ಟಿ.ಎಂ.ಕೃಷ್ಣರಿಂದ ಕಲಾನಿಧಿ ಸಾಧನೆ; ವೈದಿಕಶಾಹಿ ಪಂಡಿತರ ರೋಧನೆ

Most read

ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ವೈದಿಕಶಾಹಿಗಳ ದಬ್ಬಾಳಿಕೆಯನ್ನು ಎಲ್ಲಾ ಪ್ರಗತಿಪರರು ಖಂಡಿಸಬೇಕಿದೆ. ಟಿ.ಎಂ.ಕೃಷ್ಣರವರ ಪರವಾಗಿ ನಿಲ್ಲಬೇಕಿದೆ. ಮದ್ರಾಸ್ ಸಂಗೀತ ಅಕಾಡೆಮಿಯ ದೃಢ ನಿಲುವನ್ನು ಸಮರ್ಥಿಸಿಕೊಳ್ಳಬೇಕಿದೆ. ಶಶಿಕಾಂತ ಯಡಹಳ್ಳಿಯವರ ಈ ವಿಶೇಷ ಲೇಖನದೊಂದಿಗೆ ಕನ್ನಡ ಪ್ಲಾನೆಟ್‌ ಟಿ.ಎಂ.ಕೃಷ್ಣರವರನ್ನು ಬೆಂಬಲಿಸುತ್ತದೆ.

ಸಂಗೀತ ಕಲಾನಿಧಿ ಪ್ರಶಸ್ತಿಯನ್ನು ಅವರಿಗೆ ಕೊಡಬಾರದು. ಶಾಸ್ತ್ರೀಯ ಸಂಗೀತವನ್ನು ಸಾಮಾಜಿಕ ಸುಧಾರಣೆಗಾಗಿ ಬಳಸಿ ಅಪವಿತ್ರಗೊಳಿಸಿದ್ದಾರೆ. ಸಂಗೀತ ಕ್ಷೇತ್ರಕ್ಕೆ ಹಾನಿ ಮಾಡಿದ್ದಾರೆ” ಎಂದು ಚೆನ್ನೈ ನಲ್ಲಿರುವ ವೈದಿಕಶಾಹಿ ಸಂಗೀತ ಸಾಧಕರು ತಾರಕ ಸ್ವರದಲ್ಲಿ ವಿರೋಧದ ಸ್ವರಾಲಾಪ ನಿರತರಾಗಿದ್ದಾರೆ. 

ಇಷ್ಟಕ್ಕೂ ಆಗಿದ್ದಾದರೂ ಏನೆಂದರೆ. ಕರ್ನಾಟಕದಲ್ಲಿ ನೃತ್ಯ ಮತ್ತು ಸಂಗೀತ ಅಕಾಡೆಮಿ ಇರುವ ಹಾಗೆ ಚೆನ್ನೈ ನಲ್ಲಿ ಮದ್ರಾಸ್ ಸಂಗೀತ ಅಕಾಡೆಮಿ ಅಂತಾ ಇದೆ. ಈ ಬಾರಿ, 2024 ರಲ್ಲಿ  ಟಿ.ಎಂ.ಕೃಷ್ಣ ಎನ್ನುವ ಸಂಗೀತ ಸಾಧಕರಿಗೆ ‘ಸಂಗೀತ ಕಲಾನಿಧಿ’ ಪ್ರಶಸ್ತಿಯನ್ನು ಅಕಾಡೆಮಿಯು ಘೋಷಿಸಿದೆ. ಸಂಗೀತ ವಿದ್ವಾನ್‌ ಒಬ್ಬರಿಗೆ ಪ್ರಶಸ್ತಿ ದಕ್ಕಿದ್ದಕ್ಕೆ ಸಂಭ್ರಮಿಸಬೇಕಾಗಿದ್ದ ಸಂಗೀತ ಕ್ಷೇತ್ರವು ತೀವ್ರ ವಿರೋಧ ವ್ಯಕ್ತ ಪಡಿಸುತ್ತಿರುವುದು ಅಚ್ಚರಿಯಾದರೂ ಸತ್ಯ.

