ಮಂಗಳೂರು: ಬಿಜೆಪಿ ಜತೆ ಗುರುತಿಸಿಕೊಂಡಿರುವ ಆರ್ ಎಸ್ ಎಸ್ ಕೂಡ ಒಂದು ರಾಜಕೀಯ ಸಂಘಟನೆಯಾಗಿದ್ದು, ಅದರ ಉದ್ದೇಶ ಹಾಗೂ ಕಾರ್ಯಕ್ರಮಗಳನ್ನು ಕುರಿತು ಅನುಮಾನ ಮೂಡುವುದು ಸಹಜ ಎಂದು ಆರೋಗ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ರಾಜ್ಯೋತ್ಸವ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಘ ಪರಿವಾರ ಒಂದು ಕೋಮುವಾದಿ ಸಂಘಟನೆ. ಅದರ ಇತಿಹಾಸ ಎಲ್ಲರಿಗೂ ತಿಳಿದಿದೆ. ಆರ್‌ಎಸ್ಎಸ್ ಕೂಡಾ ದೇಶದ ಕಾನೂನು ಅಡಿಯಲ್ಲೇ ಕೆಲಸ ಮಾಡಬೇಕು. ಪಥಸಂಚಲನವನ್ನೂ ಯಾರಿಗೂ ತೊಂದರೆ ಉಂಟಾಗದಂತೆ ಕಾನೂನಿನ ಚೌಕಟ್ಟಿನಲ್ಲೇ ಮಾಡಬೇಕಾಗುತ್ತದೆ ಎಂದರು.
ಆರ್‌ಎಸ್ಎಸ್,ಪಿಎಫ್‌ಐ ಎಸ್‌ಡಿಪಿಐ ಸೇರಿದಂತೆ ಯಾವುದೇ ಸಂಘಟನೆ ಕಾರ್ಯಕ್ರಮ ಮಾಡಬೇಕೆಂದರೆ ಅನುಮತಿ ಪಡೆಯಲೇಬೇಕು ಎಂದು ತಿಳಿಸಿದರು.
ಧರ್ಮಸ್ಥಳ ಪ್ರಕರಣ ಕುರಿತು ತನಿಖೆ ನಡೆಸುತ್ತಿರುವ ಎಸ್‌ಐಟಿ ತನ್ನ ಜವಾಬ್ದಾರಿಯನ್ನುಸಮರ್ಥವಾಗಿ ನಿಭಾಯಿಸಿದೆ. ನ್ಯಾಯಾಲಯವು ಎಸ್‌ಐಟಿ ತನಿಖೆಗೆ ತಡೆಯಾಜ್ಞೆ ನೀಡಿದೆಯೇ ಹೊರತು ತನಿಖೆಯನ್ನು ರದ್ದು ಗೊಳಿಸಿಲ್ಲ ಸರ್ಕಾರಿ ವಕೀಲರು ತನಿಖೆಯನ್ನು ಮುಂದುವರಿಸಲು ಅವಕಾಶ ನೀಡಬೇಕು ಎಂದು ವಾದಿಸಿದ್ದರು. ನ್ಯಾಯಾಲದ ಆದೇಶವನ್ನು ಪ್ರಶ್ನೆ ಮಾಡಲಾಗದು. ಆದರೆ ತಡೆಯಾಜ್ಞೆ ತೆರವುಗೊಳಿಸಲು ಸರ್ಕಾರ ಪ್ರಯತ್ನ ನಡೆಸಲಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗ ಮುಂದುವರಿಯುತ್ತಿದ್ದು, ದಲಿತ ಮುಖ್ಯಮಂತ್ರಿ ಕುರಿತು ಚರ್ಚೆ ನಡೆಸುವ ಅಗತ್ಯವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು

