ಗುಜರಾತ್‌ ನಲ್ಲಿ ನಾಳೆಯಿಂದ ಎಐಸಿಸಿ ಅಧಿವೇಶನ: ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ  ಡಿಕೆ ಶಿವಕುಮಾರ್‌ ಭಾಗಿ

Most read

ನವದೆಹಲಿ: 64 ವರ್ಷಗಳ ನಂತರ, ನಾಳೆ ಮತ್ತು ನಾಡಿದ್ದು ಗುಜರಾತ್‌ನ ಅಹಮದಾಬಾದ್‌ನಲ್ಲಿ ಅಖಿಲ ಭಾರತ ಕಾಂಗ್ರೆಸ್‌ ಸಮಿತಿ (ಎಐಸಿಸಿ) ಅಧಿವೇಶನ ನಡೆಯಲಿದೆ. ಈ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರು ಭಾಗವಹಿಸುತ್ತಿದ್ದಾರೆ. ಇಬ್ಬರೂ ಮುಖಂಡರು ಇಂದೇ ಅಹಮದಾಬಾದ್‌ ಗೆ ತೆರಳೂತ್ತಿದ್ದಾರೆ.

ಈ ಹಿಂದೆ ಅಹಮದಾಬಾದ್‌ನಲ್ಲಿ 1902 ಹಾಗೂ 1921ರಲ್ಲಿ ಎಐಸಿಸಿ ಅಧಿವೇಶನ ನಡೆದಿತ್ತು. ಸ್ವಾತಂತ್ರ್ಯ ನಂತರ, 1961ರ ಜನವರಿ 6 ಮತ್ತು 7ರಂದು ಭಾವನಗರದಲ್ಲಿ ನಡೆದಿತ್ತು. ಇದಾದ ನಂತರ, ಈಗ ಮತ್ತೆ ಪಕ್ಷವು ಗುಜರಾತ್‌ನಲ್ಲಿ ಅಧಿವೇಶನ ಆಯೋಜಿಸಿರುವುದು ಗಮನ ಸೆಳೆದಿದೆ. ಗುಜರಾತ್‌ನಲ್ಲಿ ಐದು ಅಧಿವೇಶನಗಳು ನಡೆದಿವೆ. 

ಗುಜರಾತ್‌ ನಲ್ಲಿ ಕಾಂಗ್ರೆಸ್‌ ನೆಲಕಚ್ಚಿದ್ದು ಈ ಅಧಿವೇಶನದ ಮೂಲಕ ಪುನಃಶ್ಚೇತನ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ.