ಟಿ.ಎಂ.ಕೃಷ್ಣ

ಯಾಕೆಂದರೆ “ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಕಾರದ ಖ್ಯಾತ ಗಾಯಕರಾದ ಟಿ.ಎಂ.ಕೃಷ್ಣರವರು ಕೇವಲ ಹಾಡಿಕೊಂಡಿರುವುದನ್ನು ಬಿಟ್ಟು ಸಾಮಾಜಿಕ ಸಂಕಟಗಳಿಗೆ ಸ್ಪಂದಿಸಿದ್ದೇ ಈ ವೈದಿಕ ಸ್ವರ ಸಂಗೀತ ಪಂಡಿತರ ಅಸಹನೆಗೆ ಕಾರಣವಾಗಿದೆ. ಕೃಷ್ಣರವರು ಪೆರಿಯಾರ್ ರವರ ಬಗ್ಗೆ ಮೆಚ್ಚಿ ಮಾತಾಡಿದ್ದಾರೆ. ಅಯೋಧ್ಯೆಯಲ್ಲಿ ನಡೆದ ರಾಮಮಂದಿರದ ಉದ್ಘಾಟನೆ ಎನ್ನುವ ಮೋದಿ ಪ್ರಣೀತ ಬೃಹನ್ನಾಟಕವನ್ನು ಟೀಕಿಸಿದ್ದಾರೆ. ಧರ್ಮಾಂಧತೆಯ ಬಗ್ಗೆ ವಿರೋಧ ವ್ಯಕ್ತ ಪಡಿಸಿದ್ದಾರೆ. ಕೋಮುದ್ವೇಷದ ವಿರುದ್ಧ ಪ್ರತಿರೋಧದ ಹೇಳಿಕೆ ಕೊಟ್ಟಿದ್ದಾರೆ. ಕಾಶ್ಮೀರದಲ್ಲಿ ಆರ್ಟಿಕಲ್ 370  ರದ್ಧತಿಯನ್ನು ವಿರೋಧಿಸಿದ್ದಾರೆ. ಅಂಬೇಡ್ಕರ್, ಗಾಂಧಿ ಹಾಗೂ ಪೆರಿಯಾರ್ ರವರ ಪ್ರತಿಮೆಗಳನ್ನು ನಾಶ ಮಾಡಿದ ಬಲಪಂಥೀಯ ದುಷ್ಟಶಕ್ತಿಗಳನ್ನು ಖಂಡಿಸಿದ್ದಾರೆ. ಹೀಗಾಗಿ ಇವರು ಸಂಗೀತ ಅಕಾಡೆಮಿ ಪ್ರಶಸ್ತಿಗೆ ಅನರ್ಹರು” ಎನ್ನುವುದು ಚೆನ್ನೈ ಮೂಲದ ಶಾಸ್ತ್ರೀಯ ಸಂಗೀತ ಕ್ಷೇತ್ರದ ದಿಗ್ಗಜರ ಆಕ್ಷೇಪ ಮತ್ತು ಆಲಾಪ. 

