ಹುಬ್ಬಳ್ಳಿ: ಗಂಗಾ ನದಿಯಲ್ಲಿ ಸ್ನಾನ ಮಾಡಿದ ತಕ್ಷಣ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪಾಪ ತೊಳೆದು ಹೋಗುವುದಿಲ್ಲ. ಏನೇ ಮಾಡಿದರೂ ಅವರ ಪಾಪ ಕಡಿಮೆ ಆಗುವುದಿಲ್ಲ. ದೇಶದ ಅರ್ಥ ವ್ಯವಸ್ಥೆ ಮೂಲೆ ಗುಂಪಾಗಿದೆ. ಎರಡು ಲಕ್ಷ ಕಿರಾಣಿ ಅಂಗಡಿಗಳು ಮುಚ್ಚಿ ಹೋಗಿವೆ. ಇದನ್ನು ಯಾರಾದರೂ ಮಾತಾಡ್ತಾರಾ? ಖರ್ಗೆ ಸಾಹೇಬರು ಹೇಳಿದ್ದು ಸರಿ ಇದೆ. ಅವರ ಪಾಪ ಮಾಫಿ ಆಗಲ್ಲ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ದೇಶದ ಸಾಲ ಕುರಿತು ಮಾತಾಡಲ್ಲ. ನಾನೂ ಕೂಡಾ ಹಿಂದೂ. ಅವರು ಲೋಕಪಾಲ್ ಗೆ ಗೌರವ ಕೊಟ್ಟಂತೆ, ನಾವು ಲೋಕಾಯುಕ್ತ ಸಂಸ್ಥೆ ನಂಬುತ್ತೇವೆ. ಹೊಸತನದ ರಾಜಕೀಯ ಬರಬೇಕು ಅನ್ನೋದು ನನ್ನ ಅಭಿಪ್ರಾಯ. ವಾಟ್ಸಪ್ ಯುನಿವರ್ಸಿಸಿ ಅಂತಿಮ ಅಲ್ಲ. ಯುವ ಜನತೆ ಅರ್ಥ ಮಾಡಿಕೊಳ್ಳಬೇಕು. ದೇಶ ಬಿಜೆಪಿ ಸ್ವತ್ತಲ್ಲ ಎಂದರು.
ಕೇಂದ್ರ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದ ಲಾಡ್, ಕೇಂದ್ರ ಬಜೆಟ್ ಬಗ್ಗೆ ಯಾವುದೇ ನೀರಿಕ್ಷೆ ಇಲ್ಲ. ಹಿಂದೂ ಧರ್ಮ, ಹಿಂದೂ-ಮುಸ್ಲಿಂ ಸೆಂಟಿಮೆಂಟ್ ಬಿಟ್ಟರೆ ಬೇರೆ ಏನನ್ನೂ ಮಾತನಾಡುವುದಿಲ್ಲ. ಜಿಡಿಪಿ ಬೆಳವಣಿಗೆ ಕುರಿತು ಮಾತನಾಡುವುದಿಲ್ಲ. ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಅಂತಾರಲ್ಲ ಹಾಗಾಗಿದೆ ಬಿಜೆಪಿ ಸ್ಥಿತಿ ಎಂದು ಲೇವಡಿ ಮಾಡಿದರು.
ಶ್ರೀರಾಮುಲು ಕಾಂಗ್ರೆಸ್ ಗೆ ಬಂದರೆ ಸ್ವಾಗ. ಆತ ನನ್ನ ಉತ್ತಮ ಸ್ನೇಹಿತ. ಕಾಂಗ್ರೆಸ್ ಸೇರ್ಪಡೆ ಕುರಿತು ಅವರ ಜೊತೆ ಮಾತಾಡಿಲ್ಲ. ಶ್ರೀರಾಮುಲು ಮೋಸ್ಟ್ ಹಂಬಲ್ ಪರ್ಸನ್. ರಾಮುಲು ಪಕ್ಷಕ್ಕೆ ಬಂದರೆ ಸ್ವಾಗತ ಮಾಡುತ್ತೇನೆ. ನಮ್ಮ ಪಕ್ಷ ಡಬಲ್ ಡೆಕ್ಕರ್ ಬಸ್, ಯಾರಾದರೂ ಬರಬಹುದು ಹೋಗಬಹುದು ಎಂದು ಹೇಳಿದರು.