ಅಂಬೇಡ್ಕರ್‌ ಪರಂಪರಗೆ ಧಕ್ಕೆಯಾದರೆ ದೇಶ ಸಹಿಸುವುದಿಲ್ಲ; ಕಮಲ್‌ ಹಾಸನ್‌

Most read

ಚೆನ್ನೈ: ಸಂವಿಧಾನದ ಶಿಲ್ಪಿ ರೂಪಿಸಿದ ವಿಚಾರಗಳು ಜನರ ಭಾವನೆಗಳನ್ನು ಕೆರಳಿಸಲು ದುರುಪಯೋಗಪಡಿಸಿಕೊಳ್ಳುವ ಬದಲು ಪ್ರಗತಿಗೆ ಪ್ರೇರೇಪಿಸಬೇಕು ಎಂದು ನಟ ಕಮಲ್ ಹಾಸನ್ ಅಭಿಪ್ರಾಯಪಟ್ಟಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವ್ಯಂಗ್ಯದ ಹೇಳಿಕೆ ಕುರಿತು ಉಂಟಾಗಿರುವ ವಿವಾದದ ನಡುವೆ ಕಮಲ್‌ ಹಾಸನ್‌ ಈ ರೀತಿ  ಪ್ರತಿಕ್ರಿಯಿಸಿದ್ದಾರೆ.

ಸಂವಿಧಾನವನ್ನು ಅಂಗೀಕರಿಸಿ 75 ವರ್ಷಗಳನ್ನು ಪೂರೈಸುತ್ತಿರುವ ಸ್ಮರಣಾರ್ಥವಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಗಳ ಕುರಿತು ಚರ್ಚೆ ನಡೆಸುವಂತೆ ಅವರು ಒತ್ತಾಯಿಸಿದ್ದಾರೆ. ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ಅಂಬೇಡ್ಕರ್ ಅವರ ಕೊಡುಗೆಗಳನ್ನು ಆಧುನಿಕ ಭಾರತದ ಅಡಿಪಾಯ ಎಂದು ಬಣ್ಣಿಸಿದ್ದಾರೆ. ಮಹಾತ್ಮಾ ಗಾಂಧೀಜಿ ಅವರು ಭಾರತವನ್ನು ವಿದೇಶಿ ದಬ್ಬಾಳಿಕೆಯಿಂದ ಮುಕ್ತಗೊಳಿಸಿದರೆ, ಡಾ. ಅಂಬೇಡ್ಕರ್ ಭಾರತವನ್ನು ತನ್ನದೇ ಆದ ಪ್ರಾಚೀನ ಸಾಮಾಜಿಕ ಅನ್ಯಾಯದ ಸಂಕೋಲೆಯಿಂದ ಬಿಡುಗಡೆ ಮಾಡಿದರು ಎಂದು ಹೇಳಿದ್ದಾರೆ.

ಅಂಬೇಡ್ಕರ್ ಅವರ ಪರಂಪರೆಯನ್ನು ರಕ್ಷಿಸುವ ಮಹತ್ವವನ್ನು ಅವರು ಒತ್ತಿ ಹೇಳಿದ್ದು, ಅದರ ದುರುಪಯೋಗದ ವಿರುದ್ಧ ಎಚ್ಚರಿಕೆ ನೀಡಿದ್ದಾರೆ. ಎಲ್ಲರೂ ಸಮಾನವಾಗಿ ಹುಟ್ಟಿರುವ ಮುಕ್ತ ಮತ್ತು ನ್ಯಾಯಯುತ ಭಾರತಕ್ಕಾಗಿ ಬಾಬಾಸಾಹೇಬರ ದೃಷ್ಟಿಕೋನವನ್ನು ಹೆಮ್ಮೆಯಿಂದ ನಂಬುವ, ಹೋರಾಡುವ ಪ್ರತಿಯೊಬ್ಬ ಭಾರತೀಯನು ಎಂದಿಗೂ ಮಹಾನ್ ವ್ಯಕ್ತಿಯ ಪರಂಪರೆಗೆ ಕಳಂಕವಾಗುವುದನ್ನು ಸಹಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಕುರಿತು ಸಂಸತ್ತಿನಲ್ಲಿ ಅರ್ಥಪೂರ್ಣ ಚರ್ಚೆ ನಡೆಯಬೇಕು. ಇಂತಹ ಚರ್ಚೆಗಳು ಪ್ರಗತಿಗೆ ಪ್ರೇರಣೆಯಾಗಬೇಕು. ಆಧುನಿಕ ಮತ್ತು ನೈತಿಕ ಜಾಗತಿಕ ಶಕ್ತಿಯಾಗಿ, ನಾವು ಸಂಸತ್ತಿನ ಗೌರವಾನ್ವಿತ ಸಭಾಂಗಣಗಳಲ್ಲಿ ಅಂಬೇಡ್ಕರ್ ಅವರ ವಿಚಾರಗಳ ಅರ್ಥಪೂರ್ಣ ಚರ್ಚೆಯೊಂದಿಗೆ ನಮ್ಮ ಸಂವಿಧಾನದ 75 ವರ್ಷಗಳ ಅಂಗೀಕಾರವನ್ನು ಸ್ಮರಿಸಬೇಕು ಎಂದು ಒತ್ತಿ ಹೇಳಿದ್ದಾರೆ.

More articles

Latest article