ಕಸಾಪಗೆ ಆಡಳಿತಾಧಿಕಾರಿಯಾಗಿ ಕೆ.ಎಂ. ಗಾಯತ್ರಿ ಅಧಿಕಾರ ಸ್ವೀಕಾರ;ಮಹೇಶ್‌ ಜೋಶಿ ವಿರುದ್ಧ ತನಿಖೆಗೆ ಆಗ್ರಹ

Most read

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ (ಕಸಾಪ) ಹಣ ಹಾಗೂ ಅಧಿಕಾರ ದುರ್ಬಳಕೆ ಸೇರಿದಂತೆ ಹಲವು ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಕಸಾಪಗೆ ಆಡಳಿತಾಧಿಕಾರಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ.ಎಂ. ಗಾಯತ್ರಿ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕೆ.ಎಂ. ಗಾಯತ್ರಿ ಅವರು ಮಂಗಳವಾರವೇ ಕಸಾಪ ಕೇಂದ್ರ ಕಚೇರಿಗೆ ತೆರಳಿ ಅಧಿಕಾರ ಸ್ವೀಕರಿಸಿದ್ದಾರೆ.

ಸರ್ಕಾರದ ಈ ನಿರ್ಧಾರದಿಂದ ಕಸಾಪ ಅಧ್ಯಕ್ಷರಾಗಿದ್ದ ಡಾ.ಮಹೇಶ್ ಜೋಶಿ ಅವರಿಗೆ ತೀವ್ರ ಹಿನ್ನಡೆ ಉಂಟಾಗಿದೆ. ಅವರ ವಿರುದ್ಧ ಕೇಳಿ ಬಂದಿರುವ ಆರೋಪಗಳಿಗೆ ಸಂಬಂಧಪಟ್ಟಂತೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಅನೇಕ ಕನ್ನಡ ಪರ ಸಂಘ ಸಂಸ್ಥೆಗಳು ಒತ್ತಾಯಿಸಿವೆ.

ಕಸಾಪದಲ್ಲಿ ಹಣಕಾಸು ಅವ್ಯವಹಾರ ಹಾಗೂ ಅಧಿಕಾರ ದುರ್ಬಳಕೆ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಸಹಕಾರ ಇಲಾಖೆ ಕಳೆದ ಜುಲೈನಲ್ಲಿ ವಿಚಾರಣಾಧಿಕಾರಿಯನ್ನು ನೇಮಕ ಮಾಡಿತ್ತು.

ಕಸಾಪದ ಯಾವುದೇ ಪ್ರತಿನಿಧಿ ವಿಚಾರಣೆಗೆ ಹಾಜರಾಗದಿರುವುದು, ಅಗತ್ಯ ದಾಖಲಾತಿಗಳನ್ನು ಒದಗಿಸದಿರುವುದು ಮೊದಲಾದ ಕಾರಣಗಳ ಹಿನ್ನೆಲೆಯಲ್ಲಿ ಆಡಳಿತಾಧಿಕಾರಿ ನೇಮಿಸುವಂತೆ ಸಹಕಾರ ಇಲಾಖೆ ಸರ್ಕಾರಕ್ಕೆ ಶಿಫಾರಸು ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಮುಂದಿನ ಮೂರು ತಿಂಗಳವರೆಗೆ ಅಥವಾ ಕಸಾಪದ ಹಣಕಾಸಿನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ಪೂರ್ಣಗೊಳ್ಳುವವರೆಗೆ ಆಡಳಿತಾಧಿಕಾರಿಯಾಗಿ ಗಾಯತ್ರಿ ಅವರು ಕಾರ್ಯನಿರ್ವಹಿಸಲಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ತನಿಖೆಗೆ ಆಗ್ರಹ:

ಕಸಪಾ ಅಧ್ಯಕ್ಷ ಮಹೇಶ ಜೋಶಿ ಅವರ ವಿರುದ್ಧ ಕೇಳಿ ಬಂದಿರುವ ಆರೋಪಗಳಿಗೆ ಸಂಬಂಧಪಟ್ಟಂತೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪ್ರಕಾಶಮೂರ್ತಿ ಒತ್ತಾಯಿಸಿದ್ದಾರೆ.

ಮಹೇಶ ಜೋಶಿ ಅವರು.ರಾಜ್ಯದ ಜನತೆಯ ತೆರಿಗೆ ಹಣದಲ್ಲಿ ಒದಗಿಸಲಾದ  ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದು, ಭ್ರಷ್ಟಾಚಾರ ನಡೆಸಿದ್ದಾರೆ. ಅಲ್ಲದೆ ಸಂವಿಧಾನಬಾಹಿರವಾಗಿ ಕಸಾಪ ಬೈಲಾ ತಿದ್ದುಪಡಿ ಮಾಡಿ ಪ್ರಜಾಪ್ರಭುತ್ವ ವಿರೋಧಿಯಾಗಿ ನಡೆದುಕೊಂಡಿದ್ದಾರೆ.  ಸಮ್ಮೇಳನಕ್ಕೆ ನೀಡಿದ್ದ ಕೋಟ್ಯಂತರ ರೂ ಅನುದಾನವನ್ನು ದುಂದುವೆಚ್ಚ ಮಾಡಿದ್ದಾರೆ.  ಸಿಬ್ಬಂದಿ ವೇತನವನ್ನೂ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆಪಾದಿಸಿದ್ದಾರೆ.

More articles

Latest article