ನವದೆಹಲಿ: ಭಾರತೀಯ ಸೇನೆ ನಡೆಸಿದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ಯಶಸ್ಸು ಹಾಗೂ ನಂತರದ ಬೆಳವಣಿಗೆಗಳನ್ನು ಕುರಿತು ಕೇಂದ್ರ ಸರ್ಕಾರ ಸರ್ವಪಕ್ಷಗಳ ಸಭೆಯಲ್ಲಿ ವಿವರಣೆ ನೀಡಿದೆ. ಈ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಗೈರು ಹಾಜರಾಗಿದ್ದಾರೆ. ನಿನ್ನೆಯಷ್ಟೇ ಕಾಂಗ್ರೆಸ್ ಮುಖಂಡ ಜೈರಾಂ ರಮೇಶ್ ಅವರು ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಮೋದಿ ಅವರು ಭಾಗವಹಿಸಲಿದ್ದಾರೆ. ಖುದ್ದು ಅವರೇ ವಿವರನೆ ನೀಡಲಾಗಿದ್ದಾರೆ ಎಂದು ಭಾವಿಸುವುದಾಗಿ ಹೇಳಿದ್ದರು.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಏಪ್ರಿಲ್ 22 ನಡೆದ ಉಗ್ರರ ದಾಳಿ ಬಳಕ ನಡೆಯುತ್ತಿರುವ ಎರಡನೇ ಸರ್ವಪಕ್ಷ ಸಭೆ ಇದಾಗಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಸಂಸತ್ ಭವನದಲ್ಲಿ ಈ ಸಭೆ ನಡೆಯುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಆರೋಗ್ಯ ಸಚಿವ ಜೆ.ಪಿ.ನಡ್ಡಾ, ವಿದೇಶಾಂಗ ಸಚಿವ ಎಸ್.ಜೈಶಂಕರ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸರ್ಕಾರದ ಪರವಾಗಿ ಹಾಜರಾಗಿದ್ದಾರೆ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಪಕ್ಷದಿಂದ ಭಾಗವಹಿಸಿದ್ದಾರೆ.
ಇತರ ಪ್ರತಿಪಕ್ಷಗಳಾದ ಸಂದೀಪ್ ಬಂಡೋಪಾಧ್ಯಾಯ (ಟಿಎಂಸಿ), ಟಿ.ಆರ್. ಬಾಲು (ಡಿಎಂಕೆ), ರಾಮ್ ಗೋಪಾಲ್ ಯಾದವ್ (ಸಮಾಜವಾದಿ ಪಕ್ಷ), ಸಂಜಯ್ ಸಿಂಗ್ (ಎಎಪಿ), ಸಂಜಯ್ ರಾವುತ್ (ಶಿವ ಸೇನಾ, ಯುಬಿಟಿ), ಸುಪ್ರಿಯಾ ಸುಳೆ (ಎನ್‌ಸಿಪಿ ಶರದ್ ಪವಾರ್) ಭಾಗವಹಿಸಿದ್ದಾರೆ. ಸಂಜಯ್ ಝಾ (ಜೆಡಿಯು), ಎಲ್‌ಜೆಪಿ ನಾಯಕ ಹಾಗೂ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಮತ್ತು ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಅವರೂ ಸಭೆಯಲ್ಲಿ ಭಾಗಿಯಾಗಿದ್ದಾರೆ
ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ 26 ಮಂದಿ ಪ್ರವಾಸಿಗರು ಅಸು ನೀಗಿದ್ದರು. ಇದಕ್ಕೆ ಪ್ರತಿಯಾಗಿ, ಬುಧವಾರ ಮುಂಜಾನೆ ಭಾರತೀಯ ಸೇನೆ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ನೆಲೆಗಳ ಮೇಲೆ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ನಡೆಸಿ ತಿರುಗೇಟು ನೀಡಿತ್ತು. ಈ ದಾಳಿಯಲ್ಲಿ ಜಾಗತಿಕ ಉಗ್ರ ಮಸೂದ್ ಅಜರ್ ಕುಟುಂಬದ 10 ಸದಸ್ಯರು, ನಾಲ್ವರು ಆಪ್ತರು ಸೇರಿದಂತೆ 70 ರಿಂದ 100 ಭಯೋತ್ಪಾದಕರು ಹತ್ಯೆಗೀಡಾಗಿದ್ದಾರೆ ಎಂದು ಸಭೆಗೆ ತಿಳಿಸಲಾಗಿದೆ.