ಬೆಳಗಾವಿ: ರಾಜ್ಯದಲ್ಲಿ 25,000 ಪಾರಂಪರಿಕ ತಾಣಗಳ ಪೈಕಿ 810 ತಾಣಗಳನ್ನು ಮಾತ್ರ ಸಂರಕ್ಷಿಸಲು ಸಾಧ್ಯವಾಗಿದೆ. ಉಳ್ಳವರ ಸಹಕಾರ ಮತ್ತು ಸಾಮುದಾಯಿಕ ಸಹಕಾರದಿಂದ ಪಾರಂಪರಿಕ ತಾಣಗಳನ್ನು ಅಭಿವೃದ್ಧಿಪಡಿಸಲು ಸಾಧ್ಯ. ಆದ್ದರಿಂದ ಕರ್ನಾಟಕ ಸರ್ಕಾರವು “ನಮ್ಮ ಸ್ಮಾರಕ ದತ್ತು ಯೋಜನೆ”ಯನ್ನು ಪ್ರಾರಂಭಿಸಿದೆ ಮತ್ತು ಈ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಇಂದು ವಿಧಾನ ಪರಿಷತ್ತಿಗೆ ತಿಳಿಸಿದರು.
ಹಣಮಂತ ನಿರಾಣಿ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು ಪ್ರವಾಸೋದ್ಯಮವನ್ನು ಉತ್ತೇಜಿಸಿ ಅಭಿವೃದ್ಧಿಪಡಿಸುವ ದೃಷ್ಟಿಯಿಂದ ವಿಜಯಪುರ ಪೂರ್ಣ ಜಿಲ್ಲೆಯನ್ನು ಹಾಗೂ ಬಾಗಲಕೋಟೆ ಜಿಲ್ಲೆಯ ಐಹೊಳೆ, ಬಾದಾಮಿ, ಪಟ್ಟದಕಲ್ಲು, ಕೂಡಲಸಂಗಮ, ಬೀಳಗಿ ತಾಣಗಳನ್ನು ಆದ್ಯತಾ ಪ್ರವಾಸಿ ತಾಣಗಳಾಗಿ ಗುರುತಿಸಿ, ಈ ತಾಣಗಳ ತಾಲ್ಲೂಕುಗಳಲ್ಲಿ ಬಂಡವಾಳ ಹೂಡಲು ಮುಂದೆ ಬರುವ ಖಾಸಗೀ ಹೂಡಿಕೆದಾರರಿಗೆ ಸಹಾಯಧನ, ರಿಯಾಯಿತಿ ಮತ್ತು ಉತ್ತೇಜನಗಳನ್ನು ನೀಡಲು ಅವಕಾಶ ಕಲ್ಪಿಸಲಾಗಿತ್ತು.
ಬಾಗಲಕೋಟೆ ಮತ್ತು ವಿಜಯಪುರ ಅವಳಿ ಜಿಲ್ಲೆಗಳಲ್ಲಿನ ಪ್ರವಾಸಿ ತಾಣಗಳಾದ ಬಾದಾಮಿ, ಬನಶಂಕರಿ, ಐಹೂಳೆ, ಪಟ್ಟದಕಲ್ಲು, ಗೋಲಗುಂಬಜ್, ಶಿವನ ಮಂದಿರ, ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿರುವ ಪಕ್ಷಿಧಾಮ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಾಗಿವೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ಗುಹಾಂತರ ದೇವಾಲಯ, ಐಹೊಳೆ ದುರ್ಗಾ ದೇವಾಲಯ ಸಂಕಿರ್ಣ ಮತ್ತು ವಿಶ್ವ ಪರಂಪರೆ ಸ್ಮಾರಕ ಪಟ್ಟದಕಲ್ಲು ದೇವಾಲಯಗಳ ಸಮೂಹ ಹಾಗೂ ವಿಜಯಪುರ ಜಿಲ್ಲೆಯ ಗೋಲಗುಂಬಜ್, ಈ ಸ್ಥಳಗಳ ಸ್ಮಾರಕಗಳ ನಿರ್ವಹಣೆ ಹಾಗೂ ಉಸ್ತುವಾರಿಯನ್ನು ಭಾರತೀಯ ಪುರಾತತ್ವ ಸಂರಕ್ಷಣಾ (ASI) ರವರ ವ್ಯಾಪ್ತಿಗೆ ಒಳಪಡುತ್ತದೆ ಎಂದು ಸಚಿವರು ತಿಳಿಸಿದರು.
ಬಾಗಲಕೋಟೆ ಜಿಲ್ಲೆಯ ಐಹೊಳೆ ಗ್ರಾಮದ ಐತಿಹಾಸಿಕ ಮತ್ತು ಪಾರಂಪರಿಕ ಸ್ಮಾರಕಗಳನ್ನು ಸಂರಕ್ಷಿಸುವ ಸಲುವಾಗಿ ಸ್ಮಾರಕಗಳನ್ನೇ ಮನೆಗಳನ್ನಾಗಿ ಪರಿವರ್ತಿಸಿಕೊಂಡು ವಾಸಮಾಡುತ್ತಿರುವ ಸುಮಾರು 135 ಕುಟುಂಬಗಳನ್ನು ಸ್ಥಳಾಂತರಿಸಿ, ಪುನರ್ ವಸತಿ ಕಲ್ಪಿಸುವ ದೃಷ್ಟಿಯಿಂದ ಐಹೊಳೆ ಗ್ರಾಮದ ಸರ್ವೆ ನಂ. 218 ಮತ್ತು 225ರ ಭೂ-ಮಾಲೀಕರಿಂದ ಜಮೀನನ್ನು ಖರೀದಿಸಿ ಸ್ಮಳಾಂತರಿಸಲು ರೂ.3.50 ಕೋಟಿಗಳ ಅನುದಾನವನ್ನು ಚಾಲುಕ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರಕ್ಕೆ, ಬಿಡುಗಡೆಗೊಳಿ ಸರ್ಕಾರ ಆದೇಶ ಹೊರಡಿಸಿದೆ.
ಪಟ್ಟದಕಲ್ಲು ಪ್ರವಾಸಿ ತಾಣದಲ್ಲಿ ಪ್ರವಾಸಿಗರಿಗೆ ಪಾರ್ಕಿಂಗ್ ಸೌಲಭ್ಯ, ಕಫೆಟೇರಿಯಾ, ಪ್ರವಾಸಿ ಮಾಹಿತಿ ಕೇಂದ್ರ, ಕರಕುಶಲ ಮಳಿಗೆ ಇತ್ಯಾದಿ ಸೌಲಭ್ಯಗಳನ್ನು ಒಂದೇ ಸೂರಿನಲ್ಲಿ ಒದಗಿಸಲು ರೂ.29.25 ಕೋಟಿ ಅಂದಾಜು ವೆಚ್ಚದಲ್ಲಿ ಪ್ರವಾಸಿ ಪ್ಲಾಜಾ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ 72 ಕೊಠಡಿಗಳ ತ್ರಿ-ಸ್ಮಾರ್ ಹೋಟೆಲ್ ನಿರ್ಮಾಣ ಕಾಮಗಾರಿಯನ್ನು ರೂ.1832.00 ಲಕ್ಷಗಳ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಅನುಮೋದನೆ ನೀಡಿರುತ್ತದೆ. ರೂ.987.00 ಲಕ್ಷಗಳ ಅನುದಾನವನ್ನು ಅನುಷ್ಠಾನ ಸಂಸ್ಥೆಗೆ ಬಿಡುಗಡೆ ಮಾಡಲಾಗಿದೆ, ಕಾಮಗಾರಿ ಪ್ರಗತಿಯಲ್ಲಿದೆ ಎಂದು ಸಚಿವರು ತಿಳಿಸಿದರು.