ಸರಕಾರದ ನೀತಿಗಳನ್ನು ಟೀಕಿಸುವ ಮಾಧ್ಯಮಗಳು ಬೆಳೆಯುವುದನ್ನು ನೋಡುತ್ತಾ ಫ್ಯಾಸಿಸ್ಟ್ ಮನಸಿನ ಆಳುವವರು ಸುಮ್ಮನೆ ಕೂರುತ್ತಾರೆಯೇ? ಇಲ್ಲ. ಕತ್ತು ಹಿಸುಕಲು ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತಲೇ ಇರುತ್ತಾರೆ. ಅವರು ಯಾವಾಗ ಯಶಸ್ವಿಯಾಗುತ್ತಾರೋ ಗೊತ್ತಿಲ್ಲ. ಆದರೆ, ಅಲ್ಲಿಯವರೆಗೆ ಈ ಪರ್ಯಾಯ ಮಾಧ್ಯಮಗಳು ಒಂದು ದೊಡ್ಡ ಭರವಸೆ ಮತ್ತು ಅಲ್ಲಿಯ ತನಕ ಅವು ತಮ್ಮ ಪಾರಮ್ಯ ಮೆರೆಯಲಿವೆ- ಶ್ರೀನಿವಾಸ ಕಾರ್ಕಳ, ಚಿಂತಕರು
ಇಪ್ಪತ್ತನೇ ಶತಮಾನದ ಪೂರ್ವಾರ್ಧದಲ್ಲಿ ನಡೆದ ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಾರ್ತಾ ಪತ್ರಿಕೆಗಳು ವಹಿಸಿದ ಪಾತ್ರ ನಿರ್ಣಾಯಕವಾದುದು. ಮಹಾತ್ಮಾ ಗಾಂಧಿ ನೇತೃತ್ವದ ಯಂಗ್ ಇಂಡಿಯಾ ಮಾಸಪತ್ರಿಕೆಯ ಹೆಸರನ್ನು ಕೇಳದವರಾರು? ಸ್ವಾತಂತ್ರ್ಯ ಹೋರಾಟಗಾರರ ನೇತೃತ್ವದ ಹಿಂದುಸ್ತಾನ್ ದೈನಿಕ್ ( ಎಂ ಎಂ ಮಾಲವೀಯ), ಫ್ರೀ ಹಿಂದುಸ್ತಾನ್ (ತಾರಕನಾಥ ದಾಸ್), ಹರಿಜನ (ಎಂ ಕೆ ಗಾಂಧಿ), ನವಜೀವನ (ಎಂ ಕೆ ಗಾಂಧಿ), ಇಂಡಿಯನ್ ಒಪಿನಿಯನ್ (ಎಂ ಕೆ ಗಾಂಧಿ), ಕೇಸರಿ (ತಿಲಕ್), ಹಿಂದುಸ್ತಾನ್ ಟೈಮ್ಸ್ (ಸುಂದರ್ ಸಿಂಗ್ ಲ್ಯಾಲಪುರಿ), ಮೂಕನಾಯಕ (ಬಿ ಆರ್ ಅಂಬೆಡ್ಕರ್), ಯಂಗ್ ಇಂಡಿಯಾ (ಎಂ ಕೆ ಗಾಂಧಿ), ಇಂಡಿಪೆಂಡೆಂಟ್ (ಮೋತಿಲಾಲ್ ನೆಹರೂ), ನ್ಯೂ ಇಂಡಿಯಾ (ಅನಿ ಬೆಸೆಂಟ್), ಇಂತಹ ಅನೇಕ ಪತ್ರಿಕೆಗಳ ಜತೆಯಲ್ಲಿ ದಿ ಹಿಂದೂ, ಟೈಮ್ಸ್ ಆಫ್ ಇಂಡಿಯಾ, ದಿ ಇಂಡಿಯನ್ ಎಕ್ಸ್ ಪ್ರೆಸ್ ಇತ್ಯಾದಿ ಅನೇಕ ಪತ್ರಿಕೆಗಳು ಸುದ್ದಿಯನ್ನು ತಲಪಿಸುವ ಜತೆಗೆ, ಬ್ರಿಟಿಷ್ ಸರಕಾರದ ಅಸಂಖ್ಯ ನಿರ್ಬಂಧಗಳ ಹೊರತಾಗಿಯೂ, ಸ್ವಾತಂತ್ರ್ಯ ಹೋರಾಟದೆಡೆಗೆ ಜನರನ್ನು ಎಚ್ಚರಿಸುವ ಕೆಲಸವನ್ನು ಸದ್ದಿಲ್ಲದೆ ಮತ್ತು ಪರಿಣಾಮಕಾರಿಯಾಗಿ ಮಾಡುತ್ತಿದ್ದವು.
ಸ್ವಾತಂತ್ರ್ಯೋತ್ತರ ಭಾರತ
ಸ್ವಾತಂತ್ರ್ಯೋತ್ತರದಲ್ಲಿ ಸ್ವಾತಂತ್ರ್ಯ ಪೂರ್ವದ ಇಂತಹ ಅನೇಕ ಪತ್ರಿಕೆಗಳು ಕಣ್ಣು ಮುಚ್ಚಿದವಾದರೂ, ಸುದ್ದಿಯನ್ನು ಜನರಿಗೆ ತಲಪಿಸುವ ಜತೆಯಲ್ಲಿ ಸರಕಾರವನ್ನು ಪ್ರಶ್ನಿಸುವ, ಸರಕಾರದ ಕಿವಿ ಹಿಂಡುವ ಹೊಣೆಗಾರ ಪತ್ರಿಕಾವೃತ್ತಿಯ ಮೂಲಕ ಪ್ರಜಾತಂತ್ರದ ರಕ್ಷಣೆ ಮಾಡುತ್ತಾ ಪ್ರಜಾತಂತ್ರದ ನಾಲ್ಕನೇ ಸ್ತಂಭವಾಗಿ ಅನೇಕ ಮುಖ್ಯಧಾರೆಯ ಮತ್ತು ಪ್ರಾದೇಶಿಕ ಪತ್ರಿಕೆಗಳು ಕೆಲಸ ಮಾಡುತ್ತಾ ಬಂದವು. ಈ ಪತ್ರಿಕೆಗಳು ಅಸಂಖ್ಯ ನಿರ್ಬಂಧಗಳ ಹೊರತಾಗಿಯೂ ತುರ್ತುಪರಿಸ್ಥಿತಿ ಕಾಲದಲ್ಲಿ ಮಾಡಿದ ಕೆಲಸಗಳು ಐತಿಹಾಸಿಕವಾದುವು.
ಬದಲಾದ ಕಾಲಘಟ್ಟ
ಸುದ್ದಿ ಮಾಧ್ಯಮಗಳು ಹೀಗೆ ಜನಪರವಾಗಿ ಸರಿ ಸುಮಾರು ಇಪ್ಪತ್ತನೇ ಶತಮಾನದ ಕೊನೆಯ ದಶಕದ ಆರಂಭದವರೆಗೂ ಕೆಲಸ ಮಾಡುತ್ತಲೇ ಬಂದವು. ಆದರೆ ಜಾಗತೀಕರಣ ಮತ್ತು ಉದಾರೀಕರಣದ ಈ ಕೊನೆಯ ದಶಕದಲ್ಲಿ ಎರಡು ಮುಖ್ಯ ಘಟನೆಗಳು ನಡೆದವು.
ಮೊದಲನೆಯದಾಗಿ, ಮಾಧ್ಯಮಗಳು ಉದ್ಯಮದ ಸ್ವರೂಪವನ್ನು ಪಡೆದುಕೊಂಡವು. ಅವುಗಳ ನೇತೃತ್ವ ಉದ್ಯಮಿಗಳ ಪಾಲಾಯಿತು. ಜನಪರ ಕೆಲಸಗಳಿಗಿಂತಲೂ ಲಾಭ ಗಳಿಸುವುದೇ ಗುರಿಯಾಗಲಾರಂಭಿಸಿತು. ಪರಿಣಾಮವಾಗಿ, ಪತ್ರಿಕೆಗಳು ತಮ್ಮ ಜವಾಬ್ದಾರಿ ಮರೆಯುವ, ಮತ್ತು ಅಧಿಕಾರರೂಢರ ಮರ್ಜಿಗೆ ಅನುಗುಣವಾಗಿ ಕೆಲಸ ಮಾಡುವ ಶಕೆ ಆರಂಭವಾಯಿತು.
