ಮುಡಾ ಪ್ರಕರಣದ ಗೆಲುವಿನ ನಂತರ ಸಿಎಂ ಸಿದ್ದರಾಮಯ್ಯ ಅವರ ರಾಜಕೀಯ ಶಕ್ತಿ ವೃದ್ಧಿ: ಯತೀಂದ್ರ

Most read

ಮೈಸೂರು: ಮೂಖ್ಯಮಂತ್ರಿ ಸಿದ್ದರಾಮಯ್ಯ ಅವರು 5 ವರ್ಷದ ಅವಧಿಯನ್ನು ಪೂರ್ಣಗೊಳಿಸವುದಿಲ್ಲ ಎಂದು ಯಾರು ಹೇಳಿದ್ದಾರೆ?  ನಮ್ಮ ಪಕ್ಷದ ಯಾರಾದರೂ ಅಂತಹ ಹೇಳಿಕೆ ನೀಡಿದ್ದಾರೆಯೇ? ಎಂದು ವಿಧಾನಪರಿಷತ್‌ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಇಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅಧಿಕಾರದಲ್ಲಿ ಮುಂದುವರಿಯುತ್ತಾರೆಯೋ ಇಲ್ಲವೋ ಎಂಬ ಚರ್ಚೆ ಅನಾವಶ್ಯಕ ಎಂದರು.

ವಿರೋಧ ಪಕ್ಷಗಳು ಮಾತ್ರ ತಲಾ ಎರಡೂವರೆ ವರ್ಷ ಅಧಿಕಾರ ಹಂಚಿಕೆಯಾಗಿದೆ ಎಂಬ ಸುದ್ದಿಯನ್ನು ಸೃಷ್ಟಿಸಿದ್ದಾರೆ. ಸೆಪ್ಟೆಂಬರ್‌ ನಲ್ಲಿ ರಾಜಕೀಯ ಕ್ರಾಂತಿ ಆಗುತ್ತದೆ ಎಂದು ಸಚಿವ ರಾಜಣ್ಣ ಹೇಳಿದ್ದಾರೆ. ಕ್ರಾಂತಿ ಎಂದರೆ ಅದು ಮುಖ್ಯಮಂತ್ರಿ ಬದಲಾವಣೆಯೇ ಆಗಿರಬೇಕೇ? ಏಕೆ ಎಲ್ಲವನ್ನೂ ಮುಖ್ಯಮಂತ್ರಿ ವಿಚಾರಕ್ಕೆ ಸೀಮಿತವಾಗಿ ನೋಡುತ್ತೀರಿ? ಬೇರೆ ವಿಷಯದಲ್ಲಿ ಕ್ರಾಂತಿ ಆಗಬಹುದು. ಅದೇನು ಎಂಬುದನ್ನು ಹೇಳಿದವರನ್ನೇ ಕೇಳಬೇಕು ಎಂದು ಪ್ರತಿಕ್ರಿಯಿಸಿದರು.

ಹೈಕಮಾಂಡ್, ಪಕ್ಷದ ಶಾಸಕರು ನಮ್ಮ ತಂದೆಯ ಪರವಾಗಿದ್ದಾರೆ. ಹೀಗಿರುವಾಗ, ಅವರನ್ನೇಕೆ ಕೆಳಗಿಳಿಸಲಾಗುತ್ತದೆ?. ಮುಡಾ ಪ್ರಕರಣದ ಗೆಲುವಿನಿಂದಾಗಿ ತಂದೆಯ ಶಕ್ತಿ ರಾಜಕೀಯವಾಗಿ ಮತ್ತಷ್ಟು ವೃದ್ಧಿಸಿರುವುದು ನಿಜ. ಅವರನ್ನು ನೈತಿಕವಾಗಿ ಕುಗ್ಗಿಸುವ ಪ್ರಯತ್ನ ನಡೆದಿತ್ತು. ಅದೀಗ ನಿವಾರಣೆಯಾಗಿದೆ. ಕಾಂಗ್ರೆಸ್‌ನಲ್ಲಿ ಮಾಸ್‌ ಲೀಡರ್ ಆಗಿರುವ ಸಿದ್ದರಾಮಯ್ಯ ಅವರನ್ನು ನೈತಿಕವಾಗಿ ಕುಗ್ಗಿಸಿದರೆ ಪಕ್ಷಕ್ಕೆ ಹಿನ್ನಡೆಯಾಗುತ್ತದೆ ಎಂಬ ಕಾರಣಕ್ಕೆ ವಿರೋಧಪಕ್ಷದವರು ಟಾರ್ಗೆಟ್ ಮಾಡುತ್ತಿರುತ್ತಾರೆ. ಅವೆಲ್ಲವನ್ನೂ ಮೀರಿ ನಾವು ನಿಲ್ಲುತ್ತಿದ್ದೇವೆ ಎಂದು ಹೇಳಿದರು.

ಕರ್ನಾಟಕದ ಲೋಕಸಭಾ ಕ್ಷೇತ್ರವೊಂದರಲ್ಲಿ ದೊಡ್ಡ ಪ್ರಮಾಣದಲ್ಲಿ ಚುನಾವಣಾ ಅಕ್ರಮ ನಡೆದಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಕೆಲವು ಕ್ಷೇತ್ರಗಳಲ್ಲಿ ಗೋಲ್‌ ಮಾಲ್‌ ಆಗಿರಬಹುದು. ಆದ್ದರಿಂದಲೇ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿ ಸರ್ಕಾರದ್ದು ತನಿಖಾ ಸಂಸ್ಥೆ ಹಾಗೂ ಆಯೋಗಗಳನ್ನು ದುರುಪಯೋಗ ಮಾಡಿಕೊಳ್ಳುವುದರಲ್ಲಿ ಎತ್ತಿದ ಕೈ. ಹೀಗಾಗಿ ಅನುಮಾನ ಇರುವ ಕ್ಷೇತ್ರಗಳ ಬಗ್ಗೆ ತನಿಖೆಯಾಗಲಿ ಎಂದು ಒತ್ತಾಯಿಸಿದರು.

ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ನಾವು ಸೋತಿದ್ದರೂ ಇಲ್ಲಿ ಗೋಲ್‌ ಮಾಲ್ ಆಗಿಲ್ಲ. ಯಾವ ಊರುಗಳಿಂದಲೂ ದೂರು ಬಂದಿಲ್ಲ. ಹಾಗೇನಾದರೂ ನಡೆದಿದ್ದರೆ ಈ ವೇಳೆಗಾಗಲೇ ನಮ್ಮ ಕಾರ್ಯಕರ್ತರು ಹೇಳಿರುತ್ತಿದ್ದರು ಎಂದರು.

More articles

Latest article