎಸ್.ಎಸ್ ನೊಂದಿಗೆ ನಿಕಟ ಸಂಪರ್ಕ ಹೊಂದಿರುವ ಇವರು ಅರಿವಿಲ್ಲದಂಗೆ ಮಕ್ಕಳ ಮೆದುಳಿನಲ್ಲಿ ಆರ್.ಎಸ್.ಎಸ್ ಸಿದ್ಧಾಂತವನ್ನು ತುರುಕುತ್ತಾರೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಹಲವು ಕಡೆ ವೈದಿಕ ಶಾಲೆಗಳನ್ನು ತೆಗೆದಿದ್ದಾರೆ. ನಿರಂತರ ಕೋಮು ದ್ವೇಷವನ್ನೇ ಬಿತ್ತುವ ವಿಕ್ರಮ ಟಿವಿಯೊಂದಿಗೆ ಗುರುತಿಸಿಕೊಂಡ ಇವರು ಅಲ್ಲಿ ಪ್ರವಚನ ನೀಡುತ್ತಾರೆ. ಇಂಥವರು ಆಧುನಿಕ ಶಿಕ್ಷಣ ಅಥವಾ ಬಹುತೇಕ ಬಡವರ ಮಕ್ಕಳು ಓದುವ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ವೈಜ್ಞಾನಿಕ ಸ್ಪರ್ಶ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೆ ಎಂದು ನಂಬಿದರೆ ಇದು ಸ್ವಯಂ ಆತ್ಮ ವಂಚನೆ ಮಾಡಿಕೊಂಡಂತೆಯೇ ಸರಿ. 

ಕಲ್ಯಾಣ ಕರ್ನಾಟಕದ ಬಹುತೇಕ ಗ್ರಾಮಗಳಲ್ಲಿ, ಮಳೆ ಬಂದರೆ ಕೆರೆಯಾಗುವ ಶಾಲೆಗಳು, ಕಿಟಕಿ ಬಾಗಿಲುಗಳಿಲ್ಲದ ಕೋಣೆಗಳು, ಕೂರಲು ಬೆಂಚುಗಳಿಲ್ಲ, ಸರಿಯಾದ ಬೋರ್ಡ್‌ಗಳಿಲ್ಲ ಇಂತಹ ಪರಿಸ್ಥಿತಿಯಲ್ಲಿ  ಒಬ್ಬ ಶಿಕ್ಷಕ 10 ವಿದ್ಯಾರ್ಥಿಗಳನ್ನು ದತ್ತು ಪಡೆಯಬೇಕು ಎಂಬ ಹೇಳಿಕೆಯನ್ನು ಡಾ. ಗುರುರಾಜ ಕರ್ಜಗಿಯವರು ನೀಡುತ್ತಾರೆ. ಆದರೆ, ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮತ್ತು ಗಣಿತ ಶಿಕ್ಷಕರೇ ಇಲ್ಲ ಎಂಬ ಕನಿಷ್ಠ ಅರಿವು ಅವರಿಗೆ ಇರಬೇಕಲ್ಲವೇ? ಕೈ ತುಂಬಾ ಸಂಬಳವೋ ಅಥವಾ ಗೌರವ ಧನವೋ ಮತ್ತದೇನೋ… ಜೊತೆಗೆ ಕಾರು, ಕಛೇರಿ ಸೇರಿದಂತೆ ಐಷಾರಾಮಿ ಸೌಲಭ್ಯ ಕೊಟ್ಟ ಸರಕಾರಕ್ಕೆ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಿ ಎಂದು ಸಲಹೆ ಮಾಡುವ ಧೈರ್ಯ ಅವರಿಗಿದೆಯೇ?

