ಕೃಷಿ ಕ್ಷೇತ್ರಕ್ಕೆ ಹಿನ್ನಡೆಯಾದರೆ ಆಹಾರ ಉತ್ಪಾದನೆಯ ಕೊರತೆ ಉಂಟಾಗುತ್ತದೆ. ಉತ್ಪಾದನೆ ಕಡಿಮೆಯಾದಷ್ಟೂ ಬೆಲೆಗಳು ಹೆಚ್ಚಾಗುತ್ತವೆ. ದರಗಳು ಹೆಚ್ಚಾದಷ್ಟೂ ಬಂಡವಾಳಿಗರ ಕಂಪನಿಗಳು ಲಾಭ ಮಾಡಿಕೊಳ್ಳುತ್ತವೆ ಹಾಗೂ ಜನರು ಬಡತನದ ಬವಣೆಗೆ ಸಿಲುಕಿ ತೀವ್ರ ತೊಂದರೆಗೆ ಒಳಗಾಗುತ್ತಾರೆ. ಕಾರ್ಪೊರೇಟ್ ಕಂಪನಿಗಳ ಹಿತಾಸಕ್ತಿ ಕಾಪಾಡಲೆಂದೇ ಇರುವ ಮೋದಿಯವರ ಸರಕಾರಕ್ಕೆ ಇದೇ ಬೇಕಾಗಿದೆ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ಕೇಂದ್ರ ಸರಕಾರದಿಂದ ಮತ್ತೆ ಕರ್ನಾಟಕಕ್ಕೆ ಅನ್ಯಾಯವಾಗಿದೆ. ರಾಜ್ಯದಲ್ಲಿ ಯಾವುದೇ ಪಕ್ಷದ ಸರಕಾರ ಇದ್ದಾಗಲೂ ಕೇಂದ್ರದ ಮೋದಿ ನೇತೃತ್ವದ ಸರಕಾರ ಬಂದಾಗಿನಿಂದಲೂ ಕರ್ನಾಟಕವನ್ನು ಮಲತಾಯಿ ಧೋರಣೆಯಿಂದಲೇ ನೋಡಲಾಗುತ್ತಿದೆ. ಇಡೀ ಭಾರತದಲ್ಲಿ ಮಹಾರಾಷ್ಟ್ರ ಹೊರತು ಪಡಿಸಿದರೆ ಅತೀ ಹೆಚ್ಚು ತೆರಿಗೆಯನ್ನು ಕೇಂದ್ರ ಸರಕಾರಕ್ಕೆ ಪಾವತಿಸುತ್ತಿರುವ ಕರ್ನಾಟಕಕ್ಕೆ ಅತೀ ಕಡಿಮೆ ಪಾಲನ್ನು ಮರಳಿಸುತ್ತಿರುವುದು ತಾರತಮ್ಯದ ಪರಮಾವಧಿಯಾಗಿದೆ. ರಾಜ್ಯದಿಂದ ಒಂದು ರೂಪಾಯಿ ತೆರಿಗೆ ತೆಗೆದುಕೊಂಡರೆ ಕೇವಲ 13 ಪೈಸೆಯಷ್ಟನ್ನು ಮಾತ್ರ ವಾಪಸ್ ಕೊಡಲಾಗುತ್ತಿದೆ. ಅದೂ ಗೋಗರೆದು ಕೇಳಬೇಕು, ಇಲ್ಲವೇ ಸುಪ್ರೀಂ ಕೋರ್ಟಿಗೆ ಹೋಗಿ ಪಡೆಯಬೇಕಾದ ದು:ಸ್ಥಿತಿ ನತದೃಷ್ಟ ಕರ್ನಾಟಕದ್ದು.
