ಖ್ಯಾತ ಪೋಷಕ, ಹಾಸ್ಯ ನಟ ಬ್ಯಾಂಕ್‌ ಜನಾರ್ಧನ್‌ ನಿಧನ; ಗಣ್ಯರ ಸಂತಾಪ

Most read

ಬೆಂಗಳೂರು: ಕನ್ನಡ ಸಿನಿಮಾ ರಂಗದ ಹಿರಿಯ ಪೋಷಕ, ಹಾಸ್ಯ ನಟ ಬ್ಯಾಂಕ್ ಜನಾರ್ಧನ್ ನಿಧನ ಹೊಂದಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಎರಡು ವಾರಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸೋಮವಾರ ಮುಂಜಾನೆ 2.30ರ ವೇಳೆಗೆ ನಿಧನ ಹೊಂದಿದ್ದಾರೆ ಎಂದು ಅವರ ಕುಟುಂಬದ ಸದಸ್ಯರು ತಿಳಿಸದ್ದಾರೆ.  ಸುಲ್ತಾನ್ ಪಾಳ್ಯದ ನಿವಾಸದಲ್ಲಿ ಅವರ ಪಾರ್ಥೀವ ಶರೀರ ಇಡಲಾಗಿದ್ದು ಇಂದು ಸಂಜೆ ಹೆಬ್ಬಾಳದ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

1949ರಲ್ಲಿ ಚಿತ್ರದುರ್ಗದ ಹೊಳಲ್ಕೆರೆಯಲ್ಲಿ ಜನಿಸಿದ ಬ್ಯಾಂಕ್ ಜನಾರ್ಧನ್ ಅವರು 1985ರಲ್ಲಿ ‘ಪಿತಾಮಹ’ ಚಿತ್ರದ ಮೂಲಕ ಅವರು ಸ್ಯಾಂಡಲ್‌ ವುಡ್‌ ಗೆ ಕಾಲಿಟ್ಟರು. ನಂತರ ಅವರು ಹಿಂತಿರುಗಿ ನೋಡಲೇ ಇಲ್ಲ. ‘ಬೆಟ್ಟದ ತಾಯಿ’, ‘ಪೊಲೀಸ್ ಹೆಂಡತಿ’, ‘ಶ್​..’, ‘ತರ್ಲೆ ನನ್ಮಗ’ ಹೀಗೆ ನಟಿಸುತ್ತಲೇ ಸುಮಾರು 800 ಚಿತ್ರಗಳಿಗೆ ಬಣ್ಣ ಹಚ್ಚಿದರು. 2016ರಿಂದ ಈಚೆಗೆ ಅವರು ನಟಿಸುವುದನ್ನು ಕಡಿಮೆ ಮಾಡಿದ್ದರು.

ಇನ್ನು ಜನಾರ್ಧನ್ ಅವರ ಹೆಸರಿಗೆ ಬ್ಯಾಂಕ್ ಎಂಬ ಹೆಸರು ಹೇಗೆ ಅಂಟಿಕೊಂಡಿತು ಎಂಬ ಕತೂಹಲ ಇರಬಹುದು. ಜನಾರ್ಧನ್ ಅವರು ಹೊಳಲ್ಕೆ​ಕೆರೆ ಬಳಿಯ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಜತೆ ಜತೆಗೆ ಕಲೆಯ ಬಗ್ಗೆ ಆಸಕ್ತಿ ಇದ್ದುದರಿಂದ  ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಹೀಗಾಗಿ ಬ್ಯಾಂಕ್‌ ಉದ್ಯೋಗವನ್ನು ಬಿಟ್ಟರೂ ಬ್ಯಾಂಕ್‌ ಅವರ ಹೆಸರಿನ ಜತೆ ಉಳಿದುಕೊಂಡಿತ್ತು. ಅವರ ನಾಟಕವೊಂದನ್ನು ನೋಡಿದ ನಟ ಧೀರೇಂದ್ರ ಗೋಪಾಲ್ ಅವರು ಸಿನಿಮಾಗಳಲ್ಲಿ ನಟಿಸಲು ಕರೆತಂದರು.

ಇವರ ನಿಧನಕ್ಕೆ ಚಿತ್ರರರಂಗದ ನಟ ನಟಿಯರು ಮತ್ತು ರಾಜಕಾರಣಿಗಳು ಶೋಕ ವ್ಯಕ್ತಪಡಿಸಿದ್ದಾರೆ.  ಹಿಂದುಳಿದ ವರ್ಗಗಳ ಕಲ್ಯಾಣ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ತೀವ್ರ ಶೋಕ ವ್ಯಕ್ತಪಡಿಸಿ ಪೋಷಕ ಪಾತ್ರಧಾರಿಯಾಗಿ, ಹಾಸ್ಯ ಕಲಾವಿದರಾಗಿ ನಟಿಸಿ ಹೆಸರು ಮಾಡಿದ್ದ ಬ್ಯಾಂಕ್ ಜನಾರ್ಧನ್ ಅವರು ಕನ್ನಡ ರಂಗಭೂಮಿಯಲ್ಲೂ ತಮ್ಮ ಮನೋಜ್ಞ ಅಭಿನಯದಿಂದ ಜನಪ್ರಿಯರಾಗಿದ್ದರು. ಅವರ ಪಾತ್ರಗಳು ಸದಾ ನೆನಪಿನಲ್ಲಿ ಉಳಿಯುವಂತಿವೆ. ಶ್, ತರ್ಲೆ ನನ್ಮಗ, ಗಣೇಶನ ಮದುವೆ ,ಗಣೇಶ ಸುಬ್ರಮಣ್ಯ ಹೀಗೆ ಅನೇಕ ಚಲನಚಿತ್ರಗಳ ಅವರ ಪಾತ್ರಗಳು ಚಲನಚಿತ್ರ ಪ್ರೇಮಿಗಳ ಮನಸ್ಸಿನಲ್ಲಿ ಅಚ್ಚಳಿಯದ ಛಾಪು ಮೂಡಿಸಿದೆ. ಪಾಪಾ ಪಾಂಡು ಸೇರಿದಂತೆ ಅನೇಕ ಟಿ ವಿ ಧಾರವಾಹಿಗಳಲ್ಲಿಯೂ ನಟಿಸಿದ್ದ ಬ್ಯಾಂಕ್ ಜನಾರ್ಧನ್ ಕನ್ನಡ ಕಲಾ ಜಗತ್ತು ಕಂಡ ಅತ್ಯುತ್ತಮ ಕಲಾವಿದರಲ್ಲಿ ಒಬ್ಬರು. ಅವರ ನಿಧನದಿಂದ ಕನ್ನಡದ ಕಲಾ ಜಗತ್ತು ಒಬ್ಬ ಶ್ರೇಷ್ಠ ಕಲಾವಿದನನ್ನ ಕಳೆದುಕೊಂಡಿದೆ.  ಅವರ ಕುಟುಂಬಕ್ಕೆ ಮತ್ತು ಅವರ ಅಭಿಮಾನಿಗಳಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

More articles

Latest article