ವಾಷಿಂಗ್ಟನ್: ಅಮೆರಿಕವು ಎಲ್ಲ ವಿದೇಶಗಳಿಗೆ ನೀಡುತ್ತಿರುವ ನೆರವನ್ನು ಸ್ಥಗಿತಗೊಳಿಸಿದೆ. ಅಮೆರಿಕ ಫಸ್ಟ್ ಅಜೆಂಡಾದ ಅಡಿಯಲ್ಲಿ ತನ್ನ ವಿದೇಶಾಂಗ ನೀತಿಯು ದಕ್ಷ ಮತ್ತು ಸ್ಥಿರವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಇತರ ದೇಶಗಳಿಗೆ ಅಮೆರಿಕದ ಹಣಕಾಸಿನ ನೆರವನ್ನು ಮರು ಪರಿಶೀಲಿಸಲು ಆದೇಶ ಹೊರಡಿಸಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ನಿಟ್ಟಿನಲ್ಲಿ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಅಮೆರಿಕದ ನಾಗರೀಕರಿಗೆ ಯಾವುದೇ ಪ್ರತಿಫಲ ಸಿಗದ ಹೊರತು ಇನ್ನುಮುಂದೆ ಕುರುಡಾಗಿ ವಿದೇಶಗಳಿಗೆ ಹಣಕಾಸಿನ ನೆರವನ್ನು ನೀಡುವುದಿಲ್ಲ ಎಂದು ಅಧ್ಯಕ್ಷ ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಕಷ್ಟಪಟ್ಟು ಕೆಲಸ ಮಾಡುವ ತೆರಿಗೆದಾರರ ಪರವಾಗಿ ವಿದೇಶಿ ನೆರವನ್ನು ಪರಿಶೀಲಿಸುವುದು ಮತ್ತು ಮರು ಹೊಂದಿಸುವುದು ನೈತಿಕ ಅವಶ್ಯಕತೆಯಾಗಿದೆ ಎಂದು ಅಮೆರಿಕ ವಿದೇಶಾಂಗ ಇಲಾಖೆಯ ವಕ್ತಾರರಾದ ಟಮ್ಮಿ ಬ್ರೂಸ್ ತಿಳಿಸಿದ್ದಾರೆ. ವಿದೇಶಾಂಗ ಇಲಾಖೆ ಮತ್ತು ಅಂತರರಾಷ್ಟ್ರೀಯ ಅಭಿವೃದ್ಧಿಗೆ ಸಂಬಂಧಿಸಿದ ಅಮೆರಿಕದ ಸಂಸ್ಥೆ (ಯುಎಸ್ಎಐಡಿ) ಮೂಲಕ ಪಡೆದಿರುವ ಎಲ್ಲ ಧನಸಹಾಯವನ್ನು ಸ್ಥಗಿತಗೊಳಿಸಿರುವ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ, ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ವಿದೇಶಗಳಲ್ಲಿ ನಾವು ನೀಡಿದ ನೆರವನ್ನು ಹೇಗೆ ಖರ್ಚು ಮಾಡಬೇಕು ಎಂಬುದರ ಕುರಿತು ವಿವೇಚನಾಶೀಲ ವಿಮರ್ಶೆಯ ಮೂಲಕ ಅಮೆರಿಕದ ಹಣಕಾಸನ್ನು ರಕ್ಷಿಸಲು ವಿದೇಶಾಂಗ ಕಾರ್ಯದರ್ಶಿ ಬದ್ಧರಾಗಿದ್ದಾರೆ ಎಂದೂ ಅವರು ಹೇಳಿದ್ದಾರೆ. ನಾವು ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿಗಳ ಮೇಲೆ ಗಮನ ಕೇಂದ್ರೀಕರಿಸಬೇಕು ಎಂಬುದು ಅಧ್ಯಕ್ಷೀಯ ಚುನಾವಣೆಯಲ್ಲಿ ಜನರು ನೀಡಿದ ತೀರ್ಪಿನಲ್ಲಿ ಸ್ಪಷ್ಟವಾಗಿದೆ. ಜನರು ಶ್ರಮಪಟ್ಟು ಸಂಪಾದಿಸಿದ ಹಣದ ಮೇಲ್ವಿಚಾರಕರಾಗಿ ನಮ್ಮ ಪಾತ್ರವನ್ನು ಬಹಳ ಗಂಭೀರವಾಗಿ ನಿರ್ವಹಿಸುತ್ತೇವೆ ಎಂದು ವಕ್ತಾರರು ಸ್ಪಷ್ಟಪಡಿಸಿದ್ದಾರೆ.