ಕರ್ನಾಟಕ ಸಂಗೀತ ಕ್ಷೇತ್ರಕ್ಕೆ ಕೃಷ್ಣರವರು ಅಪಾರ ಹಾನಿಯನ್ನುಂಟು ಮಾಡಿದ್ದಾರೆಂದು ಖ್ಯಾತ ಗಾಯಕರಾದ ರಂಜಿನಿ ಮತ್ತು ಗಾಯತ್ರಿ ಸಹೋದರಿಯರು ತಮ್ಮ ಅಸಹನೆಯನ್ನು ವ್ಯಕ್ತಪಡಿಸಿದರೆ, “ಕೃಷ್ಣರವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹಾಡುವುದೆಂದರೆ ನಮ್ಮ ದೃಷ್ಟಿಯಲ್ಲಿ ನಾವೇ ಆಷಾಢಭೂತಿಗಳಂತೆ” ಎಂದು ಪ್ರಸಿದ್ದ ಗಾಯಕರಾದ ತ್ರಿಚೂರ್ ಸಹೋದರರು ಒಡಲಾಳದ ಬೆಂಕಿ ಕಾರಿದ್ದಾರೆ. “ಸಂಗೀತ ನೃತ್ಯ ಕ್ಷೇತ್ರಗಳಷ್ಟೇ ಅಲ್ಲ ಭಾರತವನ್ನೇ ಕೃಷ್ಣ ರವರು ಜಾತಿ ಕೋಮು ನೆಲೆಯಲ್ಲಿ ಧ್ರುವೀಕರಿಸಿದ್ದಾರೆ”  ಎಂದು ಆರೋಪಿಸಿದ ಚಿತ್ರವೀಣಾ ರವಿಕಿರಣ್ ಎನ್ನುವ ಸಂಗೀತಕಾರ ತನಗೆ ಈ ಹಿಂದೆ ಅಕಾಡೆಮಿ ಕೊಡಮಾಡಿದ್ದ ‘ಸಂಗೀತ ಕಲಾನಿಧಿ’ ಪ್ರಶಸ್ತಿಯನ್ನು ವಾಪಸ್ ಕೊಡುವುದಾಗಿ ಘೋಷಿಸಿದ್ದಾರೆ. 

ಹೀಗೆ ಇನ್ನೂ ಕೆಲವಾರು ಬ್ರಾಹ್ಮಣ್ಯ ಶ್ರೇಷ್ಠತೆಯ ವ್ಯಸನಪೀಡಿತ ಸಂಗೀತ ಸಾಧಕರು ಕೃಷ್ಣರವರಿಗೆ ಪ್ರಶಸ್ತಿ ಕೊಟ್ಟಿದ್ದಕ್ಕೆ ತೀವ್ರ ವಿರೋಧ ಹೊರಹಾಕುತ್ತಿದ್ದಾರೆ. ಕಲೆಗಾಗಿ ಕಲೆ ಎನ್ನುವ ಇಂತಹ ವೈದಿಕ ಪ್ರತಿಭೆಗಳು ಜನರಿಗಾಗಿ ಕಲೆ ಎನ್ನುವುದನ್ನು ಒಪ್ಪಲು ಸಾಧ್ಯವೇ ಇಲ್ಲ. ಯಾವುದೇ ಕಲಾವಿದ ತನ್ನ ಕಲೆಯ ಮೂಲಕ ಸಾಮಾಜಿಕ ಅಪಸವ್ಯಗಳಿಗೆ ಸ್ಪಂದಿಸಿದರೆ ಅದು ಕಲೆಗೆ ಮಾಡಿದ ಅಪಚಾರ ಎನ್ನುವುದೇ ಈ ಎಲ್ಲಾ ಬೃಹಸ್ಪತಿಗಳ ಭ್ರಮೆ. ಕಲಾವಿದರು ಸಾಂಪ್ರದಾಯದ ಗೆರೆಯನ್ನು ದಾಟಿದರೆ, ಪರಂಪರಾಗತವಾಗಿ ಬಂದ ಆಚಾರಗಳನ್ನು ಉಲ್ಲಂಘಿಸಿದರೆ ಅದು ಕಲೆಯ ಪಾವಿತ್ರ್ಯಕ್ಕೆ ಮಾಡುವ ಅಪಮಾನ ಎನ್ನುವುದೇ ಇಂತಹ ಕಲಾನಿಷ್ಟ ಅನಿಷ್ಟರ ಅಭಿಪ್ರಾಯ. 

