ವಿಜಯೇಂದ್ರ ಬುಡಕ್ಕೆ ಕೊಡಲಿ: ಕಂಗಾಲಾದ ಬಿಜೆಪಿ ಹೈಕಮಾಂಡ್!

Most read

ಮಾಜಿ ಸಚಿವರು ಹಾಗೂ ಪಕ್ಷದಲ್ಲಿ, ಆರ್.ಎಸ್.ಎಸ್. ವಲಯದಲ್ಲಿ ಈಗಾಗಲೇ ಹಿಡಿತ ಇಟ್ಟುಕೊಂಡಿರುವ ಅರವಿಂದ ಲಿಂಬಾವಳಿಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟುವ ಮೂಲಕ ರಾಜ್ಯದಲ್ಲಿ ಮೊದಲ ಬಾರಿಗೆ ಪರಿಶಿಷ್ಟ ಸಮುದಾಯದ ನಾಯಕನಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದ ಹೆಗ್ಗಳಿಕೆಯನ್ನೂ ಬಳಸಿಕೊಳ್ಳಲು ಬಿಜೆಪಿ ಸಜ್ಜಾಗಿದೆ -ರಮೇಶ್‌ ಹಿರೇಜಂಬೂರು, ಹಿರಿಯ ಪತ್ರಕರ್ತರು.

ಬಿಜೆಪಿ ಅಕ್ಷರಶಃ ಈಗ ಒಡೆದ ಮನೆ. ಇಷ್ಟು ದಿನ ಮನೆಯೊಂದು ಮೂರು ಬಾಗಿಲು ಎನ್ನುವಂತಿತ್ತು. ಆದರೆ ಈಗ ಮನೆಯೊಂದು‌ ನೂರು ಬಾಗಿಲುಗಳಾಗಿವೆ!

ಬಿಜೆಪಿ ರಾಜ್ಯಾಧ್ಯಕ್ಷನಾಗಿ ನಾನೇ ಮುಂದುವರಿಯುತ್ತೇನೆ ಎಂದು ಬೀಗುತ್ತಿದ್ದ ಬಿ.ವೈ ವಿಜಯೇಂದ್ರನ ಸೊಕ್ಕು ಈಗ ಮುರಿಯಬೇಕಿದೆ, ಅದಕ್ಕಾಗಿ ಎಲ್ಲ ನಾಯಕರು ಒಟ್ಟಾಗಬೇಕಿದೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿಯೇ ಕೇಳಿಬರುತ್ತಿವೆ. ಅದಕ್ಕೆ ಕಾರಣ ಬಣ ರಾಜಕೀಯ. ಬಿಜೆಪಿಯ ಹಿರಿಯ ನಾಯಕರಲ್ಲಿ ಯಾರನ್ನು ತಮ್ಮ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕ ಚಕ್ರಾಧಿಪತಿಯ ರೀತಿಯಲ್ಲಿ ವಿಜಯೇಂದ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಯಾರಿಗೂ ಮರ್ಯಾದೆ ಕೊಡುತ್ತಿಲ್ಲ, ಗೌರವ ನೀಡುತ್ತಿಲ್ಲ ಎಂಬ ಆರೋಪಗಳು ಮೊದಲಿನಿಂದಲೂ ಕೇಳಿಬರುತ್ತಲೇ ಇವೆ. ಜೊತೆಗೆ ವಿಜಯೇಂದ್ರಗೆ ದುಡ್ಡಿನ ಮದ ಏರಿದೆ. ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಮುನ್ನಡೆಸುವ ತಾಕತ್ತು, ಖರ್ಚು ಮಾಡುವ ತಾಕತ್ತು ಯಾರಿಗೂ ಇಲ್ಲ ಎನ್ನುವ ಮಾಹಿತಿಗಳನ್ನು ಆಡುತ್ತಲೇ ಹೈಕಮಾಂಡ್ ನಾಯಕರಿಗೆ ವಿಜಯೇಂದ್ರ ಎಟಿಎಂ ರೀತಿ ಆಗಿದ್ದಾರೆ. ಹೀಗಾಗಿ ವಿಜಯೇಂದ್ರ ಹೇಳಿದ ಮಾತೇ ಅಂತಿಮ ಎನ್ನುವಂತಾಗಿತ್ತು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ ಎನ್ನುವುದು ಬಿಜೆಪಿಯೊಳಗಿನ ಹಿರಿಯ ನಾಯಕರ ಮಾತು.

