ಬೆಂಗಳೂರು: ರಾಜರಾಜೇಶ್ವರಿ ನಗರದ ಪಟ್ಟಣಗೆರೆಯ ಶೆಡ್ ಒಂದರಲ್ಲಿ ನಡೆದ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಚಿತ್ರನಟ ದರ್ಶನ್ ಮತ್ತು ಇತರ ಆರೋಪಿಗಳನ್ನು ನ್ಯಾಯಾಲಯವು ಹೆಚ್ಚಿನ ವಿಚಾರಣೆಗಾಗಿ 6 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ.
ಇಂದು ಬೆಂಗಳೂರಿನಲ್ಲಿ ಸುರಿಯುವ ಮಳೆಯ ನಡುವೆಯೇ ಎಲ್ಲ 13 ಆರೋಪಿಗಳನ್ನು ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ನಂತರ 24ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.
ಕಾನೂನು ಪ್ರಕ್ರಿಯೆಯಂತೆ, ಬಂಧನದ ನಂತರ ನಿಮ್ಮ ಮನೆಯವರಿಗೆ ಮಾಹಿತಿ ನೀಡಲಾಯಿತೇ ಎಂದು ದರ್ಶನ್ ಮತ್ತು ಇತರ ಆರೋಪಿಗಳನ್ನು ನ್ಯಾಯಾಧೀಶರು ಪ್ರಶ್ನಿಸಿದರು. ಮಾಹಿತಿ ನೀಡಲಾಗಿದೆ ಎಂದು ಆರೋಪಿಗಳು ಉತ್ತರ ನೀಡಿದರು. ಅದೇ ರೀತಿ ಪೊಲೀಸರು ನಿಮಗೆ ಏನಾದರೂ ದೈಹಿಕ ಹಿಂಸೆ ನೀಡಿದರಾ ಎಂದು ಪ್ರಶ್ನಿಸಿದಾಗ ಆರೋಪಿಗಳು ʻಇಲ್ಲʼ ಎಂದು ಉತ್ತರ ನೀಡಿದರು.
ಇದು ಕೊಲೆಯಾಗಿರುವ ಗಂಭೀರ ಪ್ರಕರಣ, ಈ ಹಿನ್ನೆಲೆಯಲ್ಲಿ ಎಲ್ಲ ಆರೋಪಿಗಳನ್ನು ಇನ್ನಷ್ಟು ವಿಚಾರಣೆ ನಡೆಸಬೇಕಿದೆ. ಈ ಹಿನ್ನೆಲೆಯಲ್ಲಿ 14 ದಿನಗಳ ಪೊಲೀಸ್ ಕಸ್ಟಡಿಗೆ ನೀಡುವಂತೆ ಪೊಲೀಸರು ರಿಮ್ಯಾಂಡ್ ಅರ್ಜಿಯಲ್ಲಿ ವಿನಂತಿಸಿದರು. ನಮ್ಮ ಕಕ್ಷಿದಾರರ ತೇಜೋವಧೆಗಾಗಿ ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಪೊಲೀಸರು ಕೇಸ್ ಡೈರಿಯನ್ನೂ ನೀಡಿಲ್ಲ. 14 ದಿನಗಳ ಕಸ್ಟಡಿ ನೀಡುವ ಅಗತ್ಯವಿಲ್ಲ, ಕೊಲೆಯಲ್ಲಿ ನಮ್ಮ ಕಕ್ಷಿದಾರರ ಪಾತ್ರವಿಲ್ಲ, ಇದು ರಾಜಕೀಯ ದುರುದ್ದೇಶದ ಪ್ರಕರಣ. ಹೀಗಾಗಿ ನ್ಯಾಯಾಂಗ ಬಂಧನಕ್ಕೆ (ಜೆಸಿ) ನೀಡಿ ಎಂದು ದರ್ಶನ್ ಪರ ವಕೀಲ ನಾರಾಯಣಸ್ವಾಮಿ ಮತ್ತು ಅನಿಲ್ ವಿನಂತಿಸಿದರು.