ಟಿ.ಎಂ.ಕೃಷ್ಣಮತ್ತು ಗಾಯಕಿಯರಾದ ರಂಜಿನಿ ಮತ್ತು ಗಾಯತ್ರಿ

ಯಾವಾಗ ಕೃಷ್ಣರವರು ಈ ವೈದಿಕ ಪಾವಿತ್ರ್ಯಕ್ಕೆ ಭಂಗ ತಂದರೋ, ಯಾವಾಗ ಕೋಮು ಧರ್ಮಗಳ ಅತಿರೇಕಗಳನ್ನು ವಿರೋಧಿಸಿ ಮಾತಾಡಿದರೋ, ಯಾವಾಗ ಬಲಪಂಥೀಯರ ವಿರುದ್ಧ ತಮ್ಮ ಸೈದ್ಧಾಂತಿಕ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದರೋ, ಆಗ ಅವರು ಈ ಪರಂಪರಾಗತ ಕಲೆಯ ಗುತ್ತಿಗೆದಾರರ ಕಣ್ಣಲ್ಲಿ ಕಲಾ ಭ್ರಷ್ಟರಾದರು. “ಬ್ರಾಹ್ಮಣ್ಯವು ಹಾಕಿದ ಸಂಗೀತ ಕಲೆಯ ಚೌಕಟ್ಟನ್ನು ಮೀರಿದ್ದರಿಂದಾಗಿ ಕೃಷ್ಣರವರು ಶಾಸ್ತ್ರೀಯ ಸಂಗೀತ ಕಲೆಗೆ ದ್ರೋಹ ಬಗೆದರು. ಆದ್ದರಿಂದ ಅಂತಹ ಕಲಾದ್ರೋಹಿಗೆ ಅಕಾಡೆಮಿ ಅವಾರ್ಡ್ ಕೊಟ್ಟಿದ್ದು ಅಕ್ಷಮ್ಯ ಅಪರಾಧ” ಎಂಬುದು ಸಾಂಪ್ರದಾಯಿಕ ಸಂಗೀತ ಸಾಧಕರ ಒಡಲುರಿ. 

ತೊಡೂರು ಮದಬುಸಿ ಕೃಷ್ಣ ( ಟಿ.ಎಂ.ಕೃಷ್ಣ) ರವರು ಗಾಯಕರಷ್ಟೇ ಅಲ್ಲಾ ಬರಹಗಾರರು, ಸಾಮಾಜಿಕ ಕಾರ್ಯಕರ್ತರೂ ಆಗಿದ್ದು ಬೇರೆ ಸಂಗೀತ ಸಾಧಕರಿಗಿಂತ ಭಿನ್ನವಾಗಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಹನ್ನೆರಡಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಪರಿಸರ, ಜಾತಿ ವ್ಯವಸ್ಥೆ, ಕೋಮುವಾದ, ಧಾರ್ಮಿಕ ಸುಧಾರಣೆ, ಸಾಮಾಜ ವಿರೋಧಿ ಆಚರಣೆಗಳ ಕುರಿತು ಲೇಖನ ಬರೆದಿದ್ದಾರೆ ಹಾಗೂ ಭಾಷಣ ಮಾಡಿದ್ದಾರೆ. ಸಂಗೀತ ವಲಯದ ವ್ಯಾಪ್ತಿಯ ಆಚೆಗೂ ಸಾಮಾಜಿಕ ಸಮಸ್ಯೆಗಳ ಕುರಿತು ಬರೆಯುತ್ತಾರೆ ಹಾಗೂ ಮಾತಾಡುತ್ತಾರೆ. ಎಡಪಂಥೀಯ ವಿಚಾರಗಳನ್ನು ಪ್ರತಿಪಾದಿಸುತ್ತಾರೆ. ಸಂಗೀತವನ್ನು ಸಾಮಾಜಿಕ ಸುಧಾರಣೆಗೆ ಮಾಧ್ಯಮವಾಗಿ ಬಳಸುವ ಸಾಧ್ಯತೆಗಳನ್ನು ತೋರಿಸಿ ಕೊಟ್ಟಿದ್ದಾರೆ. ಅವರ ಜಾತಿ ವಿರೋಧಿ ಹಾಗೂ ಕೋಮುವಿರೋಧಿ ದೃಷ್ಟಿಕೋನಗಳು ಅವರನ್ನು ವಿವಾದಾತ್ಮಕ ಸಂಗೀತಗಾರನನ್ನಾಗಿ ಮಾಡಿವೆ.

