ಅಂಬೇಡ್ಕರ್ ಪ್ರತಿಮೆಯನ್ನು ವಿರೂಪಗೊಳಿಸಿ ಚಪ್ಪಲಿ ಹಾರ ಹಾಕಿ ವಿಕೃತಿಗೊಳಿಸಿ ಅಪಮಾನ ಮಾಡಿದ್ದ ಘಟನೆ ಕಲಬುರಗಿ ನಗರದ ಕೋಟನೂರಿನಲ್ಲಿ ನಡೆದಿದೆ. ಸೋಮವಾರ ತಡರಾತ್ರಿ ದುಷ್ಕರ್ಮಿಗಳು ಈ ಘಟನೆಯನ್ನು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಆಕ್ರೋಶಗೊಂಡ ಸ್ಥಳೀಯ ಮುಂಖಡರು ಇಂದು(ಮಂಗಳವಾರ) ಬೆಳಗ್ಗೆ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದ್ದಾರೆ.
ಕೋಟನೂರಿನಲ್ಲಿ ಪ್ರತಿಮೆಗೆ ಚಪ್ಪಲಿ ಹಾರ ಹಾಕಿರುವ ಘಟನೆ ಮಂಗಳವಾರ ಬೆಳಗ್ಗೆ ಗಮನಕ್ಕೆ ಬಂದಿದೆ. ಇದನ್ನು ಗಮನಿಸಿದ ಜನರು ಆಕ್ರೋಶಿತರಾಗಿ ಪ್ರತಿಭಟನೆಗೆ ಇಳಿದಿದ್ದಾರೆ. ಪ್ರತಿಭಟನೆಯ ಕಾವು ಹೆಚ್ಚುತ್ತಿದಂತೆ ಟೈಯರ್ ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ. ಇದರಿಂದಾಗಿ ನಗರದಲ್ಲಿ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಗಿದೆ. ವಿಷಯ ತಿಳಿದ ತಕ್ಷಣ ಪೋಲಿಸರು ಸ್ಥಳಕ್ಕೆ ಆಗಮಿಸಿ, ಅರೋಪಿಗಳನ್ನು ಆದಷ್ಟು ಬೇಗ ಬಂದಿಸುವುದಾಗಿ ಭರವಸೆ ನೀಡಿದ್ದಾರೆ.
ಕನ್ನಡ ಪ್ಲಾನೆಟ್ ಜೊತೆ ಸ್ಥಳೀಯ ಮುಂಖಡರಾದ ಮಹೇಶ್ ಕಾಶಿ ಅವರು ಮಾತನಾಡಿ, ‘ಇವತ್ತಿನ ಪರಿಸ್ಥಿತಿಯಲ್ಲಿ ಮನುವಾದಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇಂತಹ ಕೃತ್ಯಗಳನ್ನು ಬೇರೇ ಯಾರು ಮಾಡಲು ಸಾಧ್ಯವಿಲ್ಲ. ಮನುಸ್ಮೃತಿಯನ್ನು ಆರಾಧಿಸುವವರೆ ಇದನ್ನು ಮಾಡಿರುತ್ತಾರೆ. ಬಾಬಾಸಾಹೇಸ್ ಅಭಿಮಾನಿಗಳು ಮತ್ತು ಸಂವಿಧಾನ ಗೌರವಿಸುವ ನಾವುಗಳು ಇದನ್ನು ಒಪ್ಪುವುದಿಲ್ಲ’ ಎಂದರು.
ಕಲಬುರಗಿ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.