ಬೆಂಗಳೂರು: ತಮಗೆ ಪಿಸ್ತೂಲ್ ಬಳಸಲು ನೀಡಿದ್ದ ಅನುಮತಿಯನ್ನು ಅಮಾನತುಗೊಳಿಸಿ ಪಿಸ್ತೂಲ್ ಅನ್ನು ವಶಪಡಿಸಿಕೊಂಡಿರುವ ಪೊಲೀಸರ ಕ್ರಮವನ್ನು ಪ್ರಶ್ನಿಸಿ ನಟ ದರ್ಶನ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ದರ್ಶನ್ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಇದು ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಆಡಳಿತ ವಿಭಾಗದ ಉಪ ಪೊಲೀಸ್ ಆಯುಕ್ತರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
ದರ್ಶನ್ ಗಂಭೀರವಾದ ಕೊಲೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿದ್ದಾರೆ.ಇವರು ಕೊಲೆಯಾದ ರೇಣುಕಸ್ವಾಮಿ ಅವರ ಕುಟುಂಬದ ಸದಸ್ಯರು ಹಾಗೂ ತಮ್ಮ ವಿರುದ್ಧದ ಸಾಕ್ಷಿದಾರರಿಗೆ ಪಿಸ್ತೂಲ್ ಮುಂದಿಟ್ಟುಕೊಂಡು ಹೆದರಿಸುವ ಅಥವಾ ಅವರ ಪ್ರಾಣಕ್ಕೆ ಅಪಾಯ ತರುವ ಸಾಧ್ಯತೆಗಳಿವೆ. ಆದ್ದರಿಂದ ಇವರ ಶಸ್ತ್ರಾಸ್ತ್ರ ಪರವಾನಗಿ ರದ್ದುಗೊಳಿಸಲು ಬೆಂಗಳೂರು ಪೊಲೀಸರು ವರದಿ ಸಲ್ಲಿಸಿದ್ದರು. ಈ ವರದಿಯನ್ನು ಪುರಸ್ಕರಿಸಿದ ಸಕ್ಷಮ ಪ್ರಾಧಿಕಾರ ಇವರ ಶಸ್ತ್ರಾಸ್ತ್ರ ಪರವಾನಗಿ ರದ್ದುಗೊಳಿಸಲು ತೀರ್ಮಾನಿಸಿರುತ್ತದೆ ಎಂದು ಉಪ ಪೊಲೀಸ್ ಆಯುಕ್ತರು ತಿಳಿಸಿದ್ದರು.
ನನ್ನ ಪಿಸ್ತೂಲ್ ಪರವಾನಗಿ ಅಮಾನತುಪಡಿಸಿ ಉಪ ಪೊಲೀಸ್ ಆಯುಕ್ತರು ಇದೇ ತಿಂಗಳ 16ರಂದು ಆದೇಶಿಸಿದ್ದಾರೆ ಮತ್ತು 20ರಂದು ನನ್ನ ಪಿಸ್ತೂಲ್ ಅನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಅವರ ಆದೇಶ ಸಂಪೂರ್ಣ ಏಕಪಕ್ಷೀಯ ಮತ್ತು ಕಾನೂನುಬಾಹಿರವಾಗಿರುತ್ತದೆ. ನನಗೆ ಕಿರುಕುಳ ನೀಡುವ ಉದ್ದೇಶದಿಂದಲೇ ಈ ಆದೇಶ ಹೊರಡಿಸಲಾಗಿದೆ. ಎಲ್ಲಾ ಕಾನೂನು ಪ್ರಕ್ರಿಯೆ ಪಾಲಿಸಿದ ನಂತರವೇ ನನಗೆ ಶಸ್ತ್ರಾಸ್ತ್ರ ಪರವಾನಗಿ ನೀಡಲಾಗಿತ್ತು ಎನ್ನುವುದನ್ನು ಇಲ್ಲಿ ನೆನಪಿಸಲು ಬಯಸುತ್ತೇನೆ. ಆದ್ದರಿಂದ, ಉಪ ಪೊಲೀಸ್ ಆಯುಕ್ತರ ಆದೇಶ ರದ್ದುಪಡಿಸಬೇಕು ಮತ್ತು ನನ್ನ ಪಿಸ್ತೂಲ್ ಅನ್ನು ಮರಳಿಸಬೇಕು ಎಂದು ದರ್ಶನ್ ಅರ್ಜಿಯಲ್ಲಿ ಕೋರಿಕೊಂಡಿದ್ದಾರೆ.