PHD ವಿದ್ಯಾರ್ಥಿಗಳಿಗೆ ಫೆಲೋಶಿಪ್ ಕೊಡಿಸಲು ಕ್ರಮ: ನಸೀರ್ ಅಹ್ಮದ್

Most read


ಬೆಂಗಳೂರು, ಜ.19: ಅಲ್ಪಸಂಖ್ಯಾತ ಸಮುದಾಯದ PHD ವಿದ್ಯಾರ್ಥಿಗಳಿಗೆ ಮಾಸಿಕ 25 ಸಾವಿರ ರೂ.ಗಳ ಫೆಲೋಶಿಪ್ ಕೊಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಭರವಸೆ ನೀಡಿದರು.


ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ಅಖಿಲ ಕರ್ನಾಟಕ ಮಹಮ್ಮದೀಯರ ಕನ್ನಡ ವೇದಿಕೆ ಹಾಗೂ ಮತ್ತೀಕೆರೆಯ ಮಸ್ಜಿದೆ ತಾಹ ಬೈತ್ ಉಲ್ ಮಾಲ್ ಸಮಿತಿ ವತಿಯಿಂದ ಹಂಪಿ ಕನ್ನಡ ವಿವಿಯಲ್ಲಿ PHD ಪದವಿ ಪಡೆದಿರುವ ದಾದಾ ಹಯಾತ್ ಬಾವಾಜಿ, ಪರ್ವೀನ್ ಬೇಗಂ ಹಾಗೂ ಇಸ್ಮಾಯಿಲ್ ಖಾದ್ರಿ ಅವರಿಗೆ ಗೌರವ ಸಮರ್ಪಣೆ ಮಾಡಿ ಅವರು ಮಾತನಾಡಿದರು.


PHD ವಿದ್ಯಾರ್ಥಿಗಳಿಗೆ ಈ ಹಿಂದೆ ನಮ್ಮ ಸರಕಾರ ಅಧಿಕಾರದಲ್ಲಿದ್ದಾಗ ಮಾಸಿಕ 25 ಸಾವಿರ ರೂ.ಗಳ ಫೆಲೋಶಿಪ್ ನೀಡಲಾಗುತ್ತಿತ್ತು. ನಂತರ ಬಂದ ಸರಕಾರ ಅದನ್ನು 10 ಸಾವಿರ ರೂ.ಗಳಿಗೆ ಇಳಿಸಿತು. ಈ ಮೊತ್ತವನ್ನು ಪುನಃ 25 ಸಾವಿರ ರೂ. ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ನಸೀರ್ ಅಹ್ಮದ್ ಹೇಳಿದರು.


2018-19ರಲ್ಲಿ ಫೆಲೋಶಿಪ್ ಪೋರ್ಟಲ್ ಸ್ಥಗಿತಗೊಳಿಸಿದ ಬಳಿಕ ದಾಖಲಾದ 27 ಮಂದಿ ಸಂಶೋಧನಾ ವಿದ್ಯಾರ್ಥಿಗಳಿಗೆ ಫೆಲೋಶಿಪ್ಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿರಲಿಲ್ಲ. ಆನಂತರ, 2020-21ರಲ್ಲಿ ಕೋವಿಡ್ ಇದ್ದ ಕಾರಣ ಪೋರ್ಟಲ್ ತೆರೆದಿರಲಿಲ್ಲ. ಇದರಿಂದಾಗಿ, ಈ ಸಂಶೋಧನಾ ವಿದ್ಯಾರ್ಥಿಗಳ ಪಟ್ಟಿ ಫೆಲೋಶಿಪ್ ಅಡಿಯಲ್ಲಿ ಬರದೆ ಸ್ಥಗಿತವಾಗಿತ್ತು ಎಂದು ನಸೀರ್ ಅಹ್ಮದ್ ಹೇಳಿದರು.


ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಜೊತೆ ಶುಕ್ರವಾರ ಸಭೆ ನಡೆಸಲಾಗುವುದು. ಅಲ್ಲದೆ, ಸಂಶೋಧನಾ ವಿದ್ಯಾರ್ಥಿಗಳಿಗೆ ಫೆಲೋಶಿಪ್ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಎರಡು, ಮೂರು ವರ್ಷಗಳಿಂದ ಪ್ರೀ ಮೆಟ್ರಿಕ್ ವಿದ್ಯಾರ್ಥಿವೇತನ ಸ್ಥಗಿತವಾಗಿತ್ತು. ಈ ಬಾರಿ ನಮ್ಮ ಸರಕಾರದ ಅವಧಿಯಲ್ಲಿ 6.41 ಲಕ್ಷ ಅರ್ಜಿಗಳು ಬಂದಿದ್ದವು. ಅದರಲ್ಲಿ ನಮ್ಮ 5.86 ಲಕ್ಷ ಅರ್ಜಿಗಳನ್ನು ಮಾನ್ಯ ಮಾಡಿ, ಸುಮಾರು 4 ಲಕ್ಷ ವಿದ್ಯಾರ್ಥಿಗಳಿಗೆ ಡಿಬಿಟಿ ಮೂಲಕ ವಿದ್ಯಾರ್ಥಿವೇತನ ಪಾವತಿಯಾಗಿದೆ. ಉಳಿದ ಮಕ್ಕಳಿಗೂ ಹಣ ಬಿಡುಗಡೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ನಸೀರ್ ಅಹ್ಮದ್ ತಿಳಿಸಿದರು.


ವಿದ್ಯಾಸಿರಿಯಲ್ಲಿ 9 ಸಾವಿರ ಅರ್ಜಿಗಳು ಬಂದಿದ್ದವು. 3-4 ಸಾವಿರ ವಿದ್ಯಾರ್ಥಿಗಳಿಗೆ ಹಣ ತಲುಪಿದೆ. ಉಳಿದವರಿಗೂ ಹಣ ಕಳುಹಿಸಲಾಗುವುದು. ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕಾಗಿ 526 ಅರ್ಜಿಗಳು ಬಂದಿದ್ದವು. ಅದರಲ್ಲಿ 296 ವಿದ್ಯಾರ್ಥಿಗಳ ಅರ್ಜಿಯನ್ನು ಮಾನ್ಯ ಮಾಡಲಾಗಿದೆ. ಅವರಿಗೂ ತಲಾ 20 ಲಕ್ಷ ರೂ.ಗಳನ್ನು ನೀಡಲಾಗುವುದು ಎಂದು ಅವರು ಹೇಳಿದರು.
ಜೊತೆಗೆ, ಶುಲ್ಕ ಮರುಪಾವತಿ ಮಾಡುವ ಯೋಜನೆಗೆ ಸಂಬಂಧಿಸಿದಂತೆ ನೋಟಿಫಿಕೇಶನ್ ಹೊರಡಿಸಲಾಗಿದೆ. ಪದವಿ, ಇಂಜಿನಿಯರಿಂಗ್, ಎಂಬಿಬಿಎಸ್ ಸೇರಿದಂತೆ ಇನ್ನಿತರ ಕೋರ್ಸುಗಳನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳು ಶುಲ್ಕ ಮರುಪಾವತಿಗೆ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ಅವರು ಜ.30ರೊಳಗೆ ಶುಲ್ಕ ಮರುಪಾವತಿಗೆ ಅರ್ಜಿ ಸಲ್ಲಿಸಿದರೆ ಅವರಿಗೆ ಪ್ರಯೋಜನವಾಗಲಿದೆ ಎಂದು ನಸೀರ್ ಅಹ್ಮದ್ ತಿಳಿಸಿದರು.


ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಮಹಮ್ಮದೀರ ವೇದಿಕೆಯ ಅಧ್ಯಕ್ಷ ಸಮೀಉಲ್ಲಾ ಖಾನ್, ಪತ್ರಕರ್ತ ಬೆಳಗೂರು ಸಮೀಉಲ್ಲಾ, ಮುಖಂಡರಾದ ಶಾಜಹಾನ್, ಸಾಗರ್ ಸಮೀಉಲ್ಲಾ, ಬಾಬು, ಅಕ್ರಮ್, ಬೈತುಲ್ ಮಾಲ್ ಸಮಿತಿಯ ಪ್ರಮುಖರಾದ ನಝೀರ್, ಅಮೀರ್, ಮತೀನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

More articles

Latest article