ಆಲಮಟ್ಟಿ ಅಣೆಕಟ್ಟು ಎತ್ತರ: ವಿವಾದ ಸೃಷ್ಟಿಸದಂತೆ ಮಹಾರಾಷ್ಟ್ರಕ್ಕೆ ಪಾಟೀಲ್‌ ಮನವಿ

Most read

ವಿಜಯಪುರ: ಆಲಮಟ್ಟಿ ಅಣೆಕಟ್ಟು ಎತ್ತರಕ್ಕೆ ಸಂಬಂಧಿಸಿದಂತೆ ಅನಗತ್ಯವಾಗಿ ವಿವಾದ ಸೃಷ್ಟಿಸದಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಕೈಗಾರಿಕೆ ಮತ್ತು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಮನವಿ ಮಾಡಿಕೊಂಡಿದ್ದಾರೆ.

ಸಿಎಂ ಫಡ್ನವೀಸ್ ಅವರು, ಇಂತಹ ಅಪ್ರಸ್ತುತ ವಿಚಾರಗಳನ್ನು ಪ್ರಸ್ತಾಪಿಸುವ ಮೂಲಕ ಉಭಯ ರಾಜ್ಯಗಳ ನಡುವಿನ ಸೌಹಾರ್ದತೆಯನ್ನು ಹಾಳು ಮಾಡಬಾರದು ಎಂದರು.

ರಾಜ್ಯದ ನೆಲ, ಜಲ ಮತ್ತು ಭಾಷೆಯ ವಿಚಾರದಲ್ಲಿ ಚುನಾಯಿತ ಪ್ರತಿನಿಧಿಗಳು ಪಕ್ಷದ ಸಂಬಂಧ ಮರೆತು ಒಂದಾಗಿ ಕೆಲಸ ಮಾಡಬೇಕು. ನಮ್ಮ ನೆಲ ಮತ್ತು ನೀರನ್ನು ಸಂರಕ್ಷಿಸಲು ನಾವೆಲ್ಲರೂ ಒಟ್ಟಾಗಬೇಕು ಎಂದರು.

ಆಲಮಟ್ಟಿ ಅಣೆಕಟ್ಟು ಎತ್ತರದಿಂದ ಮಹಾರಾಷ್ಟ್ರದ ಕೊಲ್ಹಾಪುರದಂತಹ ಭಾಗಗಳಲ್ಲಿ ಪ್ರವಾಹಕ್ಕೆ ಕಾರಣವಾಗುತ್ತದೆ ಎನ್ನುವುದು ಕೇವಲ ಪುಕಾರು ಮಾತ್ರ. ಅಣೆಕಟ್ಟು ಎತ್ತರಿಸುವ ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ಕಾನೂನು ತಜ್ಞರ ಬೆಂಬಲವಿದ್ದು, ಮಹಾರಾಷ್ಟ್ರ ಅನಗತ್ಯವಾಗಿ ಈ ವಿವಾದವೆಬ್ಬಿಸಿದೆ. ನಾವು ಭಯ ಪಡುವ ಅಗತ್ಯವಿಲ್ಲ. ಉಭಯ ರಾಜ್ಯಗಳ ನಡುವಿನ ಸೌಹಾರ್ದತೆ ಹದಗೆಡುವುದನ್ನು ತಡೆಯುವಂತೆ ಮನವಿ ಮಾಡಿದ ಪಾಟೀಲ್, ಇಂತಹ ವಿಷಯಗಳನ್ನು ಪರಸ್ಪರ ಸಹಕಾರದಿಂದ ಬಗೆಹರಿಸಿಕೊಳ್ಳಬೇಕು ಎಂದರು.

ಶಿವಮೊಗ್ಗದಲ್ಲಿ ಇರುವಂತೆ ವಿಜಯಪುರದಲ್ಲಿಯೂ ವಿಮಾನ ತರಬೇತಿ ಕೇಂದ್ರವೊಂದು ಶೀಘ್ರದಲ್ಲಿಯೇ ಸ್ಥಾಪನೆಯಾಗಲಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಅನೇಕ ಕೈಗಾರಿಕೆಗಳು ತಲೆ ಎತ್ತಲಿವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

More articles

Latest article