ಅಲಹಾಬಾದ್ : ದೇವಸ್ಥಾನಗಳ ಟ್ರಸ್ಟುಗಳು ರಾಜ್ಯ ಸರಕಾರದಿಂದ ತಮಗೆ ಬರಬೇಕಾದ ಬಾಕಿ ಹಣವನ್ನು ಬಿಡುಗಡೆ ಮಾಡಿಸಿಕೊಳ್ಳಲು ನ್ಯಾಯಾಲಯದ ಮೆಟ್ಟಿಲು ಏರಬೇಕಾಗಿ ಬರುವ ಸ್ಥಿತಿಯನ್ನು ನೋಡಲು ನೋವುಂಟಾಗುತ್ತದೆ. ಈ ಹಣ ಸಂಬಂಧಪಟ್ಟ ಇಲಾಖೆಯ ಖಜಾನೆಯಿಂದ ಸಹಜ ಪ್ರಕ್ರಿಯೆಯಲ್ಲಿ ಪಾವತಿಯಾಗಬೇಕಿತ್ತು ಎಂದು ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶದ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದೆ.
ಉತ್ತರ ಪ್ರದೇಶದ ಸೆಕ್ಷನ್ 99ರ ಅಡಿಯಲ್ಲಿ ನಿರ್ಧರಿಸಿದಂತೆ ಠಾಕೂರ್ ರಂಗಜಿ ಮಹಾರಾಜ್ ವಿರಾಜಮಾನ ಮಂದಿರ, ವೃಂದಾವನ ಸೇರಿದಂತೆ ಇದರ ಇತರ 8 ದೇವಾಲಯಗಳ ವಾರ್ಷಿಕವಾಗಿ ಸರ್ಕಾರದಿಂದ ಸಂದಾಯವಾಗಬೇಕಿದ್ದ ಹಣ ಕಳೆದ ನಾಲ್ಕು ವರ್ಷದಿಂದ ಸಂದಾಯವಾಗಿಲ್ಲ. ಈ ಹಣವನ್ನು ಬಿಡುಗಡೆ ಮಾಡುವಂತೆ ಕೋರಿ ದೇವಸ್ಥಾನದ ಟ್ರಸ್ಟ್ ಹೈಕೋರ್ಟ್ ಮೊರೆ ಹೋಗಿತ್ತು.
ಈ ಪ್ರಕರಣದ ಸಂಬಂಧ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿ ರೋಹಿತ ರಂಜನ ಅಗರವಾಲ್ ನೇತೃತ್ವದ ಏಕಸದಸ್ಯ ಪೀಠವು, ಉತ್ತರ ಪ್ರದೇಶದ ಕಂದಾಯಮಂಡಳಿಯ ಕಮಿಷನರ್ ಅಥವಾ ಕಾರ್ಯದರ್ಶಿ ನ್ಯಾಯಾಲಯಕ್ಕೆ ಹಾಜರಾಗಿ ಈ 9 ದೇವಾಲಯಗಳಿಗೆ ವಾರ್ಷಿಕವಾಗಿ ಸಂದಾಯವಾಗಬೇಕಾಗಿದ್ದ ಹಣವನ್ನು ಕಳೆದ ನಾಲ್ಕು ವರ್ಷಗಳಿಂದ ಏಕೆ ತಡೆಹಿಡಿಯಲಾಗಿದೆ ಎಂಬುದನ್ನು ವಿವರಿಸಬೇಕು ಎಂದು ಉತ್ತರ ಪ್ರದೇಶ ಸರಕಾರಕ್ಕೆ ನಿರ್ದೇಶನ ನೀಡಿದೆ.
ಈ 9 ದೇವಸ್ಥಾನಗಳ ವಾರ್ಷಿಕ ಹಣ ತಡೆಹಿಡಿಯಲು ಹಣದ ಕೊರತೆ ಎಂದು ಕಾರಣ ನೀಡಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿರುವ ನ್ಯಾಯಾಲಯವು, ದೇವಸ್ಥಾನಗಳು ತಮಗೆ ಸಂದಾಯವಾಗಬೇಕಾದ ಹಣಕ್ಕಾಗಿ ನ್ಯಾಯಾಲಯದ ಮೊರೆ ಹೋಗದೆ ಸರಕಾರದಿಂದ ನೇರವಾಗಿ ದೇವಸ್ಥಾನಗಳಿಗೆ ಹಣ ಹರಿದುಬರಬೇಕು. ಸೂಕ್ತ ಕ್ರಮಕ್ಕಾಗಿ ಸಿಎಂ ಯೋಗಿ ಆದಿತ್ಯನಾಥ ಅವರ ಮುಂದೆ ಈ ಪ್ರಕರಣವನ್ನು ಇಡುವಂತೆಯೂ ಹೈಕೋರ್ಟ್ ಸೂಚಿಸಿದೆ.
ಅರ್ಜಿದಾರರ ಪರವಾಗಿ ವಾದ ಮಂಡಿಸಿದ ವಕೀಲ ದೇವಾಂಶ್ ಮಿಶ್ರಾ ವಾದ ಮಂಡಿಸಿದರು. ಕಂದಾಯ ಮಂಡಳಿ ಅನುಮತಿ ನೀಡದ ಕಾರಣ ವಾರ್ಷಿಕವಾಗಿ ಒಂಬತ್ತು ದೇವಸ್ಥಾನಗಳಿಗೆ ಬರಬೇಕಿದ್ದ 9,12,507 ರೂ.ಗಳನ್ನು ತಡೆಹಿಡಿಯಲಾಗಿದೆ. ಹಿಂದಿನ ವಿಚಾರಣೆಯಲ್ಲಿ, ಈ ದೇವಸ್ಥಾನಗಳಿಗೆ ವಾರ್ಷಿಕವಾಗಿ ಸಂದಾಯವಾಗಬೇಕಿದ್ದ ಹಣ ಬಿಡುಗಡೆಗೆ ಅನುಮತಿ ನೀಡದಿರಲು ಕಾರಣಗಳನ್ನು ವಿವರಿಸಿ, ಅವರ ವೈಯಕ್ತಿಕ ಅಫಿಡವಿಟ್ ಅನ್ನು ಸಲ್ಲಿಸಲು ಉತ್ತರ ಪ್ರದೇಶದ ಕಂದಾಯ ಮಂಡಳಿಯ ಆಯುಕ್ತರು/ಕಾರ್ಯದರ್ಶಿಗಳಿಗೆ ನ್ಯಾಯಾಲಯವು ನಿರ್ದೇಶಿಸಿತ್ತು.