ಪ್ರಕರಣ ಅತ್ಯಂತ ಸೂಕ್ಷ್ಮವಾಗಿದೆ. ಕೊಲೆಯ ನಂತರ ಸಾಕ್ಷ್ಯನಾಶದ ಯತ್ನ ನಡೆಸಲಾಗಿದೆ. ಆರೋಪಿಗಳು ಪ್ರಭಾವಿಗಳಾಗಿದ್ದಾರೆ, ಇನ್ನಷ್ಟು ಸಾಕ್ಷ್ಯನಾಶ ಮಾಡುವ ಸಾಧ್ಯತೆ ಇದೆ. ಆರೋಪಿಗಳನ್ನು ಇನ್ನಷ್ಟು ವಿಚಾರಣೆ ಮಾಡಬೇಕಿದೆ. ಕೊಲೆಗೆ ಬಳಸಿದ ಆಯುಧಗಳನ್ನು, ವಸ್ತುಗಳನ್ನು ಸೀಜ್ ಮಾಡಬೇಕಿದೆ. ಆರೋಪಿಗಳ ಮೊಬೈಲ್ ಗಳನ್ನು ಸೀಜ್ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಬೇಕು ಎಂದು ತನಿಖಾಧಿಕಾರಿ ವಿನಂತಿಸಿದರು.
ಪೊಲೀಸರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಎಲ್ಲ ಆರೋಪಿಗಳನ್ನು 6 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದ ಆದೇಶಿಸಿದೆ.
ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ನಟ ದರ್ಶನ್ ಪದೇ ಪದೇ ಕಣ್ಣೀರು ಹಾಕುತ್ತ ನಿಂತಿದ್ದರು. ಇನ್ನೊಂದೆಡೆ ನಟಿ ಪವಿತ್ರ ಗೌಡ ಕೂಡ ಕಣ್ಣೀರು ಹಾಕುತ್ತಿದ್ದುದು ಕಂಡುಬಂತು.
ಚಿತ್ರದುರ್ಗ ನಿವಾಸಿ, ಅಪೋಲೋ ಫಾರ್ಮಸಿಯಲ್ಲಿ ಕೆಲಸ ಮಾಡುವ 33 ವರ್ಷದ ಯುವಕ ರೇಣುಕಾಸ್ವಾಮಿ ಎಂಬಾತ ಪವಿತ್ರಗೌಡ ಅವರಿಗೆ ಕೆಟ್ಟದಾಗಿ ಸಂದೇಶ ಕಳಿಸಿದ್ದ ಹಿನ್ನೆಲೆಯಲ್ಲಿ ಅವರು ಆಕ್ರೋಶಿತರಾಗಿದ್ದರು. ಇದೇ ಕಾರಣಕ್ಕೆ ಆತನಿಗೆ ಪಾಠ ಕಲಿಸುವಂತೆ ದರ್ಶನ್ ಅವರಿಗೆ ದುಂಬಾಲು ಬಿದ್ದಿದ್ದರು. ಈ ಹಿನ್ನೆಲೆಯಲ್ಲಿ ದರ್ಶನ್ ಸೂಚನೆಯ ಮೇರೆಗೆ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಲಾಗಿತ್ತು.