ಅದು ಬಹುಷ: ಸತ್ಯವೂ ಇರಬಹುದೇನೋ ಎಂದು ಕಾರ್ಯಕರ್ತರು ಅಂದುಕೊಳ್ಳುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಬಿಜೆಪಿ ಹೈಕಮಾಂಡ್ ಗೆ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಅರವಿಂದ ಲಿಂಬಾವಳಿ ಮುಂತಾದವರು ಯಾವಾಗ ದೂರುಗಳ ಮೇಲೆ ದೂರು ಕೊಟ್ಟು ಬಂದರೋ ಆಗ ಪರಿಸ್ಥಿತಿಯೇ ಬೇರೆ ಆಗಿದೆ.

ವಿಜಯೇಂದ್ರ ಮತ್ತು ಯತ್ನಾಳ್

ವಿಜಯೇಂದ್ರನ ಮಾತು ಕೇಳಿ, ಬಿಜೆಪಿಯ ಹೈಕಮಾಂಡ್ ನಾಯಕರಲ್ಲಿ ಒಬ್ಬರು ಹಾಗೇ ರಾಜ್ಯ ಉಸ್ತುವಾರಿ ವಹಿಸಿರುವ ರಾಮ್ ದಾಸ್ ಅಗರ್ ವಾಲ್ ಕೋರ್ ಕಮಿಟಿಯಲ್ಲಿ ಶ್ರೀರಾಮುಲುವನ್ನು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಬಿಜೆಪಿಯೊಳಗಿನ ಬೇಗುದಿ ಬೇರೆಯದ್ದೇ ದಿಕ್ಕು ಬದಲಿಸಿತು. ರಾಜ್ಯ ಬಿಜೆಪಿಯೊಳಗಿನ ಬೆಂಕಿ ನಂದಿಸಲು ಬಿಜೆಪಿ ಹೈಕಮಾಂಡ್ ನಾಯಕರು ಸಾಕಷ್ಟು ಕಸರತ್ತು ನಡೆಸಿದರು. ಆದರೆ ಆ ಕಸರತ್ತಿನಲ್ಲಿ ಬಿಜೆಪಿ ಹೈಕಮಾಂಡ್ ನಾಯಕರೇ ಹೈರಾಣಾದರೆ ಹೊರತು ಸಮಸ್ಯೆ ಬಗೆಹರಿಯಲೇ ಇಲ್ಲ.

ಲಿಂಬಾವಳಿಗೆ ಅಧ್ಯಕ್ಷ ಗಾದಿ ಸಾಧ್ಯತೆ:

ಹೀಗಾಗಿ ಕೊನೆಗೆ ಬಿಜೆಪಿ ಹೈಕಮಾಂಡ್ ನಾಯಕರು ಆರ್. ಅಶೋಕ್  ಮತ್ತು ಬಸವರಾಜ್ ಬೊಮ್ಮಾಯಿ ಕಡೆಯಿಂದಲೂ ಮಾಹಿತಿ ಸಂಗ್ರಹಿಸಿದರು. ಆಗ ಅವರೂ ಕೂಡ ಬಿಜೆಪಿ ರಾಜ್ಯ ಘಟಕಕ್ಕೆ ವಿಜಯೇಂದ್ರ ಅವರನ್ನು ಬದಲಿಸಿ ಹೊಸ ಸಾರಥಿ ನೀಡಿ. ಆಗ ಈ ಎಲ್ಲ ಗೊಂದಲಗಳಿಗೆ ಪರಿಹಾರ ದೊರೆಯುತ್ತದೆ ಎಂದು ಹೇಳಿದ್ದಾರೆ. ಹೀಗಾಗಿ ಬಿಜೆಪಿ ಹೈಕಮಾಂಡ್ ನಾಯಕರು ಈಗ ಹೊಸ ದಾಳ ಉರುಳಿಸಲು ಸಜ್ಜಾಗಿದ್ದಾರೆ.

