ಬೆಂಗಳೂರು: ಸ್ಯಾಂಡಲ್ ವುಡ್ ನ ಹಿರಿಯ ಪೋಷಕ ನಟ ಹಾಗೂ ಕಿರುತೆರೆ ಕಲಾವಿದ ಸರಿಗಮ ವಿಜಿ ಅವರು ಇಂದು ನಿಧನ ಹೊಂದಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಬುಧವಾರ ಬೆಳಗ್ಗೆ 9:45ಕ್ಕೆ ನಿಧನ ಹೊಂದಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ವಿಜಿ ಅವರು ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ವಾರದ ಹಿಂದೆ ದಾಖಲಿಸಲಾಗಿತ್ತು.ಅವರ ನಿಧನಕ್ಕೆ ಕನ್ನಡ ಚಿತ್ರ ರಂಗ ಮತ್ತು ಅವರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಅವರ ನಿವಾಸದಲ್ಲಿ ನಾಳೆ ಬೆಳಿಗ್ಗೆ 10 ಗಂಟೆವರೆಗೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಂಜೆ ವೇಳೆ ಅಂತ್ಯಕ್ರಿಯೆ ನಡೆಯಲಿದೆ.
ಬೆಂಗಳೂರಿನ ಎಚ್ ಎಎಲ್ ನಲ್ಲಿ ಜನಿಸಿದ ಇವರ ಮೂಲ ಹೆಸರು ವಿಜಯಕುಮಾರ್. ಆರಂಭದಲ್ಲಿ ಎನ್‌ಜಿಇಎಫ್ ಕಾರ್ಖಾನೆಯಲ್ಲಿ ಉದ್ಯೋಗಿಯಾಗಿದ್ದರು. ವಿಜಿ ಅವರು ಹಿರಿತೆರೆ, ಕಿರುತೆರೆ ಮತ್ತು ರಂಗಭೂಮಿಯಲ್ಲಿ ಸುಧೀರ್ಘವಾದ ಹಾದಿ ಸವೆಸಿದ್ದಾರೆ. ‘ಸಂಸಾರದಲ್ಲಿ ಸರಿಗಮ’ ನಾಟಕ ವಿಜಿ ಅವರಿಗೆ ಹೆಸರು ತಂದುಕೊಟ್ಟಿತ್ತು. ಇದು ಇವರೇ ರಚಸಿ ನಿರ್ದೇಶಿಸಿ ನಟಿಸಿದ ಚಿತ್ರವೂ ಹೌದು. ಇದೇ ಕಾರಣಕ್ಕೆ ಅವರ ಹೆಸರಿಗೆ ಸರಿಗಮ ಅಂಟಿಕೊಂಡು ಸರಿಗಮ ವಿಜಿ ಎಂದೇ ಖ್ಯಾತಿ ಪಡೆದಿದ್ದರು. ನಾಟಕದಿಂದ ಸಿನಿಮಾ ರಂಗ ಪ್ರವೇಶಿಸಿದ ಅವರು ಹಲವಾರು ಸಿನಿಮಾಗಳಲ್ಲಿ ಪೋಷಕ, ವಿಲನ್ ಹಾಗೂ ಹಾಸ್ಯ ಪಾತ್ರಗಳಲ್ಲಿ ನಟಸಿದ್ದರು. ಟೈಗರ್ ಪ್ರಭಾಕರ್ ಅವರ ಚಿತ್ರಗಳಲ್ಲಿ ಇವರಿಗೆ ಒಂದು ಪಾತ್ರ ಮೀಸಲಾಗಿರುತ್ತಿತ್ತು.
ಅವರು ಹಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ‘ಬೆಳುವಲದ ಮಡಿಲಲ್ಲಿ’ ಸಿನಿಮಾದಲ್ಲಿ ನಟಿಸುವ ಮೂಲಕ ಚಿತ್ರಂಗಕ್ಕೆ ಪದಾರ್ಪಣೆ ಮಾಡಿದ ವಿಜಿ ಅವರು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಲೇ ಬಂದರು. ಇದುವರೆಗೂ ಅವರು 400ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. 80 ಕ್ಕೂ ಹೆಚ್ಚು ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಹಲವು ಟಿವಿ ಧಾರಾವಾಹಿಗಳಲ್ಲಿ ನಟಿಸಿ ನಿರ್ದೇಶನವನ್ನೂ ಮಾಡುವ ಮೂಲಕ ಸರಗಮ ವಿಜಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ತೆಲುಗು ವಿಜ್ಞಾನ ಸಮಿತಿ ನೀಡುವ ‘ಶ್ರೀಕೃಷ್ಣದೇವರಾಯ ಪುರಸ್ಕಾರ’, ಮತ್ತು ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿದ್ದಾರೆ.