ಮಾಜಿ ಡಿಸಿಎಂ ಕೆ ಎಸ್‌ ಈಶ್ವರಪ್ಪ ಸಂಸ್ಥೆಯ ಕಾರ್ಯಕ್ರಮದಲ್ಲಿ ಹೈಕೋರ್ಟ್‌ ನ್ಯಾಯಮೂರ್ತಿ ಶ್ರೀಶಾನಂದ ಅವರ ಉಪನ್ಯಾಸ; ವಕೀಲರ ಆಕ್ಷೇಪ; ಹೈಕೋರ್ಟ್‌ ರಿಜಿಸ್ಟ್ರಾರ್‌ ಗೆ ಪತ್ರ

Most read

ಶಿವಮೊಗ್ಗ: ಹೈಕೋರ್ಟ್‌ ಮತ್ತು ವಿವಿಧ ಪೊಲೀಸ್‌ ಠಾಣೆಗಳಲ್ಲಿ ಪ್ರಕರಣಗಳು ವಿಚಾರಣೆಗೆ ಬಾಕಿ ಉಳಿದಿದ್ದರೂ ಮಾಜಿ ಉಪ ಮುಖ್ಯಮಂತ್ರಿ ಕೆ ಎಸ್‌ ಈಶ್ವರಪ್ಪ ಅವರು ಅಧ್ಯಕ್ಷತೆ ವಹಿಸುತ್ತಿರುವ ಕಾರ್ಯಕ್ರಮದಲ್ಲಿ ಹೈಕೋರ್ಟ್‌ ನ್ಯಾಯಮೂರ್ತಿ ಶ್ರೀಶಾನಂದ ಅವರು ಭಾಗವಹಿಸುತ್ತಿರುವ ಉಪನ್ಯಾಸ ನೀಡಲು ಆಗಮಿಸುತ್ತಿರುವುದಕ್ಕೆ ಶಿವಮೊಗ್ಗದ  ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

ಈ ಸಂಬಂಧ ಹಲವಾರು ವಕೀಲರು ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ನ್ಯಾಯಮೂರ್ತಿ ಶ್ರೀಶಾನಂದ ಅವರಿಗೆ ಪತ್ರ ಬರೆದಿದ್ದಾರೆ. ಹೈಕೋರ್ಟ್‌ ರಿಜಿಸ್ಟ್ರಾರ್‌ ಮತ್ತು ಶಿವಮೊಗ್ಗ ಜಿಲ್ಲಾ ನ್ಯಾಯಾಧೀಶರಿಗೂ ಮಾಹಿತಿ ನೀಡಿದ್ದಾರೆ.

ಶಿವಮೊಗ್ಗದ ಶ್ರೀಗಂಧ ಎಂಬ ಸರ್ಕಾರೇತರ ಸಂಸ್ಥೆಯು ಶಿವಮೊಗ್ಗ ಬಾರ್‌ ಅಸೋಸಿಯೇಷನ್‌ ಸಹಯೋಗದಲ್ಲಿ ಇದೇ 25 ರಂದು ಕುವೆಂಪು ರಂಗಮಂದಿರದಲ್ಲಿ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಿದೆ. ಶ್ರೀಗಂಧ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಈಶ್ವರಪ್ಪ ಅವರ ವಿರುದ್ಧ ವಿವಿಧ ನ್ಯಾಯಾಲಯ ಮತ್ತು ಠಾಣೆಗಳಲ್ಲಿ ಸಿವಿಲ್‌ ಮತ್ತು ಕ್ರಿಮಿನಲ್‌ ಮೊಕದ್ದಮೆಗಳು ದಾಖಲಾಗಿವೆ.

ಕೆ ಎಸ್‌ ಈಶ್ವರಪ್ಪ ಮತ್ತು ಅವರ ಪುತ್ರ ಕೆ ಇ ಕಾಂತೇಶ್‌ ಅವರ ವಿರುದ್ಧ ಭ್ರಷ್ಟಾಚಾರ, ಆದಾಯಕ್ಕಿಂತಲೂ ಹೆಚ್ಚಿನ ಆಸ್ತಿ ಸಂಪಾದನೆ, ಕೋಮು ಭಾವನೆ ಕೆರಳಿಸುವ ದ್ವೇಷ ಭಾಷಣ, ಹಿಂಸಾಚಾರ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಂತಹ ಪ್ರಕರಣಗಳು ದಾಖಲಾಗಿವೆ. ಹಲವಾರು ಸಿವಿಲ್‌ ಮತ್ತು ಕ್ರಿಮಿನಲ್‌ ಮೊಕದ್ದಮೆಗಳೂ ವಿಚಾರಣಾ ಹಂತದಲ್ಲಿವೆ. ತಮ್ಮ ವಿರುದ್ಧ ದಾಖಲಾಗಿರುವ ಎಫ್‌ ಐ ಆರ್‌ ಗಳನ್ನು ರದ್ದುಪಡಿಸುವಂತೆಯೂ  ಹೈಕೋರ್ಟ್‌ ನಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಈ ಎಲ್ಲ ವಿಷಯಗಳನ್ನು ಮುಚ್ಚಿಟ್ಟು ಕಾರ್ಯಕ್ರಮದ ಸಂಘಟಕರು ಹೈಕೋರ್ಟ್‌ ನ್ಯಾಯಮೂರ್ತಿ ಶ್ರೀಶಾನಂದ ಅವರನ್ನು ಉಪನ್ಯಾಸ ನೀಡಲು ಆಹ್ವಾನಿಸಿದ್ದಾರೆ. ಇದು ಮುಕ್ತ ಮತ್ತು ಪಾರದರ್ಶಕ ನ್ಯಾಯಾಂಗ ಆಡಳಿತದ ತತ್ವಗಳಿಗೆ ವಿರುದ್ಧವಾಗಿರುತ್ತದೆ. ತಮ್ಮ ವಿರುದ್ಧ ವಿಚಾರಣೆಗೆ ಬಾಕಿ ಉಳಿದಿರುವ ಪ್ರಕರಣಗಳ ಮೇಲೆ ಪ್ರಭಾವ ಬೀರುವಂತಾಗುತ್ತದೆ ಎಂಬ ಭಾವನೆಯೂ ಸಾರ್ವಜನಿಕರಲ್ಲಿ ಉಂಟಾಗಲಿದೆ.

ಕೆ ಎಸ್‌ ಈಶ್ವರಪ್ಪ ಮತ್ತು ಅವರ ಪುತ್ರ ಕೆ ಇ ಕಾಂತೇಶ್‌ ಅವರ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿವೆ ಎಂಬ ಮಾಹಿತಿಯ ಅರಿವಿದ್ದರೂ ಶಿವಮೊಗ್ಗ ಬಾರ್‌ ಅಸೋಸಿಯೇಷನ್‌ ಅಧ್ಯಕ್ಷರು ಸತ್ಯವನ್ನು ಮರೆಮಾಚಿಕಾರ್ಯಕ್ರಮದ ಸಹಭಾಗಿತ್ವ ವಹಿಸಿಕೊಂಡಿದ್ದಾರೆ. ಈಗಾಗಲೇ ಆಹ್ವಾನ ಪತ್ರಿಕೆಗಳನ್ನು ಜಿಲ್ಲೆಯ ಸ್ಥಳೀಯ ನ್ಯಾಯಾಧೀಶರಿಗೆ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಆದ್ದರಿಂದ ತಾವು ಸತ್ಯಾಂಶಗಳನ್ನು ಪರಿಗಣಿಸಿ ಈ ಕಾರ್ಯಕ್ರಮ ಕುರಿತು ಗಂಭೀರವಾಗಿ ಪರಿಗಣಿಸಿ ಕಾನೂನು ಪ್ರಕಾರ ಅಗತ್ಯ ಕಮ್ರವನ್ನು ಕೈಗೊಳ್ಳಬೇಕೆಂದು ಹೈಕೋರ್ಟ್‌ ರಿಜಿಸ್ಟ್ರಾರ್‌ ಮತ್ತು ಶಿವಮೊಗ್ಗ ಜಿಲ್ಲಾ ನ್ಯಾಯಾಧೀಶರನ್ನು ಕೋರಿದ್ದಾರೆ. ಮನವಿ ಪತ್ರಕ್ಕೆ ಹಲವಾರು ವಕೀಲರು ಸಹಿ ಹಾಕಿದ್ದಾರೆ.

More articles

Latest article