ಇಂದಿನಿಂದ ಕೃಷಿ ಮೇಳ; ವೈಶಿಷ್ಠ್ಯಗಳೇನು?

Most read

ಬೆಂಗಳೂರು: ಇಂದಿನಿಂದ ಮೂರು ದಿನಗಳ ಕಾಲ ಬೆಂಗಳೂರು ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ನಾಲ್ಕು ದಿನ ಕೃಷಿ ಮೇಳ ನಡೆಯಲಿದೆ. ಈ ಬಾರಿಯ ಮೇಳದ ವಿಶೇಷತೆಗಳೇನು? ರೈತರಿಗೆ ಏನೆಲ್ಲ ತಾಂತ್ರಿಕ ಮಾಹಿತಿಗಳನ್ನು ಪರಿಚಯಿಸಲಾಗುತ್ತಿದೆ ನೋಡೋಣ ಬನ್ನಿ.

ನವೆಂಬರ್ 14 ರಿಂದ 17 ರವರೆಗೆ ನಾಲ್ಕು ದಿನಗಳ ಕಾಲ ಈ ಮೇಳ ನಡೆಯಲಿದೆ ಎಂದು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಸ್.ವಿ. ಸುರೇಶ್ ತಿಳಿಸಿದ್ದಾರೆ.

ಕೃಷಿ ಮೇಳದಲ್ಲಿ ಕೃಷಿ ವಿಶ್ವವಿದ್ಯಾನಿಲಯ ಅಭಿವೃದ್ಧಿ ಪಡಿಸಿರುವ ಮುಸುಕಿನ ಜೋಳ ಸಂಕರಣ ತಳಿ, ಅಲಸಂದೆ ತಳಿ, ಸೂರ್ಯಕಾಂತಿ ಸಂಕರಣ ತಳಿ, ಬಾಜ್ರ ನೇಪಿಯರ್ ಸಂಕರಣ ತಳಿಗಳನ್ನು ಬಿಡುಗಡೆ ಮಾಡಲಾಗುತ್ತದೆ. ಮಲ್ಟಿಸ್ಪೆಕ್ಟ್ರಲ್ ಡ್ರೋನ್, ಕೃಷಿ ಡ್ರೋನ್, ರೊಬೋಟ್ ಕೃಷಿ ಯಂತ್ರ, ಹಣ್ಣಿನ ವರ್ಗೀಕರಣ ಯಂತ್ರ, ಸ್ವಯಂ ಚಾಲಿತ ರಸಗೊಬ್ಬರ ಹರಡುವ ಯಂತ್ರ, ಆಳ ನಿಯಂತ್ರಕ ರೋಟವೇಟರ್, ಸ್ವಯಂಚಾಲಿತ ಬೂಮ್ ಸ್ಟ್ರೇಯರ್, ಸೌರಶಕ್ತಿ ಚಾಲಿತ ಬರ್ಡ್ ಸ್ಕೇರರ್ ತಾಂತ್ರಿಕತೆಯ ಪ್ರದರ್ಶನವಿರುತ್ತದೆ.

ಸಮಗ್ರ ಬೇಸಾಯ ಪದ್ದತಿ ಪ್ರಾತ್ಯಕ್ಷಿಕೆ, ಖುಷ್ಕಿ ಬೇಸಾಯಕ್ಕೆ ಸೂಕ್ತವಾದ ಬೆಳೆ ಪದ್ಧತಿಗಳು, ನೂತನವಾಗಿ ಬಿಡುಗಡೆಯಾದ ವಿವಿಧ ಬೆಳೆ ತಳಿಗಳ ಪ್ರಾತ್ಯಕ್ಷಿಕೆ, ರೇಷ್ಮೆ ಕೃಷಿ, ತೋಟಗಾರಿಕೆ ಬೆಳೆಗಳ ಮತ್ತು ನಿಖರ ಕೃಷಿ ಪ್ರಾತ್ಯಕ್ಷಿಕೆ, ಔಷಧೀಯ ಮತ್ತು ಸುಗಂಧ ದ್ರವ್ಯ ಸಸ್ಯಗಳು, ಸಿರಿಧಾನ್ಯಗಳು ಹಾಗೂ ಮಹತ್ವ, ಜಲಾನಯನ ನಿರ್ವಹಣೆ, ಸಾವಯವ ಕೃಷಿ ಪದ್ಧತಿಗಳು,ಮಣ್ಣು ರಹಿತ ಕೃಷಿ, ಕೃಷಿಯಲ್ಲಿ ನೂತನ ಮಾಹಿತಿ ತಂತ್ರಜ್ಞಾನ, ಹನಿ ಮತ್ತು ತುಂತುರು ನೀರಾವರಿ ಪದ್ಧತಿಗಳು, ಮಳೆ ಹಾಗೂ ಮೇಲ್ಛಾವಣಿ ನೀರಿನ ಕೊಯ್ಲು, ಸುಧಾರಿತ ಕೃಷಿ ಯಂತ್ರೋಪಕರಣಗಳ ಪ್ರದರ್ಶನ,ಕೊಯ್ಲಿನೋತ್ತರ ತಾಂತ್ರಿಕತೆ, ಕೃಷಿ ಉತ್ಪನ್ನ, ಸಂಸ್ಕರಣೆ ಮತ್ತು ಮೌಲ್ಯ ವರ್ಧನೆ, ಬಿತ್ತನೆ ಬೀಜಗಳ ಪರೀಕ್ಷೆ ಹಾಗೂ ಶೇಖರಣೆ, ಪಶುಸಂಗೋಪನೆ ಹೈನುಗಾರಿಕೆ, ಕುರಿ, ಕೋಳಿ ಹಾಗೂ ಮೀನು ಸಾಕಾಣಿಕೆ, ಜೈವಿಕ ಹಾಗೂ ನವೀಕರಿಸಲ್ಪಡುವ ಇಂಧನ, ಕೃಷಿ ಆಟೋಮೇಷನ್ ತಂತ್ರಜ್ಞಾನಗಳು, ಮಾರುಕಟ್ಟೆ ನೈಪುಣ್ಯತೆ ಮಾಹಿತಿ, ಕೃಷಿ ಪರಿಕರಗಳ ಹಾಗೂ ಪ್ರಕಟಣೆಗಳ ಮಾರಾಟ ವ್ಯವಸ್ಥೆ ಕೃಷಿ ಮೇಳದ ಇತರೆ ಆಕರ್ಷಣೆಗಳಾಗಿವೆ.

ಸುಮಾರು 700 ಮಳಿಗೆಗಳಲ್ಲಿ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ಮಳಿಗೆಗಳು, ಕೃಷಿ ಸಂಬಂಧಿಸಿದ ವಿಶ್ವವಿದ್ಯಾನಿಲಯಗಳು / ಸಂಸ್ಥೆಗಳು, ಅಭಿವೃದ್ಧಿ ಇಲಾಖೆಗಳ ಮಳಿಗೆಗಳು, ಕೃಷಿ ಪರಿಕರಗಳ ಮಳಿಗೆಗಳು, ಕೃಷಿ ಇಂಜಿನಿಯರಿಂಗ್ ಮತ್ತು ಪಶುಸಂಗೋಪನೆ ಮಳಿಗೆಗಳಲ್ಲಿ ನೂತನ ತಂತ್ರಜ್ಞಾನಗಳನ್ನು ಪ್ರದರ್ಶಿಸಲಾಗಿದೆ.


ರೈತರ ಕೃಷಿ ಸಮಸ್ಯೆಗಳಿಗೆ ತಜ್ಞರಿಂದ ವೈಜ್ಞಾನಿಕ ಸಲಹೆ, ತಜ್ಞ ವಿಜ್ಞಾನಿಗಳ ತಂಡದಿಂದ ಕೃಷಿ ಸಂಬಂಧಿತ ಪ್ರಶ್ನೆಗಳಿಗೆ ನೇರ ಪರಿಹಾರ, ಪ್ರಾತ್ಯಕ್ಷಿಕಾ ತಾಕುಗಳು, ಮಳಿಗೆಗಳು ಮತ್ತು ಕೃಷಿ ಮೇಳದ ಕಾರ್ಯಕ್ರಮವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಮಹಾದ್ವಾರದಿಂದ ಕೃಷಿ ಮೇಳದ ಸಭಾಂಗಣಕ್ಕೆ ತಲುಪಲು ಸಾರ್ವಜನಿಕರಿಗೆ ಉಚಿತ ಸಾರಿಗೆ ವ್ಯವಸ್ಥೆ, ಪ್ರತ್ಯೇಕ ವಾಹನ ನಿಲುಗಡೆ ವ್ಯವಸ್ಥೆ, ಉಚಿತ ಪ್ರವೇಶ, ರಿಯಾಯಿತಿ ದರದಲ್ಲಿ ಮುದ್ದೆ ಊಟದ ವ್ಯವಸ್ಥೆ ಮಾಡಲಾಗಿದೆ.

More articles

Latest article