ಬೆಂಗಳೂರು: ಪ್ರಸ್ತುತ ನಡೆಯುತ್ತಿರುವ ತನಿಖೆಗೆ ಸಹಕರಿಸಿದರೆ ಸೌಜನ್ಯ ಪರ ಹೋರಾಟಗಾರರಿಗೆ ಸಧ್ಯಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಕರ್ನಾಟಕ ಸರ್ಕಾರ ಹೈಕೋರ್ಟ್ ಗೆ ಅಫಿಡೆವಿಟ್ ಸಲ್ಲಿಸಿದೆ. ಸರ್ಕಾರ ಸಲ್ಲಿಸಿರುವ ಅಫಿಡೆವಿಟ್ ಅನ್ನು ಸೌಜನ್ಯ ಪರ ಹೋರಾಟಗಾರ ಗಿರೀಶ್ ಮಟ್ಟಣ್ಣವರ್ ವಕೀಲ ಎಸ.ಬಾಲನ್ ಅವರಿಗೆ ನೀಡಲಾಗಿದೆ. ಮಟ್ಟಣ್ಣವರ್ ಸ್ಲಲಿಸಿದ್ದ ಅರ್ಜಿಗೆ ರಾಜ್ಯ ಸರ್ಕಾರ ವಿರೋಧ ವ್ಯಕ್ತಪಡಿಸಿ ಆಕ್ಷೇಪಣೆ ಸಲ್ಲಿಸಿದೆ.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ 39/2025 ಅಡಿಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ ಮತ್ತು ವಿಠಲ್ ಗೌಡ ಅವರ ವಿರುದ್ಧ ಎಫ್ ಐಆರ್ ದಾಖಲಾಗಿತ್ತು. ಈ ಎಫ್ ಐಆರ್ ಅಡಿಯಲ್ಲಿ ನವಂಬರ್ 12 ರಂದು ವಿಚಾರಣೆಗೆ ಹಾಜರಾಗುವಂತೆ ಎಸ್ ಐಟಿ ಇವರೆಲ್ಲರಿಗೂ ನೋಟಿಸ್ ನೀಡಿತ್ತು. ಅನ್ನು ರದ್ದುಪಡಿಸುವಂತೆ ಗಿರೀಶ್ ಮಟ್ಟಣ್ಣವರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅಕ್ಟೋಬರ್ 30 ರಂದು ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು.
ಅಕ್ರಮವಾಗಿ ತನ್ನಿಂದ ಶವಗಳನ್ನು ಹೂತು ಹಾಕಿಸಲಾಗಿದೆ ಎಂದು ಸಾಕ್ಷಿ ದೂರುದಾರ ಚಿನ್ನಯ್ಯ ಸಲ್ಲಿಸಿದ್ದ ದೂರನ್ನು ಮೀರಿ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ ಐಟಿ) ತನಿಖೆ ನಡೆಸುತ್ತಿದೆ.
ಹೈಕೋರ್ಟ್ ರಿಟ್ ಪ್ರೊಸೀಡಿಂಗ್ಸ್ ರೂಲ್ಸ್ ನನಿಯಮ 21ರ ಅಡಿಯಲ್ಲಿ ಆಕ್ಷೇಪಣೆ ಸಲ್ಲಿಸಿರುವ ಸರ್ಕಾರ ಸಂವಿಧಾನದ ಆರ್ಟಿಕಲ್ 226 ಮತ್ತು 227ರ ಅಡಿಯಲ್ಲಿ ಇವರು ಸಲ್ಲಿಸಿರುವ ಆಕ್ಷೇಪಣೆಗಳನ್ನು ರದ್ದುಪಡಿಸುವಂತೆ ಸರ್ಕಾರ ಕೋರಿತ್ತು. ಅರ್ಜಿದಾರರು ವಾಸ್ತವಾಂಶಗಳನ್ನು ಮರೆಮಾಚುತ್ತಿದ್ದಾರೆ ಮತ್ತು ಕಾನೂನುಬದ್ಧ ತನಿಖೆಯ ಹಾದಿ ತಪ್ಪಿಸುತ್ತಿದ್ದಾರೆ ಎಂದು ವಾದಿಸಿತ್ತು.
ಸಹಕರಿಸಿದರೆ ಬಂಧನ ಇಲ್ಲ:
ಬಿಎನ್ ಎಸ್ ಎಸ್ ಸೆ. 35(3) ಅಡಿಯಲ್ಲಿ ನೋಟಿಸ್ ನೀಡಲಾಗಿದ್ದು, ಅವರನ್ನು ತಕ್ಷಣಕ್ಕೆ ಬಂಧಿಸುವ ಅಗತ್ಯ ಇರುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಬಿಎನ್ ಎಸ್ ಎಸ್ ಸೆ. 35(3) ಅಡಿಯಲ್ಲಿ ನಡೆಯುತ್ತಿರುವ ತನಿಖೆಗೆ ಸಹಕರಿಸಿದರೆ ಅರ್ಜಿಆದಾರರು ಬಂಧನ ಭೀತಿ ಎದುರಿಸಬೇಕಿಲ್ಲ. ಅಸಹಕಾರ ತೋರಿದರೆ ಮಾತ್ರ ಬಂಧನ ಭೀತಿ ಎದುರಿಸಬೇಕಾಗುತ್ತದೆ. ಸರ್ಕಾರದ ಈ ವಾದದ ನಡುವೆಯೂ ಅರ್ಜಿದಾರರು ಎಸ್ ಐಟಿಗೆ ಸಹಕರಿಸುವುದಕ್ಕೆ ಬದಲಾಗಿ ಹೈಕೋರ್ಟ್ ಮೊರೆ ಹೋಗಿದ್ದರು. ಒಂದು ವೇಳೆ ಬಂಧನ ಭೀತಿ ಎದುರಾದರೆ ನಿರೀಕ್ಷಣಾ ಜಾಮೀನು ಪಡೆಯಲು ಅವಕಾಶ ಇದೆ ಎಂದೂ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ.
ದೂರನ್ನು ಮೀರಿದ ತನಿಖಾ ವ್ಯಾಪ್ತಿ:
ಜುಲೈ 19 ರಂದು ಸರ್ಕಾರ ಎಸ್ ಐಟಿ ರಚಿಸಿದೆ. ಈ ತನಿಖಾ ಆಯೋಗವು ಚಿನ್ನಯ್ಯ ನೀಡಿದ ಮೂಲ ದೂರಿಗೆ ಮಾತ್ರ ಸೀಮಿತವಾಗಿಲ್ಲ. ದಶಕಗಳ ಕಾಲ ಧರ್ಮಸ್ಥಳದಲ್ಲಿ ನಡೆದಿರುವ ಶವಗಳನ್ನು ಹೂತು ಹಾಕಿರುವ ಪ್ರಕರಣಗಳ ತನಿಖೆಯನ್ನೂ ಒಳಗೊಂಡಿದೆ. ಇತ್ತೀಚೆಗೆ ಬಂಗ್ಲೆಗುಡ್ಡ ಅರಣ್ಯ ಪ್ರದೇಶದಲ್ಲಿ ಮೂಳೆ ಮತ್ತು ತಲೆಬುರುಡೆಗಳು ಪತ್ತೆಯಾಗಿವೆ. ಇವೆಲ್ಲವೂ ತನಿಖಾ ವ್ಯಾಪ್ತಿಯನ್ನು ವಿಸ್ತರಿಸಿವೆ.
ಡಿಜಿಪಿ ಪ್ರಣಬ್ ಮೊಹಂತಿ ನೇತೃತ್ವದ ಎಸ್ ಐಟಿಯು ಜುಲೈ 28ರಿಂದ ತನಿಖೆ ಆರಂಭಿಸಿದ್ದು, ನೇತ್ರಾವತಿ ಸ್ನಾನಘಟ್ಟದಲ್ಲಿ ಮ್ಯಾಜಿಸ್ಟ್ರೇಟ್ ಮತ್ತು ಸರ್ಕಾರಿ ಅಧಿಕಾರಿಗಳ ಸಮ್ಮುಖದಲ್ಲಿ ಉತ್ಖನನ ನಡೆಸಿದೆ. ಉತ್ಖನನವು ಪಾರದರ್ಶಕವಾಗಿದೆ. ವಿಡಿಯೋ ಮಾಡಲಾಗಿದೆ. ಈ ಸಂದರ್ಭದಲ್ಲಿ ದೂರುದಾರರ ವಕೀಲರೂ ಹಾಜರಿದ್ದರು ಎಂಬ ಅಂಶವನ್ನೂ ಸರ್ಕಾರ ಉಲ್ಲೇಖಿಸಿದೆ.
ನಂತರದ ಬೆಳವಣಿಗೆಗಳಲ್ಲಿ ಚಿನ್ನಯ್ಯ ತಪ್ಪೊಪ್ಪಿಕೊಂಡಿದ್ದು, ಅರ್ಜಿದಾರರ ಅಣತಿಯಂತೆ ಹೇಳಿಕೆ ನೀಡಿದ್ದಾಗಿ ಬಿಎನ್ ಎಸ್ ಎಸ್ ಸೆ. 183 ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ಎದುರು ಹೇಳಿಕೆ ದಾಖಲಿಸಿದ್ದಾನೆ. ಆಗ ತಂದೊಪ್ಪಿಸಿದ ತಲೆ ಬುರುಡೆಯನ್ನೂ ಬೇರೊಬ್ಬರು ತನಗೆ ನೀಡಿದ್ದಾಗಿ ತಿಳಿಸಿದ್ದಾನೆ. ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಈ ತಲೆ ಬುರುಡೆಯು 25–30 ವರ್ಷದೊಳಗಿನ ಮಹಿಳೆಯದ್ದು ಎಂದು ಸಾಬೀತಾಗಿದೆ. ಡಿಎನ್ ಎ ಮತ್ತು ಮಣ್ಣು ಪರೀಕ್ಷೆಯ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ನಂತರ ಚಿನ್ನಯ್ಯನನ್ನು ಆಗಸ್ಟ್ 23ರಂದು ಬಂಧಿಸಲಾಗಿತ್ತು.
ಅರ್ಜಿದಾರರ ಕೋರಿಕೆಗೆ ಆಕ್ಷೇಪಣೆ ಸಲ್ಲಿಸಿರುವ ರಾಜ್ಯ ಸರ್ಕಾರ ಇವರು ಆರೋಪಿಗಳಲ್ಲ. ಎಫ್ ಐರ್ ನಲ್ಲಿ ಎಲ್ಲಿಯೂ ಆರೋಪಿಗಳು ಎಂದು ಹೇಳಿಲ್ಲ. ತನಿಖೆಗೆ ಸಹಕರಿಸುವಂತೆ ಮಾತ್ರ ಕೇಳಲಾಗಿದೆ. ಮೂಲ ದೂರನ್ನು ಮೀರಿ ಎಸ್ ಐಟಿ ತನಿಖೆ ನಡೆಸಿದೆ. ತನಿಖೆಗಾಗಿ ಸಾಕಷ್ಟು ಸಾರ್ವಜನಿಕ ಸಂಪನ್ಮೂಲವನ್ನು ಖರ್ಚು ಮಾಡಲಾಗಿದ್ದು ತನಿಖೆಯು ತಾರ್ಕಿಕ ಅಂತ್ಯ ಕಾಣಲು ಅವಕಾಶ ಮಾಡಿಕೊಡಬೇಕೆಂದು ಸರ್ಕಾರ ಘನ ನ್ಯಾಯಾಲಯವನ್ನು ಕೋರಿದೆ.