ಈಗ ನಬಾರ್ಡ್ ಮೂಲಕ ಪ್ರತಿ ವರ್ಷ ಕೊಡುತ್ತಿದ್ದ ರಿಯಾಯತಿ ಬಡ್ಡಿದರದ ಕೃಷಿ ಸಾಲವನ್ನೂ ಸಹ ಕೇಂದ್ರ ಸರಕಾರ 58% ರಷ್ಟು ಕಡಿತಗೊಳಿಸಿ ಕರ್ನಾಟಕದ ರೈತರಿಗೆ ಅತೀವ ಅನ್ಯಾಯ ಮಾಡಿದೆ. ಕಡಿಮೆ ಬಡ್ಡಿಯ ಕೃಷಿ ಸಾಲವನ್ನು ನಂಬಿಕೊಂಡು ಉಳುಮೆ ಮಾಡಿಕೊಳ್ಳುವ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಎಂಟತ್ತು ಪರ್ಸೆಂಟೇಜ್ ಬಡ್ಡಿ ತೆತ್ತು ಸಾಲ ಪಡೆದು ತೀರಿಸುವಷ್ಟು ಶ್ರೀಮಂತ ಹಿಡುವಳಿದಾರರು ಕರ್ನಾಟಕದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಇಲ್ಲ. ಖಾಸಗಿ ಸಂಸ್ಥೆಗಳಿಂದ ಹೆಚ್ಚು ಬಡ್ಡಿಗೆ ಸಾಲದ ಸುಳಿಗೆ ಸಿಕ್ಕುವುದು ಆತ್ಮಹತ್ಯೆಗೆ ದಾರಿ. ಹೀಗಿರುವಾಗ ಕರ್ನಾಟಕದ ರೈತರು ಅತೀ ಕಡಿಮೆ ಬಡ್ಡಿಗೆ ಡಿಸಿಸಿ ಬ್ಯಾಂಕ್ ನಿಂದ ಸಾಲ ಪಡೆದು ತಮ್ಮ ಕೃಷಿ ಚಟುವಟಿಕೆಗಳನ್ನು ಮುಂದುವರೆಸುತ್ತಿದ್ದರು. ರಾಜ್ಯದ 35 ಲಕ್ಷ ರೈತರು ಕೃಷಿ ಸಾಲಕ್ಕಾಗಿ ಡಿಸಿಸಿ ಸಹಕಾರಿ ಬ್ಯಾಂಕನ್ನೇ ನಂಬಿಕೊಂಡಿದ್ದಾರೆ. ಈ ಸಹಕಾರಿ ಬ್ಯಾಂಕಿಗೆ ಹಣವನ್ನು ಅತೀ ಕಡಿಮೆ ಬಡ್ಡಿಗೆ ಒದಗಿಸುವುದೇ ನಬಾರ್ಡ್.
ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರಲ್ ಆಂಡ್ ರೂರಲ್ ಡೆವಲಪ್‌ಮೆಂಟ್ (ನಬಾರ್ಡ್) ಎನ್ನುವುದು ಕೇಂದ್ರ ಸರಕಾರದ ಹಣಕಾಸು ಸಚಿವಾಲಯದ ಆಧೀನದಲ್ಲಿರುವ ಸಂಸ್ಥೆ. ದೇಶದ ರೈತಾಪಿ ಜನರಿಗೆ ಆರ್ಥಿಕ ಬೆಂಬಲ ಕೊಡಲು, ಕೃಷಿ ಚಟುವಟಿಕೆಗಳಿಗೆ ಹಣಕಾಸಿನ ಸಹಾಯ ಮಾಡಲು, ಸುಸ್ಥಿರ ಹಾಗೂ ಸಮಾನವಾದ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಉತ್ತೇಜಿಸಲು ಇಂದಿರಾ ಗಾಂಧಿಯವರು 1982 ನವೆಂಬರ್ 2 ರಂದು ನಬಾರ್ಡನ್ನು ಅಸ್ತಿತ್ವಕ್ಕೆ ತಂದರು. ಅವತ್ತಿನಿಂದ ಪ್ರತಿ ವರ್ಷವೂ ಕೃಷಿಕರಿಗೆ ಸಾಲದ ಸೌಲಭ್ಯ ಹೆಚ್ಚಾಗುತ್ತಲೇ ಬಂದಿತ್ತು. ಕಳೆದ ವರ್ಷ 2023-24 ರಲ್ಲಿ 5,600 ಕೋಟಿ ನಬಾರ್ಡ್ ನಿಂದ ಕರ್ನಾಟಕಕ್ಕೆ ದೊರೆತಿತ್ತು.