ಅರವಿಂದ ಲಿಂಬಾವಳಿ

ಬಿಜೆಪಿಯಲ್ಲಿ ಇದುವರೆಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಒಲವು ಹೆಚ್ಚಾಗಿಲ್ಲ. ಕಳೆದ ಬಾರಿಯ ವಿಧಾನ ಸಭೆಯಲ್ಲಿ ಇದೇ ಮತಗಳ ಹೊಡೆತದಿಂದಲೇ ಬಿಜೆಪಿ ಸೋತು ಸುಣ್ಣವಾಗಿದ್ದು. ಆದ ಕಾರಣ ಈ ಬಾರಿ ಯಾರನ್ನಾದರೂ ಹೊಸಬರನ್ನು ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ತರಲು ಪ್ರಯತ್ನಿಸುತ್ತಿರುವಾಗ ಕೇಳಿಬಂದ ಹೆಸರೇ ಅರವಿಂದ ಲಿಂಬಾವಳಿ! ಮಾಜಿ ಸಚಿವರು ಹಾಗೂ ಪಕ್ಷದಲ್ಲಿ, ಆರ್.ಎಸ್.ಎಸ್. ವಲಯದಲ್ಲಿ ಈಗಾಗಲೇ ಹಿಡಿತ ಇಟ್ಟುಕೊಂಡಿರುವ ಲಿಂಬಾವಳಿಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟುವ ಮೂಲಕ ರಾಜ್ಯದಲ್ಲಿ ಮೊದಲ ಬಾರಿಗೆ ಪರಿಶಿಷ್ಟ ಸಮುದಾಯದ ನಾಯಕನಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದ ಹೆಗ್ಗಳಿಕೆಯನ್ನೂ ಬಳಸಿಕೊಳ್ಳಲು ಬಿಜೆಪಿ ಸಜ್ಜಾಗಿದೆ.

ಆದರೆ ಈ ಪ್ಲಾನ್ ನಿಜಕ್ಕೂ ವರ್ಕ್ ಔಟ್ ಆಗುತ್ತಾ? ಬಿಜೆಪಿಯೊಳಗಿನ ಎಲ್ಲ ನಾಯಕರು ಇದಕ್ಕೆ ಒಪ್ಪಿಕೊಳ್ತಾರಾ ಗೊತ್ತಿಲ್ಲ. ಇನ್ನೂ ಈ ಬಗ್ಗೆ ಸರಿಯಾದ ಚಿತ್ರಣವೇ ಹೈಕಮಾಂಡ್ ನಾಯಕರಿಗೆ ಸಿಗುತ್ತಿಲ್ಲ. ಆದರೂ ಕರ್ನಾಟಕದಲ್ಲಿ ಪದೇ ಪದೆ ಅಂಬೇಡ್ಕರ್ ವಿಚಾರದಲ್ಲಿ, ದಲಿತ ಪ್ಲಕಾರ್ಡ್ ಬಳಕೆ ವಿಚಾರದಲ್ಲಿ ಎಡವುತ್ತಲೇ ಇರುವ ರಾಜ್ಯ ಬಿಜೆಪಿ ನಾಯಕರಿಗೆ ಹೊಸ ದಿಕ್ಕು ತೋರುವ ರಣತಂತ್ರವನ್ನು ಹೈಕಮಾಂಡ್ ನಾಯಕರು ಮಾಡಲು ಹೊರಟಿದ್ದಾರೆ.

ಕೊನೆ ಮಾತು:

ಬಿಜೆಪಿಯೊಳಗಡೆ ಇರುವುದೇ ದಲಿತ ವಿರೋಧಿ ನಿಲುವು. ಹೀಗಿದ್ದರೂ ಕರ್ನಾಟಕದಲ್ಲಿ ಕೆಲವು ದಲಿತ ನಾಯಕರನ್ನ ಮುಂದೆ ಬಿಟ್ಟು ದಲಿತ ದಾಳ ಉರುಳಿಸಿ ರಾಜಕೀಯ ಲಾಭಗಳಿಸುವ ರಣತಂತ್ರ ಬಹುಶಃ ಫಲ ನೀಡುವುದಿಲ್ಲ!

ರಮೇಶ್‌ ಹಿರೇಜಂಬೂರು

ಹಿರಿಯ ಪತ್ರಕರ್ತರು.

ಇದನ್ನೂ ಓದಿ- ರಂಗಪರಿಷೆ ಮತ್ತು ಭಾರತ ರಂಗ ಮಹೋತ್ಸವ; ಹೀಗೊಂದು ಅವಲೋಕನ

More articles

Latest article