ಎರಡನೆಯದಾಗಿ, ಟಿವಿ ಸುದ್ದಿ ವಾಹಿನಿಗಳ ಯುಗ ಆರಂಭವಾಯಿತು. ಕಂಪ್ಯೂಟರ್, ಅಂತರ್ಜಾಲಗಳು ಜ್ಞಾನ ಜಗತ್ತನ್ನು ಆಳಲಾರಂಭಿಸಿದವು. ಪತ್ರಿಕಾ ಮಾಧ್ಯಮಕ್ಕೆ ಸೆಡ್ಡು ಹೊಡೆಯುವ ಹಾಗೆ ಟಿವಿ ಸುದ್ದಿಮಾಧ್ಯಮಗಳು ವ್ಯಾಪಕವೂ ಪರಿಣಾಮಕಾರಿಯೂ ಆಗಲಾರಂಭಿಸಿದವು. ಉದ್ಯಮಿಗಳ ಕೈಯಲ್ಲಿಯೇ ಇದ್ದರೂ, ಅವು ಬಹುಮಟ್ಟಿಗೆ ಆಳುವವರನ್ನು ಉತ್ತರದಾಯಿಯಾಗಿಸುವ ನಿಟ್ಟಿನಲ್ಲಿಯೇ ಕೆಲಸ ಮಾಡಿದವು. ಡಾ. ಮನಮೋಹನ್ ಸಿಂಗ್ ಅವರ ಆಡಳಿತ ಕಾಲದಲ್ಲಿ ಅಣ್ಣಾ ಹಜಾರೆ ಅಭಿಯಾನ ಮತ್ತು ಅನೇಕ ಭ್ರಷ್ಟಾಚಾರ ಆರೋಪಗಳ ಸಂದರ್ಭದಲ್ಲಿ ಅವು ವಹಿಸಿದ ನಿರ್ಣಾಯಕ ಪಾತ್ರವನ್ನು ಇಲ್ಲಿ ಸ್ಮರಿಸಬಹುದು.
ಮಾಧ್ಯಮಗಳ ಕೈವಶ
ಆದರೆ, ಕೆಲವೇ ಕೆಲವನ್ನು ಹೊರತುಪಡಿಸಿ ಇಡೀ ಸುದ್ದಿ ಮಾಧ‍್ಯಮ ಜಗತ್ತು ಆಳುವವರ ಭಜನೆ ಮಾಡಲಾರಂಭಿಸಿ, ಆಳುವವರ ತಪ್ಪುಗಳನ್ನು ಪ್ರಶ್ನಿಸದೆ ವಿಪಕ್ಷಗಳನ್ನು ಪ್ರಶ್ನಿಸುವ, ಸರಕಾರದ ತಪ್ಪುಗಳೆಲ್ಲವನ್ನೂ ಸಮರ್ಥಿಸುವ ಭಜನಾಮಂಡಳಿಯಾಗಿ ಪರಿವರ್ತಿತವಾದುದು ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ; ಅಂದರೆ 2014 ರ ಬಳಿಕ. ಗುಜರಾತ್ ನರಮೇಧ ಸಮಯದಲ್ಲಿ ತಮ್ಮ ಲೋಪಗಳನ್ನು ಮತ್ತು ಅತಿರೇಕಗಳನ್ನು ಜಗತ್ತಿಗೆ ತಲಪಿಸಿದ್ದು ಇದೇ ಸುದ್ದಿಮಾಧ್ಯಮಗಳು ಎನ್ನುವುದು ಮೋದಿಯವರಿಗೆ ಗೊತ್ತಿತ್ತು. ಇದೇ ಕಾರಣದಿಂದ ಬಿಬಿಸಿ ಪತ್ರಕರ್ತೆಯೊಬ್ಬಳಿಗೆ ಸಂದರ್ಶನ ನೀಡಿದಾಗಲೂ ಅವರು “ನಿಜ, ನಾನು ಒಂದು ವಿಷಯದಲ್ಲಿ ವಿಫಲನಾದೆ, ಸುದ್ದಿ ಮಾಧ್ಯಮಗಳನ್ನು ಮ್ಯಾನೇಜ್ ಮಾಡುವುದು ನನ್ನಿಂದ ಸಾಧ‍್ಯವಾಗಲಿಲ್ಲ” ಎಂದಿದ್ದರು. 2014 ರಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ಅವರು ಮೊದಲು ಮಾಡಿದ ಕೆಲಸ ಸುದ್ದಿ ಮಾಧ್ಯಮಗಳನ್ನು ಪಳಗಿಸಿ ತನ್ನ ಅಡಿಯಾಳಾಗಿಸಿದ್ದು.
