ಬೆಂಗಳೂರು: ರಾಜ್ಯದ ಐತಿಹಾಸಿಕ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾದ ಬೀದರ್ನಿಂದ ಬೆಂಗಳೂರಿಗೆ ಮತ್ತೆ ವಿಮಾನ ಸಂಚಾರ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿಯಲ್ಲಿ ಈ ಹಿಂದೆ ವಿಮಾನ ಸಂಚಾರ ಆರಂಭವಾಗಿದ್ದರೂ ಕಳೆದ ಡಿಸೆಂಬರ್ನಲ್ಲಿ ಸ್ಥಗಿತಗೊಂಡಿತ್ತು.ಮತ್ತೆ ವಿಮಾನ ಸಂಚಾರ ಆರಂಭಿಸಲು ಪ್ರಯತ್ನಗಳು ನಡೆದಿದ್ದವು. ಆದರೆ ಕೇಂದ್ರ ಸರ್ಕಾರ ಉಡಾನ್ ಸೇರಿದಂತೆ ಯಾವುದೇ ಯೋಜನೆಯಡಿಯಲ್ಲಿ ನೆರವು ನೀಡುವುದಿಲ್ಲ ಎಂದು ತಿಳಿಸಿತ್ತು. ನಂತರ ಕರ್ನಾಟಕ ಸರ್ಕಾರವೇ ಸಹಾಯಧನ ಭರಿಸಿ ವಿಮಾನ ಸೇವೆ ಪುನಾರಂಭಿಸಲು ಮುಂದಾಗಿದೆ. ಕೆಲವೇ ದಿನಗಳಲ್ಲಿ ಮತ್ತೆ ಬೀದರ್ ನಿಂದ ಬೆಂಗಳೂರಿಗೆ ವಿಮಾನ ಸಂಚಾರ ಆರಂಭವಾಗಲಿದೆ.
ಬೀದರ್ ನಿಂದ ವಿಮಾನಯಾನ ಸೇವೆಯನ್ನು ಪುನಾರಂಭಿಸಲು ನಿನ್ನೆ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಇದಕ್ಕೆ ತಗುಲುವ ವೆಚ್ಚವನ್ನು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಶೇ. 70ರಷ್ಟು ಮತ್ತು ರಾಜ್ಯ ಸರ್ಕಾರ ಶೇ.30 ಭರಿಸಲಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ ವಿಮಾನಯಾನ ಸೇವೆ ಪುನಾರಂಭವಾಗಲಿದೆ ಎಂದು ಬೀದರ್ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಅರಣ್ಯ,ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಬೀದರ್ ಜಿಲ್ಲೆಯಲ್ಲಿ ಅನುಭವ ಮಂಟಪ ಇರುವ ಬಸವಕಲ್ಯಾಣ, ಗುರುನಾನಕ್ ಝೀರಾ ಗುರುದ್ವಾರ, ಮಹಮದ್ ಗವಾನರ ಮದರಸಾ ಝರಣಿ ನರಸಿಂಹಸ್ವಾಮಿ ದೇವಾಲಯ, ಬೀದರ್ ಕೋಟೆ ಪ್ರವಾಸಿಗರನ್ನು ಆಕರ್ಷಿಸುವ ತಾಣಗಳಾಗಿವೆ. ಹೀಗಾಗಿ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿದ್ದು, ನಾಗರೀಕ ವಿಮಾನಯಾನ ಸೇವೆ ಆರಂಭವಾದರೆ ಪುಷ್ಠಿ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.
ಆರು ವರ್ಷದ ಹಿಂದೆ ಉಡಾನ್ ಅಡಿ ಬೀದರ್ ವಿಮಾನ ನಿಲ್ದಾಣವನ್ನು ಅಭಿವೃದ್ದಿಪಡಿಸಲಾಗಿತ್ತು. ಬೆಂಗಳೂರಿನಿಂದಲೂ ವಿಮಾನ ಸೇವೆಯೂ ಇತ್ತು. ಹತ್ತು ತಿಂಗಳ ಹಿಂದೆಯೇ ಸ್ಟಾರ್ ಏರ್ವೇಸ್ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಿತ್ತು. ಸಚಿವ ಈಶ್ವರ ಖಂಡ್ರೆ, ಸಂಸದ ಸಾಗರ್ ಖಂಡ್ರೆ ಅವರು ಕೇಂದ್ರ ಸಚಿವ ರಾಮಮೋಹನ್ ನಾಯ್ಡು ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿರಲಿಲ್ಲ. ಇದೀಗ ರಾಜ್ಯ ಸರ್ಕಾರವೇ ವಿಮಾನ ಸಂಚಾರಕ್ಕೆ ನೆರವು ನೀಡಿದೆ.