ಬೆಂಗಳೂರು: ದೇಶದ ಮಾಹಿತಿ ತಂತ್ರಜ್ಞಾನ ರಾಜಧಾನಿ ಬೆಂಗಳೂರಿನಲ್ಲಿ ಅಮೆರಿಕಾ ದೂತವಾಸ ಕಚೇರಿ ಆರಂಭವಾಗಿದೆ. ಇಲ್ಲಿನ ಜೆ ಎಸ್ ಡಬ್ಲ್ಯೂ ಮ್ಯಾರಿಯೇಟ್ ಹೋಟೆಲ್‌ನಲ್ಲಿ ಅಮೆರಿಕಾ ದೂತವಾಸ ಕಚೇರಿ ಆರಂಭವಾಗಿದ್ದು, ವಿದೇಶಾಂಗ ಸಚಿವ ಎಸ್ ಜೈಶಂಕರ್ ಹಾಗೂ ಅಮೆರಿಕ ಕಾನ್ಸುಲೇಟ್ ಕ್ರಿಸ್ ಏಜ್ ಅವರು ನೂತನ ಕಚೇರಿಯನ್ನು ಉದ್ಘಾಟನೆ ಮಾಡಿದರು.
ಉದ್ಘಾಟನೆ ನೆರವೇರಿಸಿ ಮಾತನಾಡಿದ ವಿದೇಶಾಂಗ ಸಚಿವ ಜೈಶಂಕರ್, ಬೆಂಗಳೂರಿನಲ್ಲಿ ಈಗಾಗಲೇ ಹನ್ನೆರೆಡು ದೂತಾವಾಸ ಕಚೇರಿಗಳಿವೆ. ಮತ್ತಷ್ಟು ದೇಶಗಳು ಇಲ್ಲಿ ಕಾನ್ಸುಲೇಟ್ ಕಚೇರಿ ತೆರೆಯಬೇಕೆಂಬುದು ನಮ್ಮ ಬಯಕೆಯಾಗಿದೆ. ಅಮೆರಿಕಾ ಮತ್ತು ಭಾರತದ ಬಾಂಧವ್ಯ ವೃದ್ಧಿಗೆ ನಿರಂತರ ಪ್ರಯತ್ನ ನಡೆಯುತ್ತಿದೆ. ಬೆಂಗಳೂರಿಗೆ ಸಾಕಷ್ಟು ಸಾಮರ್ಥ್ಯ ಇದ್ದು ಅದರ ಬಳಕೆಯಾಗಬೇಕು. ಬೆಂಗಳೂರು ಒಂದರಲ್ಲೇ ಒಂದು ವರ್ಷದಲ್ಲಿ 8.8 ಲಕ್ಷ ಪಾಸ್ ಪೋರ್ಟ್ ಗಳ ವಿತರಣೆ ಆಗಿದೆ ಎಂದು ಹೇಳಿದರು. ಪ್ರಸ್ತುತ ಬೆಂಗಳೂರಿನಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ವಾರದಲ್ಲಿ ಮೂರು ದಿನ ವಿಮಾನ ಸಂಚರಿಸುತ್ತಿದೆ. ಅಧ್ಯಯನ, ಶಿಕ್ಷಣ, ತಂತ್ರಜ್ಞಾನ, ರಕ್ಷಣಾ ಕ್ಷೇತ್ರದಲ್ಲಿ ಅಮೆರಿಕ -ಬೆಂಗಳೂರಿನ ಸಂಬಂಧ ವೃದ್ಧಿಸಲು ದೂತವಾಸ ಕಚೇರಿಯಿಂದ ಅನುಕೂಲವಾಗಲಿದೆ ಎಂದು ತಿಳಿಸಿದರು.