ಇದನ್ನು ಅವರು ಎರಡು ರೀತಿಯಲ್ಲಿ ಮಾಡಿದರು. ಅದಾಗಲೇ ಉದ್ಯಮಿಗಳ ಕೈಯಲ್ಲಿದ್ದ ಟಿವಿ ವಾಹಿನಿಗಳು ಯಾವ ಒತ್ತಡದ ಅಗತ್ಯವೂ ಇಲ್ಲದೆ ಸರಕಾರದ ತುತ್ತೂರಿಯಾದವು. ಹೆಚ್ಚಿನ ಪತ್ರಿಕೆಗಳೂ ಇದೇ ಹಾದಿ ಹಿಡಿದವು. ಹೇಳಿದಂತೆ ಕೇಳಲು ಒಪ್ಪದ ಪತ್ರಿಕೆಗಳಿಗೆ ಜಾಹೀರಾತು ಲಭಿಸದೆ ಅವು ಆರ್ಥಿಕ ಸಮಸ್ಯೆ ಎದುರಿಸುವಂತೆ ಮಾಡಿದರು. ಗುಲಾಮ ಪತ್ರಿಕೆಗಳಿಗೆ ಜಾಹೀರಾತುಗಳ ಮೂಲಕ ಆರ್ಥಿಕ ಚೈತನ್ಯ ಒದಗಿಸಿದರು. ಟಿವಿ ಸುದ್ದಿ ವಾಹಿನಿಗಳ ವಿಷಯದಲ್ಲಿಯೂ ಇದೇ ತಂತ್ರ ಪ್ರಯೋಗಿಸಿದರು. ಹೇಳಿದಂತೆ ಕೇಳಿದವರಿಗೆ ಜಾಹೀರಾತು ಆಮಿಷ. ಕೇಳದ ಎನ್ ಡಿ ಟಿ ವಿಯಂತಹ ವಾಹಿನಿಗಳ ಮೇಲೆ ಸಿಬಿಐ, ಐಟಿ ದಾಳಿ. ಆಗಲೂ ಗುರಿ ಸಾಧಿಸುವುದು ಸಾಧ್ಯವಾಗದಿದ್ದಾಗ ಗೆಳೆಯ ಅದಾನಿಯ ಮೂಲಕ ಎನ್ ಡಿ ಟಿ ವಿಯನ್ನು ಅಧಿಕೃತವಾಗಿಯೇ ಖರೀದಿಸಿಬಿಟ್ಟರು. ಅಲ್ಲಿಗೆ ಕೊನೆಯ ಕೋಟೆಯೂ ಪತನಗೊಂಡಿತು. ಈಗ ಬಹುತೇಕ ಸುದ್ದಿವಾಹಿನಿಗಳು ಇರುವುದು ಮೋದಿಯವರ ಆಪ್ತರಾದ ಅಂಬಾನಿ, ಅದಾನಿ, ಅರುಣ್ ಪುರಿ, ಸುಭಾಶ್ಚಂದ್ರ ಕೈಯಲ್ಲಿ. ಪ್ರಶ್ನಿಸುವ ಸುದ್ದಿ ವಾಹಿನಿಗಳು ಯಾವುದೂ ಉಳಿದಿಲ್ಲ.