ಆದರೆ ಈ ವರ್ಷ ಕೇಂದ್ರ ಸರಕಾರವು ಈ ಪ್ರಮಾಣವನ್ನು 58% ಕಡಿತ ಮಾಡಿದೆ. ಕೇವಲ 2,340 ಕೋಟಿಯಷ್ಟು ಸಾಲ ಸೌಲಭ್ಯವನ್ನು ಮಾತ್ರ ನಬಾರ್ಡ್ ಮೂಲಕ ಸಹಕಾರಿ ಸಂಘಗಳಿಗೆ ಒದಗಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಮೊದಲು ಕೇವಲ ವಾರ್ಷಿಕ 1% ಬಡ್ಡಿಗೆ ನಬಾರ್ಡ್ ಸಾಲ ಸೌಲಭ್ಯ ಒದಗಿಸುತ್ತಿತ್ತು. ಆದರೆ ಬಿಜೆಪಿ ಸರಕಾರ 4.5% ಗೆ ಬಡ್ಡಿಯನ್ನು ಹೆಚ್ಚಿಸಿ ರೈತರಿಗೆ ಅನ್ಯಾಯ ಮಾಡಿದೆ. ಇನ್ನೂ ಹೆಚ್ಚುವರಿ ಸಾಲ ಬೇಕೆಂದರೆ ಶೆ.8.5 ಬಡ್ಡಿ ಕೊಡಿ ಎಂದು ಕೇಳುತ್ತದೆ.
ಅಂದರೆ ಬರುಬರುತ್ತಾ ಕಾಂಗ್ರೆಸ್ ಸರಕಾರ ರೈತರಿಗಾಗಿ ತಂದ ಅತೀ ಮಹತ್ವದ ಯೋಜನೆಯನ್ನೇ ಬಿಜೆಪಿ ಸರಕಾರ ನಿಷ್ಕ್ರಿಯಯ ಗೊಳಿಸುತ್ತಿದೆ. ಸಾಲದ ಪ್ರಮಾಣದಲ್ಲಿ ಕಡಿತ ಗೊಳಿಸುತ್ತಿದೆ ಹಾಗೂ ಬಡ್ಡಿಯ ಪ್ರಮಾಣವನ್ನು ಹೆಚ್ಚಿಸುತ್ತಿದೆ. ಇದರಿಂದಾಗಿ ರಾಜ್ಯ ಸರಕಾರಗಳು ಸಹಕಾರಿ ಬ್ಯಾಂಕ್ ಗಳ ಮೂಲಕ ರೈತರಿಗೆ ಅಗತ್ಯವಾದಷ್ಟು ಸಾಲವನ್ನು ಕಡಿಮೆ ಬಡ್ಡಿಗೆ ಕೊಡದಂತಾಗುತ್ತದೆ. ಈಗಾಗಲೇ ಸಾಲದ ಸುಳಿಯಲ್ಲಿ ಸಿಲುಕಿ ನರಳುತ್ತಿರುವ ಅನ್ನದಾತರು ಹೆಚ್ಚಿನ ಬಡ್ಡಿಗೆ ಬ್ಯಾಂಕ್ ಗಳಿಂದ ಸಾಲ ಪಡೆದು ಇನ್ನಷ್ಟು ಸಂಕಷ್ಟಕ್ಕೆ ಸಿಲುಕುತ್ತಾರೆ. ಈ ಮೈಕ್ರೋ ಫೈನಾನ್ಸ್ ಎನ್ನುವ ಬಡ್ಡಿ ಮಾಫಿಯಾ ಜಾಲಕ್ಕೆ ಸಿಲುಕಿ ನರಳುತ್ತಾರೆ. ಇದು ಖಂಡಿತಾ ಕೃಷಿ ಕ್ಷೇತ್ರದ ಮೇಲೆ ನಕಾರಾತ್ಮಕ ಪರಿಣಾಮವನ್ನುಂಟು ಮಾಡುವುದರಲ್ಲಿ ಸಂದೇಹವೇ ಇಲ್ಲ.
