ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ದೇಶಾದ್ಯಂತ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಿಂದ ಹೊರಡುವ ಅನೇಕ ವಿಮಾನಗಳ ಸಂಚಾರವನ್ನು ರದ್ದುಪಡಿಸಲಾಗಿದೆ. ಇದೇ ವೇಳೆ ವಿಮಾನಯಾನ ಸಂಸ್ಥೆ ಇಂಡಿಗೋ, ಶ್ರೀನಗರ, ಜಮ್ಮು, ಅಮೃತಸರ, ಲೇಹ್, ಚಂಡೀಗಢ, ಧರ್ಮಶಾಲಾ, ಬಿಕಾನೇರ್, ಜೋಧ್‌ಪುರ, ಕಿಶನ್‌ಗಢ ಮತ್ತು ರಾಜ್‌ಕೋಟ್‌ಗೆ ತೆರಳುವ ಮತ್ತು ಅಲ್ಲಿಂದ ಹೊರಡುವ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಿದೆ. ಮೇ 10ರ ಮಧ್ಯರಾತ್ರಿಯವರೆಗೆ ಇದು ಮುಂದುವರೆಯಲಿದೆ.
ಇಂಡಿಗೋ ತನ್ನ ಅಧಿಕೃತ ಎಕ್ಸ್ ಮೂಲಕ ಮಾಹಿತಿ ಹಂಚಿಕೊಂಡಿದೆ. ಇದೇ ವೇಳೆ ಅಗತ್ಯವಿರುವ ಯಾವುದೇ ಪ್ರಯಾಣ ಮಾರ್ಪಾಡುಗಳಿಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದೆ.
ಮುಂಬೈ ಹಾಗೂ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ವಿಮಾನ ನಿಲ್ದಾಣಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದರೂ, ಭದ್ರತಾ ಚೆಕ್ ಪೋಸ್ಟ್‌ಗಳಲ್ಲಿ ಹೆಚ್ಚುವರಿ ಸಮಯ ಬೇಕಾಗಬಹುದು ಎಂದು ಪ್ರಯಾಣಿಕರಿಗೆ ಸೂಚಿಸಿದೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರು ಕನಿಷ್ಠ 3 ಗಂಟೆ ಮುಂಚಿತವಾಗಿ ಬರುವಂತೆ ಸೂಚಿಸಲಾಗಿದೆ.
ದೆಹಲಿ ವಿಮಾನ ನಿಲ್ದಾಣದಲ್ಲಿ 138 ವಿಮಾನಗಳು ರದ್ದು:
ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚುತ್ತಿದ್ದು, ದೇಶದ ಅತಿದೊಡ್ಡ ಮತ್ತು ಜನನಿಬಿಡ ವಿಮಾನ ನಿಲ್ದಾಣವಾಗಿರುವ ದೆಹಲಿ ವಿಮಾನ ನಿಲ್ದಾಣದಲ್ಲಿ ಒಟ್ಟು 138 ವಿಮಾನಗಳನ್ನು ರದ್ದುಗೊಳಿಸಲಾಗಿದೆ. ವಿದೇಶದಿಂದ ಬರಬೇಕಿದ್ದ 4 ವಿಮಾನಗಳು ಮತ್ತು ವಿದೇಶಗಳಿಗೆ ಹೊರಡಬೇಕಿದ್ದ 5 ವಿಮಾನಗಳು 63 ದೇಶೀಯ ಆಗಮನ ಹಾಗೂ ಮತ್ತು 66 ದೇಶೀಯ ವಿಮಾನಗಳನ್ನು ಸಂಚಾರವನ್ನು ರದ್ದುಗೊಳಿಸಲಾಗಿದೆ. ಕಳೆದ 2 ದಿನಗಳಲ್ಲಿ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 228 ವಿಮಾನಗಳ ಹಾರಾಟ ರದ್ದುಗೊಂಡಿದೆ.