ಡಿ.ಕೆ.ಶಿವಕುಮಾರ್ ಮಾತನಾಡಿ ಬೆಂಗಳೂರಿನಲ್ಲಿ ಅಮೆರಿಕಾದ ರಾಯಭಾರ ಕಚೇರಿ ಸ್ಥಾಪನೆ ಆಗಬೇಕೆಂದು ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗಲೇ ಪ್ರಯತ್ನ ನಡೆಸಿದ್ದರು. ಅಂದು ಪ್ರಧಾನಿಯಾಗಿದ್ದ ವಾಜಪೇಯಿ ಅವರನ್ನು ಭೇಟಿ ಮಾಡಲಾಗಿತ್ತಾದರೂ ಸಾಧ್ಯವಾಗಿರಲಿಲ್ಲ. ಇದೀಗ ಅನುಷ್ಠಾನವಾಗುತ್ತಿರುವುದು ಹೆಮ್ಮೆಯ ಸಂಗತಿ. ಬೆಂಗಳೂರು ಜಾಗತಿಕವಾಗಿ ಬೆಳೆದಿದೆ, ಯೋಜನಾ ಬದ್ಧವಾಗಿ ಬೆಳೆದಿಲ್ಲದ ಕಾರಣಕ್ಕೆ ಒಂದಷ್ಟು ಸಮಸ್ಯೆಗಳಿವೆ. ಅವುಗಳನ್ನು ಪರಿಹರಿಸಲು ಪ್ರಯತ್ನ ನಡೆಸಲಾಗಿದೆ ಎಂದು ಹೇಳಿದರು.
ಸಧ್ಯಕ್ಕೆ ಬೆಂಗಳೂರಿನ ವಿಠಲ್ ಮಲ್ಯ ರಸ್ತೆಯಲ್ಲಿರುವ ಜೆ.ಡಬ್ಲ್ಯು.ಮಾರಿಯೆಟ್ ಹೋಟೆಲ್‌ನಲ್ಲಿ ತಾತ್ಕಾಲಿಕ ದೂತಾವಾಸ ಕಚೇರಿ ಕಾರ್ಯಾರಂಭವಾಗಿದೆ. ಮುಂದಿನ ದಿನಗಳಲ್ಲಿ ಶಾಶ್ವತ ಕಚೇರಿ ಸ್ಥಾಪಿಸಲಾಗುವುದು. ಶಾಶ್ವತ ಕಚೇರಿ ಸ್ಥಾಪನೆಯಾಗುವರೆಗೂ ಖಾಸಗಿ ಹೋಟೆಲಿನಲ್ಲಿ ಕಾರ್ಯನಿರ್ವಹಿಸಲಿದೆ. ಇದುವರೆಗೆ ಚೆನ್ನೈ, ಹೈದರಾಬಾದ್, ಮುಂಬೈ, ಕೋಲ್ಕತ್ತಾಗಳಲ್ಲಿ ಅಮೆರಿಕದ ದೂತಾವಾಸ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದವು. ಭಾರತ ಮತ್ತು ಅಮೆರಿಕ ಸಂಬಂಧ ಬಲವರ್ಧನೆಯಾಗಿ ಬೆಂಗಳೂರಿನಲ್ಲಿ ಅಮೆರಿಕದ ದೂತವಾಸ ಕಚೇರಿ ಆರಂಭವಾಗಿದೆ. ಅಮೆರಿಕದ ಪ್ರಮುಖ ನಗರಗಳಿಂದ ಬೆಂಗಳೂರಿಗೆ ನೇರ ವಿಮಾನಯಾನ ಸೌಲಭ್ಯ ಇದೆ. ಆದರೆ ಆದರೆ ವೀಸಾ ಮತ್ತಿತರ ಕೆಲಸಗಳಿಗೆ ಬೇಕಾದ ಸೌಕರ್ಯ ಇರಲಿಲ್ಲ. ಇದೀಗ ಆ ಸೌಲಭ್ಯವೂ ಲಭ್ಯವಾಗಿದೆ.
ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಯುಎಸ್ ದೂತವಾಸದ ಅಧಿಕಾರಿಗಳು, ಸಚಿವ ಎಂಬಿ ಪಾಟೀಲ್, ಸಂಸದರಾದ ತೇಜಸ್ವಿಸೂರ್ಯ, ಪಿಸಿ ಮೋಹನ್, ಡಾ ಸಿ.ಎನ್. ಮಂಜುನಾಥ್ ಉಪಸ್ಥಿತರಿದ್ದರು.