ಭಾರತ-ಪಾಕ್‌ ಗಡಿಯಲ್ಲಿ ಅದಾನಿ ಇಂಧನ ಯೋಜನೆಗೆ ಅನುಮತಿ; ವಿಪಕ್ಷಗಳ ಆಕ್ರೋಶ

Most read

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ  ಗೌತಮ್ ಅದಾನಿ ಸ್ಥಾಪಿಸಲು ಉದ್ದೇಶಿಸಿರುವ ಬೃಹತ್ ಸೌರ ಯೋಜನೆಗಾಗಿ ಭಾರತ-ಪಾಕಿಸ್ತಾನ ಗಡಿಯಲ್ಲಿ ರಾಷ್ಟ್ರೀಯ ಭದ್ರತಾ ಶಿಷ್ಟಾಚಾರಗಳನ್ನು ಸಡಿಲಗೊಳಿಸಿರುವ ವಿಷಯ ಕುರಿತು ಲೋಕಸಭೆಯಲ್ಲಿ ಕೋಲಾಹಲ ಉಂಟಾಗಿದೆ. ಗುಜರಾತ್‌ ನ ರಾನ್ ಆಫ್ ಕಚ್‌ನಲ್ಲಿ ಅದಾನಿ ಕಂಪನಿಯ  ಬೃಹತ್ ಸೌರ ಯೋಜನೆಗಾಗಿ ಭಾರತ-ಪಾಕಿಸ್ತಾನ ಗಡಿಯಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗಿದೆ. ದೇಶದ  ಹಿತಾಸಕ್ತಿಗಿಂತ ಅದಾನಿಯ ವ್ಯವಹಾರ ಹಿತಾಸಕ್ತಿಗಳಿಗೆ ಆದ್ಯತೆ ನೀಡಲಾಗುತ್ತಿದೆ ಮತ್ತು ರಾಷ್ಟ್ರದ ಭದ್ರತೆಗೆ ಅಪಾಯವನ್ನುಂಟು ಮಾಡುತ್ತಿದ್ದಾರೆ ಎಂದು ವಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ. ಈ ವಿಷಯ ಕುರಿತು ಸಚಿವ ಪ್ರಹ್ಲಾದ ಜೋಷಿ ನೋಡಿರುವ ಉತ್ತರ ಸಮರ್ಪಕವಾಗಿಲ್ಲ ಎಂದೂ ಟೀಕಿಸಿವೆ.

ನಿನ್ನೆ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‌ ಮನೀಷ್‌ ತಿವಾರಿ ಈ ಸಂಬಂಧ ಕೇಳಿರುವ ಉಪ ಪ್ರಶ್ನೆಗೆ ಸರ್ಕಾರದಿಂದ ತೃಪ್ತಿಕರ ಉತ್ತರ ಬಂದಿಲ್ಲ. ರಾಷ್ಟ್ರೀಯ ಭದ್ರತೆ ಮತ್ತು ಇಂಧನ ಭದ್ರತೆಯ ವಿಷಯದಲ್ಲಿ ರಾಜಿ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದ್ದರು. ಭಾರತ ಪಾಕಿಸ್ತಾನದ ಗಡಿಯಿಂದ ಕಕೇವಲ ಒಂದು ಕಿಮೀ ದೂರದಲ್ಲಿರುವ ಖ್ವಾಡಾ ಗಡಿಯಲ್ಲಿ ಬೃಹತ್‌ ನವೀಕರಿಸಬಹುದಾದ ಇಂಧನ ಯೋಜನೆ ಅಸಿತ್ವಕ್ಕೆ ಬರುತ್ತಿದೆ ಭದ್ರತಾ ನಿಯಮಗಳ ಪ್ರಕಾರ ಗಡಿಯ 10 ಕಿಮೀ ವ್ಯಾಪ್ತಿಯಲ್ಲಿ ಯಾವುದೇ ಮೂಲಭೂತ ಸೌಕರ್ಯ ಯೋಜನೆಗಳನ್ನು ಸ್ಥಾಪಿಸುವಂತಿಲ್ಲ. ಅದಾನಿ ಯೋಜನೆಗಾಗಿ ದೇಶದ ಭದ್ರತೆಯ ವಿಷಯದಲ್ಲಿ ರಾಜಿ ಮಾಡಿಕೊಳ್ಳಲಾಗಿದೆಯೇ ಎಂದು ತಿವಾರಿ ಪ್ರಶ್ನಿಸಿದರು. ಈ ಪ್ರಶ್ನೆಗೆ ಉತ್ತರಿಸಿದ ಜೋಷಿ ಅವರು, ದೇಶಕ್ಕೆ ನವೀಕರಿಸಬಹುದಾದ ಇಂಧನದ ಅವಶ್ಯಕತೆ ಇದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುಮತಿ ಪಡೆದ ನಂತರವಷ್ಟೇ ಈ ಯೋಜನೆಗೆ ಅನುಮತಿ ನೀಡಲಾಗಿದೆ ಎಂದರು.