ಹಸಿವಿನ ಬೆಲೆ ಹಾಗೂ ಊಟದ ಸ್ವಾದ ಹಸಿದವರಿಗಲ್ಲದೆ, ಸದಾ ಹಸಿವಿನ ಚೀಲವನ್ನು ತುಂಬಿರುವ ಭಟ್ಟಂಗಿಗಳಿಂದ ತಿಳಿಯಲು ಸಾಧ್ಯವಾದೀತೆ? ಬೆಂಕಿ ಉಗುಳುವ ಸೂರ್ಯನ ಕೆಳಗೆ ಕಾದು ಕರಕಲಾಗಿರುವ, ಹಾಗೂ ಎಲ್ಲಾ ರೀತಿಯ ಅವಕಾಶಗಳಿಂದ ವಂಚಿತರಾದ ಕಲ್ಯಾಣ ಕರ್ನಾಟಕ ಭಾಗದಲ್ಲಿನ ಸಾಮಾಜಿಕ ಕಾರ್ಯಕರ್ತರು ಮತ್ತು ಶಿಕ್ಷಣ ತಜ್ಞರಿಗಲ್ಲದೆ,  ಇಲ್ಲಿನ ಶೈಕ್ಷಣಿಕ ಸಮಸ್ಯೆಗಳು ಮಲೆನಾಡಿನ ಮಳೆಯಲ್ಲಿ ನೆಂದು, ತಂಪು ತಂಗಾಳಿಯಲ್ಲಿ ಮಿಂದ, ಕಟ್ಟು ಕಟ್ಟು ಹಣ ಪಡೆದು ಶಿಕ್ಷಣದ ಕುರಿತು ಸದಾ ವಟವಟ ಅಂತ ಗೊಣಗುವ ಡಾ. ಗುರುರಾಜ ಕರ್ಜಗಿ ಅವರಿಗೆ ಅರ್ಥವಾದೀತೆ?

ಡಾ. ಗುರುರಾಜ ಕರ್ಜಗಿ

ಡಾ. ಗುರುರಾಜ ಕರ್ಜಗಿ ಎನ್ನುವ ವ್ಯಕ್ತಿ  ಸ್ವಯಂ ಘೋಷಿತ ಶಿಕ್ಷಣ ತಜ್ಞರಾಗಿದ್ದು ಪಕ್ಕಾ ಉದ್ಯಮಿ ಕೂಡ. ಅವರು ವಿ.ವಿ.ಎಸ್. ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ೧೬ ವರ್ಷಗಳ ಕಾಲ ಪ್ರಾಂಶುಪಾಲರಾಗಿ, ಜೈನ್ ಅಂತರರಾಷ್ಟ್ರೀಯ ವಸತಿ ಶಾಲೆಯ ಸ್ಥಾಪಕ ಪ್ರಾಂಶುಪಾಲರು ಮತ್ತು ನಿರ್ದೇಶಕರಾಗಿ, ಅಂತರರಾಷ್ಟ್ರೀಯ ಸೃಜನಶೀಲ ಅಧ್ಯಾಪನ ಕೇಂದ್ರದ (IACT) ಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಈಗ ಸೃಜನಶೀಲ ಅಧ್ಯಾಪನ ಕೇಂದ್ರದ (IACT) ಅಧ್ಯಕ್ಷರಾಗಿದ್ದಾರೆ. ಶಿಕ್ಷಣವನ್ನು ವ್ಯಾಪಾರವಾಗಿ ಮಾಡಿಕೊಂಡಿರುವ ಇವರು, ದುಡ್ಡು ಮಾಡುವ ಉದ್ದೇಶದಿಂದಲೇ ದೊಡ್ಡ ದೊಡ್ಡ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದ್ದಾರೆ. ಹಾಗಾಗಿ, ಇವರು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸುತ್ತಾರೆ ಎಂದು ನಂಬಬಹುದೆ? ತಮ್ಮ ಸ್ವಂತ ಉದ್ಯಮವನ್ನು ತಾವೇ ನಷ್ಟಕ್ಕೆ ದೂಡಬಹುದೆ? ಇದು ಎಷ್ಟರ ಮಟ್ಟಿಗೆ ನಂಬಲು ಸಾಧ್ಯ? ಹೀಗೆ ಹಲವು ಪ್ರಶ್ನೆಗಳು ಮೂಡುವುದು ಸಹಜ ಮತ್ತು ಇದು ಸತ್ಯಕ್ಕೆ ತುಂಬಾ ಹತ್ತಿರವಾದ ಮಾತಲ್ಲವೆ?

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಡಾ. ಅಜಯ ಸಿಂಗ್ ಅವರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಯಾವೊಬ್ಬ ಶಿಕ್ಷಣ ತಜ್ಞರೇ ಇಲ್ಲವೆಂದು ನಿರ್ಧರಿಸಿದಂತಿದೆ. ಅಥವಾ ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದವರಿಂದಲೇ ಶೈಕ್ಷಣಿಕ ಕ್ಷೇತ್ರದ ಸುಧಾರಣೆ ಸಾಧ್ಯ ಎಂಬ ಭ್ರಮೆಯಲ್ಲಿದ್ದಾರೆ ಎನಿಸುತ್ತದೆ. ಹಾಗೂ ದಲಿತರಲ್ಲಿ ಯಾರೊಬ್ಬ ಶಿಕ್ಷಣ ತಜ್ಞರು ಇಲ್ಲ, ಶಿಕ್ಷಣಕ್ಕೂ ದಲಿತರಿಗೂ ಸಂಬಂಧವೇ ಇಲ್ಲ ಎಂದು ನಿರ್ಧರಿಸಿಯೇ ಯಾವೊಬ್ಬ ದಲಿತನನ್ನೂ ಆ ಸಮಿತಿಯ ಒಳಕ್ಕೆ ಬಿಟ್ಟುಕೊಂಡಿಲ್ಲ. ಚುನಾವಣೆ ಬಂದಾಗ ಮಾತ್ರ ಎರಡೂ ಕೈ ಮುಗಿದುಕೊಂಡು, ದಲಿತರ ಪಾದಕ್ಕೆ ಹಣೆ ಮಣಿದು ಮತ ಯಾಚಿಸುತ್ತಾರೆ. ಆದರೆ, ಅವಕಾಶಗಳನ್ನು ಕೊಡುವ ವಿಷಯ ಬಂದಾಗ ಸನಾತನ ಸಂಪ್ರದಾಯದಲ್ಲಿ ನಂಬಿಕೆ ಇಟ್ಟವರನ್ನು ಮತ್ತು ಮನುಷ್ಯ ವಿರೋಧಿ, ಸಮಾನತೆ ವಿರೋಧಿ, ಸಂವಿಧಾನ ವಿರೋಧಿ ಅಥವಾ ಪರೋಕ್ಷವಾಗಿ ಆರ್.ಎಸ್.ಎಸ್‌ ನ್ನು ಬೆಂಬಲಿಸುವ ಕುಳಗಳನ್ನು ಆಯ್ಕೆ ಮಾಡುವುದು ರಾಜಕಾರಣಿಗಳ ಹಳೆಯ ಚಾಳಿ. ಹಾಗೂ ಇದು ದಲಿತ ಸಮುದಾಯಕ್ಕೆ ಮಾಡಿರುವ ಮಹಾ ವಂಚನೆಯೂ ಹೌದು.

ಡಾ. ಅಜಯ ಸಿಂಗ್

ಹಿಂದಿನ ಬಿಜೆಪಿ ಸರ್ಕಾರ ಆರ್.ಎಸ್.ಎಸ್ ಪರಮನಿಷ್ಠ ಬಸವರಾಜ ಪಾಟೀಲ ಸೇಡಂ ಅವರಿಗಾಗಿಯೇ ಕಲ್ಯಾಣ ಕರ್ನಾಟಕ ಕೃಷಿ ಸಂಸ್ಕೃತಿಕ ಸಂಘ ಹುಟ್ಟುಹಾಕಿ, ಸಂಪುಟ ದರ್ಜೆಯ ಸ್ಥಾನಮಾನ ಕೊಟ್ಟು 500 ಕೋಟಿ ಅನುದಾನ ಮೀಸಲಿಟ್ಟಿದ್ದರು. ಜೊತೆಗೆ ಆರ್.ಎಸ್.ಎಸ್ ಮತ್ತು ಬಿಜೆಪಿ ಕಾರ್ಯಕರ್ತರಿಗೆ ಪತಂಜಲಿಯಿಂದ ಯೋಗ ತರಬೇತಿ ಸರ್ಟಿಫಿಕೇಟ್ ಕೊಡಿಸಿ ಯೋಗ ಶಿಕ್ಷಕ ಅಂತ ನೇಮಿಸಿ ಗೌರವ ಧನ ನೀಡುವ ಮೂಲಕ ಸರ್ಕಾರದ ಹಣ ದುರುಪಯೋಗ ಮಾಡಿಕೊಂಡಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಅದೇ ರೀತಿ ಈ ಯೋಜನೆಯ ನೆಪದಲ್ಲಿ ಆರ್.ಎಸ್.ಎಸ್. ಕಾರ್ಯಕರ್ತರನ್ನು ಶಿಕ್ಷಕರನ್ನಾಗಿ ನೇಮಿಸುತ್ತಾರೋ, ಅಥವಾ ಡಾ. ಗುರುರಾಜ ಕಾರ್ಜಗಿ ಅವರ ಸಂಸ್ಥೆಯ  ಶಿಕ್ಷಕರನ್ನು ಸರ್ಕಾರಿ ಶಾಲೆಗಳಿಗೆ ನೇಮಿಸಿ ಮನುಸ್ಮೃತಿ, ಭಗವದ್ಗೀತೆ ಹಾಗೂ ವರ್ಣ ವ್ಯವಸ್ಥೆಯ ಪಾಠ ಮಾಡುತ್ತಾರೋ ಹೇಗೊ ತಿಳಿಯದಾಗಿದೆ. ಈ ಸಂಶಯ ಮತ್ತು ಆತಂಕ ಬಹುತೇಕರನ್ನು ಕಾಡತೊಡಗಿದೆ.

ಈ ವಿಷಯದ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಸರ್ಕಾರ ಗಂಭೀರ ಆಲೋಚನೆ ಮಾಡಬೇಕು. ಈಗಾಗಲೇ ಕಲ್ಯಾಣ ಕರ್ನಾಟಕದ ಹಲವು ಸಾಮಾಜಿಕ ಕಾರ್ಯಕರ್ತರು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮದ ಮೂಲಕ ವಿರೋಧ ವ್ಯಕ್ತಪಡಿಸಿದ್ದಾರೆ ಹಾಗೂ ಸರಕಾರದ ನೀತಿಯನ್ನು ಕಟುವಾಗಿ ಟೀಕಿಸಿದ್ದಾರೆ. ಹಾಗಾಗಿ, ಜನ ಬೀದಿಗಿಳಿಯುವ ಮುನ್ನ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಅಜಯ ಸಿಂಗ್ ಅವರು ಎಚ್ಚೆತ್ತುಕೊಳ್ಳಬೇಕು. ತಮ್ಮ ನಿರ್ಧಾರದಿಂದ ಹಿಂದೆ ಸರಿದು ಡಾ.ಗುರುರಾಜ ಕರ್ಜಗಿ ಅವರನ್ನು ಕೈಬಿಟ್ಟು ಹೊಸ ಅಧ್ಯಕ್ಷರನ್ನು ಸಮಿತಿಗೆ ನೇಮಕ ಮಾಡಬೇಕು. ಇಂತಹ ಸಮಿತಿ ರಚಿಸಬೇಕಾದರೆ, ಈ ಭಾಗದ ಶಿಕ್ಷಣ ತಜ್ಞರ, ಶಿಕ್ಷಣ ಪ್ರೇಮಿಗಳ ಮತ್ತು ಸಾಮಾಜಿಕ ಕಾರ್ಯಕರ್ತರ ಹಾಗೂ ಶಿಕ್ಷಕರ ಅಭಿಪ್ರಾಯವನ್ನು ಸಂಗ್ರಹಿಸಬೇಕು.

ವಿಕ್ರಮ್ ತೇಜಸ್

ಪತ್ರಕರ್ತ ಹಾಗೂ ಸಾಮಾಜಿಕ ಕಾರ್ಯಕರ್ತರು

ಇದನ್ನೂ ಓದಿ- ಜಿ ಎನ್‌ ಸಾಯಿಬಾಬಾ‌ ಸಾವು: ಪ್ರಭುತ್ವ ನಡೆಸಿದ ಘನ ಘೋರ ಕ್ರೌರ್ಯ

More articles

Latest article