ಸುದ್ದಿ ವಾಹಿನಿಗಳಲ್ಲಿದ್ದು ಸರಕಾರಕ್ಕೆ ವಿರುದ್ಧವಾಗಿ ನಿಂತಿದ್ದ ಪತ್ರಕರ್ತರನ್ನೂ ಗುರಿ ಮಾಡಲಾಯಿತು. ಮಾಧ್ಯಮದ ಆಡಳಿತದ ಮೇಲೆ ಒತ್ತಡ ಹೇರಿ ಅವರನ್ನು ಹೊರಹಾಕಲಾಯಿತು. ಅಂತಹ ಪತ್ರಕರ್ತರು ನಡೆಸುವ ಕಾರ್ಯಕ್ರಮಗಳು ಉಪಗ್ರಹ ಮೂಲಕ ಮನೆಗಳನ್ನು ತಲಪುವ ತರಂಗ ವ್ಯವಸ್ಥೆಯನ್ನೇ ಹಾಳುಗೆಡವಲಾಯಿತು. ಇಂತಹ ಅಸಂಖ್ಯ ತಂತ್ರ ಕುತಂತ್ರಗಳ ಪರಿಣಾಮವಾಗಿ 2022 ಕ್ಕಾಗುವಾಗ ಸ್ವತಂತ್ರ ಪತ್ರಕರ್ತರಾರೂ ಈ ವಾಹಿನಿಗಳಲ್ಲಿ ಉಳಿಯಲಿಲ್ಲ.
ಸುಗತ ಶ್ರೀನಿವಾಸ ರಾಜು, ಕೃಷ್ಣಪ್ರಸಾದ್, ಪುಣ್ಯ ಪ್ರಸೂನ್ ವಾಜಪೇಯಿ, ಅಭಿಸಾರ ಶರ್ಮಾ, ಅಜಿತ್ ಅಂಜುಂ, ರವೀಶ್ ಕುಮಾರ್, ಶ್ರೀನಿವಾಸನ್ ಜೈನ್, ನಿಧಿ ರಾಜ್ಧಾನ್, ಸಾರಾ ಜೇಕಬ್, ಸಂಕೇತ್ ಉಪಾಧ್ಯಾಯ, ಸೋಹಿತ್ ಮಿಶ್ರಾ, ಸೌರಭ್ ಶುಕ್ಲಾ, ಸುನೀಲ್ ಸೈನಿ ಹೀಗೆ ಸುದ್ದಿ ಮಾಧ‍್ಯಮಗಳಿಂದ ಹೊರಬಿದ್ದ, ಹೊರಬೀಳಿಸಲಾದ ಪತ್ರಕರ್ತರ ಪಟ್ಟಿ ದೀರ್ಘವಿದೆ.
ಯೂಟ್ಯೂಬ್ ಕ್ರಾಂತಿ
ಇದೇ ಹೊತ್ತಿನಲ್ಲಿ ಯೂಟ್ಯೂಬ್ ವಾಹಿನಿಗಳು ಶುರುವಾದುದರಿಂದ ಹೀಗೆ ಹೊರಬಂದ ಅನೇಕ ಪತ್ರಕರ್ತರು ತಮ್ಮದೇ ಯೂಟ್ಯೂಬ್ ವಾಹಿನಿಯನ್ನು ಮಾಡಿಕೊಂಡಿದ್ದಾರೆ; ಹೊಟ್ಟೆ ಪಾಡಿನ ದಾರಿಯನ್ನೂ ಕಂಡುಕೊಂಡಿದ್ದಾರೆ; ಅಲ್ಲಿ ತುಂಬಾ ಪ್ರಸಿದ್ಧರೂ ಆಗಿದ್ದಾರೆ. ಬಹಳ ಕಾಲದಿಂದ ಯೂಟ್ಯೂಬ್ ವಾಹಿನಿ ಮಾಡಿಕೊಂಡಿರುವ ಅಜಿತ್ ಅಂಜುಂ ಅವರಿಗೆ 4.56 ಮಿಲಿಯನ್ ಚಂದಾದಾರರಿದ್ದರೆ, ಅಭಿಸಾರ ಶರ್ಮಾ ಅವರಿಗೆ 3.36 ಮಿಲಿಯನ್, ಪುಣ್ಯ ಪ್ರಸೂನ್ ವಾಜಪೇಯಿಯವರಿಗೆ 3.47 ಮಿಲಿಯನ್. ಸಾಕ್ಷಿ 1.26 ಮಿಲಿಯನ್ ಚಂದಾದಾರರಿದ್ದಾರೆ. ಕನ್ನಡದಲ್ಲಿಯೂ ವಿಜಯಲಕ್ಷ್ಮಿ ಶಿಬರೂರು ಅಂಥವರು ಯೂಟ್ಯೂಬ್ ವಾಹಿನಿಯ ಮೂಲಕ ಹೆಚ್ಚು ಜನಪ್ರಿಯರಾಗಿದ್ದಾರೆ.
ಇದರಲ್ಲಿ ರವೀಶ್ ಕುಮಾರ್ ಮಾಡಿದ್ದಂತೂ ಕ್ರಾಂತಿಯೇ ಸರಿ. ಕೇವಲ ಕೆಲವೇ ತಿಂಗಳ ಅವಧಿಯಲ್ಲಿ ಅವರಿಗೆ ಸಿಕ್ಕಿರುವ ಚಂದಾದಾರರು 7.98 ಮಿಲಿಯನ್. ಇವರೆಲ್ಲ ನಿತ್ಯವೂ ಸರಕಾರವನ್ನು ಪ್ರಶ್ನಿಸುವ ಕೆಲಸ ಮಾಡುತ್ತಲೇ ಇದ್ದಾರೆ. ಇದರಿಂದಾಗಿಯೇ ಸರಕಾರದ ಕಣ್ಣೂ ಇವರ ಮೇಲೆ ಬಿದ್ದಿದೆ. ಇವರನ್ನು ನಿಯಂತ್ರಿಸಲು ಬೇರೆ ಬೇರೆ ಕಾನೂನುಗಳನ್ನು ತರಲಾಗುತ್ತಿದೆ. ಇಂತಹ ಒಂದು ಕಾನೂನನ್ನು ಮುಂಬೈ ಹೈಕೋರ್ಟ್ ನಲ್ಲಿ ಪ್ರಶ್ನಿಸಲಾಗಿದ್ದು, ವಿಚಾರಣೆ ಮುಂದುವರಿದಿದೆ. ಇತ್ತೀಚಿನ ಟಿಲಿಕಮ್ಯುನಿಕೇಶನ್ ಕಾನೂನು ಕೂಡಾ ಈ ನಿಟ್ಟಿನಲ್ಲಿ ಯೂಟ್ಯೂಬ್ ಸುದ್ದಿ ವಾಹಿನಿಗಳಿಗೆ ಮರಣ ಶಾಸನವಾಗಬಹುದು ಎನ್ನಲಾಗುತ್ತಿದೆ. ಯಾವ ಸರಕಾರವೂ ತನ್ನನ್ನು ಪ್ರಶ್ನಿಸುವ ಸ್ವತಂತ್ರ ಸುದ್ದಿ ಮಾಧ‍್ಯಮವನ್ನು ಇಷ್ಟ ಪಡುವುದಿಲ್ಲ. ಅಂದ ಮೇಲೆ ಫ್ಯಾಸಿಸ್ಟ್ ಸರಕಾರಗಳು ಇಷ್ಟಪಡುತ್ತವೆಯೇ? ಇಲ್ಲಿ ಎಲ್ಲ ಕ್ಷುದ್ರ ಆಟಗಳನ್ನೂ ಆಡಲಾಗುತ್ತದೆ ಮತ್ತು ಅವೆಲ್ಲವೂ ನಿಯಮ ಪ್ರಕಾರವೇ ನಡೆಯುತ್ತವೆ. ಆದರೆ ಆ ನಿಯಮ ನಿರ್ಧರಿಸುವುದು ಸರಕಾರ ಮತ್ತು ಅದು ಯಾವಾಗಲೂ ಪಕ್ಷಪಾತದಿಂದಲೇ ಕೂಡಿರುತ್ತದೆ.