ಈ ಉತ್ತರದಿಂದ ತೃಪ್ತರಾಗದ ಪ್ರತಿಪಕ್ಷಗಳ ಸದಸ್ಯರು ಅದಾನಿ ಅದಾನಿ, ಮೋದಿ ಸರ್ಕಾರ ಉತ್ತರ ನೀಡಬೇಕು ಎಂದು ಘೋಷಣೆ ಕೂಗಿದರು.  ಮೋದಿ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಘೋಷಣೆ ಕೂಗಿದರು. ಸಭಾಧ್ಯಕ್ಷ ಓಂ ಪ್ರಕಾಶ್‌ ಬಿರ್ಲಾ ಪ್ರಶ್ನೋತ್ತರವನ್ನು ಮುಂದುವರೆಸಿದಾಗ ವಿಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದರು. ಅದಾನಿಗೆ ಈ ಯೋಜನೆಗೆ ಏಕೆ ಅನುಮತಿ ನೀಡಲಾಗಿದೆ? ಅದಾನಿ ದೇಶದ ಭದ್ರತೆಗಿಂತ ದೊಡ್ಡ ವ್ಯಕ್ತಿಯೇ? ಎಂದು ನಂತರ ಕಾಂಗ್ರೆಸ್‌ ಸದಸ್ಯ ತರುಣ್‌ ಗಗೋಯಿ ಪ್ರಶ್ನಿಸಿದರು.

ಕೇಂದ್ರ ಮೋದಿ ಸರ್ಕಾರ  ಅದಾನಿ ಕಂಪನಿಗೆ ಸೌರ ಯೋಜನೆಗಾಗಿ ನಿಯಮಗಳನ್ನು ಸಡಿಲಿಸಲಾಗಿದೆ ಎಂದು ದಿ ಗಾರ್ಡಿಯನ್‌ ಪತ್ರಿಕೆ ತಿಂಗಳ ಹಿಂದೆ ವರದಿ ಮಾಡಿತ್ತು. ವರದಿ ಹೊರಬಂದಾಗಿನಿಂದ, ವಿರೋಧ ಪಕ್ಷದ ನಾಯಕರು ಭಾರತದ ರಾಷ್ಟ್ರೀಯ ಹಿತಾಸಕ್ತಿಗಿಂತ ಅದಾನಿಯ ವ್ಯವಹಾರ ಹಿತಾಸಕ್ತಿಗಳಿಗೆ ಆದ್ಯತೆ ನೀಡುತ್ತಿದ್ದಾರೆ ಮತ್ತು ರಾಷ್ಟ್ರದ ಭದ್ರತೆಗೆ ಅಪಾಯವನ್ನುಂಟುಮಾಡುತ್ತಿದ್ದಾರೆ ಎಂದು ಮೋದಿ ಸರ್ಕಾರವನ್ನು ಟೀಕಿಸುತ್ತಾ ಬಂದಿದ್ದಾರೆ.