ಇಷ್ಟಕ್ಕೂ ಕೇಂದ್ರ ಸರಕಾರದ ಈ ಜನವಿರೋಧಿ ಧೋರಣೆ ಕರ್ನಾಟಕದ ಕಾಂಗ್ರೆಸ್ ಪಕ್ಷದ ವಿರುದ್ಧವೋ ಇಲ್ಲಾ ರೈತಾಪಿ ಜನರ ವಿರುದ್ಧವೋ ಅಥವಾ ರೈತರಿಂದ ಬಡ್ಡಿ ಸುಲಿಗೆ ಮಾಡಲು ಬ್ಯಾಂಕ್ ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳ ಪರವಾಗಿಯೋ? ಕೇಂದ್ರ ಸರಕಾರವೇನೂ ನಬಾರ್ಡ್ ಮೂಲಕ ಉಚಿತವಾಗಿ ಹಣಕಾಸು ಸೌಲಭ್ಯ ಕೊಡುವುದಿಲ್ಲ. ಕೊಟ್ಟ ಹಣಕ್ಕೆ ಪ್ರತಿಯಾಗಿ ಸಹಕಾರಿ ಬ್ಯಾಂಕ್ ಗಳು ಶೇ.4.5 ಬಡ್ಡಿಸಮೇತ ಮರುಪಾವತಿ ಮಾಡುತ್ತವೆ. ರೈತರ ಸಾಲ ಮನ್ನಾ ಮಾಡಿದರೂ ರಾಜ್ಯ ಸರಕಾರವೇ ನಬಾರ್ಡ್ ಕೊಟ್ಟ ಹಣವನ್ನು ವಾಪಸ್ ಕಟ್ಟಿಕೊಡುತ್ತದೆ. ಅಗತ್ಯ ಇದ್ದಷ್ಟು ಸಾಲ ಸೌಲಭ್ಯವನ್ನು ರಾಜ್ಯಗಳ ಸಹಕಾರಿ ಸಂಘಗಳಿಗೆ ಒದಗಿಸಲು ಕೇಂದ್ರ ಸರಕಾರ ಏನೆಲ್ಲಾ ಆಟವಾಡುತ್ತಿದೆ.
ನವೆಂಬರ್ 21 ರಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ನಿಯೋಗವು ದೆಹಲಿಗೆ ಹೋಗಿ ಹಣಕಾಸು ಸಚಿವೆ ನಿರ್ಮಲಾರವರನ್ನು ಭೇಟಿಯಾಗಿ ರಿಯಾಯಿತಿ ಬಡ್ಡಿದರದ ಕೃಷಿ ಸಾಲದ ಮಿತಿಯನ್ನು ಹೆಚ್ಚಿಸಲು ಕೇಳಿಕೊಂಡರು. “ಅದೆಲ್ಲಾ ಸಾಧ್ಯವಿಲ್ಲ” ಎಂದು ಹಣಕಾಸು ಸಚಿವೆ ಮನವಿಯನ್ನೇ ತಿರಸ್ಕರಿಸಿದರು. “ಎಲ್ಲ ರಾಜ್ಯಗಳ ಮೊತ್ತವನ್ನೂ ಕಡಿತಗೊಳಿಸಲಾಗಿದೆ, ಕರ್ನಾಟಕಕ್ಕೆ ಪ್ರತ್ಯೇಕ ನೀತಿ ರೂಪಿಸಲು ಸಾಧ್ಯವಿಲ್ಲ. ಸಾಲ ಬೇಕಾದರೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಪಡೆಯಿರಿ” ಎಂದು ದುರಹಂಕಾರದ ಮಾತಾಡಿ ಕಳುಹಿಸಿದರು.
ಎಲ್ಲಾ ರಾಜ್ಯಗಳಿಗೂ ಕಡಿತ ಮಾಡುವ ಅಗತ್ಯವಾದರೂ ಏನಿತ್ತು?. ಇಡೀ ದೇಶಾದ್ಯಂತ ಇರುವ ರೈತರಿಗೆ ಇದರಿಂದ ತೊಂದರೆಯಾಗುತ್ತದೆ ಎನ್ನುವ ಅರಿವು ಕೇಂದ್ರ ಸರಕಾರಕ್ಕೆ ಇರಬೇಕಿತ್ತಲ್ಲವೇ? ಇದು ರೈತ ವಿರೋಧಿ ಸರಕಾರ ಎನ್ನುವುದಕ್ಕೆ ಇದಕ್ಕಿಂತಾ ಸಾಕ್ಷಿ ಬೇಕಾ? ಹೋಗಲಿ, ಕೇಂದ್ರ ಸರಕಾರಕ್ಕೆ ಅತೀ ಹೆಚ್ಚು ತೆರಿಗೆ ಕೊಡುವ ಎರಡನೇ ರಾಜ್ಯ ಕರ್ನಾಟಕ. ದಕ್ಷಿಣ ರಾಜ್ಯಗಳು ಕಟ್ಟಿದ ತೆರಿಗೆ ಹಣವನ್ನು ಉತ್ತರ ಭಾರತದ ರಾಜ್ಯಗಳಿಗೆ ಹಂಚಲಾಗುತ್ತಿದೆ. ನಮ್ಮ ರಾಜ್ಯ ಕಟ್ಟುವ 4.5 ಲಕ್ಷ ಕೋಟಿ ತೆರಿಗೆಯ ಹಣದಲ್ಲಿ ಆರು ಸಾವಿರ ಕೋಟಿ ಕೃಷಿ ಸಾಲವನ್ನು ಒದಗಿಸಬಹುದಿತ್ತಲ್ಲವೇ. ಅದೇನು ಪುಕ್ಕಟೆಯಲ್ಲ, ರಿಯಾಯಿತಿ ಬಡ್ಡಿದಲ್ಲಿ ಸಾಲ ಕೊಡಿ ಎಂದು ಕರ್ನಾಟಕ ಕೇಳುತ್ತಿದೆ. ಕೊಡಲಾಗುವುದಿಲ್ಲ ಎಂದು ಕೇಂದ್ರ ಹೇಳುತ್ತಿದೆ. ಅಪಾರವಾದ ತೆರಿಗೆ ಕಟ್ಟಿಯೂ ಕೇಂದ್ರದ ಮುಂದೆ ಭಿಕ್ಷೆ ಬೇಡುವಂತಹ ಪರಿಸ್ಥಿತಿಯಲ್ಲಿ ರಾಜ್ಯ ಸರಕಾರ ಇದೆ. ತೆರಿಗೆ ಲೂಟಿ ಮಾಡಿಯೂ ವಾಪಸ್ ಕೊಡಲಾರೆವು ಎನ್ನುವ ಯಜಮಾನಿಕೆಯಲ್ಲಿ ಕೇಂದ್ರ ಸರಕಾರ ಇದೆ.
ಕೇಂದ್ರ ಸರಕಾರದ ಬಂಡತನವನ್ನು, ಟ್ಯಾಕ್ಸ್ ಟೆರರಿಸಂನ್ನು, ಕೃಷಿ ಸಾಲ ಕಡಿತವನ್ನು ಪ್ರಶ್ನಿಸಬೇಕಾದವರು ಕೇಂದ್ರದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಎಂಪಿಗಳು. ಅದರಲ್ಲೂ ಕರ್ನಾಟಕದ ಬಹುಸಂಖ್ಯಾತ ಎಂಪಿಗಳು ಬಿಜೆಪಿ ಪಕ್ಷದವರೇ. ಆದರೆ ಅವರು ಕೇಂದ್ರದ ಅನ್ಯಾಯವನ್ನು ಪ್ರಶ್ನಿಸುವ ಬದಲು ಸಮರ್ಥಿಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಎಂಪಿ ಗಳೂ ಮೌನಕ್ಕೆ ಶರಣಾಗಿದ್ದಾರೆ. ಸಿಎಂ ಸಿದ್ದರಾಮಯ್ಯನವರು ಮಾತ್ರ ಪ್ರಯತ್ನಿಸುತ್ತಲೇ ಇದ್ದಾರೆ.
ಒಟ್ಟಿನ ಮೇಲೆ ಈ ರಾಜ್ಯ ಮತ್ತು ಕೇಂದ್ರ ಸರಕಾರಗಳ ಹಗ್ಗ ಜಗ್ಗಾಟದಲ್ಲಿ ರೈತಾಪಿ ಜನರು ಸಂಕಷ್ಟಕ್ಕೆ ಈಡಾಗುತ್ತಿದ್ದಾರೆ. ರಿಯಾಯಿತಿ ಬಡ್ಡಿದರದ ಸಾಲ ಸೌಲಭ್ಯ ಸಿಗದೇ ಹೋದರೆ ಹೆಚ್ಚಿನ ಬಡ್ಡಿಗೆ ಸಾಲ ಪಡೆದು ಸಾಲದ ಸುಳಿಗೆ ರೈತರು ಸಿಲುಕಿ ನರಳುತ್ತಾರೆ. ಇದರಿಂದಾಗಿ ಕೃಷಿ ಚಟುವಟಿಕೆಗಳು ಕುಂಠಿತವಾಗುತ್ತವೆ. ಕೃಷಿ ಕ್ಷೇತ್ರಕ್ಕೆ ಹಿನ್ನಡೆಯಾದರೆ ಆಹಾರ ಉತ್ಪಾದನೆ ಕೊರತೆಯುಂಟಾಗುತ್ತದೆ. ಉತ್ಪಾದನೆ ಕಡಿಮೆಯಾದಷ್ಟೂ ಬೆಲೆಗಳು ಹೆಚ್ಚಾಗುತ್ತವೆ. ದರಗಳು ಹೆಚ್ಚಾದಷ್ಟೂ ಬಂಡವಾಳಿಗರ ಕಂಪನಿಗಳು ಲಾಭ ಮಾಡಿಕೊಳ್ಳುತ್ತವೆ ಹಾಗೂ ಜನರು ಬಡತನದ ಬವಣೆಗೆ ಸಿಲುಕಿ ತೀವ್ರ ತೊಂದರೆಗೆ ಒಳಗಾಗುತ್ತಾರೆ. ಕಾರ್ಪೊರೇಟ್ ಕಂಪನಿಗಳ ಹಿತಾಸಕ್ತಿ ಕಾಪಾಡಲೆಂದೇ ಇರುವ ಮೋದಿಯವರ ಸರಕಾರಕ್ಕೆ ಇದೇ ಬೇಕಾಗಿದೆ. ಬಂಡವಾಳಶಾಹಿಗಳ ಲೂಟಿಗೆ ಪೂರಕವಾಗಿಯೇ ಕೇಂದ್ರ ಸರಕಾರ ನೀತಿ ನಿಯಮಗಳನ್ನು ರೂಪಿಸುತ್ತಿದೆ. ಅದರ ಭಾಗವಾಗಿಯೇ ರೈತರಿಗೆ ರಿಯಾಯತಿ ಬಡ್ಡಿದರದ ಸಾಲ ಸೌಲಭ್ಯವನ್ನು ಕಡಿತ ಮಾಡಲಾಗಿದೆ.
ಬೃಹತ್ ಉದ್ಯಮಪತಿಗಳು ಹಾಗೂ ಕಾರ್ಪೋರೇಟ್ ಕುಳಗಳ ಮೇಲಿನ ತೆರಿಗೆ ಪ್ರಮಾಣವನ್ನು ಶೇ.30 ರಿಂದ ಶೇ.22 ಕ್ಕೆ ಇಳಿಸಿದ ಕೇಂದ್ರ ಸರಕಾರವು ನಬಾರ್ಡ್ ಕೃಷಿ ಸಾಲದ ಬಡ್ಡಿ ದರವನ್ನು ಶೇ.1 ರಿಂದ ಶೇ.4.5 ಗೆ ಹೆಚ್ಚಿಸಿದೆ. 20 ಲಕ್ಷ ಕೋಟಿಗೂ ಹೆಚ್ಚು ಮೊತ್ತದ ಕಾರ್ಪೋರೇಟ್ ಸಾಲವನ್ನು ಮನ್ನಾ ಮಾಡಿದ ಮೋದಿ ಸರಕಾರವು ರೈತರಿಗೆ ಕೊಡಮಾಡುತ್ತಿದ್ದ ನಬಾರ್ಡ್ ರಿಯಾಯಿತಿ ಸಾಲದ ಮಿತಿಯನ್ನೇ ಶೇ.58 ರಷ್ಟು ಕಡಿತ ಮಾಡಿದೆ. ಹಾಗಾದರೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಯಾರ ಹಿತಾಸಕ್ತಿಯ ಪರವಾಗಿ ಹಾಗೂ ಯಾರ ವಿರುದ್ಧವಾಗಿ ಕೆಲಸ ಮಾಡುತ್ತದೆ ಎಂಬುದು ಸ್ಪಷ್ಟವಾಗಿದೆ. ಇದರಿಂದಾಗಿ ಆದಾನಿ ಅಂಬಾನಿಯಂತವರ ಆಸ್ತಿ ಮೌಲ್ಯ ಹೆಚ್ಚುತ್ತಲೇ ಇದೆ. ದೇಶಕ್ಕೆ ಅನ್ನ ಬೆಳೆಯುವ ರೈತರ ಬದುಕು ಸಾಲದಲ್ಲಿ ಮುಳುಗುತ್ತಿದೆ. ಈ ಅನ್ಯಾಯವನ್ನು ಪ್ರಶ್ನಿಸುವವರು ಯಾರು? ರೈತರ ಗೋಳು ಕೇಳುವವರು ಯಾರು?
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು, ರಂಗಕರ್ಮಿ
ಇದನ್ನೂ ಓದಿ- ಬಡವರ ಅನ್ನ ಹಾಗೂ ರಾಜಕಾರಣಿಗಳ ಕನ್ನ!