ಜೂನ್ 8ರಂದು ಚಿತ್ರದುರ್ಗದ ರೇಣುಕಾಸ್ವಾಮಿ ಎಂಬ ಯುವಕನನ್ನು ಬೆಂಗಳೂರಿಗೆ ಕರೆಯಿಸಿಕೊಂಡು, ರಾಜರಾಜೇಶ್ವರಿ ನಗರ ಠಾಣೆ ವ್ಯಾಪ್ತಿಯ ಪಟ್ಟಣಗೆರೆಯ ಶೆಡ್ ಒಂದರಲ್ಲಿ ಕೂಡಿಟ್ಟುಕೊಂಡು ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿತ್ತು. ನಂತರ ಆತನ ಮೃತದೇಹವನ್ನು ಸುಮನಹಳ್ಳಿ ಸಮೀಪದ ರಾಜಾಕಾಲುವೆ ಬಳಿ ಎಸೆದು ಹೋಗಲಾಗಿತ್ತು. ಮೃತದೇಹ ಪತ್ತೆಯಾಗುತ್ತಿದ್ದಂತೆ ತನಿಖೆ ಆರಂಭಿಸಿದ ಕಾಮಾಕ್ಷಿಪಾಳ್ಯ ಪೊಲೀಸರು ಮೃತನ ಗುರುತು ಪತ್ತೆ ಮಾಡಿದ್ದಲ್ಲದೆ ಕೊಲೆಯ ಸಂಚನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದ್ದರು.
ಇಂದು ಬೆಳಿಗ್ಗೆ ಮೈಸೂರಿನ RADISON BLUE ಹೊಟೇಲ್ ನಲ್ಲಿ ಜಿಮ್ ಮಾಡುತ್ತಿದ್ದ ನಟ ದರ್ಶನ್ ಇನ್ನೇನು ತಮ್ಮ ಸಿನಿಮಾದ ಶೂಟಿಂಗ್ ಗೆ ಹೋಗಬೇಕಿತ್ತು. ಈ ಸಂದರ್ಭದಲ್ಲಿ ಆಗಮಿಸಿದ ಕಾಮಾಕ್ಷಿಪಾಳ್ಯ ಪೊಲೀಸರು ದರ್ಶನ್ ಅವರನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದರು. ಈ ನಡುವೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಆರೋಪಿಗಳನ್ನು ಹಲವೆಡೆ ಬಂಧಿಸಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗಿತ್ತು. ಮತ್ತೊಂದೆಡೆ ಪ್ರಕರಣದ ಕೇಂದ್ರಬಿಂದುವಾಗಿರುವ ದರ್ಶನ್ ಗೆಳತಿ ಮತ್ತು ಚಿತ್ರನಟಿ ಪವಿತ್ರಾ ಗೌಡ ಅವರನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮಾಕ್ಷಿಪಾಳ್ಯ ಪೊಲೀಸರು ಐಪಿಸಿ ಸೆಕ್ಷನ್ 302, 363, 201 (ಕೊಲೆ, ಕಿಡ್ನಾಪ್ ಮತ್ತು ಸಾಕ್ಷ್ಯನಾಶ) ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದು, ಪ್ರಕರಣದ ಮೊದಲ ಆರೋಪಿಯಾಗಿ ಪವಿತ್ರ ಗೌಡ ಅವರನ್ನು ನಮೂದಿಸಲಾಗಿದೆ.
ಇಡೀ ಘಟನೆಯ ಕೇಂದ್ರಬಿಂದು ಪವಿತ್ರ ಗೌಡ ಅವರೇ ಆಗಿರುವ ಹಿನ್ನೆಲೆಯಲ್ಲಿ ಅವರ ಸೂಚನೆಯ ಮೇರೆಗೆ ಮತ್ತು ಅವರ ಸಮ್ಮುಖದಲ್ಲೇ ಕೊಲೆ ನಡೆದಿರುವ ಹಿನ್ನೆಲೆಯಲ್ಲಿ ಆಕೆಯನ್ನು ಎ-1 ಆರೋಪಿಯನ್ನಾಗಿ ಮಾಡಲಾಗಿದೆ ಎಂದು ತಿಳಿದುಬಂದಿದೆ. ದರ್ಶನ್ ಎರಡನೇ ಆರೋಪಿಯಾಗಿದ್ದು, ದರ್ಶನ್ ಆಪ್ತ ಕೆ.ಪವನ್ ಮೂರನೇ ಆರೋಪಿಯಾಗಿದ್ದಾರೆ.