ಸೌರ ಪ್ರಸ್ತಾವನೆಯು ಪಾಕಿಸ್ತಾನದ ಗಡಿಯಿಂದ 1 ಕಿ.ಮೀ ದೂರದಲ್ಲಿ ಕಚ್‌ನ ರಣ್‌ನಲ್ಲಿ ಗುಜರಾತ್ ಸರ್ಕಾರವು ಗುತ್ತಿಗೆಗೆ ನೀಡಿದ ಭೂಮಿಯಲ್ಲಿ ಸೌರ ಫಲಕಗಳು ಮತ್ತು ಪವನ ಟರ್ಬೈನ್‌ಗಳನ್ನು ನಿರ್ಮಿಸಲು ಅನುಮತಿ ನೀಡಲಾಗಿದೆ. ಭಾರತ-ಪಾಕಿಸ್ತಾನದ ನಡುವೆ ರಾನ್ ಆಫ್ ಕಚ್ ಒಂದು ವಿವಾದಾತ್ಮಕ ಪ್ರದೇಶವಾಗಿದೆ. ಇದು ಪಾಕಿಸ್ತಾನದೊಂದಿಗಿನ ವಿವಾದಿತ ಪ್ರದೇಶವಾದ ಸರ್ ಕ್ರೀಕ್‌ನ ಪಕ್ಕದಲ್ಲಿದೆ.

ಭಾರತ-ಪಾಕಿಸ್ತಾನ ಗಡಿಯ ಸುಲಭವಾದ ಅಂತರದಲ್ಲಿ ಬೃಹತ್ ಖಾಸಗಿ ಯೋಜನೆಗೆ ಏಕೆ ಅನುಮತಿ ನೀಡುತ್ತಿದ್ದೀರಿ, ಇದರಿಂದಾಗಿ ನಮ್ಮ ಸಶಸ್ತ್ರ ಪಡೆಗಳ ರಕ್ಷಣಾ ಜವಾಬ್ದಾರಿಗಳು ಹೆಚ್ಚಾಗುತ್ತವೆ ಮತ್ತು ಅವುಗಳ ಕಾರ್ಯತಂತ್ರದ ಅನುಕೂಲಗಳು ಕಡಿಮೆಯಾಗುತ್ತವೆ  ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿ ಸರ್ಕಾರವನ್ನು ಪ್ರಶ್ನಿಸಿದ್ದರು. ಭಾರತದ ಅತಿದೊಡ್ಡ ಸೌರಶಕ್ತಿ ಯೋಜನೆಯನ್ನು ಪಾಕಿಸ್ತಾನ ಗಡಿಯಿಂದ ಕೇವಲ 1 ಕಿ.ಮೀ ದೂರದಲ್ಲಿ ನಿರ್ಮಿಸಲು ಅವಕಾಶ ನೀಡುವುದು ಅತ್ಯಂತ ಅಪಾಯಕಾರಿ ಮತ್ತು ಎಲ್ಲಾ ಸ್ಥಾಪಿತ ಮಿಲಿಟರಿ ಮಾನದಂಡಗಳಿಗೆ ವಿರುದ್ಧವಾಗಿದೆ ಎಂದೂ ಅವರು ಆತಂಕ ವ್ಯಕ್ತಪಡಿಸಿದ್ದರು. ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕಿ ಮಹುವಾ ಮೊಯಿತ್ರಾ, ಮೋದಿ ಸರ್ಕಾರವು ರಕ್ಷಣಾ ಶಿಷ್ಟಾಚಾರಗಳನ್ನು ಸಡಿಲಿಸಿ “ಆತ್ಮ ಸ್ನೇಹಿತ” ಗೌತಮ್ ಅದಾನಿ ನವೀಕರಿಸಬಹುದಾದ ಇಂಧನ ಉದ್ಯಾನವನವನ್ನು ನಿರ್ಮಿಸಲು ಅವಕಾಶ ನೀಡಿದೆ ಎಂದು ಆರೋಪಿಸಿದರು.

More articles

Latest article