ಬೆಮೆಲ್ ಸಂಕೀರ್ಣದಲ್ಲಿ ನಿಷ್ಕ್ರಿಯಗೊಂಡಿರುವ ಕನ್ನಡ ಸಂಘವನ್ನು ಕೂಡಲೇ ಆರಂಭಿಸಿ: ಡಾ. ಪುರುಷೋತ್ತಮ ಬಿಳಿಮಲೆ ತಾಕೀತು

ಬೆಂಗಳೂರು: ಕೇಂದ್ರ ಸ್ವಾಮ್ಯದ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BEML) ನ ಬೆಂಗಳೂರು ಸಂಕೀರ್ಣದಲ್ಲಿ ಕಾರ್ಮಿಕರ ಕನ್ನಡ ಸಂಘವು ನಿಷ್ಕ್ರಿಯಗೊಂಡಿದ್ದು, ಸಂಸ್ಥೆಯ ಆಡಳಿತ ವ್ಯವಸ್ಥೆಯಲ್ಲಿ ಕನ್ನಡಕ್ಕೆ ಪ್ರಥಮ ಪ್ರಾತಿನಿಧ್ಯವನ್ನು ಕಲ್ಪಿಸುವ ಉದ್ದೇಶದಿಂದ ಕೂಡಲೇ ಈ ಸಂಘ ಮುಂದುವರಿಕೆಗೆ ಆಡಳಿತ ಮಂಡಳಿ ಅವಕಾಶ ಕಲ್ಪಿಸಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಬೆಮೆಲ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮಂಗಳವಾರ ಬೆಮೆಲ್ ನ ಕೇಂದ್ರ ಕಚೇರಿಯಲ್ಲಿ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಸಾರ್ವಜನಿಕ ಸಂಸ್ಥೆಗಳಲ್ಲಿ, ವಿಶೇಷವಾಗಿ ಕೇಂದ್ರಸ್ವಾಮ್ಯದ ಉದ್ದಿಮೆಗಳಲ್ಲಿ ಕನ್ನಡ ಕಾರ್ಮಿಕರ ಸಂಖ್ಯೆ ನಾನಾ ಕಾರಣಗಳಿಗಾಗಿ ಕ್ಷೀಣಿಸುತ್ತಿದ್ದು, ಭಾಷಾ ಹಕ್ಕುಗಳ ಸಮರ್ಪಕ ಪ್ರತಿಪಾದನೆಗೆ ಕನ್ನಡ ಸಂಘಗಳ ಅವಶ್ಯಕತೆ ಹೆಚ್ಚಿರುತ್ತದೆ. ಅಂತಹ ಸಂದರ್ಭದಲ್ಲಿ ಕಳೆದ ಒಂದು ವರ್ಷದಿಂದ ಬೆಮೆಲ್ ಬೆಂಗಳೂರು ಸಂಕೀರ್ಣದಲ್ಲಿ ಕನ್ನಡ ಸಂಘ ಕಾರ್ಯ ನಿರ್ವಹಿಸದೆ ಇರುವ ಪರಿಸ್ಥಿತಿ ಸೃಷ್ಠಿಯಾಗಿರುವುದು ಕನ್ನಡದ ಹಿತದೃಷ್ಠಿಯಿಂದ ಒಳ್ಳೆಯ ಬೆಳವಣಿಗೆಯಲ್ಲ ಎಂದರು.

ಜಾಗತೀಕರಣದ ಪರಿಣಾಮವಾಗಿ ಮಾರುಕಟ್ಟೆ ಭಾಷೆಯು ಪ್ರಭಾವಶಾಲಿಯಾಗಿರುವ ಕಾರಣ ಸ್ಥಳೀಯ ಭಾಷೆಗಳು ನೇಪಥ್ಯಕ್ಕೆ ಸರಿಯುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದ ಬಿಳಿಮಲೆ, ಇಂತಹ ಸಂದರ್ಭದಲ್ಲಿ ಸಾರ್ವಜನಿಕ ಸಂಸ್ಥೆಗಳು ಸ್ಥಳೀಯ ಭಾಷೆಗಳನ್ನು ಗೌರವಿಸುವ ವಾತಾವರಣ ಸೃಷ್ಠಿಸುವ ಮಹತ್ತರ ಜವಾಬ್ದಾರಿಯನ್ನು ಹೊಂದಿದ್ದು, ಇಂತಹ ಸನ್ನಿವೇಶದಲ್ಲಿ ಸ್ಥಳೀಯ ಭಾಷೆ ಸಂಸ್ಕೃತಿಯನ್ನು ಪೋಷಿಸುವ ಭಾಷಾ ಸಂಘಗಳು ಅವನತಿ ಹೊಂದಿದರೆ ವೃತ್ತಿಪರ ವಾತಾವರಣದಲ್ಲಿ ಸ್ಥಳೀಯ ಭಾಷೆಯ ಪರಿಸ್ಥಿತಿ ಭೀಕರವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

90ರ ದಶಕದ ಜಾಗತೀಕರಣದ ಬಳಿಕ ದೇಶದಲ್ಲಿ 240 ಭಾಷೆಗಳು ಕಾಣೆಯಾಗಿದ್ದು, ಮುಂದಿನ 50 ವರ್ಷಗಳಲ್ಲಿ ಕನಿಷ್ಠ 390 ಭಾಷೆಗಳು ಜನಬಳಕೆಯಿಂದ ದೂರಸರಿಯಲಿವೆ ಎಂದ ಬಿಳಿಮಲೆ, ಕನ್ನಡದ ಪರಿಸ್ಥಿತಿ ಇದಕ್ಕೆ ಭಿನ್ನವಾಗಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಬಂಡವಾಳಶಾಹಿ ಸಂಸ್ಕೃತಿ ಪ್ರಬಲವಾದಾಗ ಸರ್ಕಾರಗಳು ಕೂಡ ಕೈಚೆಲ್ಲಬೇಕಾಗುತ್ತದೆ ಎಂದ ಬಿಳಿಮಲೆ, ಭಾಷಾಂಧತೆಯ ಹೊರತಾಗಿಯೂ ಇಂತಹ ಸಂದರ್ಭದಲ್ಲಿ ಭಾರತದ ಭಾಷೆಗಳ ಗತಿ ಏನಾಗಬಹುದೆಂಬ ಆತಂಕವು ನೀತಿ-ನಿರೂಪಕರನ್ನು ಕಾಡಬೇಕಾದ ಸಂದರ್ಭ ಇದಾಗಿದೆ ಎಂದರು.

ಸ್ಥಳೀಯರಿಗೆ ಆದ್ಯತೆ ನೀಡಿ:- ಬಹಳ ದಿನಗಳ ನಂತರ ಬೆಮೆಲ್ ಸಂಸ್ಥೆಯು ʼಸಿʼ ವೃಂದದ ನೌಕರರ ನೇಮಕಾತಿಗೆ ಚಾಲನೆಯನ್ನು ನೀಡುತ್ತಿದ್ದು, ನೇಮಕಾತಿ ಅಧಿಸೂಚನೆಯನ್ನು ಕನ್ನಡದಲ್ಲಿಯೂ ಪ್ರಕಟಿಸುವುದಲ್ಲದೇ, ನೇಮಕಾತಿಯಲ್ಲಿ ಸ್ಥಳೀಯ ಕನ್ನಡಿಗರಿಗೆ ಆದ್ಯತೆಯನ್ನು ನೀಡಬೇಕೆಂದು ಸೂಚಿಸಿದ ಬಿಳಿಮಲೆ, ಯಾವುದೇ ಸಂಸ್ಥೆಯ ಯಶಸ್ಸು ಸ್ಥಳೀಯ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿಕೊಳ್ಳುವುದರಲ್ಲಿದೆ. ಸ್ಥಳೀಯ ಭಾಷೆ ಸಂಸ್ಕೃತಿಗಳನ್ನು ಗೌರವಿಸುವುದನ್ನು ಸಾರ್ವಜನಿಕ ಸಂಸ್ಥೆಗಳು ರೂಢಿಸಿಕೊಂಡಲ್ಲಿ ಸಂಸ್ಥೆಯ ಕಾರ್ಯ ಚಟುವಟಿಕೆಗಳು ಜನಮಾನಸದಲ್ಲಿ ಉಳಿಯುತ್ತವೆ ಎಂದರು.

ತ್ರಿಭಾಷಾ ಸೂತ್ರಕ್ಕೆ ಆದ್ಯತೆ ನೀಡಿ:- ಬೆಮೆಲ್ ಸಂಸ್ಥೆ ತನ್ನ ಲಾಂಛನದ ಪಠ್ಯದಲ್ಲಿ ಕೇವಲ ಹಿಂದಿ ಮತ್ತು ಆಂಗ್ಲ ಭಾಷೆಗೆ ಅವಕಾಶ ನೀಡಿದ್ದು, ಕೂಡಲೇ ಈ ಲಾಂಛನದಲ್ಲಿ ಕನ್ನಡವನ್ನು ಸಹ ಅಳವಡಿಸಬೇಕೆಂದು ಸೂಚಿಸಿದ ಬಿಳಿಮಲೆ, ಸಂಸ್ಥೆಯ ಜಾಲತಾಣದಲ್ಲಿಯೂ ಕನ್ನಡವನ್ನು ಆಯ್ಕೆ ಭಾಷೆಯನ್ನಾಗಿ ಸೇರ್ಪಡಿಸಬೇಕೆಂದರು. ಇಂತಹ ಸಣ್ಣಪುಟ್ಟ ಬದಲಾವಣೆಗಳು ಕೇಂದ್ರಸ್ವಾಮ್ಯದ ಸ್ಥಳೀಯ ಕಚೇರಿಗಳ ಭಾಷಾಪರ ವರ್ಚಸ್ಸಿಗೆ ಹೊಸ ಸ್ವರೂಪವನ್ನೇ ಕಲ್ಪಿಸಲಿವೆ ಎಂದ ಅವರು, ಭಾಷಾ ವಿವೇಕವೆನ್ನುವುದು ಎಲ್ಲೆಡೆ ಜಾಗೃತವಾಗಬೇಕಾದ ಸುಸಂದರ್ಭ ಇದಾಗಿದೆ ಎಂದರು.

ಟೆನ್ಯೂರ್ ಆಧಾರಿತ ನೇಮಕಾತಿ ಪ್ರಕ್ರಿಯೆಯಲ್ಲಿ ಕನ್ನಡಿಗರಿಗೆ ಅವಕಾಶ ನೀಡುವುದು, ಹೊರಗುತ್ತಿಗೆ ನೇಮಕಾತಿ ಕನ್ನಡಿಗರಿಗೆ ಮೊದಲ ಪ್ರಾಶಸ್ತ್ಯವನ್ನು ಕಲ್ಪಿಸುವುದು, ಬೆಮೆಲ್ ನ ವಾರ್ತಾ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಎಲ್ಲ ಮಾಹಿತಿಗಳು ಕನ್ನಡದಲ್ಲಿಯೂ ಇರುವ ಹಾಗೆ ನೋಡಿಕೊಳ್ಳುವುದು, ಬೆಮೆಲ್ ನ ಉತ್ಪನ್ನಗಳ ಜ್ಞಾನ ಹಾಗೂ ಅಳವಡಿಸಿಕೊಂಡಿರುವ ತಾಂತ್ರಿಕತೆಗಳು ಕನ್ನಡಿಗರಿಗೆ ತಲುಪಲು ಅವಶ್ಯವಾಗುವಂತೆ ಈ ಸಂಬಂಧ ಕಿರುಹೊತ್ತಿಗೆಗಳನ್ನು ಪ್ರಕಟಿಸಿ ಶಿಕ್ಷಣ ಸಂಸ್ಥೆಗಳಿಗೆ ಪೂರೈಸುವುದೂ ಸೇರಿದಂತೆ ಹಲವು ನಿರ್ದೇಶನಗಳನ್ನು ಬೆಮೆಲ್ ನ ಅಧಿಕಾರಿಗಳಿಗೆ ನೀಡಲಾಯಿತು.

ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ ಹಾನಗಲ್ಲ, ಆಪ್ತ ಕಾರ್ಯದರ್ಶಿ ಟಿ.ಎಸ್. ಫಣಿಕುಮಾರ್, ಬೆಮೆಲ್ ನ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ದೇಬಿ ಪ್ರಸಾದ ಸತ್ಪತಿ, ಕಾರ್ಯನಿರ್ವಾಹಕ ನಿರ್ದೇಶಕರಾದ ಎಂ.ಜಿ.ಜಿ.ರಾಜು, ಎಜಿಎಂ ಮಹಾಲಕ್ಷಮ್ಮ, ಬೆಮೆಲ್ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಎಂ.ಶ್ಯಾಮಸುಂದರ ರಾವ್, ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಸು.ಜಗದೀಶ್ ಹಾಗೂ ಬಾ.ಹಾ.ಶೇಖರಪ್ಪ ಮತ್ತಿತರರು ಹಾಜರಿದ್ದರು.

More articles

Latest article

Most read