ಬ್ರಾಹ್ಮಣರ ನಿಯಂತ್ರಣದಲ್ಲಿದ್ದ ಶಾಸ್ತ್ರೀಯ ಸಂಗೀತ ಕ್ಷೇತ್ರದ ಬಾಗಿಲನ್ನು ಬ್ರಾಹ್ಮಣೇತರ ತಳ ಸಮುದಾಯಗಳಿಗೂ ತೆರೆದಿಡುವ ಕ್ರಾಂತಿಕಾರಿ ಪ್ರಯತ್ನವನ್ನು ಕೃಷ್ಣರವರು ಮಾಡಿ ಸಂಪ್ರದಾಯವಾದಿಗಳ ಸಿಟ್ಟಿಗೆ ಕಾರಣರಾಗಿದ್ದರು. ಕೆಳವರ್ಗದ ಕಲಾವಿದರಿಗೆ ಅವಕಾಶ ಕೊಟ್ಟು ಅವರು ಸಂಗೀತ ಕಚೇರಿಗಳನ್ನು ನಡೆಸಿಕೊಟ್ಟರು. ಈ ಶಾಸ್ತ್ರಿಯ ಸಂಗೀತವನ್ನು ದಲಿತ ಸಮುದಾಯದವರು ಕಲಿಯುವುದನ್ನೇ ನಿಷಿದ್ಧ ಗೊಳಿಸಿದ್ದ ಸತ್ ಸಂಪ್ರದಾಯವನ್ನು ಮುರಿದು ಹಾಕಿದ ಕೃಷ್ಣರವರ ಕ್ರಾಂತಿಕಾರಿತನ ಅನೇಕ ವೈದಿಕರ ಆಕ್ರೋಶಕ್ಕೂ ಕಾರಣವಾಗಿತ್ತು. ಮೇಲ್ಜಾತಿಯ ಈ ಕಲೆಯನ್ನು ತಳಜಾತಿಗೆ ಕಲಿಸಿ ಜಾತಿವಿನಾಶ ಚಳುವಳಿ ಮಾಡಲು ಪ್ರಯತ್ನಿಸುತ್ತೇನೆ ಎಂದು ಕೃಷ್ಣ ಘೋಷಿಸಿದ್ದರು. ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿದ್ದ ವೈದಿಕರ ಮೊನೋಪಲಿಯನ್ನು ಬ್ರಾಹ್ಮಣ ಸಂಜಾತ ಸಂಗೀತಗಾರ ಕೃಷ್ಣರವರು ಮುರಿಯಲು ಪ್ರಯತ್ನಿಸಿದ್ದು ಮಾದರಿಯಾಗಿದೆ.

ಅವರ ಸಾಧನೆಗೆ ಪ್ರತಿಷ್ಠಿತ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ (2016),  ಇಂದಿರಾಗಾಂಧಿ ಪ್ರಶಸ್ತಿ (2017), ಪ್ರೊ.ಅರವಿಂದಕ್ಷನ್ ಪ್ರಶಸ್ತಿಗಳ ಸಮೇತ ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ಇಂತಹ ಅಪರೂಪದ ಸಾಧಕನನ್ನು ಎಡಪಂಥೀಯ ಧೋರಣೆಯವ ಎನ್ನುವ ಕಾರಣಕ್ಕೆ ವಿರೋಧಿಸಲಾಗುತ್ತಿದೆ. 