ಅಹಮದಾಬಾದ್‌ನಲ್ಲಿ 1902ರ ಡಿಸೆಂಬರ್ 23ರಿಂದ 26ರ ವರೆಗೆ ಮೊದಲ ಅಧಿವೇಶನ ನಡೆದಿತ್ತು. ಸುರೇಂದ್ರ ನಾಥ್ ಬ್ಯಾನರ್ಜಿ ಆಗ ಎಐಸಿಸಿ ಅಧ್ಯಕ್ಷರಾಗಿದ್ದರು ಹಾಗೂ 471 ಪ್ರತಿನಿಧಿಗಳು ಅಧಿವೇಶನದಲ್ಲಿ ಭಾಗವಹಿಸಿದ್ದರು. ನಂತರ, ಸೂರತ್‌ನಲ್ಲಿ 1907ರ ಡಿಸೆಂಬರ್ 26 ಹಾಗೂ 27ರಂದು ನಡೆದ ಅಧಿವೇಶನ ಕೂಡ ಭಾರಿ ಕೋಲಾಹಲಕ್ಕೆ ಸಾಕ್ಷಿಯಾಗಿತ್ತು. ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಹೋರಾಟ ಕುರಿತ ಚರ್ಚೆ ವೇಳೆ, ಪಕ್ಷದಲ್ಲಿನ ಮಂದಗಾಮಿಗಳು ಹಾಗೂ ತೀವ್ರಗಾಮಿಗಳ ನಡುವೆ ಚಕಮಕಿಗೆ ಕಾರಣವಾಗಿತ್ತು. ರಾಶ್ ಬಿಹಾರಿ ಘೋಷ್‌ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದನ್ನು ಬಾಲ ಗಂಗಾಧರ ತಿಲಕರು ಪ್ರಶ್ನಿಸಿದ್ದರು.  ಪಕ್ಷದ ಅಧ್ಯಕ್ಷ ಸಿ.ಆರ್‌.ದಾಸ್‌ ಅವರು ಜೈಲಿನಲ್ಲಿದ್ದರು. ಆ ವೇಳೆ, ಅಸಹಕಾರ ಚಳವಳಿ ಕಾವು ಏರತೊಡಗಿತ್ತು. ತಮ್ಮ ಬೇಡಿಕೆಗಳನ್ನು ಬ್ರಿಟಿಷ್‌ ಸರ್ಕಾರ ಈಡೇರಿಸಿದ್ದರೆ ಅಸಹಕಾರ ಚಳವಳಿಯನ್ನು ಮತ್ತಷ್ಟು ತೀವ್ರಗೊಳಿಸಲು ಕಾಂಗ್ರೆಸ್‌ ಸಜ್ಜಾಗಿತ್ತು. ಇಂತಹ ಸಂಘರ್ಷಮಯ ಸಂದರ್ಭದಲ್ಲಿ, 1921ರಲ್ಲಿ ಅಹಮದಾಬಾದ್‌ನಲ್ಲಿ ಹಕೀಂ ಅಜ್ಮಲ್ ಶಾ ಅಧ್ಯಕ್ಷತೆಯಲ್ಲಿ ಅಧಿವೇಶನ ನಡೆದಿತ್ತು.

ಸರ್ದಾರ ವಲ್ಲಭಭಾಯಿ ಪಟೇಲ್‌ ಅವರು ಆಗ ಸ್ವಾಗತ ಸಮಿತಿ ಅಧ್ಯಕ್ಷರಾಗಿದ್ದರು. ಪಕ್ಷದ ಮುಂದಿನ ನಡೆಗಳು ಹಾಗೂ ಉತ್ತರಾಧಿಕಾರಿಯೊಬ್ಬರ ನಾಮನಿರ್ದೇಶನ ಮಾಡುವ ಅಧಿಕಾರವನ್ನು ಅಂದಿನ ಅಧಿವೇಶನದಲ್ಲಿ ಮಹಾತ್ಮ ಗಾಂಧಿ ಅವರಿಗೆ ನೀಡಲಾಗಿತ್ತು. 1938ರ ಫೆಬ್ರುವರಿ 19ರಿಂದ 21ರವರೆಗೆ ಹರಿಪುರದಲ್ಲಿ ಅಧಿವೇಶನ ನಡೆದ ಸಂದರ್ಭದಲ್ಲಿ ಸುಭಾಶ್‌ ಚಂದ್ರ ಬೋಸ್‌ ಅವರು ಪಕ್ಷದ ಅಧ್ಯಕ್ಷರಾಗಿದ್ದರು. ‘ಪೂರ್ಣ ಸ್ವರಾಜ್’ ಬೇಡಿಕೆಯನ್ನು ಪಕ್ಷ ಪುನರುಚ್ಚರಿಸಿತ್ತು. 1939ರಲ್ಲಿ ಬೋಸ್‌ ಅವರು ಪಕ್ಷದ ಅಧ್ಯಕ್ಷರಾಗಿ ಪುನರಾಯ್ಕೆಗೊಂಡಿದ್ದರು. ಆದರೆ, ಅವರ ಆಯ್ಕೆಗೆ ಗಾಂಧೀಜಿ ವಿರೋಧ ವ್ಯಕ್ತಪಡಿಸಿದ ಕಾರಣ, ಬೋಸ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

More articles

Latest article