ವೀಕ್ಷಕರನ್ನು ಕಳೆದುಕೊಂಡ ಭಕ್ತ ವಾಹಿನಿಗಳು
ಸರಕಾರದ ಮರ್ಜಿಗೆ ಬಿದ್ದು ತಮ್ಮ ಜರ್ನಲಿಸಂ ಧರ್ಮವನ್ನು ಮರೆತ ಕಾರಣ ಇಂದು ಬಹುತೇಕ ಸುದ್ದಿ ವಾಹಿನಿಗಳು ತಮ್ಮ ಕ್ರೆಡಿಬಿಲಿಟಿಯನ್ನು ಕಳೆದುಕೊಂಡಿವೆ. ಸರಕಾರದ ಭಜನೆ ಮಾಡುವ ಸುದ್ದಿವಾಹಿನಿಯನ್ನು ಯಾರು ತಾನೇ, ಯಾಕೆ ನೋಡುತ್ತಾರೆ? ಅದಾನಿ ಕೈಗೆ ಹೋದ ನಂತರ ಎನ್ ಡಿ ಟಿ ವಿ ಹಿಂದಿ ವಾಹಿನಿಯನ್ನು ನೋಡುವವರ ಸಂಖ್ಯೆ 54% ಕಡಿಮೆಯಾಗಿದೆ (ತಿಂಗಳೊಂದರ 98 ಮಿಲಿಯನ್ ನಿಂದ 45 ಮಿಲಿಯನ್ ಗೆ ಕುಸಿತ). ಎನ್ ಡಿ ಟಿವಿ ಇಂಗ್ಲಿಷ್ ವಾಹಿನಿ ನೋಡುವವರ ಸಂಖ್ಯೆ 20% ಕಡಿಮೆಯಾಗಿದೆ. ಒಟ್ಟಾರೆಯಾಗಿ ಈ ವಾಹಿನಿಗಳನ್ನು ನೋಡುವವರ ಸಂಖ್ಯೆ ತೀವ್ರ ಗತಿಯಲ್ಲಿ ಇಳಿಮುಖವಾಗಿದೆ. ಇದು ಸರಕಾರಕ್ಕೂ ಅರ್ಥವಾಗಿದೆ. ಇದೇ ಕಾರಣದಿಂದ ಸುದ್ದಿವಾಹಿನಿಗಳನ್ನು ನಂಬಿ ಕೂತರೆ ಪ್ರಯೋಜನ ಇಲ್ಲ ಎಂದು ಅದು ಖಾಸಗಿ ಯೂಟ್ಯೂಬ್ ವಾಹಿನಿಗಳ ಹಿಂದೆ ಬಿದ್ದಿದೆ. ಸರಕಾರದ ಮಂತ್ರಿಗಳು ಆ ಯೂಟ್ಯೂಬರ್ ಗಳಿಗೆ ಹೆಚ್ಚು ಹೆಚ್ಚು ಸಂದರ್ಶನ ನೀಡಲಾರಂಭಿಸಿದ್ದಾರೆ.
ಪರ್ಯಾಯ ಮಾಧ್ಯಮಗಳೇ ಭರವಸೆ
ಒಟ್ಟಿನಲ್ಲಿ ಕಾಲ ಬದಲಾಗಿದೆ. ಜನರ ಕೈಯಲ್ಲಿ ಸ್ಮಾರ್ಟ್ ಫೋನ್ ಗಳಿವೆ, ಅಂತರ್ಜಾಲ ಸೌಲಭ್ಯವೂ ಇದೆ. ಕುಳಿತಲ್ಲೇ ಇದರ ಮೂಲಕ ಯೂಟ್ಯೂಬ್ ಸುದ್ದಿ ವಾಹಿನಿಗಳನ್ನು ನೋಡಲು ಸಾಧ್ಯವಿದೆ. ರವೀಶ್ ಕುಮಾರ್ ಅಂಥವರು ಹಾಕಿದ ವೀಡಿಯೋಗಳನ್ನು ಗಂಟೆಗಳಲ್ಲಿ ಲಕ್ಷಾಂತರ ಮಂದಿ ವೀಕ್ಷಿಸುತ್ತಿದ್ದಾರೆ. ಮುಖ್ಯಧಾರೆಯ ಮಾಧ್ಯಮಗಳು ತಮ್ಮ ಕಾಲಿಗೆ ತಾವೇ ಕಲ್ಲು ಹಾಕಿಕೊಂಡ ಪರಿಣಾಮ ಈಗ ಪರ್ಯಾಯ ಮಾಧ್ಯಮಗಳ ಕಾಲ. ದಿ ವೈರ್, ನ್ಯೂಸ್ ಲಾಂಡ್ರಿ, ದಿ ಸ್ಕ್ರಾಲ್, ಕ್ವಿಂಟ್, ದಿ ನ್ಯೂಸ್ ಮಿನಿಟ್, ನ್ಯೂಸ್ ಕ್ಲಿಕ್, ಕನ್ನಡದಲ್ಲಿ ನಾನು ಗೌರಿ, ವಿಜಯ ಟೈಮ್ಸ್, ಜನಶಕ್ತಿ, ಈದಿನ, ಪೀಪಲ್, ಸನ್ಮಾರ್ಗ, ವಾರ್ತಾಭಾರತಿ, ಪ್ರತಿಕ್ಷಣ, ಸುದ್ದಿ, ಮೊದಲಾದವು ಪರ್ಯಾಯ ಮಾಧ‍್ಯಮ ಕ್ಷೇತ್ರದಲ್ಲಿ ದೊಡ್ಡ ಕೆಲಸ ಮಾಡುತ್ತಿವೆ (ತಕ್ಷಣಕ್ಕೆ ನನ್ನ ಮನಸಿಗೆ ಬಂದ ಹೆಸರುಗಳಿವು). ಈಗ ಇವುಗಳಿಗೊಂದು ಹೊಸ ಸೇರ್ಪಡೆ ಕನ್ನಡ ಪ್ಲಾನೆಟ್.
ಅದೆಲ್ಲ ಸರಿ, ಸರಕಾರದ ನೀತಿಗಳನ್ನು ಟೀಕಿಸುವ ಮಾಧ್ಯಮಗಳು ಈ ತೆರದಲ್ಲಿ ಬೆಳೆಯುವುದನ್ನು ನೋಡುತ್ತಾ ಫ್ಯಾಸಿಸ್ಟ್ ಮನಸಿನ ಆಳುವವರು ಸುಮ್ಮನೆ ಕೂರುತ್ತಾರೆಯೇ? ಇಲ್ಲ. ಕತ್ತು ಹಿಸುಕಲು ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತಲೇ ಇರುತ್ತಾರೆ. ಅವರು ಯಾವಾಗ ಯಶಸ್ವಿಯಾಗುತ್ತಾರೋ ಗೊತ್ತಿಲ್ಲ. ಆದರೆ, ಅಲ್ಲಿಯವರೆಗೆ ಈ ಪರ್ಯಾಯ ಮಾಧ್ಯಮಗಳು ಒಂದು ದೊಡ್ಡ ಭರವಸೆ ಮತ್ತು ಅಲ್ಲಿಯ ತನಕ ಅವು ತಮ್ಮ ಪಾರಮ್ಯ ಮೆರೆಯಲಿವೆ.
ಶ್ರೀನಿವಾಸ ಕಾರ್ಕಳ, ಚಿಂತಕರು