ಇದು ಇಂದು ನಿನ್ನೆಯದಲ್ಲ. ಸಂಪ್ರದಾಯ ಉಲ್ಲಂಘಿಸಿದ ಕಲಾವಿದರನ್ನು ಬಹಿಷ್ಕರಿಸುವ ಬ್ರಾಹ್ಮಣಶಾಹಿ ಪರಂಪರೆ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಅರಮನೆ ಗುರುಮನೆಗಳನ್ನು ಹೊರತು ಪಡಿಸಿ ಜನರಿಗಾಗಿ ನಾಟಕ ಮಾಡಿದರೆಂದು ಅನೇಕ ಕಲಾವಿದರನ್ನು ಬಹಿಷ್ಕರಿಸಿದ ಪರಂಪರೆ ಇದೆ. ಬ್ರಾಹ್ಮಣ ಜಾತಿಯವರು ಯಕ್ಷಗಾನದಂತಹ ಜಾನಪದ ಕಲೆಗಳಲ್ಲಿ ತೊಡಗಿ ಕೊಂಡಿದ್ದಕ್ಕೆ ಜಾತಿಭ್ರಷ್ಟರಾಗಿದ್ದೂ ಇತಿಹಾಸದಲ್ಲಿ ದಾಖಲಾಗಿದೆ. ಈ ಜಾತಿ ಸಂಕೋಲೆಯಿಂದ ಕಳಚಿಕೊಂಡು ಕಲೆಯನ್ನೇ ನಂಬಿ ಜನರ ನಡುವೆ ಬದುಕಿದ ಸಮುದಾಯಗಳೂ ನಮ್ಮ ಚರಿತ್ರೆಯಲ್ಲಿ ಹಾಸುಹೊಕ್ಕಾಗಿವೆ.

ಆದರೂ ಈ ವೈದಿಕಶಾಹಿ ಶಾಸ್ತ್ರೀಯ ಸಂಗೀತದ ಮೇಲಿನ ತನ್ನ ಹಿಡಿತವನ್ನು ಸಡಿಲಿಸುತ್ತಿಲ್ಲ. ಜನರಿಗಾಗಿ ಕಲೆ ಎಂದ ಸಾಧಕರನ್ನು ಈಗಿನ ಕಾಲದಲ್ಲೂ ದೂರುವ, ದೂರವಿಡುವ, ಅನಧಿಕೃತವಾಗಿ ಬಹಿಷ್ಕರಿಸುವ ವಿದ್ಯಮಾನಕ್ಕೆ ಟಿ.ಎಂ.ಕೃಷ್ಣರವರ ಪ್ರಶಸ್ತಿ ಪ್ರಕರಣವೇ ಸಾಕ್ಷಿಯಾಗಿದೆ.

ಟಿ.ಎಂ.ಕೃಷ್ಣ

ಆದರೆ.. ಇಲ್ಲಿ ಮದ್ರಾಸ್ ಸಂಗೀತ ಅಕಾಡೆಮಿಯ ಅಧ್ಯಕ್ಷರ ದೃಢ ನಿರ್ಧಾರ ಪ್ರಶಂಸನೀಯ. ” ಹಿರಿಯ ಸಂಗೀತಗಾರನ ಕುರಿತು ವಿಷಕಾರಿ ಹಾಗೂ ನಿಂದನಾತ್ಮಕವಾಗಿ ಟೀಕಿಸಿದ್ದೀರಿ. ಇದು ಆಘಾತಕಾರಿಯಾಗಿದೆ. ನೀವು ಬರೆದ ವಿರೋಧದ ಪತ್ರಕ್ಕೆ ಅಕಾಡೆಮಿ ಉತ್ತರ ನೀಡುವ ಮೊದಲೇ ನಿಮ್ಮ ಪತ್ರವನ್ನು ಜಾಲತಾಣಗಳಲ್ಲಿ ಪ್ರಕಟಿಸಿರುವ ಉದ್ದೇಶವೇ ಅನುಮಾನಕ್ಕೆ ಆಸ್ಪದ ಮಾಡಿಕೊಟ್ಟಿದೆ” ಎಂದು ಅಕಾಡೆಮಿಯ ಅಧ್ಯಕ್ಷರಾದ ಎನ್.ಮುರುಳಿಯವರು ಖಾರವಾಗಿಯೇ ವಿರೋಧಿಗಳಿಗೆ ಪ್ರತಿಕ್ರಿಯಿಸಿದ್ದಾರೆ. “ಬಹಿಷ್ಕಾರ ಹಾಕುವ ಸಂಗೀತಗಾರರ ಪಟ್ಟಿ ಎಷ್ಟೇ ಉದ್ದ ಬೆಳೆದರೂ ನಮ್ಮ ನಿರ್ಧಾರಕ್ಕೆ ನಾವು ಬದ್ಧ. ಅಕಾಡೆಮಿಯು ವ್ಯಕ್ತಿಗಳಿಗಿಂತಲೂ ದೊಡ್ಡದು. ಬಹಿಷ್ಕಾರ ಹಾಕುತ್ತಿರುವ ಯಾರೂ ಕೃಷ್ಣರವರ ಸಂಗೀತದ ಕುರಿತು ತಕರಾರು ಎತ್ತುತ್ತಿಲ್ಲ. ಬದಲಿಗೆ ಬೇರೆ ವಿಷಯಕ್ಕೆ ವಿರೋಧಿಸುತ್ತಿದ್ದಾರೆ” ಎಂದು ಹೇಳಿದ ಮುರಳಿಯವರು ಈ ಬ್ರಾಹ್ಮಣ್ಯ ಬೂವಿಷ್ಟ ಧರ್ಮಾಂಧರಿಗೆ ಕಡಕ್ಕಾಗಿಯೇ ಉತ್ತರಿಸಿದ್ದಾರೆ. 

ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಸಂಘಿ ಮನಸ್ಥಿತಿಯ ಮನುವಾದಿಗಳೇ ಹೆಚ್ಚಾಗಿದ್ದಾರೆ. “ಸಂಗೀತ ಎನ್ನುವುದು ದೈವೀಕಲೆ ಅದನ್ನು ಆತ್ಮಸಂತೋಷಕ್ಕೋಸ್ಕರ ಮೀಸಲಾಗಿರಿಸಿ ಪರಮಾತ್ಮನಿಗೆ ಅರ್ಪಿಸಬೇಕು” ಎನ್ನುವ ನಂಬಿಕೆಗೆ ನಿಷ್ಟರಾಗಿದ್ದಾರೆ. ಅದಕ್ಕೇ ಈ ಶಾಸ್ತ್ರೀಯ ಸಂಗೀತ ಎನ್ನುವುದು ಜನಸಾಮಾನ್ಯರಿಂದ ದೂರವೇ ಉಳಿದಿದೆ. ಜಾನಪದ ಹಾಡುಗಳು, ಭಾವಗೀತೆಗಳು ಹೇಗೆ ಜನಜೀವನದ ಭಾಗವಾಗಿವೆಯೋ ಹಾಗೆ ಈ ಶಾಸ್ತ್ರೀಯ ಸಂಗೀತ, ಹಾಡುಗಾರಿಕೆ ಜನರ ನಾಡಿ ಮಿಡಿತವಾಗಲೇ ಇಲ್ಲ. ಮೇಲ್ಮಧ್ಯಮ ವರ್ಗದ ಸಂಗೀತ ಕಛೇರಿಗಳ ಮಟ್ಟಕ್ಕೇ ಸ್ಥಗಿತಗೊಂಡಿದೆ. ಹಾಗಂತ ಇದೊಂದು ವ್ಯರ್ಥ ಕಲಾ ಪ್ರಕಾರ ಎನ್ನುವ ಹಾಗಿಲ್ಲ. ಶಾಸ್ತ್ರೀಯ ಸಂಗೀತ ಪ್ರಕಾರದಲ್ಲೇ ಬರುವ ಹರಿಕಥೆಯು ಜನರಿಗೆ ತಲುಪಿದೆಯಾದರೂ ಅದು ದೇವರು ಧರ್ಮದ ಪ್ರಚಾರ ಸಾಮಗ್ರಿಯಾಗಿಯೇ ಉಳಿದಿದೆ. 

ಶಾಸ್ತ್ರೀಯ ಸಂಗೀತದ ಪಾರಂಪರಿಕ ಶೈಲಿ ಹಾಗೂ ವಸ್ತುಗಳಲ್ಲಿ ಬದಲಾವಣೆ ಮಾಡಿ, ಹೊಸ ಅವಿಷ್ಕಾರಗಳನ್ನು ಮಾಡಿ ಪ್ರಾಯೋಗಿಕವಾಗಿ ಸಂಗೀತ ಕಛೇರಿಗಳಲ್ಲಿ ಕೃಷ್ಣರವರು ಅಳವಡಿಸಿಕೊಂಡಿದ್ದೂ ಸಹ ಈ ಸಂಪ್ರದಾಯವಾದಿಗಳ ಕೆಂಗೆಣ್ಣಿಗೆ ಕಾರಣವಾಗಿದೆಯಾದರೂ ಅದಕ್ಕೆ ಈಗ ಈ ಅತೃಪ್ತ ಆತ್ಮಗಳ ತಕರಾರಿಲ್ಲ. ಅವರ ವಿರೋಧ ಇರುವುದು ಕಲಾ ಸಾಧಕನೊಬ್ಬ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸಬಾರದು ಎಂಬುದಾಗಿದೆ. ದೇವರು, ಧರ್ಮ, ಕೋಮು, ಮತ ಪಂಥಗಳಿಂದಾಗುವ ಅನ್ಯಾಯಗಳನ್ನು ಕಲಾವಿದ ಆಕ್ಷೇಪಿಸಬಾರದು ಎಂಬುದಾಗಿದೆ. ಯಾವಾಗ ಕೃಷ್ಣರವರು ಬ್ರಾಹ್ಮಣ್ಯದ ಕಡು ವಿರೋಧಿ ಪೆರಿಯಾರ್ ರವರ ಪರವಾಗಿ ಮಾತಾಡಿದರೋ ಆಗ ಈ ಬ್ರಾಹ್ಮಣ ಕುಲೋತ್ತಮ ಪಂಡಿತರು ಉರಿಯ ಉಯ್ಯಾಲೆಯಲ್ಲಿ ಚಡಪಡಿಸಿದರು. ಯಾವಾಗ ರಾಮಮಂದಿರದ ಕುರಿತು ಕೃಷ್ಟರವರು ತಮ್ಮ ಆಕ್ಷೇಪ ವ್ಯಕ್ತಪಡಿಸಿದರೋ ಆಗ ಅವರು ಬಹಿಷ್ಕೃತರಾದರು.

ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಈ ವೈದಿಕಶಾಹಿಗಳ ದಬ್ಬಾಳಿಕೆಯನ್ನು ಎಲ್ಲಾ ಪ್ರಗತಿಪರರು ಖಂಡಿಸಬೇಕಿದೆ. ಟಿ.ಎಂ.ಕೃಷ್ಣರವರ ಪರವಾಗಿ ನಿಲ್ಲಬೇಕಿದೆ. ಮದ್ರಾಸ್ ಸಂಗೀತ ಅಕಾಡೆಮಿಯ ದೃಢ ನಿಲುವನ್ನು ಸಮರ್ಥಿಸಿಕೊಳ್ಳಬೇಕಿದೆ. ಕಲೆಗಾಗಿ ಕಲೆ ಎನ್ನುವ ಸಾಂಪ್ರದಾಯಿಕ ವಿನ್ಯಾಸವನ್ನು ಬದಲಿಸಿ ಜನರಿಗಾಗಿ ಕಲೆ ಎನ್ನುವ ಪರಿಕಲ್ಪನೆಯನ್ನು ಈ ಬ್ರಾಹ್ಮಣ್ಯ ಪ್ರಾಬಲ್ಯದ ಕಲಾ ಪ್ರಕಾರಗಳಲ್ಲಿ ರೂಢಿಗೆ ತರುವ ಪ್ರಯತ್ನಗಳನ್ನು ಪ್ರೇರೇಪಿಸಬೇಕಾಗಿದೆ.

ಶಶಿಕಾಂತ ಯಡಹಳ್ಳಿ

ರಂಗಕರ್ಮಿ

More articles

Latest article