ಅಸ್ತವ್ಯಸ್ತಗೊಂಡಿರುವ ಅರ್ಥವ್ಯವಸ್ಥೆ

Most read

ಇನ್ನೇನು ನಾಲ್ಕು ತಿಂಗಳು ಕಳೆದರೆ ಮಣಿಪುರ ಅಂತಃಕಲಹದ ಬೆಂಕಿಯಲ್ಲಿ ಉರಿಯಲಾರಂಭಿಸಿ ಎರಡು ವರ್ಷವಾಗುತ್ತದೆ. ಈ ಎರಡು ವರ್ಷದಲ್ಲಿ ನಮ್ಮ ಪ್ರಧಾನಿ ನರೇಂದ್ರ ದಾಮೋದರದಾಸ ಮೋದಿಯವರು ಜಗತ್ತಿನ ಅನೇಕ ದೇಶಗಳನ್ನು ಸುತ್ತಿದರು. ಆದರೆ ಒಂದೇ ಒಂದು ಬಾರಿ, ಹೌದು, ಒಂದೇ ಒಂದು ಬಾರಿಯೂ ಮಣಿಪುರಕ್ಕೆ ಭೇಟಿ ನೀಡಲಿಲ್ಲ.

ಮಸೀದಿಯಲ್ಲಿ ಮಂದಿರ ಹುಡುಕುವ ಕೆಲಸ ಮುಂದುವರಿದೇ ಇದೆ. ಇದೇ ಹುಡುಕಾಟ ತುರೀಯಾವಸ್ಥೆಗೆ ಹೋಗಿ ಉತ್ತರಪ್ರದೇಶದ ಸಂಭಲ್‌ ನಲ್ಲಿ ಐದು ಅಮಾಯಕ ಜೀವಗಳು ಬಲಿಯಾದವು. ದೇಶದ ಪ್ರಧಾನ ಸೇವಕ ಆ ಸಂತ್ರಸ್ತರ ಕಣ್ಣಿರು ಒರಸುವ ಕೆಲಸ ಒತ್ತಟ್ಟಿಗಿರಲಿ ಸಂತಾಪದ ಒಂದು ಮಾತನ್ನೂ ಆಡಲಿಲ್ಲ. ಈ ಹಿಂದಿನ ಸಿಜೆಐ ಡಿ ವೈ ಚಂದ್ರ ಚೂಡರು ಮಾಡಿದ ಒಂದೇ ಒಂದು ತಪ್ಪಿನಿಂದ ದೇಶದಾದ್ಯಂತ ಮಸೀದಿಗಳಲ್ಲಿ ಮಂದಿರ ಹುಡುಕುವ ಕೆಲಸ ಭಯಭೀತಗೊಳಿಸುವ ರೀತಿಯಲ್ಲಿ ವೇಗ ಪಡೆಯಿತು.

ಉತ್ತರಪ್ರದೇಶದ ಸಂಭಲ್‌ ಗಲಭೆ

ಬಿಹಾರದಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಸಂಬಂಧ ನಡೆಸಿದ ಶಾಂತಿಯುತ ಹೋರಾಟವನ್ನು ಪೊಲೀಸ್‌ ಬಲ ಬಳಸಿ ಬರ್ಬರವಾಗಿ ಹತ್ತಿಕ್ಕಲಾಗಿದೆ. ʼಭಾರತವು ಪ್ರಜಾತಂತ್ರದ ತಾಯಿʼ, ʼನಮ್ಮ ಡಿಎನ್‌ ಎ ಯಲ್ಲಿಯೇ ಪ್ರಜಾತಂತ್ರ ಇದೆʼ ಎನ್ನುವ ನರೇಂದ್ರ ಮೋದಿಯವರ ದೇಶದಲ್ಲಿ ಈಗ ಗಾಂಧಿಯ ಹೋರಾಟವನ್ನು ಗೋಡ್ಸೆ ಮಾರ್ಗದ ಮೂಲಕ ಹತ್ತಿಕ್ಕಲಾಗುತ್ತಿದೆ.

ಮಹಾತ್ಮಾ ಗಾಂಧಿ, ನೆಹರೂ ಅವರ ಕೊಡುಗೆಯನ್ನು ನಗಣ್ಯಗೊಳಿಸಿ ಅವರ ನೆನಪನನ್ನು ಅಳಿಸುವ ಕಾರ್ಯಕ್ರಮಕ್ಕೆ ಈಗ ಸಂವಿಧಾನಶಿಲ್ಪಿ ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರನ್ನೂ ಸೇರಿಸಿಕೊಳ್ಳಲಾಗಿದೆ. ʼನೀವು ಅಂಬೇಡ್ಕರ್‌, ಅಂಬೇಡ್ಕರ್‌, ಅಂಬೇಡ್ಕರ್‌ ಎನ್ನುವ ಬದಲಿಗೆ ದೇವರ ಹೆಸರನ್ನು ಹೇಳುತ್ತಿದ್ದರೆ ನಿಮಗೆ ಏಳು ಜನ್ಮಗಳ ಸ್ವರ್ಗ ಪ್ರಾಪ್ತಿಯಾಗುತ್ತಿತ್ತುʼ ಎಂದು ದೇಶದ ಗೃಹ ಮಂತ್ರಿ ಅಮಿತ್‌ ಶಾ ಅವರು ದೇಶದ ಸಂಸತ್‌ ನಲ್ಲಿಯೇ ಯಾವ ಅಳುಕೂ ಇಲ್ಲದೆ ಹೇಳಿಯೂ, ಏನೂ ಆಗೇ ಇಲ್ಲ ಎಂಬಂತೆ ನಿಶ್ಚಿಂತೆಯಿಂದಿದ್ದಾರೆ.

ಮಾಹಿತಿಯಿಂದ ಜನರು ಸಬಲೀಕರಣಗೊಂಡು ಸರಕಾರವನ್ನು ಪ್ರಶ್ನಿಸುವಂತಾಗುತ್ತದೆಯೇ? ಹಾಗಾದರೆ ಮಾಹಿತಿಯ ಹರಿವನ್ನೇ ನಿಲ್ಲಿಸಿಬಿಡಿ. ಪತ್ರಕರ್ತರು ಸರಕಾರ ಇರಿಸುಮುರಿಸು ಅನುಭವಿಸುವಂತಹ ಪ್ರಶ್ನೆ ಕೇಳುತ್ತಾರೆಯೇ? ಹಾಗಾದರೆ ಪತ್ರಿಕಾಗೋಷ್ಠಿಯನ್ನೇ ನಡೆಸಬೇಡಿ. ಈಗಿನ ಸರಕಾರದ ಸಾಧನೆಗಿಂತ ಹಿಂದಿನ ಸರಕಾರದ ಸಾಧನೆ ಉತ್ತಮವಾಗಿತ್ತು ಎಂದು ಸಾಬೀತುಪಡಿಸುವ ಅಂಕಿ ಅಂಶಗಳು ಸರಕಾರಿ ಜಾಲತಾಣಗಳಲ್ಲಿವೆಯೇ? ಹಾಗಾದರೆ ಅದನ್ನು ತಕ್ಷಣ ಅಳಿಸಿಹಾಕಿಬಿಡಿ. ಜಿಡಿಪಿ ಬೆಳವಣಿಗೆ ದರ ಆಶಾದಾಯಕವಾಗಿಲ್ಲವೇ? ಹಾಗಾದರೆ ಅದನ್ನು ಲೆಕ್ಕ ಹಾಕುವ ರೀತಿಯನ್ನೇ ಬದಲಾಯಿಸಿ ಪರಿಸ್ಥಿತಿ ಸುಂದರವಾಗಿ ಕಾಣುವಂತೆ ಮಾಡಿ. ಇದು ಈಗ ಸರಕಾರ ವಿಕಸಿತ ಭಾರತ ಎಂಬ ಸುಳ್ಳನ್ನು ನಂಬಿಸಲು ಆಯ್ದುಕೊಂಡಿರುವ ಮಾರ್ಗ.

ಸತ್ಯವನ್ನು ಎಷ್ಟು ದಿನ ಬಚ್ಚಿಡಬಹುದು?

ಭ್ರಾಮಕ ವಿಷಯಗಳನ್ನು ಮುಂದೆ ತಂದು, ಜನರ ಗಮನ ಬೇರೆಡೆಗೆ ತಿರುಗಿಸುವ ಕುತಂತ್ರಗಳ ಮೂಲಕ ಸತ್ಯವನ್ನು ಬಚ್ಚಿಡಲು ಯತ್ನವನ್ನೇನೋ ಮಾಡಬಹುದು. ಆದರೆ ಎಷ್ಟು ದಿನ ಹೀಗೆ ಮಾಡಬಹುದು? ಒಂದು ದಿನ ಅದು ಬಹಿರಂಗವಾಗಲೇ ಬೇಕಲ್ಲ? ಅಂಥ ಕಾಲ ಈಗ ಬಂದೇ ಬಿಟ್ಟಿದೆ. ಅರ್ಥವ್ಯವಸ್ಥೆಯ ಅಸ್ತವ್ಯಸ್ತತೆಯ ಮೂಲಕ ದಕ್ಕುತ್ತಿರುವ ಅಂತಹ ಚಿಂತಾಜನಕ ಉತ್ತರಗಳ ಕೆಲವು ಉದಾಹರಣೆಗಳು ಹೀಗಿವೆ-

ಗೋಲ್ಡ್‌ ಲೋನ್‌ ಗಳು (ಚಿನ್ನದ ಸಾಲಗಳು) 50 % ಏರಿಕೆಯನ್ನು ಕಂಡಿವೆ. ಗೋಲ್ಡ್‌ ಲೋನ್‌ NPA (Non Perfomorming Assets) ಗಳು 30 % ಜಿಗಿತ ದಾಖಲಿಸಿವೆ!

ಖಾಸಗಿ ಸೇವನೆ ಅಂದರೆ ಕುಟುಂಬಗಳು ಖರೀದಿಸುವ ಸರಕು ಮತ್ತು ಸೇವೆಗಳ ಒಟ್ಟು ಮೌಲ್ಯ ಕಳೆದ ಎಂಟು ತ್ರೈಮಾಸಿಕಗಳಲ್ಲಿ ಏರಿಕೆ ಕಂಡೇ ಇಲ್ಲ. ಕೋವಿಡ್‌ ಪೂರ್ವದ ಹಿಂದಿನ ಮಟ್ಟವನ್ನೂ ಅದು ತಲಪಿಲ್ಲ!

ಕಾರು ಮಾರಾಟ ಬೆಳವಣಿಗೆ ದರ ನಾಲ್ಕು ವರ್ಷಗಳಲ್ಲಿಯೇ ಪಾತಾಳವನ್ನು ತಲಪಿದೆ!

ಕಳೆದ ಐದು ವರ್ಷಗಳಲ್ಲಿ (2019-2023) ಎಂಜೀನಿಯರಿಂಗ್‌, ತಯಾರಿಕೆ, ಸಂಸ್ಕರಣೆ ಮತ್ತು ಮೂಲಸೌಕರ್ಯ ವಲಯಗಳಲ್ಲಿ ವೇತನ ಪ್ರಮಾಣ ಕೇವಲ 0.8 % ಕಂಪೌಂಡ್‌ ವಾರ್ಷಿಕ ದರದಲ್ಲಿ ಏರಿಕೆ ಕಂಡಿದೆ ಅಷ್ಟೇ!

ಕಳೆದ ಎಂಟು ತ್ರೈಮಾಸಿಕಗಳಲ್ಲಿ ಆಹಾರ ಬೆಲೆ ಏರಿಕೆ ದರ ಸರಿ ಸುಮಾರು 7.1 % ರಲ್ಲಿಯೇ ಮುಂದುವರಿದಿದೆ. ಜಿ ಎಸ್‌ ಟಿ ರೂಪದಲ್ಲಿ ಅತ್ಯಾವಶ್ಯಕ ಸಾಮಗ್ರಿಗಳ ಮೇಲೆ ಹೇರಲಾದ ಪರೋಕ್ಷ ತೆರಿಗೆಯು ಕುಟುಂಬಗಳ ಹಣಕಾಸು ಉಳಿತಾಯವನ್ನು ಸಂಪೂರ್ಣ ಕರಗಿಸಿದ್ದು ಅದು ಕಳೆದ 50 ವರ್ಷಗಳಲ್ಲಿಯೇ ಅತ್ಯಂತ ಕಡಿಮೆ ಮಟ್ಟವನ್ನು ತಲಪಿದೆ!

ಕುಟುಂಬಗಳ ಹಣಕಾಸು ಹೊರೆ ಈಗ ಜಿಡಿಪಿಯ 6.4 % ಆಗಿದೆ. ಇದು ದಶಕ ದಶಕಗಳಲ್ಲಿಯೇ ಅತ್ಯಂತ ಅಧಿಕ!

ನೀವೀಗ ಒಟ್ಟು ಸಂಬಳ 1ಲಕ್ಷ ರುಪಾಯಿ ಪಡೆಯುತ್ತಿದ್ದರೆ, ತೆರಿಗೆ ಸಂದಾಯದ ಬಳಿಕ ನಿಮ್ಮ ಬಳಿ ಉಳಿಯುವುದು ಕೇವಲ 95 ಸಾವಿರ (ಮನೆ ಬಾಡಿಗೆ ಭತ್ಯೆ, ಉಳಿತಾಯ, ಸ್ಟಾಂಡರ್ಡ್‌ ಡಿಡಕ್ಷನ್‌ ಎಲ್ಲ ಸರಿಹೊಂದಿಸಿದ ಬಳಿಕ). 2009 ರಲ್ಲಿ ಇದೇ ಸಂಬಳ ಪಡೆಯುತ್ತಿದ್ದಾಗ ತೆರಿಗೆ ಸಂದಾಯದ ಬಳಿಕ ನಿಮ್ಮ ಬಳಿ 99 ಸಾವಿರ ಉಳಿಯುತ್ತಿತ್ತು. ಅಂದರೆ ನೈಜ ಆದಾಯ ಈಗ 4% ಇಳಿಕೆಯಾಗಿದೆ ಎಂದು ಆರ್ಥಿಕ ಪರಿಣತ ಮತ್ತು ಪತ್ರಕರ್ತ ಅನಿಂದ್ಯೋ ಚಕ್ರವರ್ತಿ ಹೇಳುತ್ತಾರೆ.

ಕಳೆದ ಡಿಸೆಂಬರ್‌ ನಲ್ಲಿ ನಿವ್ವಳ ಜಿ ಎಸ್‌ ಟಿ ಬೆಳವಣಿಗೆ 3.3 % ಕ್ಕೆ ಇಳಿದಿದೆ. ಆದಾಯ (ರೆವಿನ್ಯೂ) ಕಡಿಮೆಯಾಗಿದೆ, ಮರುಪಾವತಿ (ರಿಫಂಡ್‌) ಗಳು 45% ಹೆಚ್ಚಿದೆ.

ಡಾಲರ್‌ ಮುಂದೆ ರುಪಾಯಿಯ ದರದ ಇಳಿಕೆ ಸಾರ್ವಕಾಲಿಕ ದಾಖಲೆಯಾಗಿದೆ. 86 ರ ಹತ್ತಿರ ತಲಪಿರುವ ಅದು ಸದ್ಯವೇ 90 ನ್ನು ತಲಪಿದರೆ ಅಚ್ಚರಿಯಿಲ್ಲ ಎನ್ನಲಾಗಿದೆ. ಫಲವಾಗಿ, ವಿದೇಶಿ ಫಂಡ್‌ ಹೊರಹೋಗುತ್ತಿದೆ, ಸಣ್ಣ ಹೂಡಿಕೆದಾರರು ಲಕ್ಷ ಕೋಟಿಗಳಲ್ಲಿ ನಷ್ಟ ಅನುಭವಿಸುತ್ತಿದ್ದಾರೆ.

ಹಣಕಾಸು ವಲಯ ಮಾತ್ರವಲ್ಲ, ಬಹುತೇಕ ಎಲ್ಲ ವಲಯಗಳಲ್ಲಿಯೂ ಪರಿಸ್ಥಿತಿ ಚಿಂತಾಜನಕವಾಗುತ್ತಿದೆ, ಶಾಲಾ ದಾಖಲಾತಿ 2024-25 ರಲ್ಲಿ ಒಂದು ಕೋಟಿಗೂ ಅಧಿಕ ಇಳಿಕೆ ಕಂಡಿದೆ ಎಂದು ಸರಕಾರದ ವರದಿಯೇ ತಿಳಿಸಿದೆ.

ಶೇರು ಮಾರುಕಟ್ಟೆ, ಜಿಡಿಪಿ, ನಾಲ್ಕು ಟ್ರಿಲಿಯನ್‌ ಎಕಾನಮಿ, 2047 ರಲ್ಲಿ ಭಾರತ ಸೂಪರ್‌ ಪವರ್‌, ಸಾವಿರ ವರ್ಷಗಳ ಮುನ್ನೋಟ ಎಂದೆಲ್ಲ ಜನರನ್ನು ನಂಬಿಸಲು ಎಷ್ಟೇ ಯತ್ನಿಸಿದರೂ ನೈಜ ಆರ್ಥಿಕ ಸ್ಥಿತಿ ಹೇಗಿದೆ ಎಂಬುದು ಮಾರುಕಟ್ಟೆಗೆ ಹೋಗಿ ಅಲ್ಲಿ ದಿನಬಳಕೆಯ ವಸ್ತುಗಳನ್ನು ಖರೀದಿಸುವಾಗ ಜನರಿಗೆ ತಿಳಿದೇ ತಿಳಿಯುತ್ತದೆ ಅಲ್ಲವೇ? ಆದ್ದರಿಂದಲೇ, ʼತೋಟ ಸಿಂಗಾರ, ಒಳಗೆ ಗೋಳಿ ಸೊಪ್ಪುʼ ಎಂಬ ಒಂದು ಆಡುಮಾತಿದೆ. ಮೋದಿಯವರ ʼವಿಕಸಿತ ಭಾರತʼದ ವಸ್ತು ಸ್ಥಿತಿಯೂ ಹೀಗೆಯೇ ಆಗಿದೆ.

ಶ್ರೀನಿವಾಸ ಕಾರ್ಕಳ

ಇದನ್ನೂ ಓದಿ- ಅಂಬೇಡ್ಕರ್ ಹೆಸರು ಶೋಕಿನಾ? ದೇವರ ಸ್ಮರಣೆಯಿಂದ ಸ್ವರ್ಗ ಪ್ರಾಪ್ತಿನಾ